Kalaburagi Crime: ಚಿನ್ನಾಭರಣ ಕಳವು ಕಾರಣ 24ರ ಯುವಕನ ಆತ್ಮಹತ್ಯೆ, 2 ಕಿಲಾರಿ ಎತ್ತುಗಳ ಕಳವು ಮತ್ತು ಕಲಬರುಗಿಯ ಇತರೆ ಅಪರಾಧ ಸುದ್ದಿಗಳು
ಚಿನ್ನಾಭರಣ ಕಳುವಾದ ಕಾರಣ ಮನನೊಂದ 24 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇನ್ನೊಂದು ಪ್ರಕರಣದಲ್ಲಿ, ಬೈಕ್ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಬೇರೆ ಪ್ರಕರಣದಲ್ಲಿ 2 ಖಿಲಾರಿ ಎತ್ತುಗಳು ಕಳುವಾಗಿವೆ ಎಂದು ದೂರು ದಾಖಲಾಗಿದೆ. ಇದಲ್ಲದೆ ಕಲಬುರಗಿ ವ್ಯಾಪ್ತಿಯ ಇತರೆ ಕೆಲವು ಅಪರಾಧ ಸುದ್ದಿಗಳ ವಿವರ ಇಲ್ಲಿದೆ.
ಕಲಬುರಗಿ: ದ್ವಿಚಕ್ರ ವಾಹನಗ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಎರಡು ಖಿಲಾರಿ ಎತ್ತುಗಳು ಕಳುವಾಗಿರುವ ಕುರಿತು ದೂರು ದಾಖಲಾಗಿದೆ. ಚಿನ್ನಾಭರಣ ಕಳುವಾದ ಕಾರಣ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕೂಡ ವರದಿಯಾಗಿದೆ.
ದ್ವಿಚಕ್ರ ವಾಹನ ಕಳ್ಳರ ಬಂಧನ
ಬೈಕ್ ಕಳ್ಳತನ ಮಾಡಿ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಉಪನಗರ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ 2.50 ಲಕ್ಷ ರೂಪಾಯಿ ಮೌಲ್ಯದ ಕಂಪನಿಯ 3 ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ.
ಇಸ್ಲಾಮಾಬಾದ ಕಾಲೋನಿಯ ಮೊಹಮ್ಮದ್ ಆಸೀಫ್ (23) ಮತ್ತು ಜಿಲಾಲಾಬಾದ ಕಾಲೋನಿಯ ಮೊಹಮ್ಮದ್ ಇಸ್ಮಾಯಿಲ್ ಅಲಿಯಾಸ್ ಸುಲ್ತಾನ್ ಅಲಿಯಾಸ್ ಸೋನು (38) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಕುಮಸಿ ಗ್ರಾಮದ ಸತೀಶ್ ಜಲ್ದೆ ಎಂಬುವವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವಾದ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್, ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಐ.ಎ.ಚಂದ್ರಪ್ಪ, ಎಸಿಪಿ ಡಿ.ಜಿ.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಸಬ್ ಅರ್ಬನ್ ಪೊಲೀಸ್ ಠಾಣೆಯ ಪಿಐ ಸಂತೋಷ ಎಲ್.ತಟ್ಟೆಪಳ್ಳಿ ಅವರ ನೇತೃತ್ವದಲ್ಲಿ ಪಿಎಸ್ಐ ಸಲಿಮೋದ್ದಿನ್, ಸಿಬ್ಬಂದಿಗಳ ತಂಡ ತನಿಖೆ ನಡೆಸಿ ಈ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿ 2.50 ಲಕ್ಷ ರೂ.ಮೌಲ್ಯದ ವಿವಿಧ ಕಂಪನಿಯ 3 ಬೈಕ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡು ಖಿಲಾರಿ ಎತ್ತು ಕಳವು
ತೋಟದಲ್ಲಿ ಕಟ್ಟಿದ್ದ 1.60 ಲಕ್ಷ ರೂ.ಮೌಲ್ಯದ ಎರಡು ಖಿಲಾರಿ ಎತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಕಲಬುರಗಿ ತಾಲೂಕಿನ ಆಜಾದಪುರದಲ್ಲಿ ನಡೆದಿದೆ.
ಸುಭಾಷ ಕೆಸರಟಗಿ ಎಂಬುವವರ ಬಿಳಿ ಮತ್ತು ಬೂದಿ ಬಣ್ಣದ ಎರಡು ಖಿಲಾರಿ ಎತ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಅವರು ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.
ಚಿನ್ನಾಭರಣ ಕಳುವಾದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ
ಕೆಲವು ದುಷ್ಕರ್ಮಿಗಳು ಯುವಕನೊಬ್ಬನಿಗೆ ಹಲ್ಲೆ ನಡೆಸಿ ಆತನ ಬಳಿ ಇದ್ದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಇದರಿಂದ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ತಾಡತೆಗನೂರ ಗ್ರಾಮದಲ್ಲಿ ನಡೆದಿದೆ.
ತಾಡತೆಗನೂರ ಗ್ರಾಮದ ಶಿವಶರಣ ದತ್ತಣ್ಣ ನಡಗಟ್ಟಿ (24) ಎಂಬ ಯುವಕನೆ ಆತ್ಮಹತ್ಯೆ ಮಾಡಿಕೊಂಡವನು. ಟೆಂಟ್ ಹೌಸ್ ಕೆಲಸ ಮಾಡಿಕೊಂಡು ಮನೆಯಲ್ಲಿ ಇಂಟರ್‌ನೆಟ್ ಅಪ್ಲಿಕೇಶನ ಹಾಕುವ ಕೆಲಸ ಮಾಡುತ್ತಿದ್ದ ಶಿವಶರಣ ಡೆತ್ ನೋಟ್ ಬರೆದಿಟ್ಟು, ಮನೆಯ ಜಂತಿಯ ಕಟ್ಟಿಗೆಗೆ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಕಳೆದ ನವೆಂಬರ್ 20 ರಂದು ಸಾಗರ ನರೋಣಿ ಎಂಬಾತ ಶಿವಶರಣಗೆ ಫೋನ್ ಮಾಡಿ ನಮ್ಮ ತಂಗಿ ಬಗ್ಗೆ ಮಾತನಾಡಬೇಕು ರಾಮ ಮಂದಿರ ಸರ್ಕಲ್ ಹತ್ತಿರ ಬಾ ಎಂದು ಕರೆದಿದ್ದಾರೆ. ಆಗ ಶಿವಶರಣ ರಾಮ ಮಂದಿರ ಸರ್ಕಲ್ ಟೀ ಪಾಯಿಂಟ್ ಹತ್ತಿರ ಹೋದಾಗ ಸಾಗರ ನರೋಣಿ, ಶರಣು ನರೋಣಿ, ಪ್ರಶಾಂತ ನರೋಣಿ ಮತ್ತು ಅಂಬ್ರೀಷ್ ಮಡಿವಾಳ ಸೇರಿ ಶಿವಶರಣನ ಮೇಲೆ ಹಲ್ಲೆ ನಡೆಸಿ ಆತನ ಕೊರಳಲ್ಲಿದ್ದ 1 ತೊಲೆ ಬಂಗಾರದ ಚೈನ್, 2 ಉಂಗುರ ಮತ್ತು ಒಂದು ತೊಲೆಯ ಬ್ರಾಸ್ಲೇಟ್ ಕಸಿದುಕೊಂಡಿದ್ದಾರೆ. ಇದರಿಂದ ನೊಂದ ಶಿವಶರಣ ಮನೆಗೆ ಬಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಮೃತನ ತಂದೆ ದತ್ತಣ್ಣ ನಡಕಟ್ಟಿ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಸಾಗರ ನರೋಣಿ, ಶರಣು ನರೊಣಿ, ಪ್ರಶಾಂತ ನರೋಣಿ ಮತ್ತು ಅಂಬ್ರೀಷ್ ಮಡಿವಾಳ ವಿರುದ್ಧ ದೂರು ಸಲ್ಲಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧನ ಕಾರ್ಯ ಮುಂದುವರಿಸಿದ್ದಾರೆ.
ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆ
ಕಲಬುರಗಿ ದಾಬಾದಲ್ಲಿ ರಾತ್ರಿ ಕುಟುಂಬದವರೊಂದಿಗೆ ತಂಗಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ್ದರಿಂದ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಅಜಲಪುರದ ಬಸವರಾಜ ಶರಣಪ್ಪ ಕುಂಬಾರ ಎಂಬಾತನಿಗೆ ಕಲಬುರಗಿಯ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಹಮದ್ ಮುಜೀರ್ ಉಲ್ಲಾ ಅವರು 10 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
2022 ರ ಮಾರ್ಚ 20 ರಂದು ಮಹಾರಾಷ್ಟ್ರ ಮೂಲಕ ಯಾತ್ರಿಕರು ಜೇವರ್ಗಿ ತಾಲೂಕು ನೆಲೋಗಿ ಠಾಣಾ ವ್ಯಾಪ್ತಿಯ ಹೆದ್ದಾರಿ ಪಕ್ಕದ ದಾಬಾದಲ್ಲಿ ಊಟಮಾಡಿ ರಾತ್ರಿ ವಸತಿ ಮಾಡಿದ್ದರು. ಆಗ ದಾಬಾದಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜನಿಂದ ಈ ದೃಷ್ಕೃತ್ಯ ನಡೆದಿತ್ತು. ನೆಲೋಗಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖಾಧಿಕಾರಿ ಜೇವರ್ಗಿ ಠಾಣೆಯ ಸಿಪಿಐ ಎಂ.ಶಿವಪ್ರಸಾದ ಅವರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಸರಕಾರದ ಪರವಾಗಿ 5ನೇ ಅಪರ ಸರಕಾರಿ ಅಭಿಯೋಜಕ ಹಯ್ಯಾಳಪ್ಪ ಬಳಬಟ್ಟಿ ಅವರು ವಾದ ಮಂಡಿಸಿದ್ದರು.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)