ಕಲಬುರಗಿ ಜಿಲ್ಲೆಯಲ್ಲಿ ಶೇ. 84 ರಷ್ಟು ಮಳೆ ಕೊರತೆ, ಶೇ. 27 ರಷ್ಟು ಮಾತ್ರ ಬಿತ್ತನೆ; ಅನಿರೀಕ್ಷಿತ ಬಿಸಿಲಿನ ತಾಪಮಾನ ಹೆಚ್ಚಳ
ಕಲಬುರಗಿ ಜಿಲ್ಲೆಯಲ್ಲಿ ಮಳೆ ಕೊರತೆ ಹಿನ್ನೆಲೆ ಭೂಮಿಯಲ್ಲಿ ತೇವಾಂಶ ಕಡಿಮೆಯಾಗುವ ಆತಂಕ. ರೈತರು ಮುಂಜಾಗ್ರತವಾಗಿ ತೇವಾಂಶ ಕಡಿಮೆ ಆಗದಂತೆ ಕ್ರಮ ವಹಿಸಲು ಕೃಷಿ ಇಲಾಖೆ ಸೂಚನೆ.
ಕಲಬುರಗಿ: ಜಿಲ್ಲೆಯಲ್ಲಿ ಶೇ. 84ರಷ್ಟು ಮಳ ಕೊರತೆಯಿಂದಾಗಿ ಮುಂಗಾರು ಬಿತ್ತನೆ ಕೇವಲ ಶೇ. 27 ರಷ್ಟು ಬಿತ್ತನೆಯಾಗಿದೆ. ಕಳೆದ ಮೂರು ವಾರಗಳಿಂದ ಮಳೆಯ ಕೊರತೆ ಕಂಡು ಬಂದ ಕಾರಣ ಹಾಗೂ ಅನೀರಿಕ್ಷಿತ ಬಿಸಿಲಿನ ತಾಪಮಾನದಿಂದಾಗಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡು ಭೂಮಿಯಲ್ಲಿನ ತೇವಾಂಶದ ಕಡಿಮೆಯಾಗುವ ಸಾಧ್ಯತೆಯಿದ್ದು ರೈತ ಬಾಂಧವರು ಮುಂಜಾಗೃತ ಕ್ರಮವಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಕೃಷಿ ಇಲಾಖೆ ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಮಳೆ ವಿವರ
2023-24 ನೇ ಸಾಲಿನ ಮುಂಗಾರು ಹಂಗಾಮಿನ ಜೂನ ತಿಂಗಳಿನಲ್ಲಿ ಶೇ -43% ಮಳೆ ಕೊರತೆಯಿಂದ ಬಿತ್ತನೆ ಕುಂಠಿತಗೂಂಡಿರುತ್ತದೆ. ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು (+93%) ಮಳೆಯಿಂದಾಗಿ ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಉದ್ದು, ಸೋಯಾಬೀನ್ ಮತ್ತು ಇತರೆ ಬೆಳೆಗಳು ಅಂದಾಜು 10531 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುತ್ತದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿರುತ್ತದೆ. ಅದರಂತೆ 14.21 ಕೋಟಿ ರೂಪಾಯಿ ಪರಿಹಾರ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಲಾಗಿರುತ್ತದೆ. ಅಗಷ್ಟ ತಿಂಗಳಲ್ಲಿ ಮಳೆ ಬಾರದೆ ಶೇ -82 ರ ಕೊರತೆಯಿಂದ (ಅನಾವೃಷ್ಠಿ) ಬೆಳೆ ಹಾನಿಯಾಗಿದ್ದು. 11 ತಾಲೂಕುಗಳ Ground Truthing ಕಾರ್ಯ ಪೂರ್ಣಗೊಂಡಿದ್ದು ತೀವೃ ಬರಪೀಡಿತ ಜಿಲ್ಲೆಯೆಂದು ಘೋಷಣೆಯಾಗಿರುತ್ತದೆ ಎಂದು ಜಂಟಿ ಸಮೀಕ್ಷೆ ವರದಿಯನ್ವಯ ಸರ್ಕಾರಕ್ಕೆ ವರದಿ ಮಾಡಲಾಗಿದೆ.
ಬರ ನಿರ್ವಹಣೆಗೆ ತೇವಾಂಶ ಸಂರಕ್ಷಣಾ ಕ್ರಮಗಳು
ಕಲಬುರಗಿ ಜಿಲ್ಲೆಯಲ್ಲಿ ಅಕ್ಟೋಬರ್ 20ರವರೆಗೆ 82 ಮಿಲಿ ಮೀಟರ್ ಮಳೆ ಬರಬೇಕಾಗಿದ್ದು ಆದರೆ 13 ಮಿಲಿ ಮೀಟರ್ ಮಳೆ ಬಂದಿರುತ್ತದೆ. ಇದರಿಂದಾಗಿ ಶೇ. -84 ರಷ್ಟು ಮಳೆ ಕೊರತೆ ಕಂಡು ಬಂದಿದೆ. ಕಳೆದ ಮೂರು ವಾರಗಳಿಂದ ಮಳೆಯ ಕೊರತೆ ಕಂಡು ಬಂದ ಕಾರಣ ಹಾಗೂ ಅನೀರಿಕ್ಷಿತ ಬಿಸಿಲಿನ ತಾಪಮಾನದಿಂದಾಗಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡು ಭೂಮಿಯಲ್ಲಿನ ತೇವಾಂಶದ ಕಡಿಮೆಯಾಗುವ ಸಾಧ್ಯತೆಯಿದ್ದು ರೈತ ಬಾಂಧವರು ಮುಂಜಾಗೃತ ಕ್ರಮವಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಮನವಿ ಮಾಡಿದ್ದಾರೆ.
ತೇವಾಂಶ ಕಡಿಮೆಯಾಗದಂತೆ ಕೈಗೊಳ್ಳಬೇಕಾದ ಕ್ರಮಗಳು
ನಿರಂತರವಾಗಿ ಬೆಳೆಗಳಲ್ಲಿ ಅಂತರ ಬೇಸಾಯ ಮಾಡಿ ಮಣ್ಣಿನ ಮೇಲ್ಪದರು ಪುಡಿಯಾಗುವಂತೆ ನೋಡಿಕೊಂಡು ಭೂಮಿಯಲ್ಲಿ ಬಿರುಕು ಬಿಡದಂತೆ ಮುಂಜಾಗೃತ ಕ್ರಮ ವಹಿಸುವುದು ಇದರಿಂದ ಭೂಮಿಯಲ್ಲಿನ, ತೇವಾಂಶ/ಹಸಿ ಕಾಪಾಡಿಕೊಂಡಂತಾಗುತ್ತದೆ. ನೀರಿನ ಲಭ್ಯತೆ ಇರುವ ರೈತ ಬಾಂಧವರು ಸಾಲು ಬಿಟ್ಟು ಸಾಲು ನೀರು ಹಾಯಿಸುವ ಮೂಲಕ ಸಂದಿಗ್ದ ಪರಿಸ್ಥಿತಿಯಲ್ಲಿ ನೀರು ಒದಗಿಸಿ ಬೆಳೆಯನ್ನು ಕಾಪಾಡಿಕೊಳ್ಳಬೇಕು.
ಸರಕಾರದ ಸಹಾಯ ಧನದಲ್ಲಿ ಲಭ್ಯವಿರುವ HDPE ROLL PIPE (ಸುರುಳಿ ಪೈಪ್) ಬಳಸಿಕೊಂಡು ನೀರಿನ ಮೂಲದಿಂದ ದೂರವಿರುವ ಹೊಲಕ್ಕೆ ನೀರು ಸಾಗಿಸಲು ಅನುಕುಲ ಮಾಡಿಕೊಳ್ಳುವುದು ಹಾಗೂ ನೀರು ಹಾಯಿಸುವ ಮೂಲಕ ಬೆಳೆಯನ್ನು ಕಾಪಾಡಿಕೊಳ್ಳುವುದು. ಸರಕಾರದ ಸಹಾಯ ಧನದಲ್ಲಿ/ರೈತರ ಬಳಿ ಲಭ್ಯವಿರುವ ತುಂತುರು ನೀರಾವರಿ/ಹನಿ ನೀರಾವರಿ ಸಾಧನಗಳನ್ನು ಬಳಸಿಕೊಂಡು ಬೆಳೆಯ ಹೂವಾಡುವ ಹಂತ, ಕಾಯಿಕಟ್ಟುವ ಹಂತಗಳಲ್ಲಿ ನೀರು ಹಾಯಿಸಿ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಹನಿ/ತುಂತುರು ನೀರಾವರಿ ಪದ್ಧತಿ ಉಪಯೋಗಿಸುವದರಿಂದ ಹೆಚ್ಚಿನ ಪ್ರದೇಶದ ಬೆಳೆಯನ್ನು ಕಾಪಾಡಿಕೊಳ್ಳುವುದಲ್ಲದೆ ನೀರಿನ ಸಮರ್ಥ ಬಳಕೆಯಾಗುತ್ತದೆ.
ಹಿಂಗಾರು ಜೋಳ ಮೊಳಕೆ ಹಂತದಲ್ಲಿದ್ದು ತೇವಾಂಶದ ಕೋರತೆ ನೀಗಿಸಲು ಶೆ 25ರಷ್ಟು ಸಸಿಗಳನ್ನು ಕಿತ್ತು ಸಸಿಯಿಂದ ಸಸಿಗೆ 10 ಸೆ.ಮಿ ಅಂತರ ಕಾಪಾಡಿಕೊಂಡು ಬೆಳೆ ಕಾಪಾಡಿಕೊಳ್ಳಬೇಕು. ಹೊಲಗಳಲ್ಲಿ ಲಭ್ಯವಿರುವ ಸಸ್ಯ ಅವಿಶೇಷಗಳನ್ನು (ಹುಲ್ಲು, ಕಸ, ಕಡ್ಡಿ, ತರಗೆಲೆಗಳನ್ನು) ಸಾಲುಗಳ ಮಧ್ಯದಲ್ಲಿ ಹರಡುವ ಮೂಲಕ ಸಸ್ಯ ಹೊದಿಕೆ ನಿರ್ಮಿಸಿ ಭೂಮಿಯ ಮೆಲ್ಮೈ ತೇವಾಂಶ ಆವಿಯಾಗದಂತೆ ಕಾಪಾಡಿಕೊಳ್ಳಬೇಕು.
ಜಿಲ್ಲೆಯಲ್ಲಿ ಬೆಳೆ ಹಾನಿ
ಬರಗಾಲದಿಂದ 2,76,360 ಹೆಕ್ಟರ್ ಪ್ರದೇಶದಷ್ಟು ಬೆಳೆ ಹಾನಿಯಾಗಿದ್ದು, ಪ್ರಮುಖ ಬೆಳೆಗಳಾದ ತೊಗರಿ 1,94,960 ಹೆಕ್ಟರ್ ಹತ್ತಿ 35,705 ಹೆಕ್ಟರ್ ಕಬ್ಬು 22,399 ಹೆಕ್ಟರ್ ಸೋಯಾಬೀನ್ 16,203 ಹೇ. ಉದ್ದು 5854 ಹೇ. ಪ್ರದೇಶದಲ್ಲಿ ಬೆಳೆ ಹಾನಿಯಾಗಿರುತ್ತದೆ.
ಜಿಲ್ಲೆಯಲ್ಲಿ ಬಿತ್ತನೆ ಕ್ಷೇತ್ರ
2023-24 ನೇ ಸಾಲಿನ ಮುಂಗಾರು ಹಂಗಾವಿನಲ್ಲಿ ಒಟ್ಟು 8,87,014 ಹೆಕ್ಟರ್ ಬಿತ್ತನೆ ಕ್ಷೇತ್ರ ಗುರಿ ಹೊಂದಲಾಗಿದ್ದು ಒಟ್ಟು 8,56,934 ಹೆಕ್ಟರನಲ್ಲಿ (97%) ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಉದ್ದು, ಸೋಯಾಬೀನ್, ಹತ್ತಿ, ಕಬ್ಬು ಮತ್ತು ಇತರೆ ಬೆಳೆಗಳು ಬಿತ್ತನೆಯಾಗಿದೆ.
2023-24 ನೇ ಸಾಲಿನ ಹಿಂಗಾರು ಹಂಗಾವಿನಲ್ಲಿ ಒಟ್ಟು 2.22 ಲಕ್ಷ ಹೇ ಬಿತ್ತನೆ ಕ್ಷೇತ್ರ ಗುರಿ ಹೊಂದಲಾಗಿದ್ದು ಒಟ್ಟು 59,763 ಹೆಕ್ಟರನಲ್ಲಿ (27%)ಬಿತ್ತನೆಯಾಗಿದ್ದು, ಪ್ರಮುಖ ಬೆಳೆಗಳಾದ ಹಿಂಗಾರಿ ಜೋಳ,ಕಡಲೆ ಗೋಧಿ ಸೂರ್ಯಕಾಂತಿ, ಶೇಂಗಾ, ಕುಸುಬೆ ಇತರೆ ಬೆಳೆಗಳು ಬಿತ್ತನೆಯಾಗಿದೆ. ತೀವ್ರಮಳೆ ಕೊರತೆಯಿಂದ ಹಿಂಗಾರು ಬಿತ್ತನೆ ಕುಂಠಿತಗೂಂಡಿರುತ್ತದೆ.
ಬೆಳೆ ಸಮೀಕ್ಷೆ
2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯಲ್ಲಿ 7,14,609 ತಾಕುಗಳ ಗುರಿ ಹೊಂದಲಾಗಿರುತ್ತದೆ. ಈಗಾಗಲೇ 7,09,088 ತಾಕುಗಳ (ಶೇ 99.22 ರಷ್ಟು) ಬೆಳೆ ಸಮೀಕ್ಷೆ ಕೈಗೊಳ್ಳಲಾಗಿರುತ್ತದೆ. ರೈತ ಬಾಂಧವರು ತಮ್ಮ ಕ್ಷೇತ್ರದಲ್ಲಿ ದಾಖಲಾದ ಬೆಳೆ ಬಗ್ಗೆ ಆಕ್ಷೇಪಣೆಯಿದ್ದಲ್ಲಿ ತಮ್ಮ ಮೊಬೈಲ್ ಮೂಲಕ ಬೆಳೆ ದರ್ಶಕ ಆಪ್ ನಲ್ಲಿ ಸಲ್ಲಿಸಬಹುದು.
ಬೆಳೆ ವಿಮೆ
2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1,62,077 ರೈತರು 1,86,890 ಹೇ. ಗಳಿಗೆ ಬೆಳೆ ವಿಮೆ ನೋಂದಣಿ ಮಾಡಿಸಿರುತ್ತಾರೆ. 2022-23 ರ ಮುಂಗಾರು ಬೆಳೆ ವಿಮೆ ಒಟ್ಟು ರೂ. 108.595 ಕೋಟಿ 1,38,355 ರೈತರ ಬ್ಯಾಂಕ ಖಾತೆಗೆ ಜಮೆಯಾಗಿರುತ್ತದೆ. ಮಳೆ ಕೊರತೆಯಿಂದ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಕುಂಠಿತಗೂಂಡಿದ್ದು ಬೆಳೆ ಹಾನಿ ಆಗುವ ಸಂಭವ ಇರುವುದರಿಂದ ಬೆಳೆ ವಿಮೆ ನೋಂದಾಯಿಸಲು ರೈತರಲ್ಲಿ ಕೋರಲಾಗಿದೆ.
FID ನೂಂದಣಿ: ಜಿಲ್ಲೆಯಲ್ಲಿ ಒಟ್ಟು 4,21,715 ಭೂಹಿಡುವಳಿದಾರರಿದ್ದು ಇದರಲ್ಲಿ 3,89,387 ರೈತರು FID ನೂಂದಾಯಿಸಿದ್ದು ಇರುತ್ತದೆ. ಅನಾವೃಷ್ಠಿಯಿಂದ ಆದ ಬೆಳೆ ಹಾನಿ ಹಾಗೂ ತೊಗರಿ ನೆಟೆ ರೋಗ ಪರಿಹಾರ ಪಡೆಯಲು ಬಾಕಿ ಉಳಿದ FID ಇಲ್ಲದ 44,556 ರೈತರು ಕಡ್ಡಾಯವಾಗಿ ತಮ್ಮ ಸಮೀಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಗೆ, ತೋಟಗಾರಿಕೆ ಇಲಾಖೆ ಕಚೇರಿ, ಸಿಎಸ್‌ಸಿ ಕೇಂದ್ರಗಳಿಗೆ ಭೇಟಿ ನೀಡಿ FID ನೊಂದಣಿ ಮಾಡಿಕೊಳ್ಳಲು ಕೋರಲಾಗಿದೆ.
ಪಿ.ಎಮ್.ಕಿಸಾನ್ e-KYC ಮಾಡಿಸಿ
ಜಿಲ್ಲೆಯಲ್ಲಿ ಒಟ್ಟು ಅರ್ಹ 2,64,471 ಫಲಾನುಭವಿಗಳಲ್ಲಿ 2,22,313 ಫಲಾನುಭವಿ ರೈತರು ಈಗಾಗಲೇ e-KYC ಮಾಡಿಸಿರುತ್ತಾರೆ. ಉಳಿದ 42,158 ರೈತರು e-KYC ಮಾಡಿಸುವುದು ಬಾಕಿ ಇರುತ್ತದೆ. ರೈತ ಭಾಂದವರು ಮುಂದಿನ ಕಂತಿನ ಸಹಾಯ ಧನ ಪಡೆಯಲು ತಕ್ಷಣ ಸಿಎಸ್‌ಸಿ ಕೇಂದ್ರ/ಗ್ರಾಮ ಒನ್, ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ e-KYC ತಪ್ಪದೆ ಮಾಡಿಸಲು ವಿನಂತಿಸಿದೆ.
ಸುರಕ್ಷಿತ ಕೀಟನಾಶಕ ಬಳಕೆ ಮಾಡಿಕೊಳ್ಳಿ
ತೊಗರಿ, ಹತ್ತಿ ಬೆಳೆಗಳು ಸದ್ಯ ಹೂವಾಡುವ ಹಂತದಲ್ಲಿದ್ದು ಕೀಟದ ಹಾವಳಿ ನಿಯಂತ್ರಿಸಲು ಕಲಬುರ್ಗಿ ಜಿಲ್ಲೆಯ ರೈತ ಭಾಂಧವರು ಕೀಟನಾಶಕಗಳನ್ನು ಸಿಂಪಡಿಸುವುದು ಸರ್ವೇ ಸಾಮಾನ್ಯವಾಗಿದ್ದು ಕೀಟನಾಶಕ ಸಿಂಪರಣೆ ಸಮಯದಲ್ಲಿ ಮುಂಜಾಗ್ರತ ಕ್ರಮವಾಗಿ ಕೈ ಗವಚ, ಹಳೆಯ ಬಟ್ಟೆಗಳನ್ನು ಧರಿಸುವುದು (ಕೈಗಳು ಪೂರ್ತಿ ಮುಚ್ಚುವ ಹಾಗೆ) ತಲೆ ಕೂದಲು ಹಾಗೂ ಮೂಗಿಗೆ ಮಾಸ್ಕ ಧರಿಸುವುದು ಅಲ್ಲದೆ ಕಣ್ಣು ರಕ್ಷಿಸಲು ಕನ್ನಡಕ ಧರಿಸುವುದು. ಕೀಟನಾಶಕ ಸಿಂಪರಣೆ ಮಾಡುವಾಗ ಊಟ, ನೀರು ಅಥವಾ ಧೂಮಪಾನ ಮಾಡಬಾರದದೆಂದು ವಿನಂತಿಸಲಾಗಿದೆ.
ತೋಟಗಾರಿಕೆ ಬೆಳೆಗಳು
2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 14,353 ಹೆ ಬಿತ್ತನೆ ಗುರಿ ಹೂಂದಲಾಗಿರುತ್ತದೆ. ಅದರಲ್ಲಿ 4,797 ಹೇ ಮಾತ್ರ ಬಿತ್ತನೆಯಾಗಿದ್ದು ಹಿಂಗಾರು ಹಂಗಾಮಿನಲ್ಲಿ 2,130 ಹೇ ಗುರಿ ಹೊಂದಲಾಗಿದ್ದು, ಅದರಲ್ಲಿ 361 ಹೇ ಬಿತ್ತನೆಯಾಗಿರುತ್ತದೆ. ಜಿಲ್ಲೆಯಲ್ಲಿ ಕಂಡು ಬಂದ ತೀವ್ರ ಬರದ ಕಾರಣ ಭೂಮಿಯ ನೀರಿನ ಮಟ್ಟ ಕುಸಿದಿದ್ದು ತೋಟಗಾರಿಕೆ ಬೆಳೆಗಳ ಬಿತ್ತನೆಯಲ್ಲಿ ತೀವ್ರ ಕುಂಠಿತವಾಗಿದೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)