ಕಲಬುರಗಿಯ ಟೆಕ್ಸ್ಟೈಲ್ ಪಾರ್ಕ್ಗೆ ಒಂದು ತಿಂಗಳೊಳಗೆ ಜವಳಿ ಇಲಾಖೆಯ ಹೆಸರಿಗೆ ಜಮೀನು ಹಸ್ತಾಂತರಿಸಿ; ಜವಳಿ ಸಚಿವ ಶಿವಾನಂದ ಎಸ್. ಪಾಟೀಲ ಸೂಚನೆ
ಕಲಬುರಗಿ ಜಿಲ್ಲೆಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಎಫ್.ಆರ್.ಪಿ ದರಕ್ಕೆ ಕಬ್ಬು ಪಡೆದು ಇನ್ನು ರೈತರಿಗೆ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ರೈತ ಸಂಘಟನೆಗಳು ತಮ್ಮ ಬಳಿ ದೂರು ನೀಡಿವೆ. ಕೂಡಲೆ ಇದನ್ನು ಪರಿಶೀಲಿಸಿ ರೈತರಿಗೆ ಬರಬೇಕಾದ ಬಾಕಿ ಹಣ ಕಾರ್ಖಾನೆಗಳಿಂದ ವಸೂಲಿ ಮಾಡಬೇಕು ಎಂದು ಡಿ.ಸಿ. ಅವರಿಗೆ ಸೂಚಿಸಿದರು.
ಕಲಬುರಗಿ: ಕಲಬುರಗಿ ಜಿಲ್ಲೆಯ ಜೇವರ್ಗಿ ರಸ್ತೆಯ ಕೆಸರಟಗಿ ಬಳಿ ಕೇಂದ್ರ ಸರ್ಕಾರದ ಪಿ.ಎಂ.ಮಿತ್ರ ಯೋಜನೆಯಡಿ ಸ್ಥಾಪಿಸಲು ಉದ್ದೇಶಿಸಿರುವ ಮೆಗಾ ಟೆಕ್ಸ್ ಟೈಲ್ ಪಾರ್ಕ್ಗೆ ಆರಂಭಿಕವಾಗಿ 1,000 ಎಕರೆ ಜಮೀನು ಜವಳಿ ಇಲಾಖೆಗೆ ಒಂದು ತಿಂಗಳೊಳಗೆ ಹಸ್ತಾಂತರಿಸಿ ಆರ್.ಟಿ.ಸಿ.ಯಲ್ಲಿ ಹೆಸರು ಸೇರಿಸಬೇಕೆಂದು ರಾಜ್ಯದ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟೆ ಸಚಿವ ಶಿವಾನಂದ ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಭಾನುವಾರ ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸುಮಾರು 10 ಸಾವಿರ ಕೋಟಿ ರೂ. ಹೂಡಿಕೆಯ ಈ ಯೋಜನೆ ಸಾಕಾರಕ್ಕೆ ಜಮೀನಿನ ಗಡಿ ರೇಖೆ ಗುರತಿಸುವ ಕೆಲಸ ಬೇಗ ಮುಗಿಸಬೇಕಿದೆ. ಇದರ ಜೊತೆಗೆ ಫೆನ್ಸಿಂಗ್ ಅಥವಾ ತಡೆಗೋಡೆ ನಿರ್ಮಿಸುವ ಮೂಲಕ ಜಮೀನು ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಲಬುರಗಿ ಜಿಲ್ಲೆಯಲ್ಲಿ ಕೆಲವು ಸಕ್ಕರೆ ಕಾರ್ಖಾನಗೆಳು ಎಫ್.ಆರ್.ಪಿ ದರಕ್ಕೆ ಕಬ್ಬು ಪಡೆದು ಇನ್ನು ರೈತರಿಗೆ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ರೈತ ಸಂಘಟನೆಗಳು ತಮ್ಮ ಬಳಿ ದೂರು ನೀಡಿವೆ. ಕೂಡಲೆ ಇದನ್ನು ಪರಿಶೀಲಿಸಿ ರೈತರಿಗೆ ಬರಬೇಕಾದ ಬಾಕಿ ಹಣ ಕಾರ್ಖಾನೆಗಳಿಂದ ವಸೂಲಿ ಮಾಡಬೇಕು ಎಂದು ಡಿ.ಸಿ. ಅವರಿಗೆ ಸೂಚಿಸಿದರು.
ಪ್ರಸಕ್ತ ಸಾಲಿನಲ್ಲಿ ವರುಣ ಕೈಕೊಟ್ಟ ಕಾರಣ ಮತ್ತು ನೀರಿನ ಕೊರತೆಯಿಂದ ಪಕ್ವತೆ ಇಲ್ಲದೆ ಕಬ್ಬಿನ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಆದರಿಂದ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ನವೆಂಬರ್ 1ರ ನಂತರವೇ ಮಾಡಬೇಕು. ನುರಿಸುವ ಮುನ್ನ ಸಕ್ಕರೆ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಕಾರ್ಖಾನೆಗಳು ಇದನ್ನು ಉಲ್ಲಂಘಿಸದಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸಚಿವ ಶಿವಾನಂದ ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಸಚಿವರು ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಮಳೆ-ಬೆಳೆ, ಬಿತ್ತನೆ ಪ್ರಮಾಣ, ಜಲಾಶಯದಲ್ಲಿ ನೀರಿನ ಸಂಗ್ರಹಣೆ ಪ್ರಮಾಣ, ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸಮರ್ಪಕ ಮಳೆಯಾಗದ ಕಾರಣ ಮುಂದಿನ ದಿನದಲ್ಲಿ ಕಲಬುರಗಿ, ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ. ಕೂಡಲೇ ಮಹಾರಾಷ್ಟ್ರದ ರಾಜ್ಯದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ನೀರು ಬಿಡುಗಡೆಗೆ ಕ್ರಮ ವಹಿಸಬೇಕು ಎಂದರು. ಡಿ.ಸಿ. ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಈಗಾಗಲೆ ನೆರೆ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಿಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೂ ತರಲಾಗಿದೆ ಎಂದರು.
ಜವಳಿ ಅಭಿವೃದ್ಧಿ ಆಯುಕ್ತರು ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕ ಟಿ.ಎಚ್.ಎಮ್.ಕುಮಾರ ಅವರು ಉದ್ದೇಶಿತ ಪಾರ್ಕ್ ಕುರಿತು ಯೋಜನೆ ನಕಾಶೆಯೊಂದಿಗೆ ಸಚಿವರಿಗೆ ವಿಸ್ತಾರವಾಗಿ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಎಂ.ಸತೀಷ್ ಕುಮಾರ, ಡಿ.ಡಿ.ಎಲ್.ಆರ್. ಪ್ರವೀಣ, ತಹಶೀಲ್ದಾರ ನಾಗಮ್ಮ ಕಟ್ಟಿಮನಿ ಸೇರಿದಂತೆ ಜವಳಿ ಇಲಾಖೆಯ ಇನ್ನಿತರ ಹಿರಿಯ ಅಧಿಕಾರಿಗಳು ಇದ್ದರು.
ಇನ್ಮುಂದೆ ಕಬ್ಬು ನುರಿಸಲು ಕಡ್ಡಾಯವಾಗಿ ಸಕ್ಕರೆ ಇಲಾಖೆಯ ಅನುಮತಿ ಕಡ್ಡಾಯ
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕೆಪಿಆರ್ ಸಕ್ಕರೆ ಕಾರ್ಖಾನೆಯು ಸಕ್ಕರೆ ಇಲಾಖೆ ಅನುಮತಿ ಪಡೆಯದೆ ಕಬ್ಬು ನುರಿಸಿರುವ ಹಿನ್ನೆಲೆಯಲ್ಲಿ ಆ ಕಬ್ಬು ಮತ್ತು ಮುಲಾಸಿಸ್ ಜಪ್ತಿ ಮಾಡಲಾಗಿದೆ ಎಂದು ಸಕ್ಕರೆ ಖಾತೆ ಸಚಿವ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಕಲ್ಬುರ್ಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಆರ್ ಸಕ್ಕರೆ ಕಾರ್ಖಾನೆಯು ಹೊಸದಾಗಿ ಪ್ರಾರಂಭಿಸಿತು, ಅದು ಸಕ್ಕರೆ ಇಲಾಖೆಯ ಅನುಮತಿ ಪಡೆಯದೆ ಆಳಂದನಲ್ಲಿರುವ ಕೋ ಆಪರೇಟಿವ್ ಸಕ್ಕರೆ ಕಾರ್ಖಾನೆಯಲ್ಲಿ ಅನಧಿಕೃತವಾಗಿ ಸಕ್ಕರೆ ನುರಿಸಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಅದನ್ನು ಜಪ್ತಿ ಮಾಡಲು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಸಕ್ಕರೆ ಇಲಾಖೆಯು ಸುಮಾರು 120 ಕೋಟಿ ರೂಪಾಯಿ ವೆಚ್ಚದ ಸಕ್ಕರೆ ಮತ್ತು ಮುಲಾಸಿಸ್ ಜಪ್ತಿ ಮಾಡಿದ್ದು, ಈ ಹಣ ಈಗ ಕೋಟ್೯ ವಶದಲ್ಲಿದೆ ಎಂದರು.
ಸಕ್ಕರೆ ಕಾರ್ಖಾನೆ ಅನುಮತಿ ಇಲ್ಲದೆ ಅನಧಿಕೃತವಾಗಿ ಸಕ್ಕರೆ ನುರಿಸಿರುವ ಪ್ರಕರಣ ರಾಜ್ಯದಲ್ಲಿ ಮೊದಲ ಬಾರಿಗೆ ಅಫಜಲಪುರದಲ್ಲಿ ನಡೆದಿದೆ. ಈ ವಿಷಯ ಸುಪ್ರೀಮ್ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು ಇನ್ನು ಮುಂದೆ ಯಾವುದೇ ಸಕ್ಕರೆ ಕಾರ್ಖಾನೆ ಕಬ್ಬು ನುರಿಸಲು ಸಕ್ಕರೆ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯಗೊಳಿಸಲು ಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ ಇನ್ಮುಂದೆ ಯಾವುದೇ ಸಕ್ಕರೆ ಕಾರ್ಖಾನೆ, ಸಕ್ಕರೆ ನುರಿಸಲು ಸಕ್ಕರೆ ಇಲಾಖೆಯ ಅನುಮತಿ ಪಡೆಯಬೇಕಾಗಿದೆ. ಮಳೆ ವಿಳಂಬವಾಗಿ ಬಿದ್ದಿರುವುದರಿಂದ ಕಬ್ಬು ಬೆಳೆಯಲು 11 ರಿಂದ 12 ತಿಂಗಳ ಬೇಕಾಗುತ್ತದೆ ಹೀಗಾಗಿ
ಸಕ್ಕರೆ ಕಾರ್ಖಾನೆಗಳು ನವೆಂಬರ್ ತಿಂಗಳ ಬಳಿಕವೇ ಸಕ್ಕರೆ ನುರಿಸುವ ಪ್ರಕ್ರಿಯೆ ಆರಂಭಿಸುವಂತೆ ಇಲಾಖೆ ಎಲ್ಲಾ ಕಾರ್ಖಾನೆಗಳಿಗೆ ನಿರ್ದೇಶನ ನೀಡಿದೆ ಎಂದರು. ಆಳಂದ ಕೆಪಿಆರ್ ಸಕ್ಕರೆ ಕಾರ್ಖಾನೆ ಸಕ್ಕರೆ ನುರಿಸುವುದಕ್ಕೆ ಅನುಮತಿ ಕೇಳಿದರೆ ಅದನ್ನು ಇಲಾಖೆ ಮತ್ತು ಕೋರ್ಟ್ ಪರಿಶೀಲಿಸಿ ಕ್ರಮಕೈಗೊಳ್ಳಲಿದೆ ಎಂದರು. ಬರುವ ನವಂಬರ್ ತಿಂಗಳಲ್ಲಿ ರಾಜ್ಯದ 72 ರಿಂದ 74 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಪ್ರಕ್ರಿಯೆ ಆರಂಭಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)