ಕರ್ನಾಟಕದ 3 ಕ್ಷೇತ್ರಗಳ ಮತಗಟ್ಟೆ ಸಮೀಕ್ಷೆಗಳು ಹೇಳುವುದೇನು?, ಎಲ್ಲಿ ಯಾರು ಗೆಲ್ಲಲಿದ್ದಾರೆ ; ಚನ್ನಪಟ್ಟಣದಲ್ಲಿ ಮಾತ್ರ ಅಚ್ಚರಿ ಫಲಿತಾಂಶ ಏಕೆ
ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆದ ವಿಧಾನಸಭೆ ಉಪಚುನಾವಣೆ ಫಲಿತಾಂಶ ಮೂರು ಪಕ್ಷಗಳಿಗೆ ಬೇಸರವಿಲ್ಲದಂತೆ ಬರಬಹುದು ಎನ್ನುವುದನ್ನು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಯಾವ ಕ್ಷೇತ್ರದಲ್ಲಿ ಹೇಗಿದೆ ಸ್ಥಿತಿ ಇಲ್ಲಿದೆ ಮಾಹಿತಿ.(ವರದಿ: ಎಚ್.ಮಾರುತಿ.ಬೆಂಗಳೂರು)
ಬೆಂಗಳೂರು; ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರ ಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಶನಿವಾರ ನಡೆಯಲಿದೆ. ಇಂದು ಸಂಜೆ ಬಹಿರಂಗವಾದ ಮತಗಟ್ಟೆ ಸಮೀಕ್ಷೆಗಳು ಮೂರರಲ್ಲಿ ಎರಡು ಎನ್ ಡಿಎ ಒಕ್ಕೂಟ ಮಾತು ಒಂದರಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿವೆ. ಪಿ ಮಾರ್ಕ್ ಸಮೀಕ್ಷೆ ಪ್ರಕಾರ ಎರಡರಲ್ಲಿ ಎನ್ ಡಿಎ ಅಂದರೆ ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಗೆಲುವು ಸಾಧಿಸಲಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಚೊಚ್ಚಲ ಗೆಲುವು ಸಾಧಿಸಿ ವಿಧಾನಸೌಧ ಪ್ರವೇಶಿಸಲಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವಿನ ನಗೆ ಬೀರಲಿದ್ದಾರೆ.
ಕನ್ನಡದ ಬಹುತೇಕ ಚಾನೆಲ್ ಗಳೂ ಇದೇ ಸಮೀಕ್ಷೆಯನ್ನು ಪುಷ್ಟಿಕರಿಸಿವೆ. ಆದರೆ ಪವರ್ ಚಾನೆಲ್ ಮಾತ್ರ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಕೂದಲೆಳೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದೆ.
ಚನ್ನಪಟ್ಟಣದಲ್ಲಿ ತುರುಸಿನ ಹಣಾಹಣಿ
ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಮತ್ತು ಎನ್ ಡಿಎ ಮೈತ್ರಿ ಕೂಟದ ಉಮೇದುವಾರರಾಗಿ ನಿಖಿಲ್ ಕುಮಾರಸ್ವಾಮಿ ಎದುರಾಳಿಗಳಾಗಿದ್ದರು. ಇಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಜೆಡಿಎಸ್ ಶೇ.45 ಮತ್ತು ಕಾಂಗ್ರೆಸ್ ಶೇ.41 ರಷ್ಟು ಮತ ಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಚನ್ನಪಟ್ಟಣ ಕ್ಷೇತ್ರದ ಫಲಿತಾಂಶ ಏರುಪೇರು ಆದರೂ ಅಚ್ಚರಿ ಇಲ್ಲ. ಯಾರೇ ಗೆದ್ದರೂ ಕೂದಲೆಳೆ ಅಂತರದಲ್ಲಿ ಗೆಲ್ಲಲಿದ್ದಾರೆ. ಚನ್ನಪಟ್ಟಣಕ್ಕೆ ವಕ್ಫ್ ಸಚಿವ ಜಮೀರ್ ಅಹಮದ್ ಎಂಟ್ರಿ ಕೊಡುವವರೆಗೂ ಬೊಂಬೆ ನಾಡು ಕೈನತ್ತ ವಾಲಿತ್ತು. ಜಮೀರ್ ಇಲ್ಲಸಲ್ಲದ ಮಾತುಗಳನ್ನಾಡಿದ್ದರ ಪರಿಣಾಮ ವಿಶೇಷವಾಗಿ ಒಕ್ಕಲಿಗ ಸಮುದಾಯದ ಮತಗಳು ನಿಖಿಲ್ ಪರ ವರ್ಗಾವಣೆಯಾಗಿರಬಹುದು, ಇದು ಫಲಿತಾಂಶವನ್ನೇ ಏರುಪಾರು ಮಾಡಿರಬಹುದು ಎನ್ನಲಾಗುತ್ತಿದೆ.
ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿ ಆಯ್ಕೆಯಾಗಿ ರಾಜೀನಾಮೆ ನೀಡಿದ್ದರಿಂದ ಮರು ಚುನಾವಣೆ ನಡೆದಿತ್ತು. ಚನ್ನಪಟ್ಟಣ ಕ್ಷೇತ್ರದಲ್ಲಿ 2,32,949 ಮತದಾರರಿದ್ದು 1,20,617 ಮಹಿಳಾ ಮತ್ತು 1,12,324 ಪುರುಷ ಮತದಾರರಿದ್ದಾರೆ. ಈ ಬಾರಿ ಡಿ.ಕೆ. ಸಹೋದರರು ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದವು.
ಯಾರೇ ಸೋತರೂ ಅದು ಹ್ಯಾಟ್ರಿಕ್ ಸೋಲಾಗುತ್ತದೆ. ಯೋಗೇಶ್ವರ್ 2018 ಮತ್ತು 2023 ರಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಎದುರು ಸೋತಿದ್ದರು. ನಿಖಿಲ್ 2019 ರಲ್ಲಿ ಮಂಡ್ಯ ಲೋಕಸಭೆ ಮತ್ತು 2023ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಈಗ ಹ್ಯಾಟ್ರಿಕ್ ಸೋಲು ಯಾರದ್ದು ಎನ್ನುವುದನ್ನು ತಿಳಿಯಲು 23 ರವರೆಗೆ ಕಾಯಲೇಬೇಕು.
ಶಿಗ್ಗಾಂವಿ ಕ್ಷೇತ್ರದಲ್ಲಿ ಹೇಗೆ
ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಅಹಮದ್ ಪಠಾಣ್ ಸ್ಪರ್ಧಿಸಿದ್ದರು.
ಬಿಜೆಪಿ ಶೇ. 47, ಕಾಂಗ್ರೆಸ್ ಶೇ. 41 ರಷ್ಟು ಮತ ಗಳಿಸಲಿದೆ. ಇಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಕೆಲಸ ಮಾಡಿದೆ ಎಂದು ಸಮೀಕ್ಷೆ ತಿಳಿಸಿದೆ. ಭರತ್ ತಂದೆ ಸಂಸದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಮರು ಚುನಾವಣೆ ನಡೆದಿತ್ತು. ಇಲ್ಲಿ 1,21,443 ಪುರುಷ, 1,26,076 ಮಹಿಳಾ ಸೇರಿ 2,37,525 ಮತದಾರರಿದ್ದಾರೆ. 2023ರಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ 1,00,016 ಮತ ಗಳಿಸಿ ಭರ್ಜರಿ ಜಯ ಸಾಧಿಸಿದ್ದರು. ಮತ್ತು ಪಠಾಣ್ 64,038 ಮತ ಗಳಿಸಿದ್ದರು.
ಸಂಡೂರು ಕ್ಷೇತ್ರದ ಕಥೆ ಏನು
ಬಳ್ಳಾರಿ ಜಿಲ್ಲೆಯ ಸಂಡೂರು ಎಸ್ ಟಿ ಮೀಸಲು ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಶೇ. 43 ರಷ್ಟು ಮತ ಗಳಿಸಿ ಆಯ್ಕೆಯಾಗಲಿದ್ದಾರೆ ಎಂದು ರಿಪಬ್ಲಿಕ್ ಕನ್ನಡ ಚಾನೆಲ್ ಸಮೀಕ್ಷೆ ಹೇಳಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಶೇ. 40 ರಷ್ಟು ಮತ ಗಳಿಕೆ ಮಾಡಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಸಂಡೂರು ಕ್ಷೇತ್ರದಲ್ಲಿ 1,18,279 ಮಹಿಳಾ 1,17,739 ಪುರುಷ ಸೇರಿ ಒಟ್ಟು 2,36,047 ಮತದಾರರಿದ್ದಾರೆ. ಎಸ್ ಸಿ( 41,676), ಎಸ್ ಟಿ (59,312), ಲಿಂಗಾಯತ (30,024), ಕುರುಬ (24,701), ಮುಸ್ಲಿಂ (24,588), ಹಿಂದುಳಿದ ವರ್ಗ(41,506) ಮತ್ತು ಇತರೆ ಸಮುದಾಯಗಳ 15,000 ಮತದಾರರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ಷೇತ್ರವನ್ನು ಶತಾಯ ಗತಾಯ ಗೆಲ್ಲಲು ನಿರ್ಧರಿಸಿದ್ದರು.
(ವರದಿ: ಎಚ್. ಮಾರುತಿ ಬೆಂಗಳೂರು)