ದಸರಾ ಹಬ್ಬ: ಎತ್ತಿನ ಗಾಡಿ ಓಟದ ಸ್ಪರ್ಧೆಗೆ 36 ಲಕ್ಷ ರೂಪಾಯಿ ಕೊಟ್ಟು ಜೋಡಿ ಎತ್ತುಗಳನ್ನು ಖರೀದಿಸಿದ ರೈತ!
Dasara Bullock Cart: ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರದ ಪುರಸಭೆಯ ಅಧ್ಯಕ್ಷ ಯಲ್ಲನಗೌಡ ಪಾಟೀಲ್ ಅವರು ದಸರಾ ಹಬ್ಬದ ವೇಳೆ ನಡೆಯುವ ಎತ್ತಿನ ಗಾಡಿ ಸ್ಪರ್ಧೆಗೆ 36 ಲಕ್ಷ ಕೊಟ್ಟು ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಬಾಗಲಕೋಟೆ: ದಸರಾ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ರೈತರೊಬ್ಬರು ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಒಂದು ಜೋಡಿ ಎತ್ತುಗಳನ್ನು ಬರೋಬ್ಬರಿ 36 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದಾರೆ! ಕರ್ನಾಟಕದ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಹಬ್ಬದ ವೇಳೆ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜಿಸುವುದು ಸಂಪ್ರದಾಯ. ಈ ಸ್ಪರ್ಧೆ ಗೆಲ್ಲುವುದು ಗ್ರಾಮಸ್ಥರಿಗೆ ಹೆಮ್ಮೆಯ ಮತ್ತು ಪ್ರತಿಷ್ಠೆಯ ವಿಷಯವೂ ಹೌದು. ಇದೇ ಪ್ರತಿಷ್ಠೆಗಾಗಿ 36 ಲಕ್ಷವನ್ನು ಕೊಟ್ಟಿರುವುದಾಗಿ ರೈರ ಹೇಳಿದ್ದಾರೆ.
ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರದ ಪುರಸಭೆಯ ಅಧ್ಯಕ್ಷ ಯಲ್ಲನಗೌಡ ಪಾಟೀಲ್ ಅವರು ಈ ಹಿಂದೆ ಯಾರೂ ನೀಡದಷ್ಟು ಮೊತ್ತ ನೀಡಿ ಎತ್ತುಗಳನ್ನು ಖರೀದಿಸಿದ್ದಾರೆ. ಆ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಎತ್ತುಗಳು 10 ರಿಂದ 15 ಲಕ್ಷ ರೂ.ವರೆಗೂ ಬೆಲೆ ಬಾಳುತ್ತವೆ.
ಆದರೆ, ಪಾಟೀಲ್ ಅವರು ಎತ್ತುಗಳನ್ನು ದುಪ್ಪಟ್ಟು ಬೆಲೆಗೆ ಖರೀದಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪಾಟೀಲ್, 'ಈ ಜೋಡಿ 100 ಬಾರಿ ರೇಸ್ ಗೆದ್ದಿದೆ. ಹಕ್ಕಿ ಮಡ್ಡಿಯ ರೈತ ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿತು. ದಸರಾಗೆ ಮುಧೋಳದಲ್ಲಿ ನಡೆಯಲಿರುವ ರೇಸ್ನಲ್ಲಿ ಗೆಲ್ಲುವ ಗುರಿ ಹೊಂದಿರುವ ಕಾರಣ ಎಷ್ಟೇ ದುಡ್ಡಾದರೂ ನೀಡಿ ಖರೀದಿಸಲು ನಿರ್ಧರಿಸಿದ್ದೆವು ಎಂದರು.
ತಮ್ಮ ಕುಟುಂಬ ಈ ಹಿಂದೆ ಇದೇ ರೀತಿ ಎತ್ತುಗಳನ್ನು ಖರೀದಿಸಿದ್ದೇವೆ ಎಂದು ಹೇಳಿದ ಪಾಟೀಲ್, ಈ ಹಿಂದೆ, ನಾವು ಎತ್ತುಗಳನ್ನು 10 ರಿಂದ 15 ಲಕ್ಷ ರೂ.ಗೆ ಖರೀದಿಸಿದ್ದೇವೆ. ಆದರೆ ಇದು ನಾವು ಜೋಡಿಗೆ ಖರ್ಚು ಮಾಡಿದ ಅತ್ಯಧಿಕ ಮೊತ್ತವಾಗಿದೆ. ರೇಸ್ಗಳಲ್ಲಿ ಭಾಗವಹಿಸುವುದು ನಮ್ಮ ಕುಟುಂಬದ ಸಂಪ್ರದಾಯ. ಮುಂದಿನ ಕಾರ್ಯವೆಂದರೆ ಎತ್ತುಗಳನ್ನು ಸರಿಯಾದ ಆಹಾರದೊಂದಿಗೆ ನೋಡಿಕೊಳ್ಳುವುದು ಮತ್ತು ಅವುಗಳನ್ನು ಓಟಕ್ಕೆ ಬಲಪಡಿಸುವುದು ಎಂದು ಅವರು ತಿಳಿಸಿದ್ದಾರೆ.
ಕಂಬಳ ಸ್ಪರ್ಧೆಯು ಕರ್ನಾಟಕದಲ್ಲಿ ಜನಪ್ರಿಯವಾಗಿದ್ದು, ರಾಜ್ಯದ ಕರಾವಳಿ ಭಾಗದಲ್ಲಿ ನಡೆಯಲಿದೆ. ಇದು ಚಳಿಗಾಲದಲ್ಲಿ ರೈತರು ತಮ್ಮ ಭತ್ತದ ಬೆಳೆಗಳನ್ನು ಕೊಯ್ಲು ಮಾಡುವಾಗ ನಡೆಯುವ ಎಮ್ಮೆ ಓಟವಾಗಿದೆ. ಗದ್ದೆಗಳಲ್ಲಿ ಎರಡು ಸಮಾನಾಂತರ ಟ್ರ್ಯಾಕ್ಗಳಲ್ಲಿ ಸ್ಪರ್ಧೆ ನಡೆಸಲಾಗುತ್ತದೆ. ಟ್ರ್ಯಾಕ್ನಲ್ಲಿ ಎತ್ತುಗಳನ್ನು ನಿಯಂತ್ರಿಸಲು ಮತ್ತು ಅವುಗಳನ್ನು ಸರಿ ದಾರಿಯಲ್ಲಿ ಸಾಗಿಸಲು ಜಾಕಿ ಅಥವಾ ‘ಕಂಬಳ ಓಟಗಾರ’ ಇರುತ್ತಾರೆ.