ಮೈಸೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಎದುರೇ ಮುಡಾ ಅಧ್ಯಕ್ಷ ಮರೀಗೌಡಗೆ ಘೇರಾವ್; ಕಾರು ಹತ್ತಿಸಿದ ಕಾರ್ಯಕರ್ತರು video
ಮೈಸೂರು ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿರುವಾಗಲೇ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಎದುರೇ ಮುಡಾ ಅಧ್ಯಕ್ಷ ಕೆ.ಮರೀಗೌಡ ಅವರಿಗೆ ಘೇರಾವ್ ಹಾಕಿದ ಪ್ರಸಂಗ ನಡೆಯಿತು.
ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಂಕಷ್ಟಕ್ಕೆ ಸಿಲುಕಿರುವ ನಡುವೆ ಮೈಸೂರಿಗೆ ಆಗಮಿಸಿದಾಗ ಶುಕ್ರವಾರ ನಾಟಕೀಯ ಬೆಳವಣಿಗೆಗಳು ನಡೆದವು. ಅದರಲ್ಲೂ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಕೆ.ಮರೀಗೌಡ ಅವರನ್ನು ಸಿಎಂ ಸಿದ್ದರಾಮಯ್ಯ ಎದುರೇ ತರಾಟೆಗೆ ತೆಗೆದುಕೊಂಡರು. ನೀವು ಪತ್ರ ಬರೆದು ಮಾಡಿದ ಅವಾಂತರದಿಂದಲೇ ಇಷ್ಟೆಲ್ಲಾ ಗೊಂದಲವಾಗಿ ಸಿದ್ದರಾಮಯ್ಯ ಅವರು ತೊಂದರೆಗೆ ಸಿಲುಕುವಂತಾಗಿದೆ. ನೀವು ಇಲ್ಲಿಂದ ನಡೆಯಿರಿ ಎಂದು ಘೇರಾವ್ ಹಾಕಿ ಕಾರು ಹತ್ತಿಸಿದ ಪ್ರಸಂಗವೂ ನಡೆಯಿತು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ಅಲ್ಲಿ ನಿರ್ಮಾಣವಾಯಿತು.ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿದರು. ಇದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ಕಾರು ಏರಿ ಹೊರಟರು.
ಮೂರು ದಿನದ ಮೈಸೂರು ಪ್ರವಾಸಕ್ಕಾಗಿ ಸಿದ್ದರಾಮಯ್ಯ ವಿಮಾನ ನಿಲ್ದಾಣಕ್ಕೆ ಆಗಮಿಸುವವರು ಇದ್ದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಈ ವೇಳೆ ಮುಡಾ ಅಧ್ಯಕ್ಷ ಕೆ. ಮರೀಗೌಡ ಕೂಡ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಆಗಮಿಸಿದರು.
ಸಿಎಂ ಅವರು ಇಳಿದು ಇನ್ನೇನು ಗೌರವ ವಂದನೆ ಸ್ವೀಕರಿಸಲು ಅಣಿಯಾಗಬೇಕಿತ್ತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮರೀಗೌಡರನ್ನು ಘೇರಾವ್ ಹಾಕಿದರು.
ಸಿದ್ದರಾಮಯ್ಯ ಅವರ ಈಗಿನ ಸ್ಥಿತಿಗೆ ನೀವೇ ಕಾರಣ. ನೀವು ಪತ್ರ ಬರೆಯದೇ ಇದ್ದಿದ್ದರೆ ಇಷ್ಟೆಲ್ಲಾ ಗೊಂದಲಗಳೇ ಆಗುತ್ತಿರಲಿಲ್ಲ. ಈ ಬೆಳವಣಿಗೆ ಆಗಲು ನೀವೇ ಪರೋಕ್ಷ ಕಾರಣ ಆಗಿದ್ದೀರಿ. ದಯಮಾಡಿ ನೀವು ಇಲ್ಲಿ ಬರಬೇಡಿ. ಇಲ್ಲಿಂದ ಹೊರಡಿ ಎಂದು ಕಾರ್ಯಕರ್ತರು ಅವರನ್ನು ಸುತ್ತು ವರೆದರು. ಆಗ ಪೊಲೀಸರು ಮಧ್ಯಪ್ರವೇಶಿಸಿದರು. ಈ ವೇಳೆ ಮರಿಗೌಡರು ನಿಧಾನವಾಗಿ ತಮ್ಮ ಕಾರಿನತ್ತ ಹೊರಟರು. ಆನಂತರ ಕಾರು ಏರಿ ಹೊರಡಲು ಅಣಿಯಾದರು.
ಈ ವೇಳೆ ಕಾರಿನ ಬಳಿಗೂ ನುಗ್ಗಲು ಯತ್ನಿಸಿದ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ವೇಳೆ ಸಮಜಾಯಿಸಿ ನೀಡಲು ಮುಂದಾದ ಕೆ ಮರೀಗೌಡರಿಗೆ
ನಿನ್ನ ಭಾಷಣ ಬೇಡ, ಇಲ್ಲಿಂದ ನೀನು ಹೊರಡು ಎಂದು ಬಲವಂತವಾಗಿ ಕಾರು ಹತ್ತಿಸಿ ಕಾರು ಬಡಿದು ಕಾಂಗ್ರೆಸ್ ಕಾರ್ಯಕರ್ತರು ವಾಪಸ್ಸು ಕಳುಹಿಸಿದರು.
ಸಿಎಂ ಸಿದ್ದರಾಮಯ್ಯ ಪರ ಬೀದಿಗಿಳಿದ ಸಿದ್ದು ಅಭಿಮಾನಿಗಳು
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಅಭಿಮಾನಿಗಳು ಘೋಷಣೆ ಕೂಗಿದರು.
ನಿಮ್ಮೊಂದಿಗೆ ನಾವಿದ್ದೇವೆ ಎಂದು ಘೋಷಣೆಯನ್ನೂ ಕೂಗಿದ್ದು ಕಂಡು ಬಂದಿತು.
ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಬಳಿ ಸಿದ್ದರಾಮಯ್ಯ ಅಭಿಮಾನಿಗಳು ಜಮಾವಣೆಗೊಂಡು ಬಿಜೆಪಿ-ಜೆಡಿಸ್ ವಿರುದ್ಧ ಘೋಷಣೆಗಳನ್ನು ಕೂಗಿ ಸಿದ್ದರಾಮಯ್ಯ ಬೆಂಬಲಿಗರು. ಆಕ್ರೋಶ ಹೊರಹಾಕಿದರು.
ಬಿಜೆಪಿ ಪ್ರತಿಭಟನೆ
ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಮುಖರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ ಬಂಧನಕ್ಕೆ ಒಳಗಾದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರ್ಟ್ ಆದೇಶ ಹಿನ್ನೆಲೆ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ಮೈಸೂರಿನ ಬಿಜೆಪಿ ಕಚೇರಿ ಮುಂಭಾಗ ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು. ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ನೇತೃತ್ವ ವಹಿಸಿದ್ದರು. ಈ ವೇಳೆ ಸಿಎಂ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಲಾಯಿತು.
ಪ್ರತಿಭಟನೆಯಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ, ಮಾಜಿ ಶಾಸಕ ಎಲ್ ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್ ಸೇರಿದಂತೆ ಹಲವು ಸ್ಥಳೀಯ ನಾಯಕರು, ನೂರಾರು ಕಾರ್ಯಕರ್ತರು ಭಾಗಿಯಾದರು.
ಮೈಸೂರು ಬಿಜೆಪಿ ಕಚೇರಿಯಿಂದ ಜಿಲ್ಲಾ ಪಂಚಾಯತಿ ಕಚೇರಿಯತ್ತ ಪ್ರತಿಭಟನೆ ಮೆರವಣಿಗೆ ಹೊರಟಿತು. ಜಿಲ್ಲಾ ಪಂಚಾಯತಿ ಕಚೇರಿ ಮುತ್ತಿಗೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು.ಮೈಸೂರು ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಪ್ರತಿಭಟನೆ ಮಾಡಲು ಹೋಗುತ್ತಿದ್ದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಲ್ ನಾಗೇಂದ್ರ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರ ಬಂಧನ ಮಾಡಿ ಪೊಲೀಸ್ ವಾಹನ, ಸಾರಿಗೆ ಬಸ್ ನಲ್ಲಿ ಪೊಲೀಸರು ಕರೆದೊಯ್ದರು.