ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು; ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ್
ಕನ್ನಡ ಸುದ್ದಿ  /  ಕರ್ನಾಟಕ  /  ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು; ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ್

ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು; ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ್

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಕಬ್ಬಿನಾಲೆ ಸಮೀಪ ನಡೆದ ನಕ್ಸಲ್‌ ಎನ್‌ಕೌಂಟರ್‌ನಲ್ಲಿ ವಿಕ್ರಂ ಗೌಡ ಹತನಾಗಿರುವುದನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್ ಕೂಡ ಖಚಿತಪಡಿಸಿದ್ದಾರೆ. ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು ಎಂದು ಅವರು ವಿವರಿಸಿದ್ದಾರೆ.

ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು ಎಂದು ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು
ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು ಎಂದು ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು

ಬೆಂಗಳೂರು: ಪೊಲೀಸರ ಮೇಲೆ ನಕ್ಸಲ್ ವಿಕ್ರಂ ಗೌಡ ತಂಡ ದಾಳಿ ನಡೆಸಿತು. ಅನಿವಾರ್ಯವಾಗಿ ಪ್ರತಿ ದಾಳಿ ನಡೆಸಿದಾಗ ವಿಕ್ರಂ ಗೌಡ ಹತನಾದ ಎಂದು ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ ಮಂಗಳವಾರ (ನವೆಂಬರ್ 19) ಹೇಳಿದರು. ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆಗೆ ಸಂಬಂಧಿಸಿ ಪಾವಗಡದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಡಾ ಜಿ ಪರಮೇಶ್ವರ, ಪೊಲೀಸರು ಕಳೆದ 20 ವರ್ಷಗಳಿಂದ ವಿಕ್ರಂ ಗೌಡ ಬಂಧನಕ್ಕಾಗಿ ಶೋಧ ನಡೆಸಿದ್ದರು. ಅನೇಕ ಸಲ ಆತ ತಪ್ಪಿಸಿಕೊಂಡಿದ್ದ. ಎನ್‌ಕೌಂಟರ್ ನಡೆದಾಗ ಅಲ್ಲಿಂದ ಬಚಾವ್ ಆಗಿದ್ದ. ಆತನ ಚಲನವಲನದ ಮೇಲೆ ತೀವ್ರ ನಿಗಾ ಇರಿಸಿದ್ದ ಪೊಲೀಸರು, ಶರಣಾಗುವಂತೆ ಆತನಿಗೆ ಸೂಚಿಸಿದ್ದರು. ದಾಳಿ ನಡೆಸದಂತೆ ಎಚ್ಚರಿಸಿದ್ದರು. ಆದರೆ ನಿನ್ನೆ (ನವೆಂಬರ್ 18) ಸಂಜೆ ವಿಕ್ರಂ ಗೌಡ ನೇತೃತ್ವದ ತಂಡ ನಕ್ಸಲ್ ನಿಗ್ರಹ ತಂಡಕ್ಕೆ ಮುಖಾಮುಖಿಯಾಗಿದ್ದು, ಶರಣಾಗದೆ ಫೈರಿಂಗ್ ಶುರುಮಾಡಿದ ಕಾರಣ ಪ್ರತಿದಾಳಿ ನಡೆದಿದೆ. ಆಗ ವಿಕ್ರಂ ಗೌಡ ಹತನಾಗಿದ್ದಾನೆ ಎಂದು ಹೇಳಿದರು.

ಪೊಲೀಸರ ಮೇಲೆ ದಾಳಿ ನಡೆಸಿದ ವಿಕ್ರಂ ಗೌಡ ತಂಡ

ನಕ್ಸಲ್ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದ್ದಾಗ ವಿಕ್ರಂ ಗೌಡ ತಂಡ ನಕ್ಸಲ್ ನಿಗ್ರಹ ಪಡೆಗೆ ಮುಖಾಮುಖಿಯಾಗಿದೆ. ಆಗ ಶರಣಾಗದ ವಿಕ್ರಂ ಗೌಡ ತಂಡ ಪೊಲೀಸರ ಮೇಲೆ ದಾಳಿ ನಡೆಸಿತು. ಪೊಲೀಸರು ಪ್ರತಿದಾಳಿ ನಡೆಸಿದಾಗ ವಿಕ್ರಂ ಗೌಡನ ಜತೆಗಿದ್ದ ಇಬ್ಬರು-ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಈಗ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಈ ಕಾರ್ಯಾಚರಣೆಗೆ ಸಂಬಂಧಿಸಿದ ನಿಖರ ಮತ್ತು ಪೂರ್ತಿ ವಿವರ ಇನ್ನೂ ಲಭ್ಯವಾಗಿಲ್ಲ. ಬಂದ ಬಳಿಕ ತಿಳಿಸುವುದಾಗಿ ಸಚಿವ ಪರಮೇಶ್ವರ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

ಕಳೆದ ಒಂದು ವಾರದಿಂದ ಕೂಂಬಿಂಗ್ ಕಾರ್ಯಾಚರಣೆ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ಪಾವಗಡ ಭಾಗದಲ್ಲಿ ನಕ್ಸಲರನ್ನು ಮಾತನಾಡಿ ಮುಖ್ಯವೇದಿಕೆಗೆ ಕರೆತರಲಾಗಿತ್ತು. ಈಗಲೂ ಈ ಪ್ರಯತ್ನ ನಡೆಯುತ್ತಿದೆ. ಶರಣಾಗಲು ಬಯಸುವ ನಕ್ಸಲರಿಗೆ ಸಾಮಾನ್ಯ ಬದುಕು ನಡೆಸಲು ಸರ್ಕಾರ ಅವಕಾಶ ಮಾಡಿಕೊಡಲಿದೆ. ಆದರೆ ಈ ಅವಕಾಶ ಬಳಸದೇ ನಕ್ಸಲ್ ಚಟುವಟಿಕೆಯಲ್ಲಿ ಮುಂದುವರಿದರೆ ಇಂತಹ ಘಟನೆಗಳಾಗುವುದು ಸಾಮಾನ್ಯ ಎಂದು ಸಚಿವರು ವಿವರಿಸಿದರು.

ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್ ಹೇಳಿರುವುದಿಷ್ಟು

ನಕ್ಸಲ್ ನಾಯಕ ಕಬ್ಬಿನಾಲೆ ಭಾಗದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಇತ್ತು. ನಕ್ಸಲ್ ನಿಗ್ರಹಪಡೆಯವರು ಕೂಂಬಿಂಗ್ ಆಪರೇಷನ್‌ ಚುರುಕುಗೊಳಿಸಿದ್ದರು. ಪೀತಂಬೈಲ್‌ನಲ್ಲಿ ಎನ್‌ಕೌಂಟರ್ ಆಗಿರುವಂಥದ್ದು. ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್‌ ಹತನಾಗಿದ್ದಾನೆ. ಆತನಿಗೆ 46 ವರ್ಷ ವಯಸ್ಸು. ಕಾರ್ಕಳ ತಾಲೂಕು ಮೂಲದವನು. ಮೋಸ್ಟ್ ವಾಂಟೆಡ್ ನಕ್ಸಲ್‌ ಆಗಿದ್ದ. ವಿಕ್ರಂ ಗೌಡನ ವಿರುದ್ಧ ಕರ್ನಾಟಕದಲ್ಲಿ 61 ಕೇಸ್‌ಗಳಿವೆ. ಕೇರಳದಲ್ಲಿ 19 ಕೇಸ್‌ಗಳಿವೆ. ಈಗ ಇರುವಂತಹ ನಕ್ಸಲರ ಪೈಕಿ ಪ್ರಮುಖನಾಗಿದ್ದ ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್. ಕಬಿನಿ ದಳಂ ಎರಡರ ನಾಯಕನಾಗಿದ್ದ. ನಕ್ಸಲ್ ನಿಗ್ರಹ ಪಡೆ ನಡೆಸಿದ ನಾಲ್ಕನೇ ಎನ್‌ಕೌಂಟರ್ ಇದು. ನವೆಂಬರ್ 10 ರಿಂದ ಕೂಂಬಿಂಗ್ ಆಪರೇಷನ್‌ ಶುರುಮಾಡಲಾಗಿತ್ತು. ನಿಖರ ಮಾಹಿತಿ ಇರುವ ಕಾರಣವೇ ಈ ಆಪರೇಷನ್ ನಡೆಸಲಾಗಿದೆ. ಇದು ಮುಂದುವರಿದಿದೆ. ವಿಕ್ರಂ ಗೌಡನಂತೆಯೇ ಇನ್ನೂ ನಾಲ್ಕೈದು ನಾಯಕರಿದ್ದಾರೆ. ಅವರನ್ನೂ ಪತ್ತೆ ಹಚ್ಚುವ ಕೆಲಸ ಮುಂದುವರಿಸಿದೆ ಎಂದು ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್ ಹೇಳಿದರು.

Whats_app_banner