Anna Bhagya: ಎಫ್‌ಸಿಐ ಕಮಿಟ್‌ಮೆಂಟ್ ಪತ್ರ ಕೇಳಿದ್ದ ಸಿಟಿ ರವಿ; ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ- ವಿದ್ಯಮಾನದ ವಿವರ ಇಲ್ಲಿದೆ ಗಮನಿಸಿ
Anna Bhagya: ರಾಜ್ಯದ ಅನ್ನ ಭಾಗ್ಯ ಯೋಜನೆಯ ಅಕ್ಕಿ ವಿಚಾರದ ವಾಕ್ಸಮರದ ಮುಂದುವರಿದ ಭಾಗವಾಗಿ ಇಂದು (ಜೂ.16) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddramaiah) ಅವರು ಎಫ್‌ಸಿಐನ ದಾಖಲೆಯೊಂದನ್ನು ಟ್ವೀಟ್ ಮಾಡಿ ಗಮನಸೆಳೆದಿದ್ದಾರೆ. ಈ ವಿದ್ಯಮಾನದ ವಿವರ ಇಲ್ಲಿದೆ.
ಕಳೆದ ಕೆಲವು ದಿನಗಳಿಂದ ಅನ್ನಭಾಗ್ಯ ಯೋಜನೆ (Anna Bhagya Scheme) ಮತ್ತು ಅಕ್ಕಿ ವಿಚಾರ ಚರ್ಚೆಯಲ್ಲಿದೆ. ಭಾರತೀಯ ಆಹಾರ ನಿಗಮ (ಎಫ್‌ಸಿಐ) ಅಕ್ಕಿ ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಾಯಕರ ನಡುವೆ ವಾಕ್ಸಮರ ಏರ್ಪಟ್ಟಿದೆ.
ಇದರ ಮುಂದುವರಿದ ಭಾಗವಾಗಿ ಇಂದು (ಜೂ.16) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddramaiah) ಅವರು ಎಫ್‌ಸಿಐನ ದಾಖಲೆಯೊಂದನ್ನು ಟ್ವೀಟ್ ಮಾಡಿ ಗಮನಸೆಳೆದಿದ್ದಾರೆ. ಇದಕ್ಕೂ ಮುನ್ನ ನಿನ್ನೆ (ಜೂ.15) ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಅಕ್ಕಿ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಿಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi), ಕಾಂಗ್ರೆಸ್ ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಪೂರೈಸುವುದಾಗಿ ಎಫ್‌ಸಿಐ ಕಮಿಟ್‌ಮೆಂಟ್ ಲೆಟರ್ ಕೊಟ್ಟಿತ್ತಾ ಎಂದು ಪ್ರಶ್ನಿಸಿದ್ದರು.
ಸಿಎಂ ಸಿದ್ದರಾಮಯ್ಯ ಟ್ವೀಟ್‌ನಲ್ಲಿರುವುದು ಇಷ್ಟು
ಭಾರತೀಯ ಆಹಾರ ನಿಗಮ (ಎಫ್‌ಸಿಐ) ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ಕಮಿಟ್‌ಮೆಂಟ್ ಪತ್ರ ತೋರಿಸಲಿ ಎಂದು ಬಿಜೆಪಿ ನಾಯಕ ಸಿಟಿ ರವಿ ಸವಾಲು ಹಾಕಿದ್ದರು. ಇಲ್ಲಿದೆ ಎಫ್.ಸಿ.ಐ ಕಮಿಟ್‌ಮೆಂಟ್ ಪತ್ರ. ಇಂತಹ ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯ ಇಂತಹ ನಾಯಕರನ್ನು ಸೋಲಿಸಿ ಮನೆಗೆ ಕಳುಹಿಸಿರುವುದು.
ಸಿ.ಟಿ.ರವಿ ಮತ್ತಿತರ ಬಿಜೆಪಿ ನಾಯಕರು ಮೊದಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿ ಪೂರೈಸುವಂತೆ ಮಾಡಬೇಕೇ ಹೊರತು, ಬಡವರ ಹೊಟ್ಟೆಗೆ ಹೊಡೆಯುವ ಕೇಂದ್ರ ಸರ್ಕಾರದ ಜನವಿರೋಧಿ ನಿಲುವನ್ನು ಬೆಂಬಲಿಸುವುದಲ್ಲ ಎಂದು ಸಿಎಂ ಸಿದ್ದರಾಮಯ್ಯ ಇಂದು (ಜೂ.16) ಮಾಡಿರುವ ಟ್ವೀಟ್‌ನಲ್ಲಿ ಆಕ್ಷೇಪಿಸಿದ್ದಾರೆ.
ಇದೇ ಟ್ವೀಟ್‌ನಲ್ಲಿ ಎಫ್‌ಸಿಐನ ದಾಖಲೆಯನ್ನು ಕೂಡ ಸೇರಿಸಿದ್ದಾರೆ. ಅದರಲ್ಲಿ ಇ-ಆಕ್ಷನ್‌ನಲ್ಲಿ ಭಾಗವಹಿಸದೇ ರಾಜ್ಯ ಸರ್ಕಾರಕ್ಕೆ ಅದರ ಸ್ವಂತ ಯೋಜನೆಗಳಿಗೆ ಬೇಕಾದ ಅಕ್ಕಿಯನ್ನು ನಿಗದಿತ ಬೆಲೆ ನೀಡಿ ಖರೀದಿಸಬಹುದು ಎಂಬ ಅಂಶವಿದೆ.
ಸಿಟಿ ರವಿ ಹೇಳಿದ್ದೇನು? ಟ್ವೀಟ್ ಸಮರದಲ್ಲಿ ಏನಿದೆ..
ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ವಿನಾಯಿತಿ ದರದಲ್ಲಿ ಕೇಂದ್ರ ಸರ್ಕಾರದಿಂದ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೇಂದ್ರ ಆಹಾರ ಸಚಿವಾಲಯ ಮತ್ತು ಎಫ್‌ಸಿಐ ಸುತ್ತೋಲೆಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ. ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ (ಜೂ.15) ಕೇಂದ್ರದ ಸುತ್ತೋಲೆಯ ಪ್ರತಿಯೊಂದಿಗೆ ಟ್ವೀಟ್ ಮಾಡಿದ್ದರು.
ಇದೇ ಟ್ವೀಟ್ ಅನ್ನು ರೀಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿರುವುದು ಇಷ್ಟು -
ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಅಕ್ಕಿ ಮಾರಾಟವನ್ನು ನಿಲ್ಲಿಸಲು ಎಫ್‌ಸಿಐನ ಈ ಕ್ರಮವು ಬೆಲೆಯನ್ನು ಸ್ಥಿರಗೊಳಿಸಲು ಮತ್ತು ಇದು ಎಲ್ಲಾ ರಾಜ್ಯಗಳಿಗೆ ಅನ್ವಯಿಸುತ್ತದೆ. ಆದರೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅಕ್ಕಿ ನೀಡುತ್ತಿಲ್ಲ ಎಂದು ಸುಳ್ಳು ಹೇಳುತ್ತಲೇ ಇದ್ದಾರೆ.
ಪ್ರಧಾನಿ ಮೋದಿಯವರು ದೇಶದ ಎಲ್ಲ ಬಡಜನರಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದಾರೆ ಎಂಬುದು ತಿಳಿದಿದೆ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಜಾರಿಗೊಳಿಸುವಲ್ಲಿ ಆಗುತ್ತಿರುವ ವಿಫಲತೆಯನ್ನು ಮರೆಮಾಚಲು ಕಾಂಗ್ರೆಸ್ ಹೊಸ ಪ್ರಯತ್ನ ಶುರುಮಾಡಿದೆ. ಜನರನ್ನು ಮೂರ್ಖರನ್ನಾಗಿಸುವುದನ್ನು ನಿಲ್ಲಿಸಲು ಕಾಂಗ್ರೆಸ್ ಪಕ್ಷಕ್ಕೆ ಇದು ಸುಸಮಯ. ಈ ಅಸಮರ್ಥ ಸರ್ಕಾರವು ಕೇಂದ್ರ ಸರ್ಕಾರವನ್ನು ದೂಷಿಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ನೀಡಿದ ಗ್ಯಾರೆಂಟಿ ಭರವಸೆಗಳನ್ನು ಈಡೇರಿಸುವ ಮಾರ್ಗಗಳನ್ನು ತಾನೇ ಕಂಡುಕೊಳ್ಳಬೇಕು.
ಇದಲ್ಲದೆ, ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ವೇಳೆ, ಎಫ್‌ಸಿಐ ಕಮಿಟ್‌ಮೆಂಟ್ ಲೆಟರ್ ಏನಾದರೂ ಕೊಟ್ಟಿತ್ತಾ ಎಂದು ಪ್ರಶ್ನಿಸಿದ್ದಕ್ಕೆ ಪ್ರತಿಯಾಗಿ ಈಗ ಸಿಎಂ ಸಿದ್ದರಾಮಯ್ಯ ಹೊಸದಾಗಿ ಎಫ್‌ಸಿಐ ದಾಖಲೆಯೊಂದಿಗೆ ಟ್ವೀಟ್ ಮಾಡಿದ್ದಾರೆ.