ನಾಳೆಯೇ ಕನ್ನಡ ರಾಜ್ಯೋತ್ಸವ, ಸುವರ್ಣ ಮಹೋತ್ಸವವೂ ಹೌದು, ಸಂಜೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಹೀಗಿರಲಿದೆ ಅದ್ದೂರಿ ಆಚರಣೆ
ಕನ್ನಡ ಸುದ್ದಿ  /  ಕರ್ನಾಟಕ  /  ನಾಳೆಯೇ ಕನ್ನಡ ರಾಜ್ಯೋತ್ಸವ, ಸುವರ್ಣ ಮಹೋತ್ಸವವೂ ಹೌದು, ಸಂಜೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಹೀಗಿರಲಿದೆ ಅದ್ದೂರಿ ಆಚರಣೆ

ನಾಳೆಯೇ ಕನ್ನಡ ರಾಜ್ಯೋತ್ಸವ, ಸುವರ್ಣ ಮಹೋತ್ಸವವೂ ಹೌದು, ಸಂಜೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಹೀಗಿರಲಿದೆ ಅದ್ದೂರಿ ಆಚರಣೆ

Karnataka Rajyotsava: ಕರುನಾಡು ತುಂಬಾ ಕನ್ನಡ ರಾಜ್ಯೋತ್ಸವದ ಸಂಭ್ರಮ, ಸಡಗರ ಮನೆ ಮಾಡಿದೆ. ನಾಳೆ (ನವೆಂಬರ್ 1) ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ. ಇದು ಕರ್ನಾಟಕದ ಸುವರ್ಣ ಮಹೋತ್ಸವವೂ ಹೌದು. ನಾಳೆ (ಶುಕ್ರವಾರ) ಸಂಜೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಾರ್ಯಕ್ರಮದ ವಿವರ ಹೀಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ನಾಳೆಯೇ ಕನ್ನಡ ರಾಜ್ಯೋತ್ಸವ, ಕರ್ನಾಟಕದ ಸುವರ್ಣ ಮಹೋತ್ಸವವೂ ಹೌದು, ಸಂಜೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ. (ಸಾಂಕೇತಿಕ ಚಿತ್ರ)
ನಾಳೆಯೇ ಕನ್ನಡ ರಾಜ್ಯೋತ್ಸವ, ಕರ್ನಾಟಕದ ಸುವರ್ಣ ಮಹೋತ್ಸವವೂ ಹೌದು, ಸಂಜೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ. (ಸಾಂಕೇತಿಕ ಚಿತ್ರ) (X / ANI)

ಬೆಂಗಳೂರು: 2024ರ ನವೆಂಬರ್ 1 ಕನ್ನಡಿಗರ ಪಾಲಿಗೆ ವಿಶೇಷ ದಿನ. ನಾಳೆ ಕನ್ನಡ ರಾಜ್ಯೋತ್ಸವ (Karnataka Rajyotsava), ಸುವರ್ಣ ಮಹೋತ್ಸವವೂ ಆಗಿದ್ದು, ವಿಶೇಷ ಮೆರುಗು ತಂದಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನವೆಂಬರ್ 1ರಂದು ಬೆಳಗ್ಗೆ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿಗೆ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ.

80 ಸರ್ಕಾರಿ ಮತ್ತು ಖಾಸಗಿ ಶಾಲೆಗಳ 10 ಸಾವಿರ ಮಕ್ಕಳಿಂದ ಆಕರ್ಷಕ ಪಥ ಸಂಚಲನ ಮತ್ತು ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೃತ್ಯ ರೂಪಕವನ್ನು ನಡೆಸಿಕೊಡಲಿದ್ದಾರೆ. ಕನ್ನಡ ನಾಡು, ನುಡಿ, ಭಾಷೆ ಹಿರಿಮೆ ಗರಿಮೆ, ಸ್ವಾತಂತ್ರ್ಯ ಹೋರಾಟಗಾರರನ್ನು ಕುರಿತಾದ ಗೀತೆಗಳಿಗೆ ಏಕ ಕಾಲಕ್ಕೆ ಸಾವಿರಾರು ಮಕ್ಕಳು ಹೆಜ್ಜೆ ಹಾಕಲಿದ್ದಾರೆ. ಎನ್ ಸಿ ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳು ಪಥ ಸಂಚಲನದಲ್ಲಿ ಭಾಗಿಯಾಗಲಿವೆ.

ಒಂದು ತಿಂಗಳ ಕಾಲ ವಿದ್ಯಾರ್ಥಿಗಳು ಅಭ್ಯಾಸ ಮಾಡಿರುತ್ತಾರೆ. ಶಿಕ್ಷಕರು ತರಬೇತಿ ನೀಡಿ ಮಕ್ಕಳನ್ನು ಸಜ್ಜುಗೊಳಿಸಿರುತ್ತಾರೆ. ಪ್ರತಿ ವರ್ಷವೂ ವಿವಿಧ ಶಾಲೆಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಸಂಜೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

69ನೇ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇದಕ್ಕೂ ಮುನ್ನ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸಂತೋಷ ಕೂಟ ಆಯೋಜಿಸಲಾಗಿದೆ. ಸಿಎಂ, ಡಿಸಿಎಂ, ಸಚಿವರು ಮತ್ತು ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ನವಂಬರ್‌ ಒಂದರಂದು ಮಾತ್ರವಲ್ಲ, ಇಡೀ ತಿಂಗಳು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಹಬ್ಬದ ರೀತಿಯಲ್ಲೇ ಸಂಭ್ರಮಿಸಲಾಗುತ್ತದೆ.

ಕೇವಲ ಸರ್ಕಾರ ಮಾತ್ರವಲ್ಲದೆ, ರಾಜ್ಯಾದ್ಯಂತವಿರುವ ಸಾವಿರಾರು ಸಂಘ ಸಂಸ್ಥೆಗಳು ಕನ್ನಡ ರಾಜ್ಯೋತ್ಸವ ಆಚರಿಸುವಲ್ಲಿ ಹಿಂದೆ ಬೀಳುವುದಿಲ್ಲ. ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಲಾಗುತ್ತದೆ. ಹಳದಿ ಕೆಂಪು ಬಣ್ಣದ ಬಾವುಟಗಳನ್ನು ಕಟ್ಟಿಕೊಂಡ ಆಟೋಗಳನ್ನು ನೋಡುವುದೇ ಒಂದು ಚೆಂದ. ಒಟ್ಟಾರೆ ಇಡೀ ತಿಂಗಳು ಕನ್ನಡಮಯ ವಾತಾವರಣ ಸೃಷ್ಟಿಯಾಗುತ್ತದೆ.

ಕನ್ನಡ ಧ್ವಜ ಹಾರಿಸಲು ಐಟಿ, ಖಾಸಗಿ ಉದ್ಯಮಗಳಿಗೆ ಸರ್ಕಾರ ಮನವಿ

ಈ ಬಾರಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವಕ್ಕೆ ಹೊಸ ನಿಯಮವನ್ನು ಕಡ್ಡಾಯಗೊಳಿಸಿ ಅರ್ಥಪೂರ್ಣ ಆಚರಣೆಗೆ ಕರೆ ನೀಡಿದೆ. ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳು, ಐಟಿ ಬಿಟಿ ಕಂಪನಿಗಳು, ಕಾರ್ಖಾನೆಗಳು, ಖಾಸಗಿ ಉದ್ಯಮಗಳು ಕನ್ನಡ ಧ್ವಜವನ್ನು ಹಾರಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಹೊರಗಿನವರೇ ಇದ್ದಾರೆ. ಅವರೂ ನಮ್ಮ ಕನ್ನಡವನ್ನು ಕಲಿತುಕೊಳ್ಳಬೇಕು. ರಾಜ್ಯೋತ್ಸವದಂದು ಕನ್ನಡಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಆಯೋಜಿಸಬೇಕು. ನಮ್ಮ ರಾಷ್ಟ್ರಧ್ವಜದ ರೀತಿಯಲ್ಲೇ ಕನ್ನಡದ ಬಾವುಟವನ್ನು ಗೌರವಿಸಬೇಕು. ಈ ಮೂಲಕ ಕನ್ನಡಕ್ಕೆ ಶ್ರದ್ಧೆ ಹಾಗೂ ಗೌರವವನ್ನು ತೋರಬೇಕು ಎಂದು ಹೇಳಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

Whats_app_banner