ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಮತ್ತೊಂದು ಭೂಮಿ ವಕ್ಫ್ ಆಸ್ತಿ ಎಂದು ನಮೂದು; ಆತಂಕದಲ್ಲಿ ರೈತರು
Karnataka WAQF Controversy: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಮತ್ತೊಂದು ಭೂಮಿ ವಕ್ಫ್ ಆಸ್ತಿ ಎಂದು ಆರ್ಟಿಸಿಯಲ್ಲಿ ನಮೂದಾಗಿದೆ. ವರುಣ ಕ್ಷೇತ್ರ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಬಳಿಕ ಇದೀಗ ಇಲವಾಲದ ಭೂಮಿ ವಕ್ಫ್ ಆಸ್ತಿ ಎಂದು ನಮೂದಾಗಿದೆ.
ಮೈಸೂರು: ಕರ್ನಾಟಕದಲ್ಲಿ ವಕ್ಫ್ ಆಸ್ತಿ ವಿವಾದ ದಿನದಿಂದ ದಿನಕ್ಕೆ ತೀವ್ರಗೊಂಡಿದೆ. ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕಕ್ಕೆ ಇದೀಗ ಕಾಲಿಟ್ಟಿದೆ. ರೈತರ ಆಸ್ತಿ ದಾಖಲೆ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗುತ್ತಿದೆ. ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಮತ್ತೊಂದು ಭೂಮಿ ವಕ್ಫ್ ಆಸ್ತಿ ಎಂದು ಆರ್ಟಿಸಿಯಲ್ಲಿ ನಮೂದಾಗಿದೆ. ವರುಣ ಕ್ಷೇತ್ರ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಬಳಿಕ ಇದೀಗ ಇಲವಾಲದ ಭೂಮಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಮೈಸೂರು ತಾಲ್ಲೂಕು ಇಲವಾಲ ಗ್ರಾಮದ ಭೂಮಿ.
ಈ ಮೊದಲು ಟಿ. ನರಸೀಪುರ ತಾಲ್ಲೂಕಿನ ರಂಗಸಮುದ್ರದಲ್ಲಿ ಹಿಂದು ಸಮುದಾಯದ ಸ್ಮಶಾನ ಭೂಮಿಯನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರದ ವ್ಯಾಪ್ತಿಯ ರಂಗಸಮುದ್ರ ಗ್ರಾಮ ಇದಾಗಿದೆ. ಇದೀಗ ಇಲವಾಲದ ಸರ್ವೆ ನಂಬರ್ 54 ರಲ್ಲಿರುವ 34 ಗುಂಟೆ ಭೂಮಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. 2020 ರವರೆಗೆ ಸರ್ಕಾರಿ ಭೂಮಿ ಎಂದು ನಮೂದಾಗಿದೆ. 2022ರಿಂದ ವಕ್ಫ್ ಆಸ್ತಿ ಎಂದು ಆರ್ ಟಿಸಿಯಲ್ಲಿ ಉಲ್ಲೇಖವಾಗಿದೆ. ಮೈಸೂರಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಯತ್ನಾಳ್ ಪ್ರತಿಭಟನೆ
ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿ ನವೆಂಬರ್ 7 ರಂದು ಅಂತ್ಯಗೊಂಡಿದೆ. ನಾಲ್ಕು ದಿನಗಳ ಧರಣಿ ನಡೆಯುತ್ತಿತ್ತು. ಶೋಭಾ ಕರಂದ್ಲಾಜೆ ಕೂಡ ಸಾಥ್ ಕೊಟ್ಟಿದ್ದರು. ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಅದಾಲತ್ ನಡೆಸಿದ್ದ ಸಚಿವ ಜಮೀರ್ ಅಹ್ಮದ್, ವಕ್ಫ್ ಆಸ್ತಿ ವಶಪಡಿಸಿಕೊಳ್ಳಲು ಜಿಲ್ಲಾಧಿಕಾರಿಗೆ ಮೌಖಿಕ ಆದೇಶ ನೀಡಿ ಹೋಗಿದ್ದರು. ಆದರೆ ರಾತ್ರೋ ರಾತ್ರಿ ವಕ್ಫ್ ಆಸ್ತಿ ಸೇರ್ಪಡೆಯಾಗಿತ್ತು. ಹೀಗಾಗಿ ರೊಚ್ಚಿಗೆದ್ದ ರೈತರು ಡಿಸಿ ಕಚೇರಿ ಮುಂಭಾಗ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.
ನೋಟಿಸ್ ಹಿಂಪಡೆಯಲು ಸೂಚನೆ
ವಕ್ಫ್ ವಿವಾದ ಭುಗಿಲೇಳುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ನೀಡಲಾಗಿದ್ದ ನೋಟಿಸ್ ಹಿಂಪಡೆಯುವಂತೆ ಸೂಚಿಸಿದ್ದರು. ಇದರ ನಡುವೆಯೂ ರೈತರ ಭೂಮಿಗಳಲ್ಲಿ ವಕ್ಫ್ ಹೆಸರು ಬರುತ್ತಿರುವುದು ಅಚ್ಚರಿ ಮೂಡಿಸಿದೆ. ಕರ್ನಾಟಕದಲ್ಲಿ 3 ಉಪಚುನಾವಣೆ ಕಾರಣ ನೋಟಿಸ್ ವಾಪಸ್ ಪಡೆಯಲು ಸೂಚಿಸಿದ್ದರೂ ಅಧಿಕಾರಿಗಳು ನೋಟಿಸ್ ಹಿಂಪಡೆಯುತ್ತಿಲ್ಲ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಪಹಣಿಗಳಲ್ಲಿ ವಕ್ಫ್ ಹೆಸರ ಬದಲಿಗೆ ರೈತರ ಹೆಸರು ಬರುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮೋದಿ ಮಾಸ್ಟರ್ ಪ್ಲಾನ್ ಎಂದ ತೇಜಸ್ವಿ ಸೂರ್ಯ
ವಕ್ಫ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದ ತೇಜಸ್ವಿ ಸೂರ್ಯ, ವಕ್ಫ್ ಬೋರ್ಡ್ ಆಟಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದಲೇ ಪ್ರಧಾನಿ ಮೋದಿ ಅವರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂದಿದ್ದಾರೆ. ವಕ್ಫ್ ಬೋರ್ಡ್ಗೆ ಸಂಬಂಧಿಸಿ ಏನೆಲ್ಲಾ ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎಂಬುದನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಕಾರಣಕ್ಕೆ 3 ತಿಂಗಳ ಹಿಂದೆ ಜಂಟಿ ಸಂಸದೀಯ ಸಮಿತಿ ರಚಿಸಿದ್ದರು ಎಂದಿದ್ದಾರೆ.
ಅಶೋಕ್ ವಾಗ್ದಾಳಿ
ಸಿಎಂ ಸಿದ್ದರಾಮಯ್ಯ ನೋಟಿಸ್ ವಾಪಸ್ಸು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಆದರೆ, ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಎರಡು ದಿನಗಳ ಹಿಂದೆ ಡಿಸಿಗಳಿಗೆ ಪತ್ರ ಬರೆದು ವಕ್ಫ್ ಬೋರ್ಡ್ ನೀಡಿದ ನೋಟಿಸ್ಗಳ ಪ್ರಗತಿ ಕುರಿತು ವರದಿ ಕೇಳಿದ್ದಾರೆ. ದ್ವಿಮುಖ ನೀತಿ ಪ್ರದರ್ಶಿಸುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ? ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.