ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಸಾಕ್ಷಿ ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ
MUDA Land Case: ಮುಡಾದ ಬಹುಕೋಟಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ದಾಖಲೆಗಳ ಸಮೇತ ಆರೋಪಿಸಿದ್ದಾರೆ.
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಿದಲ್ಲಿ 50:50 ಅನುಪಾತದಡಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಬಹುಕೋಟಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ದಾಖಲೆಗಳ ಮೂಲಕ ಆರೋಪಿಸಿದ್ದಾರೆ. ಸೈಟ್ ಪಡೆಯಲು ಪ್ರಭಾವ ಬೀರಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಕಾರ್ತಿಕ್ ಬಡಾವಣೆಯ ಬಿಲ್ಡರ್ ಮಂಜುನಾಥ್ ಹೆಸರಿನ ಮುದ್ರಾಂಕ ಶುಲ್ಕ ಉಲ್ಲೇಖಿಸಿ ಆರೋಪಿಸಿದ್ದಾರೆ.
ಕ್ರಯಪತ್ರ ನೋಂದಣಿ ಮಾಡಿಕೊಳ್ಳುವವರು ನೋಂದಣಿ ಶುಲ್ಕ ಪಾವತಿ ಮಾಡಬೇಕು. ಆದರೆ, ಸಿಎಂ ಪತ್ನಿ ಅವರು ಕ್ರಯ ಪತ್ರದಲ್ಲಿ ಶುಲ್ಕ ಪಾವತಿಸಿಲ್ಲ. ಬದಲಿಗೆ ಮುಡಾದ ವಿಶೇಷ ತಹಶೀಲ್ದಾರ್ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ. ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ? ಈ ಬಗ್ಗೆ ರಾಜ್ಯದ ಜನರಿಗೆ ಉತ್ತರಿಸಿ ಸಿದ್ದರಾಮಯ್ಯ ಎಂದು ಸ್ನೇಹಮಯಿ ಕೃಷ್ಣ ಪ್ರಶ್ನೆ ಮಾಡಿದ್ದಾರೆ.
ನವೆಂಬರ್ 6ರಂದು ವಿಚಾರಣೆಗೆ ಹಾಜರಾಗಿದ್ದ ಸಿಎಂ
ನವೆಂಬರ್ 6ರಂದು ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಲೋಕಾಯುಕ್ತ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದರು. ಆದರೆ, ಸುಮಾರು ಎರಡು ಗಂಟೆಗಳ ಕಾಲ ತನಿಖೆಗೆ ಒಳಪಟ್ಟಿದ್ದರು. ಈ ವೇಳೆ ಲೋಕಾಯುಕ್ತ ಎಸ್ಪಿ ಉದೇಶ್ ಅವರು 25 ಪ್ರಶ್ನೆಗಳನ್ನು ಕೇಳಿದ್ದರು. ವಿಚಾರಣೆ ಬಳಿಕ ಮಾತನಾಡಿದ್ದ ಸಿದ್ದರಾಮಯ್ಯ ಮತ್ತೆ ಕರೆದರೆ ಬರುವೆ ಎಂದು ಹೇಳಿದ್ದಾರೆ. ಆದರೆ ದೂರುದಾರ ಸ್ನೇಹಮಯಿ ಕೃಷ್ಣ, ಸಿದ್ದರಾಮಯ್ಯ ಪ್ರಭಾವ ಬಳಸಿದ್ದಾರೆ ಎಂದು ಆರೋಪಿಸಿದ್ದರು.
ನನಗೇಕೆ ಮುಜುಗರ ಎಂದಿದ್ದ ಸಿದ್ದರಾಮಯ್ಯ
ಸ್ನೇಹಮಯಿ ಆರೋಪಕ್ಕೆ ಉತ್ತರಿಸಿದ್ದ ಸಿಎಂ, ನಾನು ಯಾವುದೇ ಪ್ರಭಾವ ಬಳಸಿಲ್ಲ. ತಪ್ಪು ಮಾಡಿದ್ದರೆ ತಾನೆ ನಾನು ಹೆದರುವುದಕ್ಕೆ. ಇ.ಡಿ ವಿಚಾರಣೆ ನಡೆಸಿದರೂ ಉತ್ತರ ನೀಡುವೆ. ಯಾವುದೇ ಸಮಯದಲ್ಲಿ ವಿಚಾರಣೆಗೆ ಕರೆದರೂ ಹೋಗುವೆ. ವಿಚಾರಣೆ ಎದುರಿಸುವಲ್ಲಿ ನನಗೇಕೆ ಮುಜುಗರ ಎಂದು ಹೇಳಿದ್ದರು. ಇದೀಗ ಸ್ನೇಹಮಯಿ ಕೃಷ್ಣ ಅವರು ಅಕ್ರಮಕ್ಕೆ ಸಂಬಂಧಿಸಿ ದಾಖಲೆ ಸಮೇತ ಆರೋಪಿಸಿದ್ದಾರೆ.