ಕರ್ನಾಟಕ ಹವಾಮಾನ: ಬೆಂಗಳೂರಿನಲ್ಲಿ ಮುಂದಿನ 2 ದಿನ ಮಳೆ ಮುಂದುವರಿಕೆ; ರಾಜ್ಯದಲ್ಲಿ 5 ದಿನ ಭಾರಿ ಮಳೆಯ ಮುನ್ಸೂಚನೆ
ಬೆಂಗಳೂರಿನ ಕೆಲವು ಭಾಗಗಳಲ್ಲಿ ಅಕ್ಟೋಬರ್ 21ರಂದು ಮಳೆಯಾಗಿದೆ. ನಗರದಲ್ಲಿ ಮುಂದಿನ ಎರಡು ದಿನ ವರುಣನ ಆಗಮನದ ನಿರೀಕ್ಷೆ ಇದೆ. ಇದೇ ವೇಳೆ ಕರ್ನಾಟಕದ ಹಲವೆಡೆ ಮುಂದಿನ 5 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಬೀಳುತ್ತಿದ್ದು, ಅತ್ತ ಉದ್ಯಾನ ನಗರಿ ಬೆಂಗಳೂರಿನ ಹಲವೆಡೆ ಇಂದು ಕೂಡಾ ಮಳೆಯಾಗುತ್ತಿದೆ. ಈ ನಡುವೆ ಹಲವು ಭಾಗಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ನಗರದ ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಹಾಗೂ ಅಲ್ಲಲ್ಲಿ ಅತಿಯಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಕರ್ನಾಟಕದ ಹಲವೆಡೆ ಮುಂದಿನ 5 ದಿನ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆಯ ತಜ್ಞ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ಮುಂದಿನ ಎರಡು ದಿನ, ಅಂದರೆ ಅಕ್ಟೋಬರ್ 23ರವರೆಗೆ ಬೆಂಗಳೂರು ನಗರದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮುನ್ಸೂಚನೆ ನೀಡಿದೆ. ಹೀಗಾಗಿ ಉದ್ಯಾನ ನಗರಿಯ ಜನತೆ ಇನ್ನೂ ಒಂದು ವಾರಗಳ ಕಾಲ ವರುಣಾಗಮನವನ್ನು ನಿರೀಕ್ಷಿಸಬಹುದು.
ಈಗಾಗಲೇ ಬೆಂಗಳೂರು ನಗರದಲ್ಲಿ ಸುರಿದಿರುವ ಮಳೆ ಹಲವು ಕಡೆ ಅವಾಂತರಗಳನ್ನು ಸೃಷ್ಟಿಸಿದೆ. ಹಲವೆಡೆ ರಸ್ತೆಗಳಲ್ಲಿ ನೀಡು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಚರಂಡಿ ನೀರು ರಸ್ತೆಯಲ್ಲೆಲ್ಲಾ ಹರಿದು ಜನರ ಬದುಕೇ ಅಸ್ತವ್ಯಸ್ತವಾಗಿದೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಅತ್ತ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಮಂಡ್ಯ, ತುಮಕೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆಯಲ್ಲೂ ಮಳೆಯಾಗಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಇಂದು ರಾತ್ರಿ ಅಥವಾ ಬೆಳಗ್ಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವವಿದೆ. ಮುಂದಿನ 48 ಗಂಟೆಗಳ ಕಾಲ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.
ಶಾಲೆಗಳಿಗೆ ರಜೆ
ಹಲವು ದಿನಗಳಿಂದ ಮಳೆ ಬೀಳುತ್ತಿರುವ ಕಾರಣ ಬೆಂಗಳೂರು ನಗರ ಜಿಲ್ಲೆಯಲ್ಲಿ ಸೋಮವಾರ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಆದರೆ, ಕಾಲೇಜುಗಳಲ್ಲಿ ಉಪನ್ಯಾಸ ನಡೆಸುವಾಗ ಕೆಲವು ಅಂಶಗಳನ್ನು ಪರಿಗಣಿಸುವಂತೆ ಕಾಲೇಜುಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.