ದೀಪಾವಳಿ ಸಂಭ್ರಮಕ್ಕೆ ಮತ್ತೆ ಮಳೆ ಅಡ್ಡಿ; ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ, ಬೆಂಗಳೂರು ಹವಾಮಾನ ಹೀಗಿದೆ
Karnataka Weather: ನವೆಂಬರ್ 02ರಂದು ದೀಪಾವಳಿ ಸಂಭ್ರಮಕ್ಕೆ ರಾಜ್ಯದ ಹಲವೆಡೆ ಮಳೆ ಅಡ್ಡಿಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಇದ್ದು, ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು: ದೀಪಾವಳಿ ಸಂಭ್ರಮ ಆರಂಭವಾದ ಮೊದಲ ಎರಡೂ ದಿನವು ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಹೀಗಾಗಿ ದೀಪ ಹಚ್ಚುವ ಹಾಗೂ ಪಟಾಕಿ ಸಿಡಿಸುವ ಸಂಭ್ರಮಕ್ಕೆ ಅಡ್ಡಿಯಾಗಿದೆ. ಪಾಡ್ಯ ದಿನವಾದ ಇಂದು (ಅಕ್ಟೋಬರ್ 2, ಶನಿವಾರ) ಕೂಡಾ ರಾಜ್ಯದ ವಿವಿಧೆಡೆ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ದೀಪಾವಳಿ ಸಂಭ್ರಮಕ್ಕೆ ವರುಣ ಕಾಡಲಿದ್ದು, ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ. ಕಳೆದ ಎರಡು ದಿನ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಸಂಜೆ ನಂತರ ಮಳೆಯಾಗಿತ್ತು.
ನವೆಂಬರ್ 02ರಂದು ದೀಪಾವಳಿ ಸಂಭ್ರಮ ಕಳೆಗಟ್ಟಲಿದೆ. ಈ ನಡುವೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅತ್ತ ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಲಘುವಾಗಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಬೀದರ್, ಕಲಬುರ್ಗಿ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮೈಸೂರು, ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ನಗರ, ಕೋಲಾರ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.
ಬೆಂಗಳೂರು ಹವಾಮಾನ
ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇಲ್ಲ. ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಅಥವಾ ಗುಡುಗು ಸಹಿತ ಹನಿ ಹನಿ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಸ್ಥಳಗಳಲ್ಲಿ ಬೆಳಗಿನ ಜಾವದಲ್ಲೇ ಮಂಜು ಬೀಳುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಆದರೆ, ಕನಿಷ್ಠ ತಾಪಮಾನವು 21 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಮುನ್ಸೂಚನೆ ಇದೆ.