KAS Exam Free Training: ಕೆಎಎಸ್‌ ಪರೀಕ್ಷೆಗೆ ತಯಾರು ಮಾಡುತ್ತಿದ್ದೀರಾ, ಕರ್ನಾಟಕದ ಈ ವಿಶ್ವವಿದ್ಯಾನಿಲಯದಲ್ಲಿ ಒಂದು ತಿಂಗಳ ಉಚಿತ ಶಿಬಿರ
ಕನ್ನಡ ಸುದ್ದಿ  /  ಕರ್ನಾಟಕ  /  Kas Exam Free Training: ಕೆಎಎಸ್‌ ಪರೀಕ್ಷೆಗೆ ತಯಾರು ಮಾಡುತ್ತಿದ್ದೀರಾ, ಕರ್ನಾಟಕದ ಈ ವಿಶ್ವವಿದ್ಯಾನಿಲಯದಲ್ಲಿ ಒಂದು ತಿಂಗಳ ಉಚಿತ ಶಿಬಿರ

KAS Exam Free Training: ಕೆಎಎಸ್‌ ಪರೀಕ್ಷೆಗೆ ತಯಾರು ಮಾಡುತ್ತಿದ್ದೀರಾ, ಕರ್ನಾಟಕದ ಈ ವಿಶ್ವವಿದ್ಯಾನಿಲಯದಲ್ಲಿ ಒಂದು ತಿಂಗಳ ಉಚಿತ ಶಿಬಿರ

KAS Exam Free Training: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ( ಕರಾಮುವಿ) ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಒಂದು ತಿಂಗಳ ಕಾಲ ಕೆಪಿಎಸ್ಸಿ ಕೆಎಎಸ್‌ ಪರೀಕ್ಷೆಗೆ ಉಚಿತ ತರಬೇತಿ ನೀಡಲಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕುಲಪತಿ ಪ್ರೊ. ಶರಣಪ್ಪ ಹಲಸೆ ಅವರ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿ ಕೆಎಎಸ್‌ ಪರೀಕ್ಷೆಗೆ ಒಂದು ತಿಂಗಳ ತರಬೇತಿ ನಡೆಸಲಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕುಲಪತಿ ಪ್ರೊ. ಶರಣಪ್ಪ ಹಲಸೆ ಅವರ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿ ಕೆಎಎಸ್‌ ಪರೀಕ್ಷೆಗೆ ಒಂದು ತಿಂಗಳ ತರಬೇತಿ ನಡೆಸಲಿದೆ.

KAS Exam Free Training: ಬೆಂಗಳೂರು ಕೇಂದ್ರಿತ ಕರ್ನಾಟಕ ಲೋಕಸೇವಾ ಆಯೋಗವು( KPSC) ಸದ್ಯದಲ್ಲೇ ನಡೆಸುತ್ತಿರುವ ವಿವಿಧ ಹುದ್ದೆಗಳ ಕರ್ನಾಟಕ ಆಡಳಿತಾತ್ಮಕ ಸೇವಾ( KAS) ಪರೀಕ್ಷೆಗಳಿಗೆ ನೀವೇನಾದರೂ ಸಿದ್ದತೆ ಮಾಡಿಕೊಳ್ಳುತ್ತೀದ್ದೀರಾ, ಇದಕ್ಕಾಗಿ ಎಲ್ಲಿ ಉತ್ತಮವಾದ ತರಬೇತಿ ಸಿಗಬಹುದು ಎನ್ನುವ ಹುಡುಕಾಟದಲ್ಲೂ ಇದ್ದೀರಾ, ಇದಕ್ಕಾಗಿ ಹಲವೆಡೆ ತರಬೇತಿಗಳೇನೋ ನಡೆದಿರುವುದು ನಿಜ. ಆದರೆ ಮೈಸೂರು ಕೇಂದ್ರಿತ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯ( KSOU)ವು ಉಚಿತವಾಗಿಯೇ ಒಂದು ತಿಂಗಳ ಕಾಲ ತರಬೇತಿ ನೀಡಲಿದೆ. ಇದಕ್ಕಾಗಿ ಕರಾಮುವಿಯ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ತರಬೇತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತರಬೇತಿ 2024 ನವೆಂಬರ್‌ 25ರಂದು ಆರಂಭಗೊಳ್ಳಲಿದೆ. ಮೊದಲ ದಿನ ಉದ್ಘಾಟನಾ ಕಾರ್ಯಕ್ರಮ ಇರಲಿದ್ದು, ಆನಂತರ ನಿರಂತರವಾಗಿ ಒಂದು ತಿಂಗಳ ಕಾಲ ತರಗತಿಗಳು ಇರಲಿವೆ.

13 ವರ್ಷದ ಕೇಂದ್ರ

ಮೂರು ದಶಕದಷ್ಟು ಇತಿಹಾಸ ಹೊಂದಿರುವ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ದೂರ ಶಿಕ್ಷಣದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡುತ್ತಿದೆ. ಹದಿಮೂರು ವರ್ಷದ ಹಿಂದೆಯೇ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ಆಗಿನ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಕಾಲದಲ್ಲಿ ಆರಂಭಿಸಲಾಗಿತ್ತು. ಆಗಿನಿಂದಲೂ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ಉಚಿತ ತರಬೇತಿಯನ್ನು ನೀಡುತ್ತಾ ಬರಲಾಗುತ್ತಿದೆ.

ಅದರಲ್ಲೂ ಯುಪಿಎಸ್ಸಿ ನಡೆಸುವ ಪರೀಕ್ಷೆಗಳು, ಕೆಪಿಎಸ್‌ಸಿ ಆಯೋಜಿಸುವ ವಿವಿಧ ಹುದ್ದೆಗಳ ಪರೀಕ್ಷೆಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.

ಇದಲ್ಲದೇ ಯುಜಿಸಿ ನೆಟ್‌ ಕೆ ಸ್ಲೆಟ್‌, ಬ್ಯಾಂಕಿಂಗ್‌, ಪಿಡಿಒ ಸಹಿತ ವಿವಿಧ ಸರ್ಕಾರಿ ನೇಮಕಾತಿಗಳ ಪ್ರವೇಶ ಪರೀಕ್ಷೆಗೂ ಇಲ್ಲಿ ತರಬೇತಿ ಮುಂದುವರಿದಿದೆ. ಇದಕ್ಕಾಗಿಯೇ ರೂಪಿಸುರುವ ಕೇಂದ್ರವು ನಿರಂತರವಾಗಿ ಆಯಾ ಸಮಯದ ಪರೀಕ್ಷೆಗಳಿಗೆ ಅನುಗುಣವಾಗಿ ತರಬೇತಿ ರೂಪಿಸುತ್ತದೆ.

ಹೀಗಿರಲಿದೆ ತರಬೇತಿ

ಈ ಬಾರಿಯೂ ಕರ್ನಾಟಕ ಲೋಕಸೇವಾ ಆಯೋಗವು ಕೆಎಎಸ್‌ ಪರೀಕ್ಷೆಗೆ ದಿನಾಂಕಗಳನ್ನು ನಿಗದಿಪಡಿಸಿದೆ. ಇದಕ್ಕಾಗಿ ಅಭ್ಯರ್ಥಿಗಳು ತಯಾರಿಯನ್ನು ನಡೆಸುತ್ತಿದ್ದು, ಅಂತಿಮ ಪರೀಕ್ಷೆಗೆ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ಉಚಿತ ತರಬೇತಿ ನೀಡಲಿದೆ.

ಕೆಎಎಸ್‌ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು. ಈಗಾಗಲೇ ಕೆಎಎಸ್‌ನಲ್ಲಿ ಉತ್ತೀರ್ಣರಾಗಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವವರು, ವಿಷಯ ತಜ್ಞರು ನಿತ್ಯ ಮೂರು ಗಂಟೆಗಳ ಕಾಲ ತರಬೇತಿ ನೀಡಲಿದ್ದಾರೆ. ಅದರಲ್ಲೂ ಪರೀಕ್ಷೆಗೆ ಬೇಕಾದ ಮಾದರಿಯಲ್ಲಿಯೇ ತರಬೇತಿ ಪರಿಣಾಮಕಾರಿಯಾಗಿ ನೀಡಲಾಗುತ್ತದೆ. ವಿಶ್ರಾಂತ ಕುಲಪತಿಗಳು, ಪ್ರಾಧ್ಯಾಪಕರು, ನಿವೃತ್ತ ಹಾಗೂ ಹಾಲಿ ಅಧಿಕಾರಿಗಳು ಈ ಕೇಂದ್ರದೊಂದಿಗೆ ಒಡನಾಟ ಹೊಂದಿದ್ದು ವಿಷಯ ತಜ್ಞರಾಗಿ ಭಾಗಿಯಾಗಲಿದ್ಧಾರೆ. ಇದಲ್ಲದೇ ವಿಷಯಕ್ಕೆ ಸಂಬಂಧಿಸಿ ಅಭ್ಯರ್ಥಿಗಳಿಗೆ ಅನುಮಾನಗಳಿದ್ದರೆ ಅದನ್ನೂ ಬಗೆಹರಿಸಲು ಸಂವಾದಗಳನ್ನು ಆಯೋಜಿಸಲಾಗುತ್ತದೆ.

ಉಂಟು ಗ್ರಂಥಾಲಯ, ಹಾಸ್ಟೆಲ್‌ ವ್ಯವಸ್ಥೆ

ಕರಾಮುವಿಯಲ್ಲಿ ನಡೆಯುವ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರ ಊರುಗಳಿಂದ ಬರುವ ಅಭ್ಯರ್ಥಿಗಳಿಗೆ ವಿಶಾಲ ಗ್ರಂಥಾಲಯ ವ್ಯವಸ್ಥೆಯೂ ಇದೆ. ಇಲ್ಲಿ ಎಲ್ಲಾ ವಿಷಯಗಳ ಸಾಕಷ್ಟು ಪುಸ್ತಕಗಳು ಸಿಗಲಿವೆ. ಇದಲ್ಲದೇ ಹಾಸ್ಟೆಲ್‌ ವ್ಯವಸ್ಥೆಯನ್ನೂ ಕೂಡ ಮಾಡಿಕೊಡಲಾಗುತ್ತದೆ. ಕಡಿಮೆ ದರದಲ್ಲಿ ವಿದ್ಯಾರ್ಥಿ ಆಶ್ರಯ ವ್ಯವಸ್ಥೆಯನ್ನು ವಿವಿ ಮಾಡಿಕೊಂಡು ಬಂದಿದೆ.

ಒಂದು ತಿಂಗಳ ಕೆಎಎಸ್‌ ಪರೀಕ್ಷೆಗಳಿಗೆ ಸಿದ್ದತೆಗಳು ಆಗಿವೆ. ಹಿಂದೆಯೂ ಹಲವಾರು ರೀತಿಯ ಪರೀಕ್ಷೆಗಳಿಗೆ ತರಬೇತಿ ನೀಡಿದ್ದೇವೆ.ಕುಲಪತಿ ಪ್ರೊ.ಶರಣಪ್ಪ ಹಲಸೆ, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಮತ್ತಿತರರ ಸಹಕಾರದಿಂದ ಕೇಂದ್ರದಲ್ಲಿ ನಡೆದಿರುವ ತರಬೇತಿ ಪ್ರಯೋಜನ ಪಡೆದವರು ಉದ್ಯೋಗ ಪಡೆದುಕೊಂಡಿದ್ದಾರೆ ಎನ್ನುವುದು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಅವರ ವಿವರಣೆ.

ಉದ್ಘಾಟನೆಗೆ ಸಿದ್ದತೆ

2024 ನವೆಂಬರ್‌ 25ರ ಸೋಮವಾರದಂದು ಕೆಎಎಸ್‌ ಪರೀಕ್ಷೆ ತರಬೇತಿಗೆ ಮೈಸೂರಿನ ಕರಾಮುವಿ ಕಾವೇರಿ ಸಭಾಂಗಣದಲ್ಲೇ ತರಬೇತಿಗಳು ಶುರುವಾಗಲಿವೆ. ಅಂದು ಬೆಳಿಗ್ಗೆ 11 ಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಅವರು ತರಬೇತಿಗೆ ಚಾಲನೆ ನೀಡುವರು. ಕರಾಮುವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಹಣಕಾಸು ಇಲಾಖೆಯ ಉಪ ಯೋಜನಾ ನಿರ್ದೇಶಕ ಮಹಮ್ಮದ್‌ ಹ್ಯಾರಿಸ್‌ ಸುಮೇರ್‌, ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಕೂಡ ಭಾಗಿಯಾಗಿ ಮಾರ್ಗದರ್ಶನ ನೀಡುವರು.

ಸಂಪರ್ಕ ಹೇಗೆ

ಇಡೀ ಒಂದು ತಿಂಗಳ ನೋಂದಣಿಗೆ 500 ರೂ.ಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಆಸಕ್ತರು ಹೆಸರನ್ನು ನೊಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ಹೆಚ್ಚಿನ ವಿವರಗಳಿಗೆ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಅವರನ್ನು 9448800816 ಇಲ್ಲವೇ ಕಚೇರಿಯನ್ನು ದೂರವಾಣಿ ಸಂಖ್ಯೆ 0821 2515944ಗೆ ಸಂಪರ್ಕಿಸಬಹುದು.

Whats_app_banner