ಕನ್ನಡ ಸುದ್ದಿ  /  ಕರ್ನಾಟಕ  /  Mysore News: ರಾಹುಲ್‌ ಗಾಂಧಿ ಜತೆ ಭಾರತ್‌ ಜೋಡೊದಲ್ಲಿ ಹೆಜ್ಜೆ ಹಾಕಿದ್ದ ವೈದ್ಯ ಬಿಜೆಪಿಗೆ ಸೇರ್ಪಡೆ

Mysore News: ರಾಹುಲ್‌ ಗಾಂಧಿ ಜತೆ ಭಾರತ್‌ ಜೋಡೊದಲ್ಲಿ ಹೆಜ್ಜೆ ಹಾಕಿದ್ದ ವೈದ್ಯ ಬಿಜೆಪಿಗೆ ಸೇರ್ಪಡೆ

ಭಾರತ್‌ ಜೋಡೊ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಅವರೊಂದಿಗೆ ನಡೆದು ನಂತರ ಕಾಂಗ್ರೆಸ್‌ ಸೇರಿದ್ದ ಮೈಸೂರಿನ ವೈದ್ಯ ಡಾ.ಸುಶ್ರುತ್‌ ಗೌಡ ಬಿಜೆಪಿ ಸೇರಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ಸೇರಿದ ಡಾ.ಸುಶ್ರುತ್‌ ಗೌಡ.
ಬೆಂಗಳೂರಿನಲ್ಲಿ ಬಿಜೆಪಿ ಸೇರಿದ ಡಾ.ಸುಶ್ರುತ್‌ ಗೌಡ.

ಬೆಂಗಳೂರು: ಎರಡು ವರ್ಷದ ಹಿಂದೆ ಆರಂಭಗೊಂಡು ಈ ವರ್ಷದವರೆಗೂ ಮುಂದುವರೆದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೊ ಯಾತ್ರೆಯಲ್ಲಿ ಜತೆಜತೆಯಾಗಿಯೇ ಹೆಜ್ಜೆ ಹಾಕಿದ್ದ ಮೈಸೂರಿನ ವೈದ್ಯ ಡಾ.ಸುಶ್ರುತ್‌ ಗೌಡ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಭಾರತ್‌ ಜೋಡೊ ಯಾತ್ರೆಯಲ್ಲಿ ಭಾಗಿಯಾಗಿ ಬಂದ ನಂತರ ಡಾ.ಸುಶ್ರುತ್‌ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಚುನಾವಣೆಗೆ ಮುನ್ನವೇ ಅವರು ಕಾಂಗ್ರೆಸ್‌ ಅನ್ನು ತೊರೆದು ಬಿಜೆಪಿಯನ್ನು ಸೇರಿಕೊಂಡರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಪಕ್ಷದ ಕರ್ನಾಟಕ ಉಸ್ತುವಾರಿ ರಾಧಾಮೋಹನದಾಸ್‌ ಅಗರ್ವಾಲ್‌ ಅವರ ಸಮ್ಮುಖದಲ್ಲಿ ಡಾ.ಸುಶ್ರುತ್‌ ಅವರು ಪಕ್ಷವನ್ನು ಸೇರಿಕೊಂಡರು.

ಡಾ.ಸುಶ್ರುತ್‌ ಅವರು ರಾಹುಲ್‌ ಗಾಂಧಿ ಅವರು ಕನ್ಯಾಕುಮಾರಿಯಿಂದ ಆರಂಭಿಸಿದ್ದ ಭಾರತ್‌ ಜೋಡೊ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸಹಿತ ಹಲವು ರಾಜ್ಯಗಳಲ್ಲಿ ರಾಹುಲ್‌ಗೆ ಜತೆಯಾಗಿದ್ದರು. ಅವರ ಆರೋಗ್ಯವನ್ನೂ ನೋಡಿಕೊಳ್ಳುವ ಹೊಣೆಯನ್ನು ಹೊತ್ತಿದ್ದರು.

ಪಕ್ಷ ಬಿಟ್ಟದ್ದೇಕೆ

ಭಾರತ್‌ ಜೋಡೊ ಯಾತ್ರೆಯ ನಂತರ ಕಾಂಗ್ರೆಸ್‌ ವಲಯದಲ್ಲಿಯೇ ಡಾ.ಸುಶ್ರುತ್‌ ಗುರುತಿಸಿಕೊಂಡಿದ್ದರು. ಬಳಿಕ ಅವರನ್ನು ಕಾಂಗ್ರೆಸ್‌ ಪ್ರಧಾನಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಆದರೆ ಅವರು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್‌ ಸಿಗಲಿಲ್ಲ. ಅಲ್ಲದೇ ಚುನಾವಣೆ ವೇಳೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದರಿಂದ ಬೇಸರಗೊಂಡು ಕಾಂಗ್ರೆಸ್‌ ತೊರೆದಿದ್ದಾರೆ ಎನ್ನಲಾಗುತ್ತಿದೆ.

ವೈದ್ಯನಾಗಿ ಸೇವೆ ಮಾಡಲು, ಜನರನ್ನು ತಲುಪಲು ಕಾಂಗ್ರೆಸ್‌ನಲ್ಲಿ ಒಂದು ಅವಕಾಶವಿದೆ ಎಂದುಕೊಂಡೆ. ರಾಹುಲ್‌ ಗಾಂಧಿ ಅವರೊಂದಿಗೆ ಗುರುತಿಸಿಕೊಂಡಿದ್ದೆ. ಆನಂತರ ಪಕ್ಷಕ್ಕೂ ಬರ ಮಾಡಿಕೊಂಡರು. ಆದರೆ ಅಲ್ಲಿನ ವಾತಾವರಣ, ಬೆಳವಣಿಗೆಗಳು ನನಗೆ ಬೇಸರ ತಂದವು. ನರೇಂದ್ರ ಮೋದಿ ಅವರು ಹತ್ತು ವರ್ಷ ದೇಶದಲ್ಲಿ ಮಾಡಿರುವ ಬದಲಾವಣೆಗಳಿಗೆ ಆಕರ್ಷಿತನಾಗಿ ಬಿಜೆಪಿ ಸೇರಲು ತೀರ್ಮಾನಿಸಿದೆ. ಇಲ್ಲಿ ವೈದ್ಯರು ಸಮಾಜಮುಖಿಯಾಗಿ ಕೆಲಸ ಮಾಡಲು ಅವಕಾಶಗಳಿವೆ ಎನ್ನಿಸಿದೆ. ಯಾವುದೇ ಬೇಡಿಕೆಯಿಲ್ಲದೇ ಪಕ್ಷ ಸೇರಿದ್ದೇನೆ ಎನ್ನುವುದು ಡಾ.ಸುಶ್ರುತ್‌ ಗೌಡ ಅವರ ವಿವರಣೆ.

ಯಾರು ಸುಶ್ರುತ್‌

ಡಾ.ಸುಶ್ರುತ್‌ ಅವರು ಮೈಸೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಗೋಪಾಲಗೌಡ ಆಸ್ಪತ್ರೆಯ ಪಾಲುದಾರರು. ನರರೋಗ ತಜ್ಞರು. ಅವರ ತಂದೆ ಡಾ.ವಿಷ್ಣುಮೂರ್ತಿ ಅವರೂ ಕೂಡ ಖ್ಯಾತ ವೈದ್ಯರಾಗಿದ್ದರು. ಸಮಾಜವಾದಿ ಹಿನ್ನೆಲೆಯ ಡಾ.ವಿಷ್ಣುಮೂರ್ತಿ ಅವರು ತೀರ್ಥಹಳ್ಳಿ ಮೂಲದವರಾದರೂ ಮೈಸೂರಿನಲ್ಲಿಯೇ ಆಸ್ಪತ್ರೆ ತೆರೆದು ಜನಾನುರಾಗಿಯಾಗಿದ್ದರು. ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಸಹಿತ ಹಲವರಿಗೆ ಆತ್ಮೀಯರೂ ಆಗಿದ್ದರು. ಸಮಾಜವಾದಿ ಚಿಂತಕ ಹಾಗೂ ಮಾಜಿ ಶಾಸಕ ಗೋಪಾಲಗೌಡ ಅವರ ಅಭಿಮಾನದ ಮೇಲೆಗೆ ಆಸ್ಪತ್ರೆಗೆ ಅವರದ್ದೇ ಹೆಸರು ಇಟ್ಟಿದ್ದರು. ವಿಷ್ಣುಮೂರ್ತಿಯವರು ಕಾಲವಾಗಿದ್ದು. ಅವರ ಪುತ್ರರು ಆಸ್ಪತ್ರೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸಮಾಜವಾದಿ ಹಿನ್ನೆಲೆಯ ಕಾರಣದಿಂದಲೇ ಡಾ.ಸುಶ್ರುತ್‌ ಕೂಡ ಕಾಂಗ್ರೆಸ್‌ ಸೇರಿದರೂ ಕೆಲವೇ ದಿನದಲ್ಲಿ ಬಿಜೆಪಿ ಸೇರಿರುವುದು ಚರ್ಚೆಗೆ ಕಾರಣವಾಗಿದೆ.

ಪರಿಣಾಮ ಬೀರೋಲ್ಲ

ಡಾ.ಶುಶ್ರುತ್ ಬಿಜೆಪಿ ಸೇರ್ಪಡೆಯಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಗೆಲುವು ಖಚಿತ. ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದ ಡಾ. ಸುಶ್ರುತ್ ಬಿಜೆಪಿ ಸೇರ್ಪಡೆಯಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ . ಪಕ್ಷದ ಸಂಘಟನೆಯಲ್ಲಿ ಗುರುತಿಸಿಕೊಂಡಿರಲಿಲ್ಲ. ಆದಕಾರಣ ಸುಶ್ರುತ್ ಬಿಜೆಪಿ ಸೇರ್ಪಡೆಯಿಂದ ಯಾವುದೇ ಪರಿಣಾಮ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವುದು ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್ ವಿಶ್ವಾಸದ ನುಡಿ.

IPL_Entry_Point