Expriry Date: ನೋಟುಗಳಿಗೂ ಎಕ್ಸ್‌ಪೈರಿ ಡೇಟ್ ಇದ್ದರೆ ಕಪ್ಪುಹಣ ನಿಯಂತ್ರಣ ಸಾಧ್ಯವೇ? - 9 ಅಂಶಗಳಲ್ಲಿ ಬಿಸಿಬಿಸಿ ಚರ್ಚೆಯ ಸಮಗ್ರ ನೋಟ
ಒಂದು ಗಡುವಿನ ನಂತರ ನೋಟುಗಳ ಮಾನ್ಯತೆ ಮುಗಿಯುತ್ತದೆ ಅಥವಾ ಅಮಾನ್ಯಗೊಳ್ಳುತ್ತವೆ ಎಂಬ ಕಾನೂನು ಜಾರಿಯಾದರೆ ಯಾರೂ ಅಪಾರ ಪ್ರಮಾಣದ ನಗದು ಸಂಗ್ರಹಕ್ಕೆ ಮುಂದಾಗಲಾರರು. ಅಕ್ರಮ ಚಟುವಟಿಕೆ ಅಥವಾ ಕಾನೂನುಬಾಹಿರ ಹಣಕಾಸಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾರರು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಈ ವಾದ ಎಷ್ಟರಮಟ್ಟಿಗೆ ಸರಿ? (ವಿಶ್ಲೇಷಣೆ: ಎಚ್.ಮಾರುತಿ
ಬೆಂಗಳೂರು: ಭಾರತದಲ್ಲಿ ಚಲಾವಣೆಯಲ್ಲಿರುವ ನೋಟುಗಳ ಮೇಲೆ ಅವುಗಳನ್ನು ಎಂದಿನಿಂದ ಹಿಂದಕ್ಕೆ ತೆಗೆದುಕೊಳ್ಳಲಾಗುತ್ತದೆ ಎನ್ನುವ ಅಂತಿಮ ದಿನಾಂಕ, ಗಡುವು ಅಥವಾ ಎಕ್ಸ್‌ಪೈರಿ ಡೇಟ್ ಮುದ್ರಿಸಿದರೆ ಕಪ್ಪು ಹಣದ ಚಲಾವಣೆಯನ್ನು ನಿಯಂತ್ರಿಸಬಹುದು ಎಂಬ ಚರ್ಚೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಒಂದು ಗಡುವಿನ ನಂತರ ನೋಟುಗಳ ಮಾನ್ಯತೆ ಮುಗಿಯುತ್ತದೆ ಅಥವಾ ಅಮಾನ್ಯಗೊಳ್ಳುತ್ತವೆ ಎಂಬ ಕಾನೂನು ಜಾರಿಯಾದರೆ ಸಾರ್ವಜನಿಕರು ಅಪಾರ ಪ್ರಮಾಣದ ನಗದು ಹಣ ಸಂಗ್ರಹಕ್ಕೆ ಮುಂದಾಗಲಾರರು. ಅಕ್ರಮ ಚಟುವಟಿಕೆ ಅಥವಾ ಕಾನೂನುಬಾಹಿರ ಹಣಕಾಸಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾರರು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
1) ನಿಯಮ ಜಾರಿ ಸುಲಭವಲ್ಲ: ಇಂಥ ನಿಯಮ ಜಾರಿಗೊಳಿಸಲು ಸಾಧ್ಯವೇ ಎನ್ನುವ ಬಗ್ಗೆ ಮೊದಲು ಯೋಚಿಸೋಣ. ಇಂಥ ನಿಯಮ ಅಥವಾ ಕಾನೂನನ್ನು ಜಾರಿಗೊಳಿಸುವುದು ಅಷ್ಟೊಂದು ಸುಲಭ ಅಲ್ಲ. ಇದು ತುಂಬಾ ಸಂಕೀರ್ಣ ಸಮಸ್ಯೆಗಳನ್ನು ಒಳಗೊಂಡಿದೆ. ಹೀಗೆ ಮಾಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಬಡ ಮತ್ತು ಮಧ್ಯಮ ವರ್ಗವೇ ಹೆಚ್ಚು ತೊಂದರೆ ಎದುರಿಸಬೇಕಾಗುತ್ತದೆ. ಕಪ್ಪುಹಣವನ್ನು ನಿಯಂತ್ರಿಸಲು ನೋಟುಗಳಿಗೆ ಅಂತಿಮ ಗಡುವಿನ ದಿನಾಂಕ ಇರಬೇಕು ಎಂದೇನೂ ಇಲ್ಲ. ಈಗಾಗಲೇ ಇರುವ ಆರ್ಥಿಕ ಕಾನೂನುಗಳನ್ನು ಬಿಗಿಯಾಗಿ ಅನುಷ್ಠಾನಕ್ಕೆ ತಂದರೂ ಸಾಕು. ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ತರಬಹುದಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.
2) ಎಕ್ಸ್‌ಪೈರಿ ಡೇಟ್ ಘೋಷಿಸಿದರೆ ಏನು ಸಮಸ್ಯೆ: ಎಕ್ಸ್‌ಪೈರಿ ಡೇಟ್ ಘೋಷಿಸಿರುವ 100 ರೂಪಾಯಿ ಮುಖಬೆಲೆಯ ಒಂದು ನೋಟು ಜಾರಿಯಲ್ಲಿದೆ ಎಂದುಕೊಳ್ಳೋಣ. ಅಂಥದ್ದೊಂದು ನೋಟು ಜೂನ್ 30, 2024 ಕ್ಕೆ ಅಮಾನ್ಯಗೊಳ್ಳುತ್ತದೆ ಎಂದುಕೊಳ್ಳಿ. ಒಂದು ವೇಳೆ ಬಸ್ ಕಂಡಕ್ಟರ್ ಅಥವಾ ಹೊಟೆಲ್‌ನಲ್ಲಿ ಅಂಥ ನೋಟು ಕೊಟ್ಟರೆ ನೀವು ಪಡೆದುಕೊಳ್ಳುವಿರಾ? ಈಗ ನೋಟಿಗೆ ಬೆಲೆ ಇದೆ. ಆದರೆ ನಂತರ ಬೆಲೆ ಕಳೆದುಕೊಳ್ಳುತ್ತದೆ. ಅಷ್ಟರ ಒಳಗೆ ಬೇರೆಯವರಿಗೆ ಸಾಗ ಹಾಕಬೇಕು ಅಥವಾ ಬ್ಯಾಂಕ್‌ಗೆ ಹೋಗಿ ವಿನಿಮಯ ಮಾಡಬೇಕು. ಯಾರಿಗೆ ಬೇಕು ಇಷ್ಟೆಲ್ಲಾ ಉಸಾಬರಿ. ಅದರ ಬದಲು ಬೇರೆ ನೋಟು ಕೊಡಿ ಎಂದು ಕೇಳುವುದೇ ಸುಲಭ ಎನಿಸುವುದಿಲ್ಲವೇ? ನಿಮ್ಮಂತೆ ಎಲ್ಲರೂ ಹೀಗೆಯೇ ಮಾಡಿದರೆ ಅಂಥ ನೋಟುಗಳು ಚಲಾವಣೆಯಲ್ಲಿ ಉಳಿಯುವುದೇ?
3) ಜನರು ಹಿಂದೇಟು ಹಾಕಬಹುದು: ಇಂಥ ಕಾನೂನು ಜಾರಿ ಮಾಡಿದರೆ ಆಗುವ ಬಹುದೊಡ್ಡ ಸಮಸ್ಯೆ ಇದು. ಕೂಡಲೇ ಅಥವಾ ಕೆಲವೇ ತಿಂಗಳಲ್ಲಿ ಎಕ್ಸ್ ಪೈರಿಯಾಗುವ ನೋಟುಗಳನ್ನು ಪಡೆದುಕೊಳ್ಳಲು ಜನರು ಹಿಂದೇಟು ಹಾಕಬಹುದು. ಚಾಲ್ತಿಯಲ್ಲಿರುವ ನೋಟುಗಳ ಮಧ್ಯೆ ವಾಯಿದೆ ಮುಗಿದಿರುವ ನೋಟುಗಳನ್ನು ಇಟ್ಟಿದ್ದರೆ ಒಂದೊಂದು ನೋಟನ್ನೂ ಪರೀಕ್ಷಿಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಈಗಿನ ನೋಟುಗಳು ಜನಸ್ನೇಹಿಯಾಗಿವೆ. ಅಂಧರು ಮತ್ತು ಅನಕ್ಷರಸ್ತರೂ ಚಲಾವಣೆ ಮಾಡಬಹುದಾಗಿವೆ. ವಾಯಿದೆ ಮುಗಿದ ನೋಟುಗಳನ್ನು ಈ ವರ್ಗದ ಜನ ಬಳಸುವುದಾದರೂ ಹೇಗೆ? ಇವರನ್ನು ಮೋಸಗೊಳಿಸುವುದನ್ನು ತಡೆಯಲು ಸಾಧ್ಯವೇ ಎಂಬ ಪ್ರಶ್ನೆಗಳನ್ನೂ ಕೆಲವರು ಮುಂದಿಡುತ್ತಾರೆ.
4) ವಿಲೇವಾರಿ ಹೇಗೆ: ಎಕ್ಸ್‌ಪೈರಿಯಾಗುವ ನೋಟುಗಳನ್ನು ಪ್ರತಿಬಾರಿಯೂ ವಿಲೇವಾರಿ ಮಾಡುವುದು ಒಂದು ಸಾಹಸದ ಕೆಲಸವಾಗುತ್ತದೆ. ಅದೇ ಹೊತ್ತಿಗೆ ಪದೇಪದೆ ಹೊಸ ನೋಟುಗಳನ್ನು ಮುದ್ರಿಸಲು ಹೆಚ್ಚಿನ ಹಣ ಖರ್ಚಾಗುತ್ತದೆ. ಭಾರತದಂತಹ ಮುಂದುವರೆಯುತ್ತಿರುವ ದೇಶದಲ್ಲಿ ಊಟ, ವಸತಿ, ಕುಡಿಯುವ ನೀರು, ರಸ್ತೆ ಚರಂಡಿ, ಶಿಕ್ಷಣ, ಆರೋಗ್ಯದಂತಹ ಮೂಲ ಸವಲತ್ತುಗಳನ್ನು ಒದಗಿಸಲು ಸರ್ಕಾರಗಳು ತಿಣುಕಾಡುತ್ತಿರುವಾಗ ವಾಯಿದೆ ಮುಗಿದ ನೋಟುಗಳನ್ನು ಸಂಗ್ರಹಿಸುವುದು ಮತ್ತು ವಿಲೇವಾರಿ ಮಾಡುವುದು ಒಂದು ಯುದ್ಧವನ್ನೇ ಮಾಡಿದಂತೆ ಆಗುತ್ತದೆ.
5) ಶೋಷಣೆಯ ಸವಾಲು: ಭಾರತದಲ್ಲಿ ಇಂದಿಗೂ ನೂರಕ್ಕೆ ನೂರು ಸಾಕ್ಷರತೆ ಬಂದಿಲ್ಲ. ಭಾರತದ ಸರಾಸರಿ ಸಾಕ್ಷರತೆಯ ಪ್ರಮಾಣ ಶೇ 75 ರ ಆಸುಪಾಸಿನಲ್ಲಿದೆ. ಇನ್ನುಳಿದ ಶೇ.25 ರಷ್ಟು ಜನರು ಅನಕ್ಷರಸ್ತರಾಗಿಯೇ ಉಳಿದಿದ್ದಾರೆ. ಇವರೆಲ್ಲರೂ ಬಹುತೇಕ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುತ್ತಾರೆ. ಮಾಲೀಕ ಕೊಟ್ಟ ನೋಟನ್ನು ತಿರಸ್ಕರಿಸುವಷ್ಟು ಜ್ಞಾನ ಮತ್ತು ಧೈರ್ಯ ಇರುವುದಿಲ್ಲ.
6) ಮುದ್ರಣವೂ ಕಷ್ಟ: ನೋಟುಗಳಲ್ಲಿ ಎಕ್ಸ್‌ಪೈರಿ ದಿನಾಂಕವನ್ನು ಬ್ರೈಲ್ ಲಿಪಿಯಲ್ಲಿ ಮುದ್ರಿಸುವುದೂ ಒಂದು ಸವಾಲು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಎಕ್ಸ್‌ಪೈರಿಯಾಗುವ ನೋಟುಗಳನ್ನು ಹಿಂಪಡೆಯುವುದು ಮತ್ತು ಮುದ್ರಿಸುವುದು ಒಂದು ಸವಾಲಾಗುತ್ತದೆ. ಇದು ಆರ್ಥಿಕವಾಗಿ ನಷ್ಟ ಉಂಟು ಮಾಡುವ ಪ್ರಕ್ರಿಯೆಯೂ ಹೌದು. ನೋಟು ಅಮಾನ್ಯೀಕರಣದಿಂದಾದ ಲಾಭ ನಷ್ಟಗಳೇನು ಎನ್ನುವುದು ನಮ್ಮ ಕಣ್ಣ ಮುಂದಿದೆ. ಶೇ 98 ರಷ್ಟು ನೋಟುಗಳನ್ನು ಆರ್‌ಬಿಐಗೆ ಮರಳಿಸಲಾಗಿದೆ. ಹಣವಂತರು, ಉದ್ಯಮಿಗಳು ಯಾವೆಲ್ಲಾ ವಾಮ ಮಾರ್ಗಗಳ ಮೂಲಕ ತಮ್ಮ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿಕೊಂಡರು ಎನ್ನುವುದು ಗುಟ್ಟಾಗಿ ಉಳಿದಿಲ್ಲ.
7) ಡಿಜಿಟಲ್ ಆರ್ಥಿಕತೆ: ನೋಟುಗಳಿಗೆ ಎಕ್ಸ್‌ಪೈರಿ ಡೇಟ್ ಬರಬೇಕು ಎನ್ನುವ ವಾದವನ್ನು ಎಲ್ಲರೂ ಸಾರಾಸಗಟಾಗಿ ತಿರಸ್ಕರಿಸುವುದಿಲ್ಲ. ಈಗಿನ ನವಪೀಳಿಗೆ ಮತ್ತು ಯುವ ಜನಾಂಗ ಈ ವಾದವನ್ನು ಬೆಂಬಲಿಸುತ್ತದೆ. ಕಾಗದ ರಹಿತ ಆರ್ಥಿಕತೆ ಕುರಿತು ಚಿಂತನೆ ನಡೆಸಬೇಕು. ದೇಶ ಡಿಜಿಟಲೀಕರಣವಾಗುತ್ತಿದ್ದು, ಇಂತಹ ಪ್ರಕ್ರಿಯೆ ಕುರಿತು ಚರ್ಚೆಗಳನ್ನು ನಡೆಸುವುದು ತಪ್ಪೇನೂ ಅಲ್ಲ. ಹಂತಹಂತವಾಗಿ ನೋಟುಗಳ ಬಳಕೆಯನ್ನು ಕಡಿಮೆಗೊಳಿಸುತ್ತಾ ಹೋಗಬೇಕು. ಚೆಕ್ ಗಳು ಮಹತ್ವ ಕಳದುಕೊಂಡಿರುವ ಹಾಗೆ ನೋಟುಗಳೂ ಮಹತ್ವ ಕಳೆದುಕೊಂಡು ಡಿಜಟಲೀಕರಣವಾಗುವುದರಲ್ಲಿ ತಪ್ಪೇನು ಎಂದು ವಾದಿಸುವವರೂ ಇದ್ದಾರೆ.
8) ಉಳಿತಾಯ ಮನೋಭಾವ ಕುಸಿಯಬಹುದು: ನೋಟುಗಳಿಗೂ ವಾಯಿದೆ ಇರುವುದಾದರೆ ಜನರು ಉಳಿತಾಯ ಮಾಡುವುದನ್ನೇ ಬಿಟ್ಟು ಬಿಡುತ್ತಾರೆ. ಉಳಿತಾಯ ಇಲ್ಲದೇ ಹೋದರೆ ಹೂಡಿಕೆ ಇರುವುದಿಲ್ಲ. ಹೂಡಿಕೆ ಇಲ್ಲವಾದರೆ ಉದ್ದಿಮೆಗಳು ಸ್ಥಾಪನೆಯಾಗುವುದಿಲ್ಲ. ಉದ್ದಿಮೆಗಳು ಇಲ್ಲವಾದಲ್ಲಿ ನಿರುದ್ಯೋಗ ಹೆಚ್ಚುತ್ತದೆ ಎಂಬ ವಾದ ಸರಣಿಯನ್ನು ಮುಂದಿಡಲಾಗುತ್ತದೆ.
9) ಯಾವ ದೇಶದಲ್ಲೂ ಇಂಥ ವ್ಯವಸ್ಥೆ ಇಲ್ಲ: ಯಾವುದೇ ದೇಶದಲ್ಲಿಯೂ ನೋಟುಗಳಿಗೆ ಎಕ್ಸ್‌ಪೈರಿ ದಿನಾಂಕ ಇಲ್ಲ. ಬದಲಾಗಿ ಬ್ಯಾಂಕ್‌ಗಳು ಹಳೆಯ, ಹರಿದ ನೋಟುಗಳನ್ನು ಹಿಂಪಡೆಯುತ್ತಿವೆ. ಆ ಮೂಲಕವೂ ರಕ್ಷಣೆ ಒದಗಿಸಲಾಗುತ್ತಿದೆ.