Melkote News: ಮೇಲುಕೋಟೆ ದೇಗುಲದ ನಾಮ ಬದಲಾಯ್ತು, 52 ವರ್ಷ ನಂತರ ಬದಲಾವಣೆಗೆ ಕಾರಣ ಏನಿರಬಹುದು
ಕನ್ನಡ ಸುದ್ದಿ  /  ಕರ್ನಾಟಕ  /  Melkote News: ಮೇಲುಕೋಟೆ ದೇಗುಲದ ನಾಮ ಬದಲಾಯ್ತು, 52 ವರ್ಷ ನಂತರ ಬದಲಾವಣೆಗೆ ಕಾರಣ ಏನಿರಬಹುದು

Melkote News: ಮೇಲುಕೋಟೆ ದೇಗುಲದ ನಾಮ ಬದಲಾಯ್ತು, 52 ವರ್ಷ ನಂತರ ಬದಲಾವಣೆಗೆ ಕಾರಣ ಏನಿರಬಹುದು

ಮಂಡ್ಯ ಜಿಲ್ಲೆ ಪ್ರಸಿದ್ದ ಯಾತ್ರಾ ಸ್ಥಳ ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ದೇಗುಲದಲ್ಲಿ ತಲೆದೋರಿದ್ದ ನಾಮ ವಿವಾದವನ್ನು ಅರ್ಧ ಶತಮಾನದ ನಂತರ ಬಗೆಹರಿಸಲಾಗಿದೆ.

ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇಗುಲ ಗೋಪುರದ ನಾಮವನ್ನು ಬದಲಾಯಿಸಲಾಗಿದೆ.
ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇಗುಲ ಗೋಪುರದ ನಾಮವನ್ನು ಬದಲಾಯಿಸಲಾಗಿದೆ.

ಮಂಡ್ಯ: ಸತತ 52 ವರ್ಷಗಳಿಂದ ನಡೆದುಕೊಂಡೇ ಬರುತ್ತಿದ್ದ ಮೇಲುಕೋಟೆ ಶ್ರೀ ಯೋಗಾನರಸಿಂಹ ದೇಗುಲದ ನಾಮದ ವಿವಾದ ಕೊನಗೂ ಬಗೆಹರಿದಿದೆ. ಪಾಂಡವಪುರದ ಸಿವಿಲ್‌ ನ್ಯಾಯಾಲಯದ ಆದೇಶದಂತೆ ಮೇಲುಕೋಟೆ ದೇಗುಲದಲ್ಲಿ ನಾಮ ಬದಲಾಯಿಸಲಾಗಿದ್ದು, ತೆಂಗಲೆ ನಾಮವನ್ನು ಹಾಕಿಸಲಾಗಿದೆ. ಮೇಲುಕೋಟೆ ದೇವಸ್ಥಾನ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಅವರೇ ಖುದ್ದು ನಿಂತು ದೇಗುಲದ ಚಿಕ್ಕ ಗೋಪುರದಲ್ಲಿದ್ದ ವಡಗಲೆನಾಮವನ್ನು ಅಳಿಸಿ ಹಾಕಿದ್ದೂ ಅಲ್ಲದೇ ನ್ಯಾಯಾಲಯದ ನಿರ್ದೇಶನದಂತೆ ತೆಂಗಲೆ ನಾಮವನ್ನು ಹಾಕಿಸಿದ್ದಾರೆ.

ಕರ್ನಾಟಕದ ಪ್ರಖ್ಯಾತ ನಾರಾಸಿಂಹನ ದೇಗುಲದಲ್ಲಿ ಒಂದಾದ ಮೇಲುಕೋಟೆ ಬೆಟ್ಟದ ಶ್ರೀಯೋಗಾನರಸಿಂಹಸ್ವಾಮಿ ದೇವಾಲಯದ ಚಿಕ್ಕಗೋಪುರಕ್ಕೆ ಗುರುವಾರ ಸಂಜೆ ತೆಂಗಲೆನಾಮ ಹಾಕುವ ಮೂಲಕ ನಿರಂತರವಾಗಿ ಅರ್ಧ ಶತಮಾನದಿಂದ ಇದ್ದಂತಹ ವಿವಾದ ತಾರ್ಕಿಕ ಅಂತ್ಯ ಕಂಡಂತಾಗಿದೆ.

ಏನಿದು ವಿವಾದ

ಯೋಗನರಸಿಂಹಸ್ವಾಮಿ ದೇಗುಲದ ಚಿಕ್ಕಗೋಪುರವನ್ನು 1972ರಲ್ಲಿ ಜೀರ್ಣೋದ್ಧಾರದ ವೇಳೆ ಪಾಂಡವಪುರ ತಹಶೀಲ್ದಾರ್ ಆದೇಶದಂತೆ ತೆಂಗಲೆನಾಮ ತೆಗೆದು ವಡಗಲೆ ನಾಮಹಾಕಲಾಗಿತ್ತು.ಚಿಕ್ಕಗೋಪುರಕ್ಕೆ ವಡಗಲೆನಾಮ ಹಾಕಿದ್ದು ವಿವಾದವಾಗಿ ಪ್ರಕರಣ 1973ರಲ್ಲಿ ಹೈಕೋರ್ಟ್‌ಗೆ ತಲುಪಿತ್ತು. ಹೈಕೋರ್ಟ್‌ ಪ್ರಕರಣವನ್ನು ಪಾಂಡವಪುರ ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳುವಂತೆ ಆದೇಶಿತ್ತು. ತೀರ್ಮಾನ ಹೊರಬಿದ್ದ ನಂತರ ಮತ್ತೆ ಪಾಂಡವಪುರ ಹಿರಿಯ ಶ್ರೇಣಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಾಗಿ 22ವರ್ಷಗಳ ಸುದೀರ್ಘ ವಿಚಾರಣೆಯು ನಡೆಯಿತು. ನಂತರ ನ್ಯಾಯಾಲಯ 29 ಪುಟಗಳ ತೀರ್ಪನ್ನು ನೀಡಿ ವಡಗಲೆನಾಮ ತೆಗೆದು ಚಿಕ್ಕಗೋಪುರಕ್ಕೆ ತೆಂಗಲೆ ನಾಮ ಅಳವಡಿಸುವಂತೆ ಆದೇಶ ಮಾಡಿತು. ಈ ಆದೇಶ ಈಗ ಪಾಲನೆಯಾಗಿದೆ.

ಜೆಎಂಎಫ್‌ಸಿ ನ್ಯಾಯಾಲಯದ ಆದೇಶವನ್ನು ಆಧರಿಸಿ ಕರ್ನಾಟಕದ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ನೀಡಿದ ನಿರ್ದೇಶನದಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಪಾರುಪತ್ತೇಗಾರ ಶ್ರೀಧರ್, ಅರ್ಚಕ ನಾರಾಯಣಭಟ್, ಅಡಿಗೆಮನೆ ಕೈಂಕರ್ಯಪರರಾದ ಎಂ.ಕೆ ರಾಮಸ್ವಾಮಿ ಅಯ್ಯಂಗಾರ್, ಅಧ್ಯಾಪಕರಾದ ಶ್ರೀರಂಗಂಶಲ್ವನಾರಾಯಣನ್, ವಿದ್ವಾನ್‌ ಬಿ.ವಿ.ಆನಂದ ಆಳ್ವಾರ್ ಸಮಕ್ಷಮದಲ್ಲಿ ಯೋಗಾನರಸಿಂಹಸ್ವಾಮಿ ದೇವಾಲಯದ ಒಳಭಾಗದ ಚಿಕ್ಕಗೋಪುರದ ಮೇಲಿದ್ದ ವಡಗಲೆ ನಾಮವನ್ನು ತೆಗೆದು ತೆಂಗಲೆ ನಾಮವನ್ನು ಹಾಕಿಸಿದರು.

ಮಹಾರಾಜರ ಸೂಚನೆ ನಂತರ

ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಾಲಯ ನಾಮದ ವಿವಾದಕ್ಕೆ ಎರಡು ಶತಮಾನದ ಇತಿಹಾಸವೇ ಇದೆ.

1814ರಲ್ಲಿ ಮೈಸೂರಿನ ಮಹಾರಾಜ ಶ್ರೀಕೃಷ್ಣರಾಜ ಒಡೆಯರ್‌ ಅವರು ದೇವಾಲಯ ತೆಂಗಲೆ ಸಂಪ್ರದಾಯವಾಗಿದ್ದು ದೇವರಿಗೆ ಮತ್ತು ಗೋಪುರಕ್ಕೆ ತೆಂಗಲೆನಾಮ ಹಾಕಬೇಕು ಎಂದು ಹುಕುಂ ಹೊರಡಿಸಿದ್ದರು. ಅದು ಜಾರಿಯಾಗಿತ್ತು. ಆದರೆ 1972ರಲ್ಲಿ ಕೋಲ್ಕತ್ತ ವಿಷ್ಣುದೇವಾಲಯಗಳ ಜೀರ್ಣೋದ್ಧಾರ ಟ್ರಸ್ಟ್ ಯೋಗಾನರಸಿಂಹನ ಬೆಟ್ಟದ ಜೀರ್ಣೋದ್ಧಾರ ಮಾಡುವ ವೇಳೆ ಮೈಸೂರಿನ ಪರಕಾಲಮಠದ ಪ್ರಭಾವದಿಂದ 1972ರ ಕೊನೆಯಲ್ಲಿ ಪಾಂಡವಪುರ ತಹಶೀಲ್ದಾರ್ ಚಿಕ್ಕಗೋಪುರಕ್ಕೆ ವಡಗಲೆನಾಮ ಹಾಕಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ತೆಂಗಲೆ ಸಂಪ್ರದಾಯದ ಆರ್.ಕೃಷ್ಣಯ್ಯಂಗಾರ್, ಅಳಹಿಯಮನವಾಳನ್, ಹಾಗೂ ಅಧ್ಯಾಪಕರು ನಿಯಮಬಾಹಿರವಾದ ತಹಶೀಲ್ದಾರ್ ಆದೇಶ ರದ್ದು ಮಾಡಿ ತೆಂಗಲೆ ನಾಮ ಅಳವಡಿಸಬೇಕು ಎಂದು 1973ರಲ್ಲಿ ಹೈಕೋರ್ಟ್‌ ಮೊರೆಹೋಗಿದ್ದರು. ಹೈಕೋರ್ಟ್‌ ಸಿವಿಲ್ ಕೋರ್ಟಿನಲ್ಲಿ ಪ್ರಕರಣ ಬಗೆಹರಿಸಿಕೊಳ್ಳುವಂತೆ ಆದೇಶ ನೀಡಿತ್ತು.

ಅರ್ಜಿದಾರರು 1973ರಲ್ಲಿ ಹೈಕೋರ್ಟ್‌ ಆದೇಶದಂತೆ ಪಾಂಡವಪುರ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಮೊರೆ ಹೋದರು. ವಿಚಾರಣೆ ನಡೆಸಿದ ಕಿರಿಯ ಸಿವಿಲ್ ನ್ಯಾಯಾಲಯ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದ ಯೋಗನರಸಿಂಹಸ್ವಾಮಿ ದೇವಾಲಯಗಳು ತೆಂಗಲೆ ಸಂಪ್ರದಾಯ ದೇಗುಲಗಳು ಎಂದು 2001ರಲ್ಲಿ ತೀರ್ಪು ನೀಡಿತು. ಆದರೆ ಯೋಗನರಸಿಂಹಸ್ವಾಮಿ ಬೆಟ್ಟದ ಚಿಕ್ಕ ಗೋಪುರದಲ್ಲಿದ್ದ ವಡಗಲೆ ನಾಮ ತೆಗೆಯಲು ಅವಕಾಶ ನೀಡಲಿಲ್ಲ. ಕಿರಿಯ ಸಿವಿಲ್ ನ್ಯಾಯಾಲಯದ ಆದೇಶವನ್ನು ಪಾಂಡವಪುರ ಹಿರಿಯ ಶ್ರೇಣಿಯ ಸಿವಿಲ್ಮತ್ತು ಜೆಎಂಎಪ್ಸಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಅರ್ಜಿದಾರರು 2002ರಲ್ಲಿ ಮೇಲ್ಮನವಿ ದಾಖಲಿಸಿದ್ದರು ಹಿರಿಯಶ್ರೇಣಿಯ ನ್ಯಾಯಾಲಯ 22ವರ್ಷಗಳ ಸುಧೀರ್ಘ ವಿಚಾರಣೆ ನಡೆಸಿ ಚಿಕ್ಕಗೋಪುರದ ಮೇಲೆ ಅಳವಡಿಸಿದ್ದ ವಡಗಲೆನಾಮ ತೆಗೆದು ಹಳೆಯ ಸಂಪ್ರದಾಯದ ತೆಂಗಲೆ ನಾಮ ಹಾಕಬೇಕು ಎಂದು ಆದೇಶ ನೀಡಿದೆ. ಇದರಿಂದಾಗಿ ಐದು ದಶಕಗಳ ಚಿಕ್ಕಗೋಪುರದ ನಾಮದ ವಿವಾದ ತಾರ್ಕಿಕ ಅಂತ್ಯ ಕಂಡಿದೆ. ಆದರೆ ಇದಕ್ಕೆ ಹೋರಾಟ ನಡೆಸಿದ್ದ ಅರ್ಜಿದಾರರಾದ ಕೃಷ್ಣಯ್ಯಂಗಾರ್ ,ಅಳಹಿಯಮಣವಾಳನ್, ಪ್ರತಿವಾದಿಗಳಾಗಿದ್ದ ಕಸ್ತೂರಿನಾರಾಯಣಯ್ಯಂಗಾರ್ ಜಿ.ವಿ.ಎನ್ ಆಚಾರ್ ನಿಧನಹೊಂದಿದ್ದಾರೆ. ಅವರ ಹೋರಾಟದ ಫಲವಾಗಿ ತೆಂಗಲೇ ನಾಮವೇ ಬಂದಿದೆ.

ನಾಮದಲ್ಲಿ ವ್ಯತ್ಯಾಸ ಹೇಗೆ

ಹಣೆಯ ಮೇಲೆ ಹಚ್ಚುವ ( ಲಲಾಟ ಲಾಂಛನ ) ಈ ಚಿಹ್ನೆಗಳಿಗೆ ( ತಿಲಕಗಳಿಗೆ ) ಪುಂಡ್ರವೆಂದು ಹೆಸರು. ತ್ರಿಪುಂಡ ಮತ್ತು ಊರ್ಧ್ವಪುಂಡ ಇದರ ಎರಡು ಪ್ರಭೇದಗಳು. ನಾಮ , ತಿರುನಾಮ, ತಿರುಮಣಿ , ಮೂರುನಾಮ, ಪಂಗನಾಮ ( ಪಂಗ = ಕವಲು ) ಇವೆಲ್ಲ ಶ್ರೀ ವೈಷ್ಣವರ ನಾಮಗಳು. ಊರ್ಧ್ವಪುಂಡ್ರ ನಾಮಧಾರಣೆಯ ಆಕಾರಕ್ಕೆ ಅನುಗುಣವಾಗಿ ತೆಂಗಲೆ - ವಡಗಲೆ ಎಂದು ಅದರಲ್ಲಿ ಎರಡು ಪ್ರಭೇದಗಳಿವೆ. ಗೋಪಿಚಂದನ, ಮುದ್ರೆ , ಅಂಗಾರಾಕ್ಷತೆಗಳು ವೈಷ್ಣವರ ಲಲಾಟ ಲಾಂಛನಗಳು. ನಾಮದ ಮಧ್ಯೆದಲ್ಲಿ ವೈ ಆಕಾರರೊಂದಿಗೆ ಹಳದಿ ಬಣ್ಣದಲ್ಲಿದ್ದರೆ ಅದು ತೆಂಗಲೆ, ಯು ಆಕಾರದೊಂದಿಗೆ ಕೆಂಪು ಬಣ್ಣದಲ್ಲಿದ್ದರೆ ಅದು ವಡಗಲೆ ಎಂದು ಗುರುತಿಸಲಾಗುತ್ತದೆ.

Whats_app_banner