MUDA Scam: ಯಾವುದೇ ಕ್ಷಣದಲ್ಲಿ ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ; ಯತೀಂದ್ರ ಸಿದ್ದರಾಮಯ್ಯ ಸುಳಿವು
Muda Land Case: ಮುಡಾ ಅಧ್ಯಕ್ಷ ಕೆ ಮರಿಗೌಡ ಅವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಈ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ. ಅಲ್ಲದೆ, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರೂ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಮೈಸೂರು: ಯಾವುದೇ ಕ್ಷಣದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ ಮರೀಗೌಡ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಮುಡಾಗೆ ಆಡಳಿತಾಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಮುಡಾದಲ್ಲಿ 50:50ರ ಅನುಪಾತ ಅಡಿಯಲ್ಲಿ ನಿವೇಶನ ಹಂಚಿಕೆಯಲ್ಲಿ ಬಹುಕೋಟಿ ಹಗರಣ ಪ್ರಕರಣದ ಪರಿಣಾಮ ಈ ನಿರ್ಧಾರಕ್ಕೆ ಬಂದಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷ ತೀವ್ರ ಮುಜುಗರಕ್ಕೆ ಸಿಲುಕಿದೆ. ಹಾಗಾಗಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೆ ಮರೀಗೌಡಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಈ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ. ಅಲ್ಲದೆ, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರೂ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಮುಡಾ ಅಧ್ಯಕ್ಷ ಸ್ಥಾನಕ್ಕೆ ಕೆ ಮರೀಗೌಡ ರಾಜೀನಾಮೆ ಸಾಧ್ಯತೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಡಾ ಯತೀಂದ್ರ ಅವರು, ಮುಡಾದಲ್ಲಿ ಅವ್ಯವಹಾರ, ಅವ್ಯವಸ್ಥೆ ಸ್ವಚ್ಛಗೊಳಿಸಬೇಕಿದೆ. ಮುಡಾ ಸ್ವಚ್ಛಗೊಳಿಸಲು ಮುಖ್ಯಮಂತ್ರಿಗಳು ತೀರ್ಮಾನ ಮಾಡಿದ್ದಾರೆ. ಅದಕ್ಕಾಗಿಯೇ ಕೆಂಪಣ್ಣ ಆಯೋಗ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಮುಡಾದಲ್ಲಿ ಅವ್ಯವಹಾರವಾಗದಂತೆ ನೋಡಿಕೊಳ್ಳಲು ಸರ್ಕಾರ ಬದ್ದವಾಗಿದೆ. ಮುಡಾ ಅಧ್ಯಕ್ಷ ಕೆ ಮರೀಗೌಡ ರಾಜೀನಾಮೆ ಕೊಡುವ ವಿಚಾರ ನನಗೆ ಗೊತ್ತಿಲ್ಲ. ಆದರೆ, ಸಿಎಂ ಮುಡಾ ಸ್ವಚ್ಛಗೊಳಿಸುವ ಬಗ್ಗೆ ಚಿಂತನೆ ಮಾಡಿದ್ದಾರೆ ಎಂದು ಮರಿಗೌಡ ರಾಜೀನಾಮೆ ನೀಡುವ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ.
ಹೈಕಮಾಂಡ್ ತೀರ್ಮಾನಿಸಲಿದೆ ಎಂದ ಯತೀಂದ್ರ
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನಿಂದ ಅಭ್ಯರ್ಥಿ ಯಾರಾಗಬೇಕೆಂದು ಪಕ್ಷ ತೀರ್ಮಾನ ಮಾಡಲಿದೆ. ಇಂತಹ ಅಭ್ಯರ್ಥಿಯೇ ಆಗಬೇಕು ಎಂದು ನಾನು ಹೇಳುವುದಿಲ್ಲ. ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಿಕೊಂಡು ಬರಲು ಕೆಲಸ ಮಾಡುತ್ತೇವೆ. ಪಕ್ಷದ ಅಭ್ಯರ್ಥಿಯ ಪರ ಪ್ರಚಾರಕ್ಕೆ ಹೋಗುತ್ತೇವೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪರ್ಧೆಯ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈ ಬಾರಿ ಬಹಳ ಅದ್ದೂರಿಯಾಗಿ ದಸರಾ ಆಚರಣೆ ಮಾಡುವಂತೆ ಸಿಎಂ ಅವರೇ ಸೂಚಿಸಿದ್ದರು. ಕಳೆದ ಬಾರಿ ಬರಗಾಲದ ಕಾರಣ ಸರಳ ದಸರಾ ಆಚರಣೆ ಮಾಡಲಾಗಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆಗೆ ಸರ್ಕಾರ ಸೂಚಿಸಿದ ಹಿನ್ನೆಲೆ ಒಳ್ಳೆಯ ಕಾರ್ಯಕ್ರಮಗಳನ್ನು ಕೊಡುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡಲಾಯಿತು. ಅದ್ದೂರಿ ದಸರಾ ಆಚರಣೆಯ ಕ್ರೆಡಿಟ್ ಎಲ್ಲಾ ಜಿಲ್ಲಾಡಳಿತ, ಪೋಲಿಸರಿಗೆ ಸಲ್ಲಬೇಕು. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.