ಮೈಸೂರು ದಸರಾ 2024: ಫಲತಾಂಬೂಲ ಕೊಟ್ಟು ರಾಜಮನೆತನವನ್ನು ಆಹ್ವಾನಿಸಿದ ಸಚಿವ ಹೆಚ್​​​ಸಿ ಮಹದೇವಪ್ಪ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ದಸರಾ 2024: ಫಲತಾಂಬೂಲ ಕೊಟ್ಟು ರಾಜಮನೆತನವನ್ನು ಆಹ್ವಾನಿಸಿದ ಸಚಿವ ಹೆಚ್​​​ಸಿ ಮಹದೇವಪ್ಪ

ಮೈಸೂರು ದಸರಾ 2024: ಫಲತಾಂಬೂಲ ಕೊಟ್ಟು ರಾಜಮನೆತನವನ್ನು ಆಹ್ವಾನಿಸಿದ ಸಚಿವ ಹೆಚ್​​​ಸಿ ಮಹದೇವಪ್ಪ

Mysore Dasara 2024: ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್​ಸಿ ಮಹದೇವಪ್ಪ ಅವರು ದಸರಾ ಉತ್ಸವಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.

ಫಲತಾಂಬೂಲ ಕೊಟ್ಟು ರಾಜಮನೆತನವನ್ನು ಆಹ್ವಾನಿಸಿದ ಸಚಿವ ಹೆಚ್​​​ಸಿ ಮಹದೇವಪ್ಪ
ಫಲತಾಂಬೂಲ ಕೊಟ್ಟು ರಾಜಮನೆತನವನ್ನು ಆಹ್ವಾನಿಸಿದ ಸಚಿವ ಹೆಚ್​​​ಸಿ ಮಹದೇವಪ್ಪ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ರಾಜ್ಯ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್​ಸಿ ಮಹದೇವಪ್ಪ ಅವರು ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ ನೀಡಿದರು. ಸೆಪ್ಟೆಂಬರ್ 29ರ ಭಾನುವಾರ ಅರಮನೆ ನಿವಾಸದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾಗಿ ಸಾಂಪ್ರದಾಯಿಕವಾಗಿ ಫಲತಾಂಬೂಲ ನೀಡಿ ದಸರಾ ಉತ್ಸವಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು. ಇದೇ ವೇಳೆ ಸರ್ಕಾರದಿಂದ ಪ್ರತಿವರ್ಷ ನೀಡಲಾಗುವ ಗೌರವಧನದ ಚೆಕ್ ನೀಡಿದರು.

ಯುವ ದಸರಾ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದ ಮಹದೇವಪ್ಪ

ನಗರದ ಹೊರವಲಯದ ಉತ್ತನಹಳ್ಳಿ ಸಮೀಪದಲ್ಲಿ ನಡೆಯುವ ಯುವ ದಸರಾ ಕಾರ್ಯಕ್ರಮ ಸ್ಥಳವನ್ನು ಹೆಚ್​​ಸಿ ಮಹದೇವಪ್ಪ ಪರಿಶೀಲಿಸಿದರು. ಕಾರ್ಯಕ್ರಮದ ಆಯೋಜನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು, ನಾಡಹಬ್ಬ ದಸರಾ ಮಹೋತ್ಸವದಲ್ಲಿ ನಡೆಯುವ ಆಕರ್ಷಕ ಕಾರ್ಯಕ್ರಮಗಳಲ್ಲಿ ಯುವ ದಸರಾ ಪ್ರಮುಖವಾಗಿದ್ದು, ಮೈಸೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಜನರು ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವರು. ಹೀಗಾಗಿ ಅಗತ್ಯ ಸೌಲಭ್ಯವನ್ನು ಕಲ್ಪಿಸುವಂತೆ ಸೂಚಿಸಿದರು.

ಯುವ ದಸರಾಗೆ ಸಹಸ್ರಾರು ಸಂಖ್ಯೆಯಲ್ಲಿ ಯುವಜನರು ಆಗಮಿಸಿ ಸಂಭ್ರಮಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದರಿಂದ ಯಾವುದೇ ಅನಾನುಕೂಲ ಉಂಟಾಗದಂತೆ ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. ನಗರದಿಂದ ಬರುವ ದಾರಿಯುದ್ದಕ್ಕೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೀದಿದೀಪದ ವ್ಯವಸ್ಥೆ ಮಾಡಬೇಕು. ವಾಹನ ಪಾರ್ಕಿಂಗ್ ಸ್ಥಳದಲ್ಲಿ ವ್ಯವಸ್ಥಿತವಾಗಿ ನಿಲ್ಲಿಸಲು ಸೂಚನಾ ಫಲಕ ಅಳವಡಿಸಿ ಮಾರ್ಗದರ್ಶನ ನೀಡಬೇಕು ಎಂದರು.

ಬಹುಮುಖ್ಯವಾಗಿ ಮಹಿಳೆಯರು ಹೆಚ್ಚಿನ ಭದ್ರತೆ ಒದಗಿಸಬೇಕು. ರಾತ್ರಿ ವೇಳೆ ಕಾರ್ಯಕ್ರಮ ನಡೆಯುವುದರಿಂದ ಎಲ್ಲಾ ಬಗೆಯ ಅಗತ್ಯ ಮುಂಜಾಗೃತ ಕ್ರಮ ಅನುಸರಿಸಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ನಗ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಉಪ ವಿಭಾಗಧಿಕಾರಿ ಕೆ.ಆರ್.ರಕ್ಷಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Whats_app_banner