Mysore Dasara Tour Plan: ಮೈಸೂರು ದಸರಾ ಎಷ್ಟೊಂದು ಸುಂದರ; ನಾಡಹಬ್ಬ ಹತ್ತಿರದಿಂದ ನೋಡಲು ನಿಮ್ಮ ಪ್ರವಾಸ ಯೋಜನೆ ಹೀಗೆ ಮಾಡಿಕೊಳ್ಳಿ-mysore dasara 2024 mysore dasara begin on 2024 october 3 jamboo savari on 12 plan for dasara early with travel hotel kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara Tour Plan: ಮೈಸೂರು ದಸರಾ ಎಷ್ಟೊಂದು ಸುಂದರ; ನಾಡಹಬ್ಬ ಹತ್ತಿರದಿಂದ ನೋಡಲು ನಿಮ್ಮ ಪ್ರವಾಸ ಯೋಜನೆ ಹೀಗೆ ಮಾಡಿಕೊಳ್ಳಿ

Mysore Dasara Tour Plan: ಮೈಸೂರು ದಸರಾ ಎಷ್ಟೊಂದು ಸುಂದರ; ನಾಡಹಬ್ಬ ಹತ್ತಿರದಿಂದ ನೋಡಲು ನಿಮ್ಮ ಪ್ರವಾಸ ಯೋಜನೆ ಹೀಗೆ ಮಾಡಿಕೊಳ್ಳಿ

Mysore Dasara Travel ನಾಡಹಬ್ಬ ಮೈಸೂರು ದಸರಾ ವೀಕ್ಷಣೆಗೆ ಈಗಿನಿಂದಲೇ ನೀವು ಯೋಜಿಸಿಕೊಳ್ಳಬಹುದು. ಹೀಗಿರಲಿ ನಿಮ್ಮ ಪ್ರವಾಸದ ಯೋಜನೆ

Dasara Tour ಮೈಸೂರು ದಸರಾವನ್ನು ವೀಕ್ಷಿಸಲು ತಯಾರಿ ಬೇಕೇ ಬೇಕು,
Dasara Tour ಮೈಸೂರು ದಸರಾವನ್ನು ವೀಕ್ಷಿಸಲು ತಯಾರಿ ಬೇಕೇ ಬೇಕು,

ಮೈಸೂರು ದಸರಾ ಎಷ್ಟೊಂದು ಸುಂದರ. ಚೆಲ್ಲಿದೆ ನಗೆಯ ಪನ್ನೀರಾ ಎನ್ನುವ ಹಾಡು ಕೇಳದವರಿಲ್ಲ. ಜತೆ ಜತೆಯಲ್ಲಿ ದಸರಾ ವೈಭವ ಹಾಗೂ ವೈಭೋಗಕ್ಕೆ ಮನಸೋಲದವರಿಲ್ಲ. ಪ್ರತಿಯೊಬ್ಬರಿಗೂ ಮೈಸೂರು ದಸರಾದ ಸೊಬಗನ್ನು ಕಣ್ತುಂಬಿಕೊಳ್ಳುವ ತವಕ. ಸಾಲಂಕೃತ ಆನೆ ಮೇಲೆ ಚಾಮುಂಡೇಶ್ವರಿ ದೇವಿ ಮೂರ್ತಿ ಕೂರಿಸಿ ನಡೆಸುವ ವಿಶ್ವ ವಿಖ್ಯಾತ ಜಂಬೂ ಸವಾರಿಯೂ ಅಷ್ಟೇ ಪ್ರಮುಖವಾದದ್ದು. ದಸರೆ ಎಂದರೆ ಅದು ಸಾಂಸ್ಕೃತಿಕ ಹಬ್ಬ. ಪ್ರವಾಸಿಗರಿಗೆ ಪ್ರಮುಖ ತಾಣ. ಮೈಸೂರು ದಸರಾಗೆ ನಾಡಿನಿಂದ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಿಂದಲೂ ಪ್ರವಾಸಿಗರು ಬರುತ್ತಾರೆ. ಈ ಕಾರಣದಿಂದಲೇ ಮೈಸೂರು ದಸರಾ ನೋಡಲು ಮೊದಲೇ ಯೋಜನೆ ಮುಖ್ಯ. ಈ ಬಾರಿ ದಸರೆ ಆರಂಭಕ್ಕೆ ಇನ್ನೂ 46 ದಿನಗಳಿವೆ. ಜಂಬೂಸವಾರಿಗೆ 56 ದಿನಗಳ ಸಮಯವಿದೆ. ಈಗಿನಿಂದಲೇ ಕಾರ್ಯಕ್ರಮವ ವೀಕ್ಷಣೆ, ತಂಗುವ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು. ಅದರಲ್ಲೂ ದಸರಾ ಈ ವೇಳೆ ಈ ಬಾರಿ ಮೂರು ದಿನ ಸತತ ರಜೆ ಇದೆ. ಮೊದಲ ಹಾಗೂ ಇನ್ನೊಂದು ದಿನ ರಜೆ ಹಾಕಿಕೊಂಡರೂ ಐದು ದಿನ ದಸರಾ ಜತೆಗೆ ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನೂ ವೀಕ್ಷಿಸಬಹುದು.

ದಸರಾ ಯಾವ ದಿನ ಇದೆ

ಅಕ್ಟೋಬರ್‌ 3 ಗುರುವಾರ ಶರನ್ನವರಾತ್ರಿ ಆರಂಭ

ಅಕ್ಟೋಬರ್‌ 4 ಶುಕ್ರವಾರ

ಅಕ್ಟೋಬರ್‌ 5 ಶನಿವಾರ

ಅಕ್ಟೋಬರ್‌ 6 ಭಾನುವಾರ ಭಾನುವಾರ ರಜಾ

ಅಕ್ಟೋಬರ್‌ 7 ಸೋಮವಾರ

ಅಕ್ಟೋಬರ್‌ 8 ಮಂಗಳವಾರ

ಅಕ್ಟೋಬರ್‌ 9 ಬುಧವಾರ

ಅಕ್ಟೋಬರ್‌ 10 ಗುರುವಾರ

ಅಕ್ಟೋಬರ್‌ 11 ಶುಕ್ರವಾರ ಮಹಾನವಮಿ

ಅಕ್ಟೋಬರ್‌ 12 ಎರಡನೇ ಶನಿವಾರ ವಿಜಯದಶಮಿ

ಅಕ್ಟೋಬರ್‌ 13 ಭಾನುವಾರ ರಜಾ

ನಿಮ್ಮ ಯೋಜನೆ ಹೀಗಿದ್ದರೆ ಚೆನ್ನಾ..

  • ದಸರಾದ ಆರಂಭದ ದಿನ ಮೈಸೂರಿನ ಚಾಮುಂಡಿಬೆಟ್ಟ ಹಾಗೂ ಅರಮನೆಯಲ್ಲಿ ವಿಶೇಷ. ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಶರನ್ನವರಾತ್ರಿಗೆ ಚಾಲನೆ ಸಿಗಲಿದೆ. ಅದೇ ದಿನ ಅರಮನೆಯಲ್ಲೂ ರಾಜವಂಶಸ್ಥರ ಖಾಸಗಿ ದರ್ಬಾರ್‌ ಶುರುವಾಗಲಿದೆ. ದಸರಾದ ಮೊದಲ ದಿನವೇ ನಾನಾ ಚಟುವಟಿಕೆಗಳು ಆರಂಭ. ದಸರಾ ಚಲನಚಿತ್ರೋತ್ಸವ, ವಸ್ತು ಪ್ರದರ್ಶನ. ಆಹಾರ ಮೇಳ, ಕುಸ್ತಿ, ಫಲಪುಷ್ಪ ಪ್ರದರ್ಶನ, ರಂಗಾಯಣ ರಂಗೋತ್ಸವ, ಪುಸ್ತಕ ಮೇಳ, ವಿದ್ಯುತ್‌ ಅಲಂಕಾರ ಸಹಿತ ಹತ್ತಾರು ಕಾರ್ಯಕ್ರಮಗಳು ತೆರೆದುಕೊಳ್ಳಲಿವೆ. ಸಂಜೆ ಅರಮನೆಯಲ್ಲಿ ರಾಜವಂಶಸ್ಥರ ಖಾಸಾ ದರ್ಬಾರ್‌ ಇದ್ದರೆ, ಹೊರ ಆವರಣದಲ್ಲಿ ಬೆಳಕಿನ ವೈಭವದ ನಡುವೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿವೆ. ಇದರಿಂದ ದಸರಾ ಆರಂಭದ ದಿನವಾದ ಅಕ್ಟೋಬರ್‌ 3ರಂದು ಒಂದು ದಿನ ಪ್ರವಾಸಕ್ಕೆ ಬಂದು ಹೋಗಬಹುದು.
  • ಆನಂತರದ ದಿನಗಳಲ್ಲಿ ದಸರಾ ಅಂಗವಾಗಿ ಆಯೋಜನೆಗೊಳ್ಳುವ ಮಹಿಳಾ, ಮಕ್ಕಳ, ಕೃಷಿ ದಸರಾ ಚಟುವಟಿಕೆ, ಏರ್‌ ಶೋ, ಹೆರಿಟೇಜ್‌ ವಾಕ್‌, ಯುವ ದಸರಾದ ಸಡಗರವು ಒಂದಿಲ್ಲೊಂದು ಚಟುವಟಿಕೆಗಳಿಂದ ಆಕರ್ಷಿಸಲಿವೆ.
  • ಭಾನುವಾರ ರಜೆಯಾದ್ದರಿಂದ ಅಂದು ದಿನವಿಡೀ ಚಟುವಟಿಕೆ ಇರಲಿವೆ. ಅಂದು ಸಂಜೆವರೆಗೂ ಅರಮನೆ, ಚಾಮುಂಡಿಬೆಟ್ಟ, ಮೃಗಾಲಯದಂತಹ ಪ್ರವಾಸಿ ತಾಣ ವೀಕ್ಷಿಸಿ ಸಂಜೆ ಐದಾರು ಕಡೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲವೇ ನಾಟಕ ವೀಕ್ಷಿಸಬಹುದು.
  • ಸೋಮವಾರದಿಂದ ಗುರುವಾರದವರೆಗೂ ಒಂದಿಲ್ಲೊಂದು ಚಟುವಟಿಕೆಗಳು ದಸರಾದ ಭಾಗವಾಗಿ ಇರಲಿವೆ. ಸ್ಪರ್ಧೆಗಳಲ್ಲೂ ಭಾಗಿಯಾಗಬಹುದು.
  • ಅಕ್ಟೋಬರ್‌12 ಮತ್ತು 13ರ ಶುಕ್ರವಾರ, ಶನಿವಾರ ಮುಖ್ಯ ಕಾರ್ಯಕ್ರಮಗಳು, ಶುಕ್ರವಾರ ಅರಮನೆ ಅಂಗಳದಲ್ಲಿ ಜಂಬೂ ಸವಾರಿ ಹಾಗೂ ಬನ್ನಿ ಮಂಟಪ ಕವಾಯತು ಮೈದಾನದಲ್ಲಿ ಪಂಜಿನ ಕವಾಯತು ಇರಲಿದೆ. ಅಂದೂ ಈ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಅರಮನೆ ಅಂಗಳದಲ್ಲಿ ರಾಜವಂಶಸ್ಥರ ಧಾರ್ಮಿಕ ವಿಧಿ ವಿಧಾನಗಳು, ಜಟ್ಟಿಗಳ ಕಾಳಗ,ಬನ್ನಿಮುಡಿಯುವ ಚಟುವಟಿಕೆಗಳು ಆಕರ್ಷಕ.
  • ವಿಜಯದಶಮಿ ದಿನದಂದು ಬೆಳಿಗ್ಗೆಯೇ ಅರಮನೆ ಪ್ರವೇಶಿಸಿ ಜಂಬೂ ಸವಾರಿ ವೀಕ್ಷಿಸಲು ಅಣಿಯಾಗಬೇಕು. ಇದಕ್ಕೆ ಪಾಸ್‌ ಕಡ್ಡಾಯ. ಅದಕ್ಕೆ ಯೋಜಿಸಿಕೊಳ್ಳಬಹುದು. ಪಾಸ್‌ ಇಲ್ಲದೇ ಇದ್ದರೂ ಸುಮಾರು ಐದು ಕಿ.ಮಿ ಸಂಚರಿಸುವ ಜಂಬೂಸವಾರಿ ರಸ್ತೆ ಇಕ್ಕೆಲದಲ್ಲೂ ವೀಕ್ಷಿಸಲು ಅವಕಾಶವಿದೆ. ಅಂದೇ ಸಂಜೆ ಪಂಜಿನ ಕವಾಯತು, ಮೈ ನವಿರೇಳಿಸುವ ಸೇನಾ ಪಡೆಯ ಸಾಹಸಗಳು, ಲೇಸರ್‌ ಶೋ ಕೂಡ ವಿಶೇಷವಾಗಿರಲಿವೆ. ಇದಕ್ಕೂ ಪಾಸ್‌ ಕಡ್ಡಾಯ.
  • ದಸರಾ ಖಾಸಗಿ ದರ್ಬಾರ್‌ ವೀಕ್ಷಣೆಗೆ ಅರಮನೆಯವರಿಂದ ಅನುಮತಿ ಪಡೆದುಕೊಳ್ಳಬೇಕು.
  • ಮೈಸೂರು ಸುತ್ತಮುತ್ತಲ ಪ್ರವಾಸಿ ತಾಣ ವೀಕ್ಷಣೆಗೆ ಜಲದರ್ಶಿನಿ, ದೇವದರ್ಶಿನಿ, ಗಿರಿ ದರ್ಶಿನಿ ಸಹಿತ ನಾನಾ ಪ್ರವಾಸ ಸೌಲಭ್ಯಗಳನ್ನು ಕೆಎಸ್‌ಆರ್‌ಟಿಸಿ ಒದಗಿಸಲಿವೆ. ಈ ಪ್ರವಾಸಕ್ಕೂ ಅವಕಾಶವಿದೆ.
  • ಮೈಸೂರಿನಲ್ಲಿ ದಸರಾ ವೇಳೆ ವಿದ್ಯುತ್‌ ದೀಪಾಲಂಕಾರ ವೀಕ್ಷಿಸಲು ಕೆಎಸ್‌ಟಿಸಿಡಿ ಬಸ್‌ ಡಬ್ಬಲ್‌ ಡೆಕ್ಕರ್‌ ಬಸ್‌ ವ್ಯವಸ್ಥೆಯನ್ನು ಮಾಡಲಿದ್ದು. ಒಂದು ಗಂಟೆ ಯಾನವೂ ಮನಮೋಹಕವೇ.
  • ನಿಮ್ಮ ಹೊಟೇಲ್‌, ಬಸ್‌, ರೈಲು ಟಿಕೆಟ್‌ ಅನ್ನು ದಸರಾ ಯೋಜನೆಯಂತೆ ಈಗಲೇ ಬುಕ್‌ ಮಾಡಿಕೊಳ್ಳಿ. ವಸತಿ ದರ ಈಗ ಕಡಿಮೆಯಾಗಿರಲಿದೆ. ದಸರಾ ಹತ್ತಿರ ಬಂದಾಗ ದರ ಮೂರು ಪಟ್ಟು ಏರಿ ವಸತಿಯೂ ಸಿಗದೇ ಇರಬಹುದು. ಮೈಸೂರು ಸುತ್ತಮುತ್ತಲ ಪ್ರವಾಸಕ್ಕೆ ಕ್ಯಾಬ್‌ ಕೂಡ ಬುಕ್‌ ಮಾಡಿಕೊಳ್ಳಬಹುದು.
  • ಮೈಸೂರು ಮೃಗಾಲಯ, ಅರಮನೆ ಸಹಿತ ಹಲವು ಕಡೆಗಳಲ್ಲಿ ಆನ್‌ಲೈನ್‌ನಲ್ಲಿಯೇ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆಯಿದೆ. ಅದನ್ನೂ ಈಗಲೇ ಯೋಜಿಸಿಕೊಳ್ಳಬಹುದು.

ಮೈಸೂರು ದಸರಾ ಎಷ್ಟೊಂದು ಸುಂದರ ಎನ್ನುವ ಹಾಗೆ ನೀವು ವೀಕ್ಷಿಸುವ ದಸರಾವೂ ನಿಮಗೆ ಸುಂದರ ನೆನಪುಗಳನ್ನು ಉಳಿಸಲು ಯೋಜನೆ ನಿಖರವಾಗಿರಲಿ.