Mysore Muda Scam: ಮೈಸೂರು ಮುಡಾ ಅಧ್ಯಕ್ಷ ಸ್ಥಾನ ತೊರೆದ ಸಿದ್ದರಾಮಯ್ಯ ಕಟ್ಟಾ ಶಿಷ್ಯ: ಮರೀಗೌಡ ರಾಜೀನಾಮೆಗೆ ಕಾರಣ ಏನು
ಕನ್ನಡ ಸುದ್ದಿ  /  ಕರ್ನಾಟಕ  /  Mysore Muda Scam: ಮೈಸೂರು ಮುಡಾ ಅಧ್ಯಕ್ಷ ಸ್ಥಾನ ತೊರೆದ ಸಿದ್ದರಾಮಯ್ಯ ಕಟ್ಟಾ ಶಿಷ್ಯ: ಮರೀಗೌಡ ರಾಜೀನಾಮೆಗೆ ಕಾರಣ ಏನು

Mysore Muda Scam: ಮೈಸೂರು ಮುಡಾ ಅಧ್ಯಕ್ಷ ಸ್ಥಾನ ತೊರೆದ ಸಿದ್ದರಾಮಯ್ಯ ಕಟ್ಟಾ ಶಿಷ್ಯ: ಮರೀಗೌಡ ರಾಜೀನಾಮೆಗೆ ಕಾರಣ ಏನು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಗರಣದ ತನಿಖೆ ತೀವ್ರ ಸ್ವರೂಪ ಪಡೆಯುತ್ತಿರುವಂತೆಯೇ ಪ್ರಾಧಿಕಾರ ಅಧ್ಯಕ್ಷ ಹಾಗೂ ಸಿಎಂ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ಕೆ.ಮರೀಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಶಿಷ್ಯ ಕೆ.ಮರೀಗೌಡ ರಾಜೀನಾಮೆ ನೀಡಿದ್ದಾರೆ.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಶಿಷ್ಯ ಕೆ.ಮರೀಗೌಡ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಬದಲಿ ನಿವೇಶನದ ತನಿಖೆಯ ಸುಳಿಗೆ ಸಿಲುಕಿರುವ ನಡುವೆ, ಸಿದ್ದರಾಮಯ್ಯ ಅವರ ನಾಲ್ಕು ದಶಕಕ್ಕೂ ಮಿಗಿಲಾದ ಕಟ್ಟಾ ಶಿಷ್ಯ ಹಾಗೂ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರೀಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಬೆಂಗಳೂರಿಗೆ ತೆರಳಿದ ಮರೀಗೌಡ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಮುಡಾ ಅಧ್ಯಕ್ಷರಾಗಿ ಮೈಸೂರು ಪ್ರಾದೇಶಿಕ ಆಯುಕ್ತರು ಇಲ್ಲವೇ ಮೈಸೂರು ಜಿಲ್ಲಾಧಿಕಾರಿ ನಿಯೋಜಿಸುವ ಸಾಧ್ಯತೆಯಿದೆ. ಇಲ್ಲವೇ ಹಿರಿಯ ಅಧಿಕಾರಿಯೊಬ್ಬರನ್ನು ಮುಡಾ ಆಡಳಿತಾಧಿಕಾರಿಯಾಗಿ ನಿಯೋಜಿಸಿ ಆಡಳಿತದಲ್ಲಿ ಬಿಗಿ ತರಲು ಸರ್ಕಾರ ಮುಂದಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಕೆಲವು ದಿನಗಳಿಂದ ಮರೀಗೌಡ ವಿರುದ್ದ ಕಾಂಗ್ರೆಸ್‌ನಲ್ಲಿಯೇ ಅಸಮಾಧಾನ ಎದ್ದಿತ್ತು. ಈ ಹಿನ್ನೆಲೆಯಲ್ಲಿ ಅವರು ಮುಡಾ ಅಧ್ಯಕ್ಷ ಸ್ಥಾನ ತೊರೆಯಬಹುದು ಎನ್ನುವ ಸೂಚನೆಯಿತ್ತು.ಖುದ್ದು ಸಿಎಂ ಅವರ ಸೂಚನೆ ಮೇರೆಗೆ ಮರೀಗೌಡ ಈ ಸ್ಥಾನ ತೊರೆದಿದ್ಧಾರೆ ಎನ್ನುವ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬಂದಿವೆ.

ನನ್ನ ಆರೋಗ್ಯದ ಕಾರಣದಿಂದ ನಾನು ರಾಜೀನಾಮೆಯನ್ನು ನೀಡಿದ್ದೇನೆ. ಕೆಲವು ದಿನಗಳಿಂದ ಆರೋಗ್ಯ ಸರಿಯಲ್ಲದೇ ಆಸ್ಪತ್ರೆಯಲ್ಲಿದ್ದೆ. ಸಿಎಂ ಅವರಾಗಲಿ, ಬೇರೆ ಯಾರೂ ನನಗೆ ರಾಜೀನಾಮೆ ನೀಡುವಂತೆ ಸೂಚಿಸಿಲ್ಲ. ಸಿದ್ದರಾಮಯ್ಯ ಹಾಗೂ ನನ್ನ ಬಾಂಧವ್ಯ ಈಗಲೂ ಚೆನ್ನಾಗಿದೆ ಎಂದು ಮರೀಗೌಡ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ರಾಜೀನಾಮೆ ಏಕೆ ಕೊಟ್ಟಿರಬೇಕು

  • ಈ ವರ್ಷದ ಆರಂಭದಲ್ಲಿಯೇ ಮುಡಾ ಅಧ್ಯಕ್ಷರನ್ನಾಗಿ ಮೂರು ವರ್ಷದ ಅವಧಿಗೆ ಕೆ.ಮರೀಗೌಡ ಅವರನ್ನು ನೇಮಿಸಲಾಗಿತ್ತು. ಅವರು ಮಾರ್ಚ್‌ನಲ್ಲಿ ಅಧಿಕಾರ ಸ್ವೀಕರಿಸಿ ದ್ದರು. ಏಳೇ ತಿಂಗಳಲ್ಲಿ ಅಧಿಕಾರವನ್ನು ತ್ಯಜಿಸಿದ್ದಾರೆ.
  • ಮರೀಗೌಡ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತ. ನಾಲ್ಕು ದಶಕದಿಂದಲೂ ಸಿದ್ದರಾಮಯ್ಯ ಅವರೊಂದಿಗೆ ಇದ್ದಾರೆ. ಈ ಕಾರಣದಿಂದ ಅವರಿಗೆ ಮುಡಾ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಈಗ ಏಕಾಏಕಿ ಅಧಿಕಾರ ಕಳೆದುಕೊಂಡಿದ್ದಾರೆ.
  • ಮುಡಾ ಅಧ್ಯಕ್ಷರಾದ ಬಳಿಕ ಮರೀಗೌಡ ಅವರು ಬದಲಿ ನಿವೇಶನದ ವಿಚಾರದಲ್ಲಿ ಹಿಂದಿನ ಆಯುಕ್ತ ದಿನೇಶ್‌ ಕುಮಾರ್‌ ನಡೆದುಕೊಂಡ ರೀತಿ ಬಗ್ಗೆ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದೇ ಮುಳುವಾಗಿರಬೇಕು ಎನ್ನುವ ಚರ್ಚೆಗಳು ಇವೆ.

    ಇದನ್ನೂ ಓದಿರಿ: ಸಿದ್ದರಾಮಯ್ಯ ಖಡಕ್‌ ಪ್ರಶ್ನೆ: ನಾನೇಕೆ ರಾಜೀನಾಮೆ ನೀಡಲಿ, ಇದಕ್ಕೂ ಮೊದಲು ಕೇಂದ್ರ ಸಚಿವ ಕುಮಾರಸ್ವಾಮಿ ರಾಜೀನಾಮೆ ಕೇಳಿ
  • ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆ ಬೇಕಾಬಿಟ್ಟಿ ಮಾಡಬೇಡಿ. ನಿಮ್ಮ ಹಂತದಲ್ಲೇ ಎಲ್ಲಾ ತೀರ್ಮಾನ ಆಗುವುದು ಬೇಡ. ಮುಡಾ ಸಭೆಯಲ್ಲಿ ಇದನ್ನು ಇಡಬೇಕು ಎನ್ನುವ ಅಂಶವನ್ನು ಮರೀಗೌಡ ಪತ್ರದಲ್ಲಿ ಉಲ್ಲೇಖಿಸಿದ್ದರು
  • ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಹದಿನಾಲ್ಕು ಬದಲಿ ನಿವೇಶನ ನೀಡಿದ ವಿಚಾರದಲ್ಲಿ ಆಗಿರುವ ವ್ಯತ್ಯಾಸವನ್ನು ಉಲ್ಲೇಖಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
  • ಪ್ರತಿಪಕ್ಷಗಳು ಮರೀಗೌಡ ಅವರ ಬರೆದ ಪತ್ರವನ್ನೇ ಉಲ್ಲೇಖಿಸಿ ಸಿಎಂ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು. ಇದು ಸಿದ್ದರಾಮಯ್ಯ ಅವರಿಗೆ ಮುಜುಗುರ ತಂದಿತ್ತು. ಅಲ್ಲದೇ ಇಡಿ ಹಂತದ ತನಿಖೆಗೂ ಹೋಗಿದೆ. ಇದರಿಂದ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕುವ ಸನ್ನಿವೇಶ ಎದುರಾಯಿತು.
  • ಮುಡಾದಲ್ಲಿ ವ್ಯತ್ಯಾಸಗಳಿದ್ದರೆ, ಆಡಳಿತ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತರಬೇಕಿತ್ತು. ಅದನ್ನು ಬಿಟ್ಟು ನಿವೇಶನ ಪ್ರಕರಣ ಉಲ್ಲೇಖಿಸಿ ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದದ್ದು ಏಕೆ. ನಾಲ್ಕು ದಶಕದಲ್ಲಿ ಎಂದೂ ಗೊಂದಲವಾಗದ ರೀತಿ ಆಡಳಿತ ನಡೆಸಿ ನನಗೆ ನಿನ್ನಿಂದ ಮುಜುಗರ ಆಗಿದೆ ಎಂದು ಸಿದ್ದರಾಮಯ್ಯ ಅವರು ಮರೀಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಇದನ್ನೂ ಓದಿರಿ: Mysore Muda Scam: ಕುತೂಹಲ ಘಟ್ಟ ತಲುಪಿದ ಮೈಸೂರು ಮುಡಾ ನಿವೇಶನ ಹಗರಣ ಪ್ರಕರಣ; ಸೆ.12ಕ್ಕೆ ವಾದ ಮಂಡಿಸಲಿರುವ ಸಿಂಘ್ವಿ, ರವಿವರ್ಮ ಕುಮಾರ್‌
  • ಮೂರು ವಾರದ ಹಿಂದೆ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಿದಾಗ ಮರೀಗೌಡ ಅವರ ವಿರುದ್ದ ಪಕ್ಷದ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದರು. ಇಲ್ಲಿಂದ ತೆರಳಿ ಎಂದು ತಾಕೀತು ಕೂಡ ಮಾಡಿದ್ದರು.
  • ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡ ನಂತರ ಮುಡಾ ಆಯುಕ್ತ, ಕಾರ್ಯದರ್ಶಿಯನ್ನು ಬದಲಿಸಿತ್ತು. ಈಗ ಅಧ್ಯಕ್ಷರ ರಾಜೀನಾಮೆಯನ್ನೂ ಪಡೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.

Whats_app_banner