Mysore Dasara 2024: ಸಿಎಂ, ಡಿಸಿಎಂ ಪುಷ್ಪಾರ್ಚನೆ ಬಳಿಕ ಜಂಬೂ ಸವಾರಿ ಶುರು; ಮಳೆ ನಿಂತ ಹಾದಿಯಲ್ಲಿ ಹೆಜ್ಜೆ ಹಾಕಿದ ಅಭಿಮನ್ಯು
ಮೈಸೂರು ದಸರಾ ಅಂಗವಾಗಿ ವಿಶ್ವವಿಖ್ಯಾತ ಜಂಬೂ ಸವಾರಿ ಆರಂಭಗೊಂಡಿತು. ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿದರು. ಹೀಗಿತ್ತು ಆ ಕ್ಷಣಗಳು.
ಮೈಸೂರು: ಚಾಮುಂಡೇಶ್ವರಿ ವಿಗ್ರಹವನ್ನು ಇರಿಸಿದ್ದ ಅಂಬಾರಿ. ಅಂಬಾರಿ ಹೊತ್ತ ಅಭಿಮನ್ಯು ಆನೆ. ಅಭಿಮನ್ಯು ಅಕ್ಕಪಕ್ಕ ಲಕ್ಷ್ಮಿ, ಹಿರಣ್ಯ ಆನೆಗಳು, ಸುತ್ತಲೂ ತುಂಬಿದ್ದ ಭಕ್ತ ಸಮೂಹದ ಉದ್ಘಾರದ ನಡುವೆ ಇತಿಹಾಸ ಪ್ರಸಿದ್ದ, ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಪುಷ್ಪಾರ್ಚನೆ ಮೂಲಕ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಸಂಜೆ 5. 03ರ ಹೊತ್ತಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಅಧಿಕಾರಿಗಳು ಉಪಸ್ಥಿತಿಯ ವೇದಿಕೆಯಲ್ಲಿ ತಾಯಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಷನೆ ಸಲ್ಲಿಕೆಯಾಯಿತು. ಈ ಮೂಲಕ ಐದು ಕಿ.ಮಿ ಉದ್ದದ ವಿಶಿಷ್ಟ ಜಂಬೂ ಸವಾರಿಗೆ ಅಭಿಮನ್ಯು ಪಡೆ ಹೆಜ್ಜೆ ಹಾಕಿತು. ಸುಮಾರು ಮೂರು ಗಂಟೆಗಳ ಕಾಲ ಮೆರವಣಿಗೆ ಮುಂದೆ ಸಾಗಿತು.
ಸಿಎಂ ಸಿದ್ದರಾಮಯ್ಯ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿ ಉಪಾಹಾರ ಸೇವಿಸಿ ನಂತರ ಸಚಿವ ಸಂಪುಟದ ಸಹದ್ಯೋಗಿಗಳೊಂದಿಗೆ ಒಂದೇ ಬಸ್‌ನಲ್ಲಿ ಅರಮನೆ ಪ್ರವೇಶಿಸಿದರು. ಅಲ್ಲಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜ ಪೂಜೆ ಸಲ್ಲಿಸಿದರು. ಬಳಿಕ ಅರಮನೆ ಆವರಣದಲ್ಲಿ ಆಸೀನರಾಗಿ ಮೆರವಣಿಗೆಯನ್ನು ವೀಕ್ಷಿಸಿದರು. ಮೆರವಣಿಗೆ ಮುಕ್ತಾಯಗೊಂಡ ನಂತರ ವೇದಿಕೆ ಏರಿ ಪುಷ್ಪಾರ್ಚನೆ ಮಾಡಿದರು. ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಡಾ.ಮಹದೇವಪ್ಪ, ಶಿವರಾಜತಂಗಡಗಿ, ಡಿಸಿ ಲಕ್ಷ್ಮಿಕಾಂತರೆಡ್ಡಿ, ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಕೂಡ ಪುಷ್ಪಾರ್ಚನೆಯಲ್ಲಿ ಭಾಗಿಯಾದರು.
ಮುಡಾ ಹಗರಣ ಸೇರಿದಂತೆ ನಾನಾ ಕಾರಣದಿಂದ ವಿವಾದಕ್ಕೆ ಈಡಾಗಿದ್ದ ಸಿಎಂ ಸಿದ್ದರಾಮಯ್ಯ ಅಧಿಕಾರ ತ್ಯಜಿಸಲಿದ್ದಾರೆ. ಪುಷ್ಪಾರ್ಚನೆಗೆ ಸಿದ್ದರಾಮಯ್ಯ ಇರುವುದಿಲ್ಲ ಎನ್ನುವ ಮಾತುಗಳನ್ನು ಪ್ರತಿಪಕ್ಷದವರು ಆಡಿದ್ದರು. ಆದರೆ ಸಿದ್ದರಾಮಯ್ಯ ಅವರೇ ಪುಷ್ಪಾರ್ಚನೆ ಮಾಡುವ ಮೂಲಕ ಎಲ್ಲಾ ವಿವಾದಗಳಿಗೆ ತೆರೆ ಎಳೆದರು.
ಬಾರದ ಒಡೆಯರ್
ನವರಾತ್ರಿ ದಿನವೇ ಮಗು ಹುಟ್ಟಿದ ಕಾರಣದಿಂದ ಅಶುಚಿಯಾಗಿದ್ದ ರಾಜವಂಶಸ್ಥರ ಪ್ರತಿನಿಧಿ ಜಂಬೂಸವಾರಿ ಪುಷ್ಪಾರ್ಚನೆಯಲ್ಲಿ ಭಾಗಿಯಾಗಲಿಲ್ಲ. ಅವರು ಕಂಕಣಧಾರಿಯಾಗಿಯೇ ಭಾಗವಹಿಸಬಹುದು ಎನ್ನುವ ನಿರೀಕ್ಷೆಇತ್ತು. ಅರಮನೆ ಧಾರ್ಮಿಕ ಚಟುವಟಿಕೆ ಮುಗಿದ ನಂತರ ಕಂಕಣ ವಿಸರ್ಜನೆ ಮಾಡಿದ ಒಡೆಯರ್ ಹತ್ತು ದಿನದ ಸೂತಕದ ಕಾರಣಕ್ಕೆ ವೇದಿಕೆ ಹತ್ತಲಲ್ಲಿ ಎನ್ನಲಾಗಿದೆ.
ಅಭಿಮನ್ಯುಗೆ ಅಲಂಕಾರ
ದಸರಾ ಜಂಬೂ ಸವಾರಿಗೆ ಅರಮನೆ ಅಂಗಳದಲ್ಲಿ ತಯಾರಿಗಳು ನಡೆದವು. ಬೆಳಿಗ್ಗೆಯಿಂದ ಅಭಿಮನ್ಯು ಸಹಿತ ಎಲ್ಲಾ ಆನೆಗಳಿಗೆ ಅಲಂಕಾರ ಮಾಡಲಾಯಿತು. ಒಂಬತ್ತು ಆನೆಗಳಿಗೆ ಕಲಾವಿದರು ಅಲಂಕಾರ ಮಾಡಿದರು. ಆನಂತರ ಅಭಿಮನ್ಯುವಿಗೆ ಅಂಬಾರಿ ಕಟ್ಟುವ ಕಾರ್ಯ ಅರಮನೆ ಅಂಗಳದಲ್ಲಿ ನೆರವೇರಿತು. ಅಕ್ರಂ ಹಾಗೂ ಸಿಬ್ಬಂದಿಗಳು ಅಂಬಾರಿ ಕಟ್ಟಿದರು. ಸುಮಾರು ಒಂದು ಗಂಟೆ ಕಾಲ ಈ ಕಾರ್ಯ ನಡೆಯಿತು. ಚಾಮುಂಡೇಶ್ವರಿ ವಿಗ್ರಹದೊಂದಿಗೆ ಅಂಬಾರಿ ಹೊತ್ತ ಅಭಿಮನ್ಯು ಜಂಬೂ ಸವಾರಿ ಆರಂಭಿಸಲು ಅಣಿಯಾದ.
ಮಳೆ ನಿಂತ ಮೇಲೆ
ಇನ್ನೇನು ನಂದಿಧ್ವಜ ಪೂಜೆ ಸಲ್ಲಿಸಿ ಜಂಬೂ ಸವಾರಿ ಮೆರವಣಿಗೆ ಸಿಎಂ ಚಾಲನೆ ನೀಡಬೇಕು ಎನ್ನುವಷ್ಟರ ಹೊತ್ತಿಗೆ ಮಳೆ ಶುರುವಾಯಿತು. ಕೆಲ ಹೊತ್ತು ಜೋರಾಗಿ ಸುರಿಯಿತು. ಆಗ ಜನ ಕದಲದೇ ಅಲ್ಲಿಯೇ ಕುಳಿತರು. ಕಲಾವಿದರು ಮಳೆಯಲ್ಲೇ ಹೆಜ್ಜೆ ಹಾಕಿ ಉತ್ಸಾಹ ತುಂಬಿದರು. ಸ್ಥಬ್ದಚಿತ್ರ, ಕಲಾ ತಂಡಗಳು ಮುಂದುವರಿದವು. ಹದಿನೈದು ನಿಮಿಷದ ನಂತರ ಮಳೆ ನಿಂತಿತು. ಮೋಡ ಕವಿದ ಆಹ್ಲಾದಕರ ವಾತಾವರಣದ ನಡುವೆಯೇ ಜಂಬೂ ಸವಾರಿ ಮೆರವಣಿಗೆ ಮುಂದುವರಿಯಿತು. ಚಾಮರಾಜ ವೃತ್ತ, ಕೆಆರ್‌ವೃತ್ತದ ಮೂಲಕ ಅಭಿಮನ್ಯು ಬನ್ನಿಮಂಟಪದ ಕಡೆಗೆ ಹೆಜ್ಜೆ ಹಾಕಿತು. ಬೆಳಿಗ್ಗೆಯಿಂದಲೂ ಜಂಬೂ ಸವಾರಿ ರಸ್ತೆಯುದಕ್ಕೂ ಜನ ಚಾಮುಂಡೇಶ್ವರಿಗೆ ನಮಿಸಿ ಗೌರವಿಸಿದರು.