Mysore Dasara 2024: ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಬೇಕೇ, ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್‌ 10 ಕಡೆದಿನ-mysore news mysore dasara 2024 cultural events application invited from artists september 10 last date kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara 2024: ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಬೇಕೇ, ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್‌ 10 ಕಡೆದಿನ

Mysore Dasara 2024: ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಬೇಕೇ, ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್‌ 10 ಕಡೆದಿನ

Dasara Cultural Events ನಾಡಹಬ್ಬ ಮೈಸೂರು ದಸರಾದಲ್ಲಿ ಕಾರ್ಯಕ್ರಮ ನೀಡಬಯಸುವ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಎಲ್ಲಿಲ್ಲದ ಬೇಡಿಕೆ.
ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಎಲ್ಲಿಲ್ಲದ ಬೇಡಿಕೆ.

ಮೈಸೂರು: ಮೈಸೂರು ದಸರಾ ವೇದಿಕೆಗಳಲ್ಲಿ ಸಾಂಸ್ಕೃತಿಕ ನೀಡುವ ಆಸಕ್ತಿ ಇದೆಯಾ, ನೃತ್ಯ,ನಾಟಕ ಪ್ರದರ್ಶನ ಕೊಡಬೇಕು ಎನ್ನುವ ಬಯಕೆ ಇಟ್ಟುಕೊಂಡಿದ್ದೀರಾ, ನಿಮ್ಮಲ್ಲಿರುವ ಕಲಾ ಪ್ರದರ್ಶನಕ್ಕೆ ಕರ್ನಾಟಕದ ನಾಡಹಬ್ಬ ಮೈಸೂರು ದಸರಾ ಕೂಡ ಸೂಕ್ತ ವೇದಿಕೆ. ಇದಕ್ಕಾಗಿ ದಸರಾ ಸಾಂಸ್ಕೃತಿಕ ಉಪಸಮಿತಿಯು ಕರ್ನಾಟಕದ ನಾನಾ ಭಾಗದ, ವಯೋಮಾನದ ಕಲಾವಿದರಿಂದ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ 2024 ಆಗಸ್ಟ್‌ 27ರಿಂದಲೇ ಆರಂಭಗೊಂಡಿದ್ದು ಸೆಪ್ಟಂಬರ್‌ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಮೈಸೂರು ದಸರಾ ಮಹೋತ್ಸವ 2024 ಸಾಂಸ್ಕೃತಿಕ ಉಪಸಮಿತಿ ಕಾರ್ಯದರ್ಶಿ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ತಿಳಿಸಿದ್ದಾರೆ.

2024-25ನೇ ಸಾಲಿನಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2024 ರ ಅಕ್ಟೋಬರ್‌ 03ರಿಂದ ಅಕ್ಟೋಬರ್‌ 12ವರೆಗೆ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಸಾಂಸ್ಕೃತಿಕ ಉಪಸಮಿತಿಯಿಂದ ನವರಾತ್ರಿ ಅಕ್ಟೋಬರ್‌ 03 ರಿಂದ ಅಕ್ಟೋಬರ್‌ 11ರ ವರೆಗೆ ವಿವಿಧ ಕಲಾಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರಮನೆ ಹಾಗೂ ಇತರೆ ವೇದಿಕೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.

ಈ ಬಾರಿಯೂ ಅರಮನೆ,ಜಗನ್ಮೋಹನ ಅರಮನೆ, ಕಲಾಮಂದಿರ, ಪುರಭವನ, ಚಿಕ್ಕಗಡಿಯಾರ, ವೀಣೆ ಶೇಷಣ್ಣ ಭವನ ಸಹಿತ ಹಲವು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಅಲ್ಲದೇ ಒಂದು ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ಅರಮನೆ ಎದುರು ಕಾರ್ಯಕ್ರಮ ಇರಲಿವೆ. ಎಲ್ಲಾ ಸೇರಿ ಹತ್ತು ದಿನ ನಾನಾ ವೇದಿಕೆಗಳಲ್ಲಿ ನಾಲ್ಕೈದು ಸಾವಿರ ಕಲಾವಿದರು ಕಾರ್ಯಕ್ರಮ ನೀಡುತ್ತಾರೆ. ಈ ಬಾರಿಯೂ ದಸರಾದಲ್ಲಿ ಕಾರ್ಯಕ್ರಮ ನೀಡಲು ಅವಕಾಶವಿದೆ.

ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಕಲಾವಿದರಿಂದ/ಕಲಾತಂಡಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಇನ್ನೂ ಎರಡು ವಾರ ಸಮಯವಿದೆ. ಅರ್ಜಿಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕಲಾಮಂದಿರ, ವಿನೋಬಾ ರಸ್ತೆ, ಮೈಸೂರು-570005 ಇಲ್ಲಿಗೆ ನೇರವಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಮಿಂಚಂಚೆ ಮೂಲಕವು ccdasara23@gamail.com ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0821-2513225ಗೆ ಸಂಪರ್ಕಿಸಲು ತಿಳಿಸಿದೆ.

ದಸರಾದಲ್ಲಿ ಗಾಯನ, ನೃತ್ಯ, ಕಲಾ ಪ್ರದರ್ಶನ, ನಾಟಕ ಸಹಿತ ಯಾವುದೇ ಕಾರ್ಯಕ್ರಮ ನೀಡುವ ಕಲಾವಿದರಿಗೆ ಸಂಭಾವನೆ ನೀಡಲಾಗುತ್ತದೆ.

ಕಲಾವಿದರಿಗೆ ಕಾರ್ಯಕ್ರಮ ಕೊಡಿಸುವುದಾಗಿ ಯಾವುದೇ ಮಧ್ಯವರ್ತಿಗಳು ಸಂಪರ್ಕಿಸಿ ಹಣದ ಬೇಡಿಕೆ ಇಟ್ಟಲ್ಲಿ ತಕ್ಷಣ ಮಾಹಿತಿ ಸಮೇತ ಮೇಲ್ಕಾಣಿಸಿದ ಸಹಾಯಕ ನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಲು ಕೋರಿದೆ.