Mysore Dasara 2024: ಸಂಸದರಾದ ಬಳಿಕ ಮೊದಲ ಖಾಸಗಿ ದರ್ಬಾರ್ ಆರಂಭಿಸಿದ ಯದುವೀರ್ ಒಡೆಯರ್; ಹೀಗಿತ್ತು ರಾಜವೈಭವದ ಕ್ಷಣಗಳು
ಮೈಸೂರು ಅರಮನೆ ಆವರಣದಲ್ಲಿ ಖಾಸಗಿ ದರ್ಬಾರ್ ಚಟುವಟಿಕೆಗಳು ಧಾರ್ಮಿಕ ವಿಧಿವಿಧಾನಗಳಂತೆ ಆರಂಭಗೊಂಡವು. ಮೈಸೂರು- ಕೊಡಗು ಸಂಸದ ಯದುವೀರ್ ಖಾಸಗಿ ದರ್ಬಾರ್ ಅನ್ನು ಹಿಂದಿನ ವೈಭವ, ಪರಂಪರೆಯೊಂದಿಗೆ ಆರಂಭಿಸಿದರು.
ಮೈಸೂರು: ರಾಜವಂಶಸ್ಥ ಹಾಗೂ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ಅನ್ನು ಆರಂಭಿಸಿದರು. ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2024 ಹಿನ್ನೆಲೆಯಲ್ಲಿ ಗುರುವಾರ ಮೈಸೂರು ಅರಮನೆಯಲ್ಲಿ ರಾಜಮನೆತನದ ಖಾಸಗಿ ದಸರಾ ಸಾಂಪ್ರದಾಯಿಕವಾಗಿ ಆರಂಭಗೊಂಡಿತು.ನವರಾತ್ರಿ ಹಿನ್ನೆಲೆ ಅರಮನೆಯಲ್ಲಿ ಶತಮಾನಗಳಿಂದಲೂ ನಡೆಯುತ್ತಾ ಬಂದಿರುವ ಖಾಸಗಿ ದರ್ಬಾರ್ ಅನ್ನು ಯದುವೀರ್ ಅವರು ಒಂಬತ್ತು ವರ್ಷಗಳಿಂದ ಮುಂದುವರೆಸಿಕೊಂಡು ಬಂದಿದ್ದಾರೆ.
ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಗುರುವಾರ ಬೆಳಿಗಿನ ಜಾವದಿಂದಲೇ ಪೂಜಾ ಕೈಂಕರ್ಯಗಳ ಶುರುವಾದವು. ಬೆಳಿಗ್ಗೆ ಮೊದಲಿಗೆ ಯದುವೀರ್ ಅವರ ಎಣ್ಣೆ ಶಾಸ್ತ್ರ ಕಾರ್ಯ ಜರುಗಿದವು. ಇದರೊಂದಿಗೆ ದಿನದ ಧಾರ್ಮಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ರಾಜವಂಶಸ್ಥರ ಕುಟುಂಬದ ಸದಸ್ಯರು, ಅರಮನೆ ಪುರೋಹಿತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡವು. ಎಣ್ಣೆ ಶಾಸ್ತ್ರ ಮುಗಿಸಿ ಮಡಿಯುಟ್ಟು ಬಂದ ಯದುವೀರ್ ಅವರು ಮೊದಲು ಅರಮನೆ ಒಳಗಿನ ಗಣೇಶನ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಆನಂತರ ವಿವಿಧ ದೇಗುಲಗಳಲ್ಲಿ ಪೂಜಾ ಕೈಂಕರ್ಯ ಕೈಗೊಂಡರು.
ಬೆಳಿಗ್ಗೆ 5.45 ರಿಂದ 6.10 ರ ಒಳಗಿನ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖ ಜೋಡಣೆ ಕಾರ್ಯ ನಡೆಯಿತು. ಬೆಳಿಗ್ಗೆ 7.45 ರಿಂದ 8.45 ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್‌ಗೆ ಕಂಕಣಧಾರಣೆ ಕೈಗೊಳ್ಳಲಾಯಿತು. ಕಂಕಣಧಾರಣೆಯೊಂದಿಗೆ ಹಲವಾರು ಪೂಜೆಗಳಲ್ಲಿ ಯದುವೀರ್ ಭಾಗಿಯಾದರು.
ಇದನ್ನೂ ಓದಿರಿ: ಖಾಸಗಿ ದರ್ಬಾರ್ಗೆ ಅಣಿಯಾಯಿತು ರತ್ನ ಖಚಿತ ಸಿಂಹಾಸನ
ಬೆಳಿಗ್ಗೆ 10.30 ಕ್ಕೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುಗಳು ಆಗಮನವಾಯಿತು. ಸಾಲಂಕೃತ ಆನೆ, ಹಸು, ಕುದುರೆಗಳೊಂದಿಗೆ ಮೆರವಣಿಗೆ ಅರಮನೆಗೆ ಆಗಮಿಸಿತು.,
ಬೆಳಿಗ್ಗೆ 11 ಕ್ಕೆ ಕಳಸ ಪೂಜೆ ಮತ್ತು ಸಿಂಹಾಸನ ಪೂಜೆಗಳು ಆರಂಭಗೊಂಡವು. ಕುಟುಂಬದವರು ಹಾಗೂ ಪುರೋಹಿತರು ಈ ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಟ್ಟರು.
ಬೆಳಿಗ್ಗೆ 11.35 ರಿಂದ 12.05 ರ ಒಳಗೆ ಖಾಸಗಿ ದರ್ಬಾರ್ ಚಟುವಟಿಕೆಗಳು ಶುರುವಾದವು. ಕಂಕಣಧಾರಿಯಾದ ಒಡೆಯರ್ ಅವರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನಾರೋಹಣ ಮಾಡಿ ಸಂಸದರಾದ ನಂತರ ಮೊದಲ ಖಾಸಗಿ ದರ್ಬಾರ್ ನಡೆಸಿದರು.
ಈ ವೇಳೆ ಪ್ರಮೋದಾದೇವಿ ಒಡೆಯರ್ ಹಾಗೂ ಯದುವೀರ್ ಅವರ ಪತ್ನಿ ತ್ರಿಷಿಕಾ ಒಡೆಯರ್ ಅವರು ಪೂಜೆಗಳನ್ನು ಸಲ್ಲಿಸಿದರು. ಆರತಿ ಸಲ್ಲಿಸಿ ಖಾಸಗಿ ದರ್ಬಾರ್ ಸಾಂಗವಾಗಿ ನೆರವೇರಿಸುವಂತೆ ಕೋರಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಮೊದಲ ದಿನದ ದರ್ಬಾರ್‌ನ ಚಟುವಟಿಕೆಗಳು ನೆರವೇರಿದವು.
ಮಧ್ಯಾಹ್ನ 1.05 ರಿಂದ 1.30 ರ ಒಳಗೆ ಚಾಮುಂಡೇಶ್ವರಿ ಅಮ್ಮನವರ ಮೂರ್ತಿ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಸ್ಥಳಾಂತರ ಮಾಡುವುದರೊಂದಿಗೆ ಖಾಸಗಿ ದರ್ಬಾರ್ ನ ಚಟುವಟಿಕೆಗಳು ಮುಗಿದವು. ಇನ್ನು ಪ್ರತಿದಿನ ಸಂಜೆ ನಂತರ ಖಾಸಗಿ ದರ್ಬಾರ್ ಅರಮನೆಯ ದರ್ಬಾರ್ ಹಾಲ್‌ನಲ್ಲಿ ನೆರವೇರಲಿದೆ.