Mysuru News: 7 ದಶಕಗಳ ಕಾಲ ಮೈಸೂರಲ್ಲಿ ತುಪ್ಪದ ದೋಸೆ ರುಚಿ ಹಿಡಿಸಿದ್ದ ಹೊಟೇಲ್ ಮಹದೇವಪ್ಪ ಅವರೀಗ ನೆನಪು ಮಾತ್ರ
Mahadevappa memory ಮೈಸೂರಿನ ದೋಸೆ ಮಹದೇವಪ್ಪ ಎಂದೇ ಹೆಸರಾಗಿದ್ದ ಮಹದೇವಪ್ಪ ಅವರು ನಿಧನರಾದರು. ಪುಟ್ಟ ಹೊಟೇಲಾದರೂ ಏಳು ದಶಕ ಕಾಲ ಲಕ್ಷಾಂತರ ಮಂದಿ ಇಲ್ಲಿ ತಿಂದ ತಿಂಡಿನ ನೆನಪು ಮಾತ್ರ ಸದಾ ಹಸಿರು.
ಮೈಸೂರು: ಮೈಸೂರಿನ ಅಗ್ರಹಾರ ದೇಗುಲ ಅಲ್ಲಿಂದ ನಂಜುಮಳಿಗೆ ವೃತ್ತಕ್ಕೆ ಹೋಗುವ ಮಧ್ಯೆದಲ್ಲಿ ಪುಟ್ಟ ಹೊಟೇಲ್. ಅಲ್ಲಿ ದೋಸೆಯ ಘಮಘಮ ವಾಸನೆ. ಅದೂ ತುಪ್ಪದ ದೋಸೆಯ ವಾಸನೆ ಆಘ್ರಾಣಿಸಿದವರು ದೋಸೆ ತಿಂದೇ ಹೋಗಬೇಕು ಎನ್ನುವಷ್ಟರ ಮಟ್ಟಿಗೆ. ಪುಟ್ಟ ಹೊಟೇಲ್ ಒಳಹೊಕ್ಕರೆ ಕುಳಿತುಕೊಳ್ಳಲು ಆಗದಷ್ಟು ಜನ. ಕನಿಷ್ಠ 15 ನಿಮಿಷವಾದರೂ ಕಾಯಬೇಕು. ಆನಂತರ ಮುತ್ತಲ ಎಲೆ ಮೇಲೆ ಎರಡು ಪುಟ್ಟ ದೋಸೆ, ಚಟ್ನಿ, ಸಾಗು ಹಾಕಲಾಗುತ್ತದೆ. ಅಲ್ಲಿ ಸಾಮಾನ್ಯ, ತುಪ್ಪದ ದೋಸೆ ಎರಡೂ ಉಂಟು. ಆ ರುಚಿಗೆ ನೀವು ಎಷ್ಟು ದೋಸೆ ಸೇವಿಸಿತ್ತೀರೋ ಗೊತ್ತಿಲ್ಲ. ಅಷ್ಟರ ಮಟ್ಟಿಗೆ ಮನೆಯಲ್ಲಿಯೇ ದೋಸೆ ತಿಂದಂತ ಅನುಭವ. ದರವೂ ಅತೀ ಕಡಿಮೆ. ಹೊಟೇಲ್‌ನಲ್ಲಿ ಕುಳಿತು ಸೇವಿಸುವವರ ಜತೆಗೆ ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೋಗುವವರೂ ಹೆಚ್ಚು. ಇಂತಹ ಹೊಟೇಲ್‌ನ ಮಾಲೀಕ ಮಹದೇವಪ್ಪ ಅವರು ದೋಸೆ ರುಚಿ ನೆನಪು ಉಳಿಸಿ ಮಾಯವಾಗಿದ್ದಾರೆ.
ಭಿನ್ನ ಹೊಟೇಲ್‌ಗಳ ಸಂಗಮ
ಸಾಂಸ್ಕೃತಿಕ ನಗರಿ ಮೈಸೂರು ವಿವಿಧ ಕಲೆಗಳ ತವರೂರು, ಸಂಸ್ಕೃತಿಗಳ ನಾಡು, ಪ್ರವಾಸಿಗರ ಸ್ವರ್ಗ, ಅತಿಥಿ ದೇವೋಭವದ ಬೀಡು. ಅತಿಥಿ ದೇವೋಭವ ಅಂದ ತಕ್ಷಣ ನಮಗೆ ಥಟ್ಟನೆ ನೆನಪಾಗೋದು ಮೈಸೂರಿನ ಪ್ರಖ್ಯಾತ ಬಾಯಲ್ಲಿ ನೀರು ತರಿಸುವ ಭಿನ್ನ ವಿಭಿನ್ನವಾದ ವಿಶೇಷವಾದ ಹೋಟೆಲ್‌ಗಳು. ಹೌದು ಬಹುಶಃ ಮೈಸೂರಿನಲ್ಲಿರುವಷ್ಟು ವೆರೈಟಿ ಹೋಟೆಲ್‌ಗಳು ನಿಮಗೆ ಪ್ರಪಂಚದ ಯಾವ ಮೂಲೆಯಲ್ಲೂ ಕಾಣ ಸಿಗುವುದಿಲ್ಲ. ಅದು ವೆಜ್ ಇರಲಿ ನಾನ್ ವೆಜ್ ಇರಲಿ ಮೈಸೂರು ಎತ್ತಿದ ಕೈ. ಹನುಮಂತು ಪಲಾವ್, ತ್ಯಾಗು ಮೆಸ್, ಆರ್ ಆರ್ ಮೆಸ್, ಮೈಲಾರಿ ಜಿ ಟಿ ಆರ್ ಹಳ್ಳಿ ಹಟ್ಟಿ, ಸದು ಹೋಟೆಲ್, ತುಪ್ಪದ ಇಡ್ಲಿ ಹೀಗೆ ಸಾಂಪ್ರದಾಯಿಕ ಶೈಲಿಯ ಪರಂಪರೆಯ ಹೋಟೆಲ್‌ಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಇನ್ನು ಇದೆಲ್ಲಾ ಹೋಟೆಲ್‌ಗಳಿಗಿಂತ ನನಗೆ ಅತ್ಯಂತ ಭಿನ್ನವಾಗಿ ಕಾಣೋದು ನಮ್ಮ ಅಗ್ರಹಾರದ 101 ಗಣಪತಿ ದೇಗುಲದ ಬಳಿಯಿರುವ ತುಪ್ಪದ ದೋಸೆ ಹೋಟೆಲ್ ಹಾಗೂ ಅದರ ಮಾಲೀಕರಾದ ಮಹದೇವಪ್ಪನವರು.
ಎಂದೂ ನಗದ ಕಾಯಕ ಜೀವಿ
ಮೈಸೂರಿನ ಅಗ್ರಹಾರದ ತುಪ್ಪದ ದೋಸೆ ನಿಜಕ್ಕೂ ಅದ್ಬುತ ಅನನ್ಯ. ನೀವು ಅಲ್ಲಿ ಹೋಗಿ ದೋಸೆ ತಿನ್ನುತ್ತಿದ್ದರೆ ಅಜ್ಜಿ ಸೌದೆ ಒಲೆ ಮುಂದೆ ಕುಳಿತು ದೋಸೆ ಹಾಕುವಾಗ ಅಜ್ಜಿ ಇನ್ನೊಂದು ದೋಸೆ ಅಜ್ಜಿ, ಇನ್ನೊಂದು ದೋಸೆ ಅಂತಾ ಒಂದರ ಹಿಂದೆ ಒಂದು ದೋಸೆ ಹಾಕಿಸಿಕೊಂಡು ಹೊಟ್ಟೆಗಿಳಿಸಿದ ನೆನಪು ನಿಮ್ಮನ್ನು ಕಾಡದೇ ಬಿಡದು. ಈ ಹೋಟೆಲ್‌ನ ಕತೃ ಮಹದೇವಪ್ಪನವರು. ತುಪ್ಪದ ದೋಸೆ ಹೋಟೆಲ್ ಮಾಲೀಕ ಮಹದೇವಪ್ಪನವರು ಈಗ ನೆನಪು ಮಾತ್ರ. ಮೂರು ದಿನದ ಹಿಂದೆ ವಯೋ ಸಹಜವಾದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. 90 ವರ್ಷದ ಹಿರಿಯ ಜೀವ ಕಾಯಕ ಮಾಡುತ್ತಲೆ ವಿಧಿವಶರಾಗಿದ್ದಾರೆ.
ಮಹದೇವಪ್ಪನವರು ಸ್ವಾತಂತ್ರ್ಯ ಪೂರ್ವದಲ್ಲಿ ಮಹದೇವಪ್ಪ ತಂದೆ ಈ ಹೋಟೆಲ್ ಆರಂಭಿಸಿದ್ದರು. ನಂತರ ಆ ಹೋಟೆಲ್‌ನ್ನು ಮುಂದುವರಿಸಿದ್ದು ಮಹದೇವಪ್ಪನವರು. ಅತ್ಯಂತ ಕಿರಿದಾದ ಹೋಟೆಲ್‌ನಲ್ಲಿ ದೋಸೆ, ಇಡ್ಲಿ, ಕಾಫಿ, ಕಷಾಯ ಬಿಟ್ಟರೆ ಬೇರೆ ಏನು ಸಿಗುವುದಿಲ್ಲ. ಅದರ ಜೊತೆಗೆ ಇಲ್ಲಿ ಕುಳಿತುಕೊಳ್ಳಲು ಜಾಗವೂ ಸಿಗುವುದು ಕಷ್ಟವೇ. ಅಷ್ಟರ ಮಟ್ಟಿಗೆ ಜನ ತುಪ್ಪದ ದೋಸೆಗೆ ಮಾರು ಹೋಗುತ್ತಾರೆ. ಬೆಳಿಗ್ಗೆ 7ಕ್ಕೆ ಶುರುವಾದರೆ ಬೆಳಗ್ಗೆ 11ಕ್ಕೆ ಹೊಟೇಲ್ ಬಂದ್. ಐದೇ ಗಂಟೆಯ ವ್ಯಾಪಾರ ಅವರದ್ದು.
ಸಾಮಾನ್ಯವಾಗಿ ಹೋಟೆಲ್ ಅಂದ್ರೆ ಮಾತಿನ ಮನೆ. ಗ್ರಾಹಕರಿಂದ ಹಿಡಿದು ಕ್ಲೀನರ್, ಸಪ್ಲೈಯರ್, ಕ್ಯಾಷಿಯರ್, ಮಾಲೀಕರೆನ್ನದೆ ಎಲ್ಲರೂ ಒಂದಲ್ಲ ಒಂದು ವಿಷಯದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಇದು ಎಲ್ಲೆ ಮೀರಿ ಅನಗತ್ಯ ಅಂತಾ ಫೀಲ್ ಆಗೋ ಮಟ್ಟಿಗೆ ಮಾತು ಇರುತ್ತದೆ. ಆದ್ರೆ ತುಪ್ಪದ ಹೋಟೆಲ್ ಮಹದೇವಪ್ಪನವರು ಮಾತ್ರ ಇದಕ್ಕೆ ತದ್ವಿರುದ್ದ.ಆದ್ರೆ ಒಮ್ಮೆಯೂ ಅವರು ಎಷ್ಟು ದೋಸೆ ? ಎಷ್ಟು ಇಡ್ಲಿ ? ಅಂತಾ ಕೇಳಿದನ್ನು ಬಿಟ್ಟರೆ ಬೇರೆ ಯಾವ ಮಾತನ್ನು ಅವರ ಬಾಯಿಂದ ಕೇಳಿಲ್ಲ. ಇನ್ನು ಇದಕ್ಕಿಂತ ಹೆಚ್ಚು ವಿಶೇಷದಲ್ಲಿ, ವಿಶೇಷ ಅಂದ್ರೆ ಅವರು ನಗುವುದನ್ನೇ ನಾನು ನೋಡಲಿಲ್ಲ. ಬಹುಶಃ ಈ ಹೋಟೆಲ್‌ಗೆ ಹೋಗಿದ್ದ ಹಲವರಿಗೆ ಖಂಡಿತಾ ಈ ಅನುಭವ ಆಗಿರುತ್ತದೆ. ಹಾಗಂತ ಮಹದೇವಪ್ಪನವರು ಸಿಡುಕು ಮೂತಿಯವರು, ಕೋಪಿಷ್ಠರು ಅಂತಲ್ಲ. ಅವರು ತಾವಾಯ್ತು ತಮ್ಮ ಕೆಲಸವಾಯ್ತು ಅಂತಾ ಇದ್ದವರು. ಕಾಯಕವೇ ಕೈಲಾಸ ಅನ್ನೋದನ್ನು ನಂಬಿ ಬದುಕಿದವರು. ಅದೇ ರೀತಿ ಬಾಳಿದವರು. ಅಂತಹಾ ಅಪರೂಪದ ವ್ಯಕ್ತಿ ಈಗ ನೆನಪು ಮಾತ್ರ.
ಮಗನ ನೊಗ
ನಮ್ಮ ಮೈಸೂರಿನ ವಿಶೇಷತೆ ಅಂದ್ರೆ ನಾವು ಮೈಸೂರಿಗರು ಯಾವುದೇ ಪರಂಪರೆ ನಾಶವಾಗಲು ಬಿಟ್ಟಿಲ್ಲ. ಬಹುತೇಕ ಮೈಸೂರಿನ ಪರಂಪರೆಯನ್ನು ಅವರ ಮಕ್ಕಳು ಸಂಬಂಧಿಕರು ಮುಂದುವರಿಸಿದ್ದಾರೆ. ಅದರಂತೆ ತುಪ್ಪದ ದೋಸೆ ಹೋಟೆಲ್ ಪರಂಪರೆಯನ್ಮು ಅವರ ಮಗ ಮಹೇಶ್ ಮುಂದುವರಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರ ಕುಟುಂಬಕ್ಕೆ ಮಹದೇವಪ್ಪನವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಇನ್ನು 11ನೇ ದಿನದ ಕಾರ್ಯದ ನಂತರ ತುಪ್ಪದ ದೋಸೆ ಹೋಟೆಲ್ ಮತ್ತೆ ಆರಂಭವಾಗಲಿದೆ.
ಮೈಸೂರಿಗರು ಒಮ್ಮೆಯೂ ತುಪ್ಪದ ದೋಸೆ ಹೋಟೆಲ್‌ಗೆ ಹೋಗಿಲ್ಲವಾದರೆ, ಮೈಸೂರಿಗೆ ಬಂದವರೂ ಒಮ್ಮೆ ಹೋಗಿ ಬನ್ನಿ. ಅಲ್ಲಿ ಮಹದೇವಪ್ಪ ಅವರ ಪೋಟೋ ಇದ್ದೇ ಇರುತ್ತದೆ ನೋಡಿ ಬನ್ನಿ. ಇನ್ನು ಹೊರಗಿನವರು ನೀವು ಮೈಸೂರಿಗೆ ಬಂದಾಗ ಖಂಡಿತವಾಗಿ ತುಪ್ಪದ ಹೋಟೆಲ್‌ಗೆ ಹೋಗಿ ದೋಸೆಯ ರುಚಿ ಸವಿದು ಬನ್ನಿ ಎಂದು ಮೈಸೂರಿನ ಪತ್ರಕರ್ತ ರಾಮ್ ಹೇಳುತ್ತಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)