Karnataka News: ಮೈಸೂರಿನ ಕೈತಪ್ಪಿದ 3000 ಕೋಟಿ ರೂ ಬಂಡವಾಳ; ಕೇಯ್ನ್ ಟೆಕ್ನಾಲಜೀಸ್ ಕರ್ನಾಟಕದಿಂದ ತೆಲಂಗಾಣಕ್ಕೆ ಶಿಫ್ಟ್
ಕನ್ನಡ ಸುದ್ದಿ  /  ಕರ್ನಾಟಕ  /  Karnataka News: ಮೈಸೂರಿನ ಕೈತಪ್ಪಿದ 3000 ಕೋಟಿ ರೂ ಬಂಡವಾಳ; ಕೇಯ್ನ್ ಟೆಕ್ನಾಲಜೀಸ್ ಕರ್ನಾಟಕದಿಂದ ತೆಲಂಗಾಣಕ್ಕೆ ಶಿಫ್ಟ್

Karnataka News: ಮೈಸೂರಿನ ಕೈತಪ್ಪಿದ 3000 ಕೋಟಿ ರೂ ಬಂಡವಾಳ; ಕೇಯ್ನ್ ಟೆಕ್ನಾಲಜೀಸ್ ಕರ್ನಾಟಕದಿಂದ ತೆಲಂಗಾಣಕ್ಕೆ ಶಿಫ್ಟ್

ಉದ್ದಿಮೆಗಳನ್ನು ಓಡಿಸುವುದು ಸರಿಯೇ ಎಂದು ರಾಜ್ಯ ಸರ್ಕಾರಕ್ಕೆ ಉದ್ಯಮಿ ಮೋಹನ್ ದಾಸ್ ಪೈ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಸಚಿವ ಎಂಬಿ ಪಾಟೀಲ್ ಸಮಜಾಯಿಷಿ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ  ಎಂ ಬಿ ಪಾಟೀಲ
ಸಿಎಂ ಸಿದ್ದರಾಮಯ್ಯ ಮತ್ತು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ

ಬೆಂಗಳೂರು: ಕೇಯ್ನ್ ಟೆಕ್ನಾಲಜೀಸ್ ಇಂಡಿಯಾ ಕಂಪನಿಯ ಸೆಮಿ ಕಂಡಕ್ಟರ್ ಘಟಕವು ತೆಲಂಗಾಣಕ್ಕೆ ಶಿಫ್ಟ್ ಆಗಿರುವುದಕ್ಕೆ ಇನ್ಫೋಸಿಸ್ ಮಾಜಿ ಮುಖ್ಯಸ್ಥ ಮೋಹನ್ ದಾಸ್ ಪೈ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಯ್ನ್ ಟೆಕ್ನಾಲಜೀಸ್ ಮೈಸೂರಿನಲ್ಲಿ ಸುಮಾರು 2,800 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ಸೆಮಿ ಕಂಡಕ್ಟರ್ ಯೋಜನೆಯನ್ನು ಆರಂಭಿಸಲು ಉದ್ದೇಶಿಸಿತ್ತು. ಇದಕ್ಕಾಗಿ ರಾಜ್ಯ ಸರ್ಕಾರದ ಜೊತೆಯಲ್ಲಿ ಒಪ್ಪಂದವನ್ನೂ ಮಾಡಿಕೊಳ್ಳಲಾಗಿತ್ತು. ಈ ಯೋಜನೆಯಿಂದ ಅಂದಾಜು 3,200 ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಗಳಿದ್ದವು.

ಕೇಯ್ನ್ ಟೆಕ್ನಾಲಜೀಸ್ ಹೈದರಾಬಾದ್‌ಗೆ ಈ ಯೋಜನೆಯನ್ನು ವರ್ಗಾಯಿಸಿದ್ದು, ಶನಿವಾರ ಭೂಮಿ ಪೂಜೆಯನ್ನೂ ಮಾಡಿದೆ. ಇಲ್ಲಿ ಇದರ ಒಎಸ್ ಒಟಿ (ಔಟ್ ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್) ಘಟಕ ನಿರ್ಮಾಣ ಆಗಲಿದೆ.

ಸರ್ಕಾರದ ನಡೆಗೆ ಮೋಹನ್ ದಾಸ್ ಪೈ ಬೇಸರ

ಇದೇ ಸುದ್ದಿಯ ತುಣಕನ್ನು ಇಟ್ಟುಕೊಂಡು ಇನ್ಫೋಸಿಸ್ ಮಾಜಿ ಮುಖ್ಯಸ್ಥ ಮೋಹನ್ ದಾಸ್ ಪೈ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪೈ, ನಮ್ಮ ನಿರ್ಲಕ್ಷ್ಯ ಮತ್ತು ಉದಾಸೀನದ ಫಲವಾಗಿ ಮೈಸೂರಿನಿಂದ ಒಂದು ಉತ್ತಮ ಕಂಪನಿಯನ್ನು ಹೊರಗೆ ಓಡಿಸಿದ್ದೇವೆ. ಕರ್ನಾಟಕದ ಪಾಲಿಗೆ ಇಂದು ಅತ್ಯಂತ ಬೇಸರದ ದಿನ ಎಂದಿದ್ದಾರೆ.

ನಾವು ಏಕೆ ಕೈಗಾರಿಕೆಗಳನ್ನು ಓಡಿಸುತ್ತಿದ್ದೇವೆ ? ಹೀಗೆ ಮಾಡಿದರೆ ಉದ್ಯೋಗ ಸೃಷ್ಟಿ ಮಾಡುವುದಾದರೂ ಹೇಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.

ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಸಮರ್ಥನೆ

ಉದ್ಯಮಿ ಮೋಹನ್ ದಾಸ್ ಪೈ ಅವರ ಆರೋಪಗಳಿಗೆ ಉತ್ತರ ನೀಡಿರುವ ಸಚಿವ ಎಂಬಿ ಪಾಟೀಲ್, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪೈ ಅವರಿಗೆ ಮಾಹಿತಿ ಇಲ್ಲ. ಅವರ ಗಮನಕ್ಕೆ ಬಂದಿರಲಿಕ್ಕಿಲ್ಲ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯುಕ್ತರು ಪರಿಸ್ಥಿತಿಯ ಸಮಗ್ರ ವರದಿಯನ್ನು ಪೈ ಅವರಿಗೆ ತಲುಪಿಸಲಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

500 ಕೋಟಿ ರೂಪಾಯಿಗಳು ಮತ್ತು ಅದಕ್ಕೂ ಮೇಲ್ಪಟ್ಟ ಬಂಡವಾಳ ಹೂಡಿಕೆ ಕುರಿತ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡುತ್ತದೆ. ಈ ಕಂಪನಿಯ ಪ್ರಸ್ತಾವನೆಯನ್ನು ಕುರಿತು ಸಭೆ ಅಯೋಜಿಸುವುದಕ್ಕೂ ಮುನ್ನವೇ ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು ಮತ್ತು ಆದೇಶವನ್ನೂ ಹೊರಡಿಸಿತ್ತು ಎಂದು ಅವರು ಸಮರ್ಥನೆ ನೀಡುವ ಪ್ರಯತ್ನ ಮಾಡಿದ್ದಾರೆ. ಎಲ್ಲ ಪ್ರಯತ್ನಗಳನ್ನು ಮಾಡಿದ ನಂತರವೂ ನಮ್ಮನ್ನು ದೂಷಿಸಿರುವುದು ಸರಿಯಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಯ್ನ್ ಟೆಕ್ನಾಲಜೀಸ್ ತೆಲಂಗಾಣಕ್ಕೆ ತೆರಳಿರುವುದಕ್ಕೆ ಅದರದ್ದೇ ಆದ ಕಾರಣಗಳಿರಬಹುದು. ಅವರು ನಮ್ಮಿಂದ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ಬಯಸಿದ್ದಿರಬಹುದು. ಸರ್ಕಾರದ ನಿಯಮಾವಳಿಗಳ ಪ್ರಕಾರ ಎಲ್ಲ ವಿನಾಯಿತಿಗಳನ್ನು ನೀಡಲು ನಾವು ಸಿದ್ದರಿದ್ದೆವು. ಆದರೆ ಕಂಪನಿಯ ನಿರೀಕ್ಷೆ ಇದಕ್ಕಿಂತಲೂ ಹೆಚ್ಚಿಗೆ ಇದ್ದಲ್ಲಿ ಸರಕಾರ ಕಾನೂನು ಮೀರಿ ನಡೆಯಲು ಸಾಧ್ಯವಿಲ್ಲ ಎಂದೂ ಸಚಿವರು ವಿವರಣೆ ನೀಡಿದ್ದಾರೆ.

25 ಸಾವಿರ ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಿಕೆ

ಬಂಡವಾಳ ಆಕರ್ಷಣೆಗೆ ಇತ್ತೀಚೆಗೆ ಅಮೆರಿಕಾಗೆ ತೆರಳಿದ್ದಾಗಲೂ ನಾವು ಕೇಯ್ನ್ ಜತೆ ಸಂಪರ್ಕದಲ್ಲಿ ಇದ್ದುದನ್ನು ಸಚಿವರು ನೆನಪು ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರವು ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದೆ. ಸದ್ಯದಲ್ಲೇ ಸುಮಾರು 25 ಸಾವಿರ ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಿಕೆಯಾಗಲಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಕೇವಲ ಮೋಹನ್ ದಾಸ್ ಪೈ ಅವರಷ್ಟೇ ಅಲ್ಲದೆ ಅನೇಕ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸರಕಾರದ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ವರದಿ-ಎಚ್ ಮಾರುತಿ)

Whats_app_banner