ಕನ್ನಡ ಸುದ್ದಿ  /  Karnataka  /  Mysuru News Abhinava Shankaralaya Mysore Completes 100 Years Week Long Centenary Celebrations From Mar 30 To Apr 6 Uks

ಮೈಸೂರಿನ ಅಭಿನವ ಶಂಕರಾಲಯದ ಶತಮಾನೋತ್ಸವ; ಮಾ. 30ರಿಂದ ಏಪ್ರಿಲ್ 6ರ ವರೆಗೆ ಕಾರ್ಯಕ್ರಮ ವೈವಿಧ್ಯ, ಯಾವ ದಿನ ಏನು ಇಲ್ಲಿದೆ ವಿವರ

ಅರಮನೆ ನಗರಿ ಮೈಸೂರಿನಲ್ಲಿ ಗುರುಮನೆ ವೈಭವ ಶುರುವಾಗಿದೆ. ಹೌದು, ಮೈಸೂರಿನ ಅಭಿನವ ಶಂಕರಾಲಯದ ಶತಮಾನೋತ್ಸವ ಸಂಭ್ರಮ ಆರಂಭವಾಗಿದೆ. ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಇಂದಿನಿಂದ ಏಪ್ರಿಲ್ 6ರ ವರೆಗೆ ಕಾರ್ಯಕ್ರಮ ವೈವಿಧ್ಯ ಆಯೋಜನೆಯಾಗಿದೆ. ಏಳು ದಿನಗಳ ನಿತ್ಯ ಕಾರ್ಯಕ್ರಮದ ವಿವರ ಇಲ್ಲಿದೆ. (ವರದಿ- ಶಿವಮೊಗ್ಗ ರಾಮ್‌)

ಮೈಸೂರಿನ ಅಭಿನವ ಶಂಕರಾಲಯದ ಶತಮಾನೋತ್ಸವ. ಮೈಸೂರಿನ ಫೋರ್ಟ್ ಮೊಹಲ್ಲಾದಲ್ಲಿರುವ ಶಂಕರ ಮಠದ ‘ಅಭಿನವ ಶಂಕರಾಲಯ’. ಒಳಚಿತ್ರದಲ್ಲಿ ಎಡಬದಿಗೆ ಮೈಸೂರು ಶಂಕರ ಮಠದಲ್ಲಿರುವ ಶ್ರೀ ಶಾರದಾಂಬೆ. ಬಲಬದಿಗೆ ಶೃಂಗೇರಿಯ ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ.
ಮೈಸೂರಿನ ಅಭಿನವ ಶಂಕರಾಲಯದ ಶತಮಾನೋತ್ಸವ. ಮೈಸೂರಿನ ಫೋರ್ಟ್ ಮೊಹಲ್ಲಾದಲ್ಲಿರುವ ಶಂಕರ ಮಠದ ‘ಅಭಿನವ ಶಂಕರಾಲಯ’. ಒಳಚಿತ್ರದಲ್ಲಿ ಎಡಬದಿಗೆ ಮೈಸೂರು ಶಂಕರ ಮಠದಲ್ಲಿರುವ ಶ್ರೀ ಶಾರದಾಂಬೆ. ಬಲಬದಿಗೆ ಶೃಂಗೇರಿಯ ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ.

ಮೈಸೂರು: ಅರಮನೆ ನಗರಿ ಮೈಸೂರಿನ ಅಗ್ರಹಾರದ ಫೋರ್ಟ್ ಮೊಹಲ್ಲಾದಲ್ಲಿರುವ ‘ಅಭಿನವ ಶಂಕರಾಲಯ’ದ ಶತಮಾನೋತ್ಸವ ಸಂಭ್ರಮಾಚರಣೆಗೆ ಮದುವಣಗಿತ್ತಿಯಂತೆ ಸಜ್ಜಾಗಿದೆ. ಸಾಕ್ಷಾತ್ ಶಾರದಾ ಮಾತೆಯ ಭವ್ಯ ಸನ್ನಿಧಾನದಲ್ಲಿ ಶ್ರೀ ಶೃಂಗೇರಿ ಶಂಕರ ಮಠ ಆಯೋಜಿಸಿರುವ ಒಂದು ವಾರದ ವೈಭವೋಪೇತ ವಿಧಿ- ವಿಧಾನ, ಗುರು ದರ್ಶನ- ಕಾರ್ಯಕ್ರಮಗಳಿಗೆ (ಮಾ. 30 ರಿಂದ ಏಪ್ರಿಲ್ 6) ಸಾವಿರಾರು ಭಕ್ತರು ಸೇರುತ್ತಿರುವುದು ವಿಶೇಷ.

‘ಅಭಿನವ ಶಂಕರಾಲಯ’ದ ಶತಮಾನೋತ್ಸವದ ನಿಮಿತ್ತ ಒಂದು ವಾರ ಕಾಲ ನಿತ್ಯವೂ ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾಗಿವೆ. ನಿತ್ಯದ ಕಾರ್ಯಕ್ರಮಗಳ ವಿವರ ಇಲ್ಲಿದೆ.

ಮಾ. 30 ರಂದು ಶತಮಾನೋತ್ಸವ ಸಪ್ತಾಹ ಸಹಸ್ರ ಮೋದಕ ಗಣಪತಿ ಹೋಮದೊಂದಿಗೆ ವಿಧ್ಯುಕ್ತ ಚಾಲನೆ ಪಡೆಯಲಿದೆ. ಅಂದು ಬೆಳಗ್ಗೆ ಮಠದ ಆವರಣದಲ್ಲಿ ನೂರಾರು ಋತ್ವಿಜರು, ಪಂಡಿತರು, ಅದ್ವೈತ ವಿದ್ವಾಂಸರು, ಮಠದ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಗಣಪತಿ ಹೋಮ ಸಂಪನ್ನಗೊಳ್ಳಲಿದೆ.

ಶೃಂಗೇರಿಯ ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಯವರು 30 ರ ಸಂಜೆ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ಪ್ರವೇಶ ಮಾಡಲಿದ್ದಾರೆ. ಸಂಜೆ 6 ಕ್ಕೆ ನಗರದ ಸ್ಕೌಟ್ ಭವನದ ಸಮೀಪ ಅವರನ್ನು ಪೂರ್ಣಕುಂಭ ಸಮೇತ ಮಂಗಳವಾದ್ಯಗಳೊಂದಿಗೆ ಸ್ವಾಗತಿಸಲಾಗುವುದು. ಅಲ್ಲಿಂದ ಶ್ರೀ ಶಂಕರ ಮಠದವರೆಗೆ (ರಾಮಸ್ವಾಮಿ ಸರ್ಕಲ್, ಚಾಮರಾಜ ಜೋಡಿ ರಸ್ತೆ ಮೂಲಕ) ಅವರನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಗುವುದು. ಸಂಜೆ 7ಕ್ಕೆ ಜಗದ್ಗುರುಗಳು ಮಠದ ಆವರಣದಲ್ಲಿ ನಿರ್ಮಿಸಿರುವ ‘ಶ್ರೀ ಸಚ್ಚಿದಾನಂದ ವಿಲಾಸ’ ಗುರುಭವನ ಹಾಗೂ ಸಭಾಂಗಣವನ್ನು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಲಿದ್ದಾರೆ. ರಾತ್ರಿ 7:30ಕ್ಕೆ ಶ್ರೀ ಚಂದ್ರಮೌಳೇಶ್ವರ ಪೂಜೆ ನೆರವೇರಿಸಲಿದ್ದಾರೆ.

ಮಾರ್ಚ್‌ 31ರಂದು ಶತಚಂಡಿ ಪಾರಾಯಣ

ಮಾ. 31ರಂದು ಮಠದ ಆವರಣದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಮಹಾರುದ್ರ ಜಪ ಮತ್ತು ಶತಚಂಡಿ ಪಾರಾಯಣ ನೆರವೇರಲಿ. ಈ ಸಂದರ್ಭ ಶ್ರೀ ಜಗದ್ಗುರುಗಳು ಸಾರ್ವಜನಿಕ ದರ್ಶನ ನೀಡಲಿದ್ದು, ಪಾದಪೂಜೆ ಮತ್ತು ಭಿಕ್ಷಾವಂದನೆ ನಡೆಯಲಿದೆ. ಸಂಜೆ 4.30 ರಿಂದ 7ರವರೆಗೆ ನಗರದ ವಿವಿಧ ದೇವಾಲಯ ಹಾಗೂ ಸಂಘ-ಸಂಸ್ಥೆಗಳಿಗೆ ಅವರು ಭೇಟಿ ನೀಡಲಿದ್ದಾರೆ. ರಾತ್ರಿ 8.30ಕ್ಕೆ ಮಠದಲ್ಲಿ ಶ್ರೀ ಚಂದ್ರಮೌಳೇಶ್ವರ ಪೂಜೆ ನೆರವೇರಿಸಲಿದ್ದಾರೆ.

ಏಪ್ರಿಲ್‌ 1ರಂದು ನಂಜನಗೂಡಿಗೆ ಭೇಟಿ

ಏ. 1ರಂದು ಬೆಳಗ್ಗೆ 8ಕ್ಕೆ ಶ್ರೀ ಜಗದ್ಗುರುಗಳು ನಂಜನಗೂಡಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಂದು ರಾತ್ರಿ 8.30ಕ್ಕೆ ಮೈಸೂರಿನ ಶಂಕರ ಮಠದಲ್ಲಿ ಶ್ರೀ ಚಂದ್ರಮೌಳೇಶ್ವರ ಪೂಜೆ ನಡೆಸಲಿದ್ದಾರೆ. ಏ. 2ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ಶಂಕರ ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನ , ಪಾದಪೂಜೆ ಹಾಗೂ ಭಿಕ್ಷಾ ವಂದನೆ ನಡೆಯಲಿದೆ. ಸಂಜೆ 4:30ಕ್ಕೆ ನಗರದ ವಿವಿಧ ದೇವಾಲಯಗಳು ಹಾಗೂ ಸಂಘ-ಸಂಸ್ಥೆಗಳಿಗೆ ಜಗದ್ಗುರುಗಳು ಭೇಟಿ ನೀಡಲಿದ್ದಾರೆ.

ಏಪ್ರಿಲ್‌ 3ರಂದು ವಿಶ್ವೇಶ್ವರ ದೇವಸ್ಥಾನದಲ್ಲಿ ಕುಂಭಾಭಿಷೇಕ

ಏ. 3ರ ಬೆಳಗ್ಗೆ 9ಕ್ಕೆ ನಗರದ ಗೀತಾ ರಸ್ತೆಯ ಶ್ರೀ ಪ್ರಸನ್ನ ವಿಶ್ವೇಶ್ವರ ದೇವಸ್ಥಾನದಲ್ಲಿ ಆಯೋಜನೆ ಗೊಂಡಿರುವ ಕುಂಭಾಭಿಷೇಕದ ಸಾನ್ನಿಧ್ಯವನ್ನು ಶ್ರೀ ಜಗದ್ಗುರುಗಳು ವಹಿಸಲಿದ್ದಾರೆ. ಪಾದಪೂಜೆ ಮತ್ತು ಭಿಕ್ಷಾವಂದನೆಯನ್ನು ಜಗದ್ಗುರುಗಳು ಸ್ವೀಕರಿಸಲಿರುವುದು ವಿಶೇಷ. ಸಂಜೆ 4.30 ರಿಂದ 7 ರವರೆಗೆ ನಗರದ ವಿವಿಧ ದೇವಾಲಯ ಹಾಗೂ ಸಂಘ-ಸಂಸ್ಥೆಗಳಿಗೆ ಪೂಜ್ಯರು ಭೇಟಿ ನೀಡಿ ಭಕ್ತರನ್ನು ಅನುಗ್ರಹಿಸಲಿದ್ದಾರೆ.

ಏಪ್ರಿಲ್‌ 4 ರಂದು ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ

ಏ. 4 ರ ಬೆಳಗ್ಗೆ 8.30 ರಿಂದ ಮಧ್ಯಾಹ್ನ 1ರ ವರೆಗೆ ಶಂಕರ ಮಠದ ಶ್ರೀ ಮಹಾಗಣಪತಿ, ಶ್ರೀ ಸತ್ಯನಾರಾಯಣ ಮತ್ತು ಶ್ರೀ ಶಂಕರಾಚಾರ್ಯರ ಸನ್ನಿಧಿಗಳಲ್ಲಿ ಕುಂಭಾಭಿಷೇಕ, ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ನೆರವೇರಲಿದೆ. ಶ್ರೀ ವಿಧುಶೇಖರ ಭಾರತೀ ತೀರ್ಥ ಜಗದ್ಗುರುಗಳು ಸಾರ್ವಜನಿಕ ದರ್ಶನ, ಪಾದಪೂಜೆ ಮತ್ತು ಭಿಕ್ಷಾವಂದನೆ ಸಾನ್ನಿಧ್ಯ ವಹಿಸಿ ಭಕ್ತ ವೃಂದವನ್ನು ಆಶೀರ್ವದಿಸಲಿದ್ದಾರೆ. ಸಂಜೆ 4.30 ರಿಂದ 7ರವರೆಗೆ ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಮರ್ಪಿಸಲಿದ್ದಾರೆ.

ಏಪ್ರಿಲ್‌ 5ರಂದು ಗುರುವಂದನಾ

ಏ. 5ರ ಬೆಳಗ್ಗೆ 8:30 ರಿಂದ ಮಧ್ಯಾಹ್ನ 1 ರ ವರೆಗೆ ಶಂಕರ ಮಠದ ಆವರಣದಲ್ಲಿ ಶ್ರೀ ಶಾರದಾಂಬಾ ಹಾಗೂ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ಕುಂಭಾಭಿಷೇಕ ಮತ್ತು ಶಿಖರ ಕುಂಭಾಭಿಷೇಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಲಿವೆ. ಸಂಜೆ 5.30ಕ್ಕೆ ಮಠದ ಆವರಣದ ವಿದ್ಯಾಶಂಕರ ನಿಲಯ ಕಲ್ಯಾಣ ಮಂಟಪದಲ್ಲಿ ‘ಗುರುವಂದನಾ’ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಆಗಮಿಸಲಿದ್ದಾರೆ. ವಿವಿಧ ಸಂಘ ಸಂಸ್ಥೆ ಪ್ರಮುಖರು, ನಗರದ ಗಣ್ಯರು, ಸಾರ್ವಜನಿಕರು ಮತ್ತು ಮಠದ ಭಕ್ತರು ಸಾಕ್ಷಿಯಾಗಲಿದ್ದಾರೆ.

ಏ. 6ರಂದು ಮಂತ್ರಾಕ್ಷತೆ ಅನುಗ್ರಹ: ಏ. 6ರ ಬೆಳಗ್ಗೆ 9ಕ್ಕೆ ಪೂಜ್ಯ ಜಗದ್ಗುರುಗಳು ಸಾರ್ವಜನಿಕ ದರ್ಶನ ನೀಡಿ, ಪಾದಪೂಜೆ ಮತ್ತು ಭಿಕ್ಷಾ ವಂದನೆ ಸ್ವೀಕಾರ ಮಾಡಲಿದ್ದಾರೆ. ಈ ಸಂದರ್ಭ ಅವರು ಶಿಷ್ಯರಿಗೆ, ಭಕ್ತರಿಗೆ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಲಿದ್ದಾರೆ ಎಂದು ಅಭಿನವ ಶಂಕರಾಲಯದ ಧರ್ಮಾಧಿಕಾರಿ ಎಚ್. ರಾಮಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಂಕರಾಲಯದ ಶತಮಾನೋತ್ಸವ; ಐತಿಹಾಸಿಕ ಹಿನ್ನೆಲೆ

ಶೃಂಗೇರಿ ಜಗದ್ಗುರು ‘ ಶ್ರೀ ನೃಸಿಂಹ ಭಾರತೀ’ (1872 -1912) ಅವರು ಅಭಿನವ ಶಂಕರರು ಎಂದೇ ಖ್ಯಾತರಾಗಿದ್ದರು‌. ಶೃಂಗೇರಿ ಪೀಠದ 33ನೇ ಜಗದ್ಗುರುಗಳಾಗಿದ್ದರು. ಇವರನ್ನು ಮಠದ ಪರಂಪರೆಗೆ ಹೆತ್ತು, ಹೊತ್ತು ಕೊಟ್ಟ ಹಿರಿಮೆ ಸಲ್ಲುವುದು ಮೈಸೂರಿಗೆ. ಇವರ ಜನ್ಮನಾಮ ಶಿವಸ್ವಾಮಿ . ಅವರು ಜನಿಸಿದ ಮನೆಯೇ ನಂತರ ಅಭಿನವ ಶಂಕರಾಲಯವಾಯಿತು.

ಮೈಸೂರು ಅರಮನೆ ಆವರಣದ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶಿವಸ್ವಾಮಿಗೆ ಸಂನ್ಯಾಸಾಶ್ರಮ ಸ್ವೀಕಾರ ವಿಧಿಗಳು ನೆರವೇರಿದವು. ಪರಂಪರೆಯ 33 ನೇ ಜಗದ್ಗುರುಗಳನ್ನು ನೀಡಿದ ಕೀರ್ತಿ ಹೀಗೆ ಮೈಸೂರಿಗೆ ಪ್ರಾಪ್ತಿಯಾಯಿತು. ‘ಶಿವಸ್ವಾಮಿ’ ಅವರು ಜನಿಸಿದ ಮನೆಯನ್ನು ಧಾರ್ಮಿಕ ಕಾರ್ಯ ಕ್ಷೇತ್ರ ಮಾಡಬೇಕು ಎಂದು ಸಂಕಲ್ಪ ಮಾಡಲಾಯಿತು. 1922 ರಲ್ಲಿ ದೇಗುಲ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. 1924ರ ಮಾರ್ಚ್ 31 ರಂದು ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹೊಸ ದೇವಾಲಯ ಉದ್ಘಾಟಿಸಿದರು. ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮೀಜಿ ಅವರ ಶಿಲಾ ಪ್ರತಿಮೆಯನ್ನು ಸ್ಥಾಪಿಸಿ ಭವ್ಯವಾದ ದೇವಾಲಯಕ್ಕೆ ’ಅಭಿನವ ಶಂಕರಾಲಯ’ ಎಂದೇ ನಾಮಕರಣ ಮಾಡಲಾಯಿತು. ಈ ಭವ್ಯ ಮಂದಿರವೀಗ ಶತಮಾನ ಪೂರ್ಣಗೊಳಿಸಿದೆ.

(ವರದಿ- ಶಿವಮೊಗ್ಗ ರಾಮ್‌)

IPL_Entry_Point