50 ಕೋಟಿಗೂ ಹೆಚ್ಚಿನ ಹಗರಣಗಳನ್ನು ಸಿಬಿಐ ತನಿಖೆ ನಡೆಸಬೇಕೆಂಬ ನಿರ್ದೇಶನವಿದೆ; ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ
Snayamayi Krishna: ಮುಡಾ ಕೇಸ್ನಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಸಿಎಂ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕೆಂಬ ನಿರ್ದೇಶನ ಇದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಅವರು ತಿಳಿಸಿದ್ದಾರೆ.
ಮೈಸೂರು: ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಆದೇಶದಂತೆ ಮೈಸೂರು ಲೋಕಾಯುಕ್ತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೊನೆಗೂ ಎರಡು ದಿನಗಳ ನಂತರ ಪ್ರಕರಣ ದಾಖಲಾಗಿದೆ. ಇದರ ನಡುವೆಯೂ ಸಾಮಾಜಿಕ ಕಾರ್ಯಕರ್ತ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ಅವರು ಅತೃಪ್ತರಾಗಿದ್ದಾರೆ. ಎಫ್ಐಆರ್ ಆದ ನಂತರ ಮೊದಲ ಬಾರಿಗೆ ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ನ್ಯಾಯಾಲಯದ ಆದೇಶದಂತೆ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಹೋರಾಟಕ್ಕೆ ಅನೇಕ ಸಾಮಾಜಿಕ ಕಾರ್ಯಕರ್ತರು, ಒಂದು ತಂಡವಾಗಿ ಕೆಲಸ ಮಾಡಿದ್ದಾರೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ. ನಾನು ಮಾಡಿರುವ ಆರೋಪವನ್ನು ಸಾಬೀತು ಪಡಿಸುತ್ತೇನೆ. ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಕರೆದಾಗ ಬರುವಂತೆ ತಿಳಿಸಿದ್ದಾರೆ. ಅಧಿಕಾರಿಗಳು ಯಾವಾಗ ಕರೆದರೂ ಬಂದು ಸಹಕಾರ ನೀಡುತ್ತೇನೆ ಎಂದು ದೂರುದಾರ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ದ ಸಿಬಿಐ ತನಿಖೆ ಮಾಡುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೇನೆ. ಅದು ಮುಂದಿನ ವಾರ ವಿಚಾರಣೆಗೆ ಬರಬಹುದು. ಇಂತಹ ಪ್ರಕರಣದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಸಿಎಂ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕೆಂಬ ನಿರ್ದೇಶನ ಇದೆ. ಜೊತೆಗೆ 50 ಕೋಟಿಗೂ ಹೆಚ್ಚಿನ ಹಗರಣಗಳನ್ನು ಸಿಬಿಐ ತನಿಖೆ ಮಾಡಬೇಕೆಂಬ ನಿರ್ದೇಶನ ಇದೆ ಎಂದು ಮೈಸೂರಿನಲ್ಲಿ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದಾರೆ.
ಲೋಕಾಯುಕ್ತದ ಮೇಲೆ ನಂಬಿಕೆ ಇಲ್ಲ
ನನಗೆ ಲೋಕಾಯುಕ್ತದ ಮೇಲೆ ನಂಬಿಕೆ ಇಲ್ಲ. ಏಕೆಂದರೆ ಇದು ಸ್ವತಂತ್ರವಾಗಿ ತನಿಖೆ ನಡೆಸುವ ಸಂಸ್ಥೆ ಅಲ್ಲ. ಲೋಕಾಯುಕ್ತ ರಾಜ್ಯದ ಗೃಹ ಇಲಾಖೆಯ ಅಡಿಯಲ್ಲೇ ಕೆಲಸ ಮಾಡುತ್ತದೆ. ನ್ಯಾಯಾಲಯ ಆದೇಶ ಕೊಟ್ಟಿದ್ದರೂ ಅಧಿಕಾರಿಗಳು ಎಫ್ಐಆರ್ ದಾಖಲಿಸದೆ ನಾಟಕ ಮಾಡಿದರು. ಎರಡು ದಿನಗಳಿಂದ ಓಡಾಡಿದರೂ ಎಸ್ಪಿ ಕೈಗೆ ಸಿಕ್ಕಿರಲಿಕಲ್ಲ. ಇಂದು (ಸೆಪ್ಟೆಂಬರ್ 27) ನಾನು ಮಾಧ್ಯಮದವರ ಜೊತೆ ಮಾತನಾಡಿದ್ದ ನಂತರ ಮೇಲಾಧಿಕಾರಿಗಳಿಂದ ಒತ್ತಡ ಹೆಚ್ಚಾಗಿರುವ ಸಾಧ್ಯತೆ ಇದ್ದು, ಇದೀಗ ದೂರು ದಾಖಲಿಸಿದ್ದಾರೆ ಎಂದಿದ್ದಾರೆ.
ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಆದರೆ, ಲೋಕಾಯುಕ್ತ ನಿಷ್ಪಕ್ಷವಾಗಿ ತನಿಖೆ ನಡೆಸುವ ಸಾಧ್ಯತೆ ಕಡಿಮೆ ಇದೆ. ಸಿದ್ದರಾಮಯ್ಯ ತನ್ನ ಪ್ರಭಾವ ಬಳಸಿಕೊಂಡು ತನಿಖೆ ಹಳಿ ತಪ್ಪುವಂತೆ ಮಾಡಿದರೂ ಅಚ್ಚರಿ ಇಲ್ಲ. ಸಿಬಿಐ ತನಿಖೆಗೆ ಆದೇಶ ಬರುವ ತನಕ ಹೋರಾಟ ಮಾಡುವೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಈಗಾಗಲೇ ಹೈಕೋರ್ಟ್ನಲ್ಲಿ ಅರ್ಜಿ ಅಲ್ಲಿಸಿದ್ದು, ಶೀಘ್ರದಲ್ಲೇ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ತನಿಖೆಗೆ ಆದೇಶಿಸಿದ್ದ ನ್ಯಾಯಾಲಯ
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಸುಮಾರು 56 ಕೋಟಿ ಮೌಲ್ಯದ 14 ಬದಲಿ ಸೈಟ್ಗಳನ್ನು ಪಡೆದ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ವಿರುದ್ಧದ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮೋದನೆಯನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಇದರ ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೂಡ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು. 3 ತಿಂಗಳಲ್ಲಿ ಅಂದರೆ ಡಿಸೆಂಬರ್ 24ರ ಒಳಗೆ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಮುಡಾದಲ್ಲಿ ಸಿಎಂ ಪತ್ನಿ ಅಕ್ರಮ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು.