MUDA Scam Case: ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲು; ಸಿಎಂ ಎ1, ಪತ್ನಿ ಪಾರ್ವತಿ ಎ2 ಆರೋಪಿ-mysore lokayukta files fir against karnataka chief minister siddaramaiah in muda scam case prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Muda Scam Case: ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲು; ಸಿಎಂ ಎ1, ಪತ್ನಿ ಪಾರ್ವತಿ ಎ2 ಆರೋಪಿ

MUDA Scam Case: ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲು; ಸಿಎಂ ಎ1, ಪತ್ನಿ ಪಾರ್ವತಿ ಎ2 ಆರೋಪಿ

MUDA Case: ಮೂಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿ ನ್ಯಾಯಾಲಯ ನೀಡಿದ ಆದೇಶದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೊನೆಗೂ ಪ್ರಕರಣ ದಾಖಲಾಗಿದೆ. ಯಾವ ಸೆಕ್ಷನ್​​ಗಳಲ್ಲಿ ಪ್ರಕರಣ ದಾಖಲಾಗಿದೆ? ಯಾರೆಲ್ಲಾ ವಿರುದ್ಧ ಕೇಸ್ ದಾಖಲಾಗಿದೆ? ಸಿಎಂ ಮುಂದಿನ ನಡೆಯೇನು?

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ತನಿಖೆಗೆ ನ್ಯಾಯಾಲಯ ಆದೇಶಿಸಿದ ಎರಡು ದಿನಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಕೊನೆಗೂ ಎಫ್ಐಆರ್ ದಾಖಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಸಿದ್ದರಾಮಯ್ಯ ಅವರನ್ನು ಎ1 ಆರೋಪಿ ಎಂದು ಅಧಿಕೃತವಾಗಿ ನಮೂದಿಸಿದ್ದು, ಸಿಎಂ ಪತ್ನಿ ಪಾರ್ವತಿ ಅವರು ಎ2 ಆರೋಪಿಯಾಗಿದ್ದಾರೆ. ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ್ ಸ್ವಾಮಿ ಎ3 ಆರೋಪಿ, ಭೂಮಿ ಮಾರಾಟ ಮಾಡಿದ ದೇವರಾಜು ಎ4 ಆರೋಪಿಯಾಗಿದ್ದಾರೆ. ಕೇಸ್ ನಂಬರ್ 11/2024. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಎಸ್​ಪಿ ಉದೇಶ್ ಅವರು ಪ್ರಕರಣ ದಾಖಲಿಸಿದ್ದಾರೆ.

ತನಿಖೆಗೆ ಆದೇಶಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯ

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಸುಮಾರು 56 ಕೋಟಿ ಮೌಲ್ಯದ 14 ಬದಲಿ ಸೈಟ್​ಗಳನ್ನು ಪಡೆದ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ವಿರುದ್ಧದ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮೋದನೆಯನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಇದರ ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೂಡ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು. 3 ತಿಂಗಳಲ್ಲಿ ಅಂದರೆ ಡಿಸೆಂಬರ್ 24ರ ಒಳಗೆ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಮುಡಾದಲ್ಲಿ ಸಿಎಂ ಪತ್ನಿ ಅಕ್ರಮ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು.

ಸಿದ್ದರಾಮಯ್ಯ ಮುಂದಿನ ನಡೆ ಏನು?

ಪ್ರಸ್ತುತ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ವಿಚಾರಣೆ ನಡೆಸಲಿದೆ. ಮೂರು ತಿಂಗಳೊಳಗೆ ವರದಿ ನೀಡುವಂತೆ ಕೋರ್ಟ್ ಸೂಚಿಸಿರುವ ಕಾರಣ ನಿರಂತರ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಗತ್ಯ ಹಾಗೂ ಪೂರ್ಣ ಪ್ರಮಾಣದ ಸಹಕಾರ ನೀಡಬೇಕಿದೆ. ವಿಚಾರಣೆಗೆ ಅಗತ್ಯ ಇದ್ದರೆ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ವಶಕ್ಕೆ ಪಡೆದರೂ ಅಚ್ಚರಿ ಇಲ್ಲ. ಸಿಎಂ ಸೇರಿದಂತೆ ಉಳಿದ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 120 ಬಿ, 166, 403, 420, 426, 465, 468, 340, 351 ಅಡಿ ಎಫ್​ಐಆರ್ ದಾಖಲಿಸಲಾಗಿದೆ. ಜತೆಗೆ, ಕರ್ನಾಟಕ ಭೂಮಿ ಕಬಳಿಕೆ ನಿಷೇಧ ಕಾಯ್ದೆ 2011ರ ಅನ್ವಯ ಪ್ರಕರಣವನ್ನೂ ದಾಖಲಿಸಲಾಗಿದೆ.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು: ಸಂವಿಧಾನದಿಂದ ಆಯ್ಕೆಯಾದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ದೇಶದಲ್ಲಿ ಎಲ್ಲೆಲ್ಲಿ ವಿರೋಧಪಕ್ಷಗಳ ಸರ್ಕಾರ ಇದೆಯೋ, ಅಲ್ಲಿ ಕೇಂದ್ರ ಸರ್ಕಾರ ಇಡಿ, ಸಿಬಿಐ ಹಾಗೂ ರಾಜಭವನದ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿಗಳಾಗಲಿ ಅಥವಾ ರಾಜ್ಯಪಾಲರಾಗಲಿ ಸಂವಿಧಾನದ ಪ್ರಕಾರ ಕೆಲಸ ಮಾಡಲು ನಾಮಾಂಕಿತರಾಗಿದ್ದು, ಚುನಾವಣೆ ಮೂಲಕ ಆಯ್ಕೆಯಾದವರಲ್ಲ ಎಂದಿದ್ದಾರೆ. ಅವರು ಸಂವಿಧಾನದಲ್ಲಿ ಪ್ರಮುಖರು. ಆದರೆ ಜನಪ್ರತಿನಿಧಿಗಳು ಚುನಾವಣೆಯ ಮೂಲಕ ಆಯ್ಕೆಯಾಗಿ ಆಡಳಿತದಲ್ಲಿ ಪ್ರಮುಖರು ಎಂದಿದ್ದಾರೆ.

ಇಂತಹ ಪ್ರಮುಖ ವ್ಯತ್ಯಾಸವಿರುವಾಗ ಯಾವುದೇ ರಾಜ್ಯದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ . ಈ ವಿಷಯದ ಕುರಿತು ರಾಷ್ಟ್ರಾದ್ಯಂತ ಚರ್ಚೆಯಾಗಬೇಕು. ಮುಡಾ ಪ್ರಕರಣದಲ್ಲಿ ಕಾನೂನು ಪ್ರಕಾರ ಹೋರಾಟ ಮಾಡಲಾಗುವುದು. ನನ್ನ ಮೇಲಿನ ಜನಬೆಂಬಲದಿಂದ ಬೆದರಿರುವ ಪ್ರತಿಪಕ್ಷಗಳು, ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲ ಬಾರಿ. ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದಿಂದ ಸಂವಿಧಾನದ ಸಂಘರ್ಷ ಉಂಟಾಗುತ್ತಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರಕ್ಕೆ ಜನಬೆಂಬಲ ದೊರೆತಿದ್ದು, ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದೇವೆ. ಈ 5 ವರ್ಷದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಜನಾದೇಶವಿದೆ ಎಂದರು.

ಕೇಂದ್ರ ಸರ್ಕಾರದಿಂದ ಅಧಿಕಾರದ ದುರ್ಬಳಕೆ

ಕೇಂದ್ರದ ಇಡಿ ಮತ್ತು ಸಿಬಿಐಗಳು ದುರ್ಬಳಕೆಯಾಗುತ್ತಿದ್ದು, ಆಪರೇಷನ್ ಕಮಲದ ಭಾಗವಾಗಿರಬಹುದೇ ಎಂಬುದಕ್ಕೆ ಪ್ರತಿಕ್ರಿಯಿಸಿ, ಇಡೀ ದೇಶದಲ್ಲಿ ಎಲ್ಲೆಲ್ಲಿ ವಿರೋಧ ಪಕ್ಷಗಳ ಸರ್ಕಾರವಿದೆಯೋ, ಅಲ್ಲಿ ಕೇಂದ್ರ ಸರ್ಕಾರ ಇಡಿ, ಸಿಬಿಐ ಹಾಗೂ ರಾಜಭವನದ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದ ಅವರು ಇದೇ ವೇಳೆ. ಬಿಜೆಪಿ ಪ್ರತಿಭಟನೆ ಬಗ್ಗೆ ಉತ್ತರಿಸಿದರು. ತಪ್ಪು ಮಾಡಿಲ್ಲ. ಆದ್ದರಿಂದ ರಾಜೀನಾಮೆ ನೀಡುವ ಅಗತ್ಯವಿಲ್ಲ. ಜಾಮೀನಿನ ಮೇಲಿರುವ ಹೆಚ್​ಡಿ ಕುಮಾರಸ್ವಾಮಿ ಅವರು ರಾಜಿನಾಮೆ ನೀಡಿದ್ದಾರೆಯೇ? ಎಂದು ಮರುಪ್ರಶ್ನಿಸಿ , ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.

ಸರ್ಕಾರವನ್ನು ಟೀಕಿಸಲು ಬಿಜೆಪಿಗೆ ನೈತಿಕತೆ ಇಲ್ಲ

ಮೋದಿ ಅವರು ತಮ್ಮ ರಾಜಕೀಯ ಭಾಷಣದಲ್ಲಿ ಕರ್ನಾಟಕ ಹಾಗೂ ತೆಲಂಗಾಣ ಸರ್ಕಾರಗಳ ವಿರುದ್ಧ ದೂರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಮೋದಿ ಅವರು ಗುಜರಾತ್​ನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಗೋದ್ರಾ ಘಟನೆಗೆ ಸಂಬಂಧಪಟ್ಟಂತೆ ಮೋದಿ ಅವರು ರಾಜಿನಾಮೆ ನೀಡಿದ್ದರೆ? ನಮ್ಮ ಸರ್ಕಾರವನ್ನು ಟೀಕಿಸಲು ಬಿಜೆಪಿಯವರಿಗೆ ಯಾವ ನೈತಿಕತೆಯೂ ಇಲ್ಲ. ಆಪರೇಷನ್ ಕಮಲ ಮಾಡಿ , ಸರ್ಕಾರವನ್ನು ಅಸ್ಥಿರಗೊಳಿಸುವ ಅವರ ಪ್ರಯತ್ನ ವಿಫಲವಾಗಿದೆ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಲೋಕಾಯುಕ್ತ ಮರಳಿರುವ ಬಗ್ಗೆ ಟ್ವೀಟ್ ಮಾಡಿರುವ ಬಗ್ಗೆ ಉತ್ತರಿಸಿ, ಲೋಕಾಯುಕ್ತವನ್ನು ಮುಚ್ಚಲಾಗಿರಲಿಲ್ಲ. ಅನೇಕ ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಎಸಿಬಿ ಅಸ್ತಿತ್ವದಲ್ಲಿದೆ. ಬಿಜೆಪಿಯವರಿಗೆ ಈ ಧೋರಣೆ ಏಕೆ? ಬಿಜೆಪಿಯಲ್ಲಿ ತಪ್ಪು ಮಾಡದಿರುವ , ಭ್ರಷ್ಟಾಚಾರ ಮಾಡದಿರುವ ಒಬ್ಬರೂ ಇಲ್ಲ. ನಾವು ಎಂದಿಗೂ ಸಂವಿಧಾನ ವಿರುದ್ಧವಾಗಿಯಾಗಲಿ, ಕಾನೂನು ವಿರುದ್ಧವಾಗಿ ಯಾವುದೇ ಕೆಲಸಗಳನ್ನು ಹಿಂದೆಯೂ ಮಾಡಿರುವುದಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ

ಅನಿಶ್ಚಿತ ರಾಜಕೀಯ ಬೆಳವಣಿಗೆಯಿಂದ ಗ್ಯಾರಂಟಿಗಳು ನಿಲ್ಲಬಹುದೆಂಬ ಆತಂಕ ಜನರಲ್ಲಿ ಮನೆಮಾಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ಬಡವರ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ. ಇಂದಿನ ಕಾರ್ಯಕ್ರಮಕ್ಕೆ ಜನರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಮುಖ್ಯಮಂತ್ರಿಗಳ ಪರ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. 136 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಬಿಜೆಪಿಯವರು ಜನಾದೇಶ ಎಂದಿಗೂ ಪಡೆಯದೆ, ಕೇವಲ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ ಎಂದರು.

mysore-dasara_Entry_Point