ನಾನು ತನಿಖೆಗೆ ಹೆದರೋನೇ ಅಲ್ಲ, ತನಿಖೆಗೂ ಸಿದ್ದ, ಕಾನೂನು ಹೋರಾಟಕ್ಕೂ ಸಜ್ಜು; ಮುಖ್ಯಮಂತ್ರಿ ಸಿದ್ದರಾಮಯ್ಯ, VIDEO-not afraid of investigation iam ready to face investigation ready for legal fight says chief minister siddaramaiah prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ನಾನು ತನಿಖೆಗೆ ಹೆದರೋನೇ ಅಲ್ಲ, ತನಿಖೆಗೂ ಸಿದ್ದ, ಕಾನೂನು ಹೋರಾಟಕ್ಕೂ ಸಜ್ಜು; ಮುಖ್ಯಮಂತ್ರಿ ಸಿದ್ದರಾಮಯ್ಯ, Video

ನಾನು ತನಿಖೆಗೆ ಹೆದರೋನೇ ಅಲ್ಲ, ತನಿಖೆಗೂ ಸಿದ್ದ, ಕಾನೂನು ಹೋರಾಟಕ್ಕೂ ಸಜ್ಜು; ಮುಖ್ಯಮಂತ್ರಿ ಸಿದ್ದರಾಮಯ್ಯ, VIDEO

Chief Minister Siddaramaiah: ನಾನು ತನಿಖೆಗೆ ಹೆದರುವುದಿಲ್ಲ. ಕಾನೂನು ಹೋರಾಟಕ್ಕೆ ಸಿದ್ದರನಾಗಿದ್ದು, ತನಿಖೆಗೆ ಸಿದ್ದನಾಗಿದ್ದೇನೆ ಎಂದು ಮೂಡಾ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿದ ತೀರ್ಪಿನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ.

ವಿಧಾನಸೌದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ ಕ್ಷಣ.
ವಿಧಾನಸೌದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ ಕ್ಷಣ.

ಬೆಂಗಳೂರು: ನಾವು ತನಿಖೆಯನ್ನು ಎದುರಿಸಲು ತಯಾರಾಗಿದ್ದೇವೆ. ಯಾವ ತನಿಖೆಗೆ ಹೆದುರುವುದಿಲ್ಲ. ಕಾನೂನು ರೀತಿ ಹೋರಾಟ ಮಾಡಲು ತಯಾರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ತಿಳಿಸಿದ್ದಾರೆ. ಜನ ಪ್ರತಿನಿಧಿಗಳ ನ್ಯಾಯಾಲಯದ ಆದೇಶ ನೀಡಿದಂತೆ 17ಎ ಪ್ರಕಾರ ತನಿಖೆ ಮಾಡಲು ಅನುಮತಿ ನೀಡಲಾಗಿದೆ. ಆದೇಶದ ಪ್ರತಿ ನನಗೆ ದೊರೆತಿಲ್ಲ. ಆದೇಶವನ್ನು ಪೂರ್ಣವಾಗಿ ಓದಿದ ನಂತರ ಪ್ರತಿಕ್ರಿಯೆ ನೀಡುವೆ ಎಂದು ಅವರು ಇಂದು (ಸೆಪ್ಟೆಂಬರ್​ 25) ಸಹ ಮೂಡ ಪ್ರಕರಣಕ್ಕೆ (Muda Case) ಸಂಬಂಧಿಸಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮೈಸೂರು ಲೋಕಾಯುಕ್ತಕ್ಕೆ ಶಿಫಾರಸ್ಸು

‘ನಿನ್ನೆಯೂ ಕೂಡ ಮಾತುಗಳನ್ನು ಹೇಳಿದ್ದು ಈಗಲೂ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ನನಗೆ ತಿಳಿದಂತೆ ಮೈಸೂರು ಲೋಕಾಯುಕ್ತಕ್ಕೆ ಪ್ರಕರಣವನ್ನು ಶಿಫಾರಸ್ಸು ಮಾಡಲಾಗಿದೆ. ಮೈಸೂರಿನಲ್ಲಿಯೇ ದೂರು ನೀಡಲಾಗಿದ್ದು, ದೂರುದಾರರು ಮೈಸೂರಿನವರು, ಮೂಡಾ ಕೂಡ ಅಲ್ಲಿಯೇ ಇರುವುದರಿಂದ ಮೈಸೂರಿಗೆ ಶಿಫಾರಸ್ಸು ಮಾಡಿರಬೇಕು ಎಂದು ಭಾವಿಸಿದ್ದೇನೆ’ ಎಂದರು.

ಪಿಎನ್ ದೇಸಾಯಿ ಆಯೋಗದ ತನಿಖೆ ಮುಂದುವರೆಯಲಿದೆ

ಇಂದಿನ ಪೂರ್ಣ ಆದೇಶ ಸಿಕ್ಕಿದ ಮೇಲೆ ವಕೀಲರೊಂದಿಗೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು. ಮೂಡಾ ಪ್ರಕರಣದ ತನಿಖೆಗೆ ಸರ್ಕಾರ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ಅವರ ಆಯೋಗ ಅದರ ತನಿಖೆ ಮುಂದುವರೆಯುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ನ್ಯಾಯಾಂಗ ತನಿಖೆ ಮುಂದುವರೆಯುತ್ತದೆ ಎಂದರು. ಸಂಪೂರ್ಣ ಪ್ರತಿಕ್ರಿಯೆ ನೀಡಲು ನಾನು ಪೂರ್ಣ ಆದೇಶ ಓದಿದ ಮೇಲೆ ನಾಳೆ ಬೆಳಿಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಕಾರ್ಯನಿರ್ವಹಣೆ

ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್​ಸಿ ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಣೆ ಮಾಡುವ ಕುರಿತು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು. ವಿಧಾನಸೌಧದಲ್ಲಿ ಸರ್ಕಾರದ ವತಿಯಿಂದ ವಿವಿಧ ನೇಮಕಾತಿ ಗಳ ಪ್ರಗತಿ ಪರಿಶೀಲನೆ ನಡೆಸಿದರು. ನೇಮಕಾತಿ ಪ್ರಕ್ರಿಯೆಗಳ ವಿಳಂಬದ ಕುರಿತು, ಕಾನೂನು ತೊಡಕುಗಳ ಕುರಿತು ಹಾಗೂ 371 ಜೆ ಅಡಿ ಮೀಸಲಾತಿಗೆ ಸಂಬಂಧಿಸಿದ ಸವಾಲುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಪ್ರತಿವರ್ಷ ಎಲ್ಲ ಇಲಾಖೆಗಳ ನೇಮಕಾತಿಗೆ ಏಕಕಾಲಕ್ಕೆ ಅಧಿಸೂಚನೆ ಹೊರಡಿಸಲು ಅನುವಾಗುವಂತೆ ಎಲ್ಲ ಇಲಾಖೆಗಳು ನಿಗದಿತ ಗಡುವಿನೊಳಗೆ ನೇಮಕಾತಿ ಕುರಿತು ಪ್ರಸ್ತಾವನೆಗಳನ್ನು ಸಲ್ಲಿಸಲು ಸೂಚಿಸಿದರು. ಪರೀಕ್ಷಾ ವೇಳಾಪಟ್ಟಿಯಲ್ಲಿ ಫಲಿತಾಂಶ ಪ್ರಕಟಣೆಯ ದಿನಾಂಕ ನಿಗದಿಪಡಿಸಲು ಸೂಚಿಸಲಾಯಿತು.

ಸಿಬ್ಬಂದಿ ಕೊರತೆ, ವಿವಿಧ ನೇಮಕಾತಿ ಪ್ರಾಧಿಕಾರಗಳ ಪರೀಕ್ಷೆಗಳೊಂದಿಗೆ ದಿನಾಂಕ ಕ್ಲಾಷ್‌ ಆಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ವಿವಿಧ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ನ್ಯೂನ್ಯತೆಯೂ ನೇಮಕಾತಿ ವಿಳಂಬಕ್ಕೆ ಒಂದು ಕಾರಣ ಎಂದು ಸಭೆಗೆ ವಿವರಿಸಲಾಯಿತು. ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳ ಕುರಿತು ಪರಿಶೀಲಿಸಿ, ಸಚಿವ ಸಂಪುಟ ಉಪಸಮಿತಿಯ ಆದೇಶಗಳ ಪಾಲನೆಯ ಕುರಿತು ಸಹ, ಸಚಿವ ಸಂಪುಟದ ಮುಂದೆ ವಿಷಯ ಮಂಡಿಸಲು ಸೂಚಿಸಿದರು.

ಸಚಿವ ಸಂಪುಟ ಉಪ ಸಮಿತಿಯ ಸೂಚನೆಗಳನ್ನು ಇಲಾಖಾ ಮುಖ್ಯಸ್ಥರು ಪಾಲಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿ ನೇಮಕಾತಿ ಪ್ರಕ್ರಿಯೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಲ್ಯಾಣ ಕರ್ನಾಟಕ ಕೋಶದ ಸಹಮತಿಯೊಂದಿಗೆ ಅಧಿಸೂಚನೆ ಹೊರಡಿಸಬೇಕೆಂದು ಸೂಚನೆ ನೀಡಲಾಯಿತು.

ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದ ನಂತರ ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗುವುದರಿಂದ ನೇಮಕಾತಿ ಆದೇಶ ನೀಡುವಲ್ಲಿಯೂ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಬಗ್ಗೆ ಇಲಾಖಾ ಮುಖ್ಯಸ್ಥರು, ಪ್ರತಿ ವಾರ ಪರಿಶೀಲನೆ ಮಾಡಬೇಕು. ಸುತ್ತೋಲೆಗಳ ಕೈಪಿಡಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಲು ಸೂಚಿಸಿದರು. ಮುಂದಿನ ವಾರ ಮತ್ತೊಮ್ಮೆ ಸಭೆ ಕರೆದು ಸಂಪೂರ್ಣ ಮಾಹಿತಿ ಪಡೆದು ಚರ್ಚಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಸಚಿವರಾದ ಜಿ ಪರಮೇಶ್ವರ, ಹೆಚ್​ಕೆ ಪಾಟೀಲ, ಈಶ್ವರ್‌ ಖಂಡ್ರೆ, ಕೆ ಸುಧಾಕರ್‌, ಎಂಸಿ ಸುಧಾಕರ್‌, ಎನ್ಎಸ್ ಬೋಸರಾಜು, ರಹೀಂ ಖಾನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅಪರ ಮುಖ್ಯ ಕಾರ್ಯದರ್ಶಿ ಎಲ್​ಕೆ ಅತೀಕ್‌, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

mysore-dasara_Entry_Point