ಮುಡಾದಲ್ಲಿ ಬಹುಕೋಟಿ ಹಗರಣ ಎಫೆಕ್ಟ್; ಸಿಎಂ ಸಿದ್ದರಾಮಯ್ಯ ವಿರುದ್ಧ ತವರು ಜಿಲ್ಲೆಯ ಜನರಿಂದಲೇ ವ್ಯಾಪಕ ಆಕ್ರೋಶ
ಸೋಮವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ಆರಂಭವಾಗಿವೆ. ಇಡಿ ದಾಳಿ ಬಳಿಕ ಇಂದು ಎಂದಿನಂತೆ ಮುಡಾ ಕಚೇರಿ ತೆರೆದಿದೆ. ಆದರೆ, ಮುಡಾದಲ್ಲಿ ಹಗರಣ ಬೆಳಕಿಗೆ ಬಂದ ನಂತರ ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಡಾದಲ್ಲಿ ಬಹುಕೋಟಿ ಹಗರಣದ ಪರಿಣಾಮವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ತವರು ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಡಾದಲ್ಲಿ ಹಗರಣ ಬೆಳಕಿಗೆ ಬಂದನಂತರ ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಸಿಆರ್ ಮಾಡಿಕೊಡುತ್ತಿಲ್ಲ, ಕಂದಾಯ ಕಟ್ಟಿಸಿಕೊಳ್ಳುತ್ತಿಲ್ಲ, ಇ ಖಾತೆ ಮಾಡಿಕೊಡುತ್ತಿಲ್ಲ. ಬೇಕಾದ ಕೆಲಸ ಸರಿಯಾಗಿ ಮಾಡಿಕೊಡದಿರುವುದರಿಂದ ಭಾರಿ ಸಮಸ್ಯೆಯಾಗುತ್ತಿದೆ. ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಳ್ಳಲು ಆಗುತ್ತಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಮೈಸೂರಿನವರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಾಗಿ ಜಿಲ್ಲೆಯ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಸಿಎಂ ಆಗಿ ಅವರು ಮಾಡಿರುವ ತಪ್ಪಿಗೆ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಜನರು ಕಿಡಿಕಾರಿದ್ದಾರೆ. ಈ ಕುರಿತು ರಾಬರ್ಟ್ ಅಂಥೋಣಿ, ಸತೀಶ್, ವೆಂಕಟೇಶ್ವರರಾವ್ ಹಾಗು ಶಿವಕುಮಾರ್ ಸೇರಿದಂತೆ ಇತರರು ಸುದ್ದಿಗಾರರ ಜೊತೆ ಮಾತನಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅಕ್ಟೋಬರ್ 19ರ ಶನಿವಾರ ಮುಡಾ ಕಚೇರಿಯಲ್ಲಿ ರಾತ್ರಿಯಿಡೀ ಇಡಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಬೆಳಗಿನ ಜಾವ 2.30 ಗಂಟೆವರೆಗೆ ಇಡಿ ಅಧಿಕಾರಿಗಳು ತಲಾಶ್ ನಡೆಸಿದ್ದರು. ರಾತ್ರಿಯಿಡಿ ನಡೆದ ಕಾರ್ಯಾಚರಣೆಗೆ ಮುಡಾದ ಆಯುಕ್ತ ರಘುನಂದನ್, ಕಾರ್ಯದರ್ಶಿ ಪ್ರಸನ್ನ ಕುಮಾರ್ ಸಾಥ್ ನೀಡಿದ್ದರು. ಅಧಿಕಾರಿಗಳು ಕೇಳಿದ ಎಲ್ಲಾ ದಾಖಲೆಗಳನ್ನು ಮುಡಾ ಸಿಬ್ಬಂದಿ ನೀಡಿದರು. ಹಾರ್ಡ್ ಡಿಸ್ಕ್ ಜೊತೆಗೆ ಜೆರಾಕ್ಸ್, ಮೂಲ ಪ್ರತಿಗಳನ್ನು ಸಿಆರ್‌ಪಿಎಫ್ ಪೊಲೀಸರ ಭದ್ರತೆಯಲ್ಲಿ ಇಡಿ ಅಧಿಕಾರಿಗಳು ಕೊಂಡೊಯ್ದರು.
ಭಾನುವಾರವಾದ ಕಾರಣ ಮುಡಾ ಕಚೇರಿಗೆ ಬೀಗ ಹಾಕಲಾಗಿತ್ತು. ಸ್ಥಳೀಯ ಪೊಲೀಸರನ್ನು ಹೊರತುಪಡಿಸಿ ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಮುಡಾ ಕಚೇರಿ ಆವರಣ ಖಾಲಿಯಾಗಿತ್ತು.
ಇಂದು ಕೆಲಸ ಕಾರ್ಯ ಆರಂಭ
ಇಂದಿನಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ಆರಂಭವಾಗಿವೆ. ಕಳೆದ ಶುಕ್ರವಾರ ಹಾಗೂ ಶನಿವಾರ ಇಡಿ ದಾಳಿ ನಡೆದ ಹಿನ್ನೆಲೆಯಲ್ಲಿ ಮುಡಾದ ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ನಿನ್ನೆ ಭಾನುವಾರ ರಜಾ ದಿನವಾಗಿತ್ತು. ಇಡಿ ದಾಳಿ ಬಳಿಕ ಇಂದು ಎಂದಿನಂತೆ ಮುಡಾ ಕಚೇರಿ ತೆರೆದಿದೆ. ಮುಡಾದ ಮಾಹಿತಿ ಕೇಂದ್ರವು ಓಪನ್ ಆಗಿದ್ದು, ಮುಡಾಗೆ ಸಾರ್ವಜನಿಕರು ಬಂದು ಹೋಗುತ್ತಿದ್ದಾರೆ.