Lokayukta Raid: ಬೆಂಗಳೂರು, ಮೈಸೂರು, ಬೀದರ್‌, ಕೊಡಗು ಸಹಿತ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲೋಕಾಯುಕ್ತ ಬೆಳ್ಳಿಂಬೆಳಿಗ್ಗೆ ಭ್ರಷ್ಟರ ಬೇಟೆ
ಕನ್ನಡ ಸುದ್ದಿ  /  ಕರ್ನಾಟಕ  /  Lokayukta Raid: ಬೆಂಗಳೂರು, ಮೈಸೂರು, ಬೀದರ್‌, ಕೊಡಗು ಸಹಿತ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲೋಕಾಯುಕ್ತ ಬೆಳ್ಳಿಂಬೆಳಿಗ್ಗೆ ಭ್ರಷ್ಟರ ಬೇಟೆ

Lokayukta Raid: ಬೆಂಗಳೂರು, ಮೈಸೂರು, ಬೀದರ್‌, ಕೊಡಗು ಸಹಿತ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲೋಕಾಯುಕ್ತ ಬೆಳ್ಳಿಂಬೆಳಿಗ್ಗೆ ಭ್ರಷ್ಟರ ಬೇಟೆ

Karnataka Lokayukta Raids ಕರ್ನಾಟಕದಲ್ಲಿ ಗುರುವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಭಾರೀ ಪ್ರಮಾಣದಲ್ಲಿ ದಾಳಿ ಮಾಡಿದೆ. ಭ್ರಷ್ಟ ಅಧಿಕಾರಿಗಳ ನಿವಾಸ, ತೋಟಗಳ ಮೇಲೂ ದಾಳಿ ನಡೆಸಿ ಆಸ್ತಿ, ಹಣ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ನಗರ, ಮೈಸೂರು ಸಹಿತ ಹಲವು ಕಡೆ ದಾಳಿ ಮುಂದುವರಿದಿದೆ. ಈ ಕುರಿತ ವಿವರ ಇಲ್ಲಿದೆ.

ಬೀದರ್‌ನಲ್ಲಿ ಪೊಲೀಸ್‌ ಪೇದೆಯೊಬ್ಬರ ಕಾರನ್ನು ತಪಾಸಣೆಗೊಳಪಡಿಸಿದ ಲೋಕಾಯುಕ್ತ ಪೊಲೀಸರು.
ಬೀದರ್‌ನಲ್ಲಿ ಪೊಲೀಸ್‌ ಪೇದೆಯೊಬ್ಬರ ಕಾರನ್ನು ತಪಾಸಣೆಗೊಳಪಡಿಸಿದ ಲೋಕಾಯುಕ್ತ ಪೊಲೀಸರು. (ANI)

ಬೆಂಗಳೂರು/ ಮಡಿಕೇರಿ/ದಾವಣಗೆರೆ ಕರ್ನಾಟಕದಲ್ಲಿ ಗುರುವಾರ ಬೆಳ್ಳಿಂಬೆಳಿಗ್ಗೆ ಲೋಕಾಯುಕ್ತ ದಾಳಿ ಜೋರಾಗಿದೆ. ಬೆಂಗಳೂರು, ಬೀದರ್‌, ಕೊಡಗು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ತಂಡಗಳು ದಾಳಿ ನಡೆಸಿವೆ.

200 ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿಯಿಂದ ಮುಂಜಾನೆ 4ರ ಹೊತ್ತಿಗೆ ಅಧಿಕಾರಿಗಳ ಮನೆ ಬಾಗಿಲು ಬಡಿದರು. ವಿಶೇಷವಾಗಿ ಬೆಂಗಳೂರು ನಗರ, ಧಾರವಾಡ ಮೈಸೂರು,ರಾಯಚೂರು, ಚಿತ್ರದುರ್ಗ, ಬೀದರ್, ತುಮಕೂರು, ದಾವಣಗೆರೆ, ಕೊಡಗಿನಲ್ಲಿ ದಾಳಿಯಾಗಿದೆ. ಈಚೆಗೆ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದ ಬಿಬಿಎಂಪಿ( BBMP) ಅಧಿಕಾರಿ, ನಿವೃತ್ತರಾಗಿರುವ ಪಂಚಾಯತ್‌ರಾಜ್‌ ಇಲಾಖೆ ನಿರ್ದೇಶಕರ ನಿವಾಸದ ಮೇಲೂ ದಾಳಿಯಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ನಂತರ ಅತಿ ದೊಡ್ಡ ದಾಳಿಯಿದು. ಒಂದೇ ಬಾರಿಗೆ 50 ಕಡೆ ದಾಳಿ ನಡೆಸಿ ಅಪಾರ ಹಣ, ಆಸ್ತಿ ಪತ್ರ,, ಆಭರಣಗಳನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ನಗರ

ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಸುಮಾರು 23 ಕಡೆಗಳಲ್ಲಿ ಲೋಕಾಯುಕ್ತ ರೇಡ್ ಆಗಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಲಯದ ಕಂದಾಯ ನಿರೀಕ್ಷಕ ನಟರಾಜು ಅವರ ಗಿರಿ ನಗರ, ಆವಲಹಳ್ಳಿಯಲ್ಲಿರುವ ನಿವಾಸಿಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅವರ ಮನೆಯಲ್ಲಿ ನಗದು ಸೇರಿದಂತೆ ಹಲವು ದಾಖಲೆಗಳು ಪೊಲೀಸರಿಗೆ ದೊರೆತಿದೆ. ಲಂಚ ಪಡೆದ ಪ್ರಕರಣದಲ್ಲಿ ನಟರಾಜ್‌ ಅವರನ್ನುಬಂಧಿಸಲಾಗಿತ್ತು. ಈಗ ಅವರ ಮನೆಯ ಮೇಲೆ ದಾಳಿಯಾಗಿದೆ.

ಇದಲ್ಲದೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಗ್ರೇಡ್‌ 2 ತಹಸಿಲ್ದಾರ್‌ ಶಿವರಾಜ್‌, ಚಿಕ್ಕಜಾಲ ಗ್ರಾಮಪಂಚಾಯಿತಿಯ ಲಕ್ಷ್ಮಿಪತಿ ಸೇರಿದಂತೆ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆಯೂ ದಾಳಿ ಮಾಡಲಾಗಿದೆ. ಅವರಿಗೆ ಸಂಬಂಧಿಸಿದ ಆಸ್ತಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ನಿರ್ದೇಶಕರಾಗಿ ನಿವೃತ್ತರಾಗಿದ್ದ ಭುವನಹಳ್ಳಿ ನಾಗರಾಜ್‌ ಅವರ ನಿವಾಸದ ಮೇಲೂ ದಾಳಿ ಮಾಡಲಾಗಿದೆ. ಭೂವನಹಳ್ಳಿ ನಾಗರಾಜ್‌ ನಿವೃತ್ತಿ ನಂತರ ತುಮಕೂರು ಜನಸ್ಪಂದನ ಕಚೇರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬೆಂಗಳೂರು ನಿವಾಸ, ಕಚೇರಿ ಮೇಲೂ ದಾಳಿ ಮಾಡಿರುವ ಮಾಹಿತಿ ಲಭ್ಯವಾಗಿದೆ.

ಕೊಡಗಿನಲ್ಲಿ ಎಡಿಸಿ

ಕೊಡಗು( Kodagu) ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರ ನಿವಾಸಮೇಲೆ ಬೆಳಗಿನ ಜಾವ 4 ಕ್ಕೆ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಮಡಿಕೇರಿಯ ಸುದರ್ಶನ ವೃತ್ತದ ಬಳಿ ಇರುವ ಅಪರ ಜಿಲ್ಲಾಧಿಕಾರಿ ನಿವಾಸಕ್ಕೆ ಅಧಿಕಾರಿಗಳ ತಂಡ ದಾಳಿ ನಡೆಸಿ ಮಾಹಿತಿ ಕಲೆ ಹಾಕಿತು. ಹಲವಾರು ದಾಖಲೆ, ನಗದು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಪಿರಿಯಾಪಟ್ಟಣದಲ್ಲಿರುವ ನಂಜುಂಡೇಗೌಡ ಅವರ ನಿವಾಸ ಹಾಗೂ ಮೈಸೂರಿನಲ್ಲಿರುವ ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಿ ಅಲ್ಲಿಯೂ ಕೆಲವು ದಾಖಲೆ ಸಂಗ್ರಹಿಸಲಾಗಿದೆ.

ದಾಳಿ ವೇಳೆ ನಂಜುಂಡೇಗೌಡ ಮನೆಯಲ್ಲಿ 11.5 ಲಕ್ಷ ರೂಪಾಯಿ ನಗದು ಹಾಗೂ 385 ಗ್ರಾಂ ಚಿನ್ನಾಭರಣ ಹಾಗೂ 350 ಗ್ರಾಂ ಬೆಳ್ಳಿ ವಸ್ತುಗಳು ಪತ್ತೆಯಾಗಿದೆ. ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದಲ್ಲಿ ಮೂವರು ಇನ್ಸ್ಪೆಕ್ಟರ್ ಮತ್ತು 10ಕ್ಕೂ ಹೆಚ್ಚು ಸಿಬ್ಬಂದಿ ದಾಳಿ ಮಾಡಿದ್ದಾರೆ. ಕೊಡಗು ಮತ್ತು ಮೈಸೂರು ಜಿಲ್ಲೆ ಲೋಕಾಯುಕ್ತ ಪೊಲೀಸರ ಜಂಟಿ ಕಾರ್ಯಾಚರಣೆ ಇದಾಗಿದೆ. ಮಡಿಕೇರಿಯ ಕಾರ್ಯಪ್ಪ ವೃತ್ತದ ಬಳಿಯಿರುವ ನಂಜುಂಡೇಗೌಡರ ವಸತಿಗೃಹದ ಮೇಲೆ ದಾಳಿಯಾಗಿದ್ದು, ಕಡತಗಳ ಪರಿಶೀಲನೆ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಮಾಕನಳ್ಳಿಯಲ್ಲಿರುವ ಮಾವನ ಮನೆ ಹಾಗೂ ಮೈಸೂರಿನಲ್ಲಿರುವ ಭಾವನ ಮನೆಯಲ್ಲೂ ಶೋಧ ಕಾರ್ಯ ನಡೆದಿದೆ.

ಮೈಸೂರು ಜಿಲ್ಲೆಯವರಾದ ನಂಜುಂಡೇಗೌಡ ಈ ಹಿಂದೆ ಪಿರಿಯಾಪಟ್ಟಣ ತಹಸಿಲ್ದಾರ್‌ ಆಗಿ, ಆನಂತರ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಇದಲ್ಲದೇ ಹಾರಂಗಿ ಜಲಾಶಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿರುವ ರಘುಪತಿ ಅವರ ನಿವಾಸದ ಮೇಲೂ ದಾಳಿಯಾಗಿದೆ. ಮೈಸೂರಿನ ವಿಜಯನಗರದಲ್ಲಿರುವ ರಘುಪತಿ ಅವರ ನಿವಾಸದಲ್ಲಿ ಲೆಕ್ಕಪತ್ರ ಶೋಧ ನಡೆದಿದೆ.

ಪೊಲೀಸ್‌ ಪೇದೆ ಕಾರು ಶೋಧ

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಬೀದರ್ ಜಿಲ್ಲೆಯ ಚಿಟಗುಪ್ಪ ಪೊಲೀಸ್‌ ಠಾಣೆಯ ಪೊಲೀಸ್ ಪೇದೆ ವಿಜಯಕುಮಾರ್ ಎಂಬುವರ ಎರಡು ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿದೆ.

ಬೀದರ್ ಜಿಲ್ಲೆಯ ಲೋಕಾಯುಕ್ತ ಡಿವೈಎಸ್ಪಿ ಓಲೇಕರ್ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಗ್ಗೆ ಪೊಲೀಸ್ ಪೇದೆಯ ಮನೆಗಳಾದ ಬೀದರ್ ತಾಲೂಕಿನ ಹೊಸಕನಹಳ್ಳಿ ಗ್ರಾಮ ಮತ್ತು ಹುಮನಾಬಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿರುವ ಅವರ ಮನೆಗಳ ಮೇಲೆ ನಡೆಸಿ, ಶೋಧನಾ ಕಾರ್ಯ ಮುಂದುವರಿಸಿದ್ದಾರೆ.

ಕೇವಲ ಒಬ್ಬ ಪೊಲೀಸ್ ಪೇದೆಯಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಎರಡು ಬಂಗಲೆ ಸೇರಿದಂತೆ ಹಣ, ಚಿನ್ನಾಭರಣ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಶೋಧನಾ ಕಾರ್ಯ ಮುಂದುವರಿದರಿಂದ ಸ್ಪಷ್ಟವಾಗಿ ಹೇಳಲಾಗದು ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಂಪತಿ ಮೇಲೆ ಲೋಕಾ ದಾಳಿ; 1.47 ಕೋಟಿ ಮೌಲ್ಯದ ಆಸ್ತಿ ಪತ್ತೆ

ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿರುವ ಲೋಕಾಯುಕ್ತ ಇಲಾಖೆ ಬೆಳಂಬೆಳಿಗ್ಗೆಯೇ ದಾವಣಗೆರೆ‍ಯಲ್ಲಿ ಇಬ್ಬರು ಭ್ರಷ್ಟ ಅಧಿಕಾರಿಗಳನ್ನು ಬೇಟೆಯಾಡಿದೆ

ಹೊಳಲ್ಕೆರೆಯ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕೆ. ಮಹೇಶ್ ಮತ್ತವರ ಪತ್ನಿಯೂ ಆಗಿರುವ ಬಿಬಿಎಂಪಿ ಎಇ ಹೆಚ್. ಭಾರತಿ ಅವರ ಜಯನಗರದಲ್ಲಿನ ಮನೆ ಮೇಲೆ ಚಿತ್ರದುರ್ಗ ಲೊಕಾಯುಕ್ತ ಎಸ್ಪಿ ವಾಸುದೇವ್ ರಾಮ್ ಹಾಗು ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದ ತಂಡ ದಾಳಿ ನಡೆಸಿದೆ.

ಇಲ್ಲಿನ ಜಯನಗರದಲ್ಲಿ ಮನೆ ಹಾಗೂ ಚಿತ್ರದುರ್ಗದ ಹೊಳಲ್ಕೆರೆ, ಚನ್ನಗಿರಿಯ ಆರ್‌ಎಫ್‌ಓ ಮನೆ ಮೇಲೆ ಗುರುವಾರ ಬೆಳಿಗ್ಗೆ ಏಕಕಾಲದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದು 1.47 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.

ಆದಾಯಕ್ಕಿಂತ ಹೆಚ್ಚು ಸಂಪಾದನೆ ಮಾಡಿರುವ ಆರೋಪದ ಮೇರೆಗೆ ದಾಳಿ ನಡೆಸಿದ್ದು, ದಾಳಿ ವೇಳೆ ಅಪಾರ ಪ್ರಮಾಣದ ಬಂಗಾರ, ಬೆಳ್ಳಿ, ಹಣ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.

ಆರ್‌ಎಫ್‌ಓ ಮನೆ: ಚನ್ನಗಿರಿ ಅರಣ್ಯ ಇಲಾಖೆಯ ಆರ್.ಎಫ್.ಒ ಸತೀಶ್ ಅವರ ಚನ್ನಗಿರಿಯ ಕ್ವಾಟ್ರಸ್ ಮತ್ತು ಶಿವಮೊಗ್ಗದಲ್ಲಿನ ನಿವಾಸದ ಮೇಲೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎ. ಕೌಲಾಪುರೆ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಇನ್ಸ್ ಪೆಕ್ಟರ್ ನಂದೀಶ್, ಮಧುಸೂಧನ್ ತಂಡ ಶೋಧ ನಡೆಸುತ್ತಿದೆ.

ಭಾರತಿ 2006 ರಲ್ಲಿ ಕೆಲಸಕ್ಕೆ ಸೇರಿದ್ದು ಇವರ ಪತಿ 2017 ರಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಹುದ್ದೆ ಪಡೆದಿದ್ದಾರೆ. ಇವರ ಒಟ್ಟು ಆದಾಯ 70ಲಕ್ಷ ರೂಪಾಯಿ. ಈಗ ಪತ್ತೆಯಾಗಿರುವುದು 1.47 ಕೋಟಿ ಅಸಮಾತೋಲನ ಆಸ್ತಿ. 850 ಗ್ರಾಂ ಚಿನ್ನಾಭರಣ, 410 ಗ್ರಾಂ ಬೆಳ್ಳಿ ಆಭರಣ, ಬುಲೇರೋ, ಕಾರು, ಒಂದು ಸ್ಕೂಟಿ ಪತ್ತೆಯಾಗಿದೆ. ಹೊಳಲ್ಕೆರೆ ಹಾಗೂ ಇತರೆ ಕಡೆಗಳಲ್ಲಿ ಅಂದಾಜು 12 ಎಕರೆ ತೋಟ, ಹೊಲ ಹೊಂದಿರುವ ಬಗ್ಗೆ ದಾಖಲೆ ದೊರಕಿದೆ. ಇನ್ನೂ ಮೂರು ಕಡೆಗಳಲ್ಲಿಯೂ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಕರ್ನಾಟಕದಲ್ಲಿ ಕೈಗೊಂಡಿರುವ ಅತಿ ದೊಡ್ಡ ದಾಳಿಯಿದು. ಸಂಜೆವರೆಗೂ ದಾಳಿ ಮುಂದುವರಿಯಲಿದ್ದು. ಆನಂತರ ದಾಳಿಯ ಪ್ರಮಾಣ, ವಶಪಡಿಸಿಕೊಂಡ ಹಣ, ಆಸ್ತಿಯ ವಿವರ ಸಿಗಲಿದೆ ಎನ್ನುವುದು ಲೋಕಾಯುಕ್ತ ಹಿರಿಯ ಅಧಿಕಾರಿಯೊಬ್ಬರ ವಿವರಣೆ.

Whats_app_banner