Shimoga News: ಸರ್ಕಾರಿ ಭೂಮಿ ಒತ್ತುವರಿ ಆರೋಪ, 90ರ ಇಳಿವಯಸ್ಸಿನ ಸಣ್ಣ ರೈತರ ಮೇಲೆ ಸರ್ಕಾರದ ಕೇಸ್‌, ಜೈಲು ಶಿಕ್ಷೆಗೆ ಆದೇಶ
ಕನ್ನಡ ಸುದ್ದಿ  /  ಕರ್ನಾಟಕ  /  Shimoga News: ಸರ್ಕಾರಿ ಭೂಮಿ ಒತ್ತುವರಿ ಆರೋಪ, 90ರ ಇಳಿವಯಸ್ಸಿನ ಸಣ್ಣ ರೈತರ ಮೇಲೆ ಸರ್ಕಾರದ ಕೇಸ್‌, ಜೈಲು ಶಿಕ್ಷೆಗೆ ಆದೇಶ

Shimoga News: ಸರ್ಕಾರಿ ಭೂಮಿ ಒತ್ತುವರಿ ಆರೋಪ, 90ರ ಇಳಿವಯಸ್ಸಿನ ಸಣ್ಣ ರೈತರ ಮೇಲೆ ಸರ್ಕಾರದ ಕೇಸ್‌, ಜೈಲು ಶಿಕ್ಷೆಗೆ ಆದೇಶ

Land Encroahment ಆರು ದಶಕಗಳ ಹಿಂದೆ ಸರ್ಕಾರವೇ ನೀಡಿದ್ದ ಭೂಮಿ ಈಗ ಒತ್ತುವರಿ ಸ್ವರೂಪ ಪಡೆದು ಸಣ್ಣ ರೈತರು ಜೈಲು ಸನ್ನಿವೇಶ ಶಿವಮೊಗ್ಗ ಜಿಲ್ಲೆಯಲ್ಲಿ ಎದುರಾಗಿದೆ. ಈ ಕುರಿತು ವರದಿ ಇಲ್ಲಿದೆ.

ಹಾಸಿಗೆ ಹಿಡಿದ ಬಸಪ್ಪಗೆ ಈಗ ಜೈಲು ಶಿಕ್ಷೆ ಜಾರಿಯಾಗಿದೆ, ಜತೆಯಲ್ಲಿ ಪತ್ನಿ ಸುಶೀಲಮ್ಮ ಇದ್ಧಾರೆ
ಹಾಸಿಗೆ ಹಿಡಿದ ಬಸಪ್ಪಗೆ ಈಗ ಜೈಲು ಶಿಕ್ಷೆ ಜಾರಿಯಾಗಿದೆ, ಜತೆಯಲ್ಲಿ ಪತ್ನಿ ಸುಶೀಲಮ್ಮ ಇದ್ಧಾರೆ (GT Sathish)

ಶಿವಮೊಗ್ಗ: ಅವರಿಗೀಗ ಬರೋಬ್ಬರಿ 90 ವರ್ಷ. ಏಳು ದಶಕಕ್ಕೂ ಹೆಚ್ಚು ಕಾಲ ಕೃಷಿಯನ್ನೇ ನಂಬಿ ಅದನ್ನೇ ಮುಂದುವರೆಸಿಕೊಂಡು ಬಂದವರು. ಅನಾದಿ ಕಾಲದಿಂದಲೂ ತಮ್ಮದೇ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಕೃಷಿ ಕಾಯಕದೊಂದಿಗೆ ಕುಟುಂಬವನ್ನೂ ನಿರ್ವಹಣೆ ಮಾಡುತ್ತಾ ಬಂದವರು. ಜಮೀನು ನಿಮ್ಮದಲ್ಲ. ಸರ್ಕಾರದ್ದು ಎನ್ನುವ ತಕರಾರು ಅವರನ್ನು ಇತ್ತೀಚಿನ ವರ್ಷಗಳಲ್ಲಿ ಬಾಧಿಸುತ್ತಲೇ ಇತ್ತು. ಕಾನೂನು ಎನ್ನುವುದು ನಮ್ಮ ಪರವಾಗಿ ಇರಲಿದೆ. ಬದುಕಲು ಇಟ್ಟುಕೊಂಡ ಭೂಮಿ ಆಧಾರದಲ್ಲಿಯೇ ತೊಂದರೆ ಹೆಚ್ಚಾಗುತ್ತಲೇ ಇತ್ತು. ಈಗ ಜೈಲು ವಾಸ ಎದುರಿಸುವ ಶಿಕ್ಷೆ ಗುರಿಯಾಗಿಎ.ಇಳಿ ವಯಸ್ಸಿನಲ್ಲಿ ಜೈಲಿಗೆ ಹೋಗುವ ಪರಿಸ್ಥಿತಿ. ಅದೂ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಒಂದೇ ಆರೋಪಕ್ಕೆ.

ಇಂತಹ ಬೆಳವಣಿಗೆಗಳು ನಡೆದಿರುವುದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ಕಂದಾಯ ಇಲಾಖೆ ಹೂಡಿದ ಮೊಕದ್ದಮೆಯಿಂದ ಹಲವಾರು ಸಣ್ಣ ರೈತರು ಈಗ ಶಿಕ್ಷೆ ಅನುಭವಿಸಬೇಕಾದ ಸನ್ನಿವೇಶ ಬಂದಿರುವ ಪ್ರಸಂಗಗಳು ಬೇರೆ ಕಡೆಯೂ ವರದಿಯಾಗುತ್ತಲೇ ಇವೆ.

ಅವರ ಹೆಸರು ಬಸಪ್ಪ, ಊರು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಭದ್ರಾಪುರ. ತಂದೆಯ ಕಾಲದಿಂದಲೂ ಕೃಷಿಯನ್ನೇ ನಂಬಿ ಬಂದವರು ಬಸಪ್ಪ. ಅವರ ಪತ್ನಿ ಸುಶೀಲಮ್ಮ ಕೂಡ ಪತಿಗೆ ಜತೆಯಾದವರೇ. ಈಗ ಮೊದಲಿನಿಂದಲೇ ಬಸಪ್ಪ ಅವರಿಗೆ ಶಕ್ತಿಯೂ ಇಲ್ಲ. ಹಾಸಿಗೆಯಲ್ಲಿ ಮಲಗಿದ್ದರೆ ಏಳುವುದೇ ಕಷ್ಟ. ಅಂತವರಿಗೆ ಕಳೆದ ತಿಂಗಳು ನೀಡಿದ ತೀರ್ಪು ಆಘಾತ ತಂದಿದೆ. ಕುಟುಂಬದ ಪ್ರಕಾರ, ಬಸಪ್ಪನ ತಂದೆಗೆ 1957 ರಲ್ಲಿ ಮೂರು ಎಕರೆ ಮತ್ತು 20 ಗುಂಟಾ ಭೂಮಿಯನ್ನು ನೀಡಲಾಯಿತು. ಅವರು ಭೂಮಿಯನ್ನು ಕೃಷಿ ಮಾಡುತ್ತಿದ್ದಾರೆ, ಮತ್ತು ಕುಟುಂಬ ಬೆಳೆದಂತೆ, ಅವರು ತಮ್ಮ ಆಸ್ತಿಯ ಪಕ್ಕದಲ್ಲಿ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಇದರ ನಡುವೆಯೇ ತೀರ್ಪು ಬಂದಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದ್ದಕ್ಕಾಗಿ ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ತಡೆ ನಿಷೇಧ ವಿಶೇಷ ನ್ಯಾಯಾಲಯ(Karnataka Land Grabbing Prohibition Special Court ) ಬಸಪ್ಪನನ್ನು ದೋಷಿ ಎಂದು ಘೋಷಿಸಿದೆ. ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯವು ಆದೇಶ ನೀಡಿದೆ. ಬೆಂಗಳೂರಿಗೆ ಹೋಗಲು ಆಗದ್ದಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ನ್ಯಾಯಾಲಯವು ವಿಚಾರಣೆ ಪೂರ್ಣಗೊಳಿಸಿ ಈ ತೀರ್ಪು ಹೊರಡಿಸಿದೆ.

ವಿಶೇಷ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಿದ ದಿನವಾದ ಜುಲೈ 25 ರಂದು ಬಸಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸಿದ್ದರು ವಿಡಿಯೋ ಕಾನ್ಫರೆನ್ಸ್ಗಾಗಿ ನಾವು ಅವರನ್ನು ಕ್ಯಾಮೆರಾದ ಮುಂದೆ ಕುಳಿತುಕೊಳ್ಳುವಂತೆ ಮಾಡಿದೆವು. ಅವರಿಗೆ ಒಂದು ಮಾತನ್ನೂ ಹೇಳಲು ಸಾಧ್ಯವಾಗಲಿಲ್ಲ. ವಿಚಾರಣೆ ಏನೆಂದು ಅವರಿಗೆ ಅರ್ಥವಾಗಲಿಲ್ಲ ಎಂದು ಅವರ ಮಗ ಐಯ್ಯಣ್ಣ ಬಿ ಹೇಳುತ್ತಾ ಹೋದರು.

ಶಿಕಾರಿಪುರ ತಾಲ್ಲೂಕಿನ ಭದ್ರಾಪುರದಲ್ಲಿ ಸರ್ವೇ ಸಂಖ್ಯೆ 19 ರಲ್ಲಿ 36 ಗುಂಟೆ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದ ಆರೋಪದ ಮೇಲೆ ವಿಶೇಷ ನ್ಯಾಯಾಲಯವು ಬಸಪ್ಪ ಅವರಿಗೆ ಶಿಕ್ಷೆ ವಿಧಿಸಿದೆ. ಮತ್ತೊಂದು ಪ್ರಕರಣದಲ್ಲಿ, 25 ಗುಂಟಾ ಭೂಮಿಯನ್ನು ಅತಿಕ್ರಮಿಸಿದ್ದಕ್ಕಾಗಿ ಅವರ ನೆರೆಯ ಚನ್ನಯ್ಯ (71) ಅವರನ್ನು ಅಪರಾಧಿ ಎಂದು ಘೋಷಿಸಲಾಗಿದೆ.

ನ್ಯಾಯಾಲಯವು ಇಬ್ಬರಿಗೂ ಒಂದು ವರ್ಷದ ಸರಳ ಜೈಲು ಶಿಕ್ಷೆಯನ್ನು ವಿಧಿಸಿ ಜೊತೆಗೆ ತಲಾ 5,000 ರೂ. ದಂಡವನ್ನು ವಿಧಿಸಿದೆ. ಅವರು ದಂಡವನ್ನು ಪಾವತಿಸಲು ವಿಫಲವಾದರೆ, ಅವರು ಮೂರು ತಿಂಗಳ ಹೆಚ್ಚುವರಿ ಸೆರೆವಾಸವನ್ನು ಅನುಭವಿಸಬೇಕಾಗುತ್ತದೆ. ಅತಿಕ್ರಮಿಸಿದ ಭೂಮಿಯನ್ನು 60 ದಿನಗಳಲ್ಲಿ ಮರುಪಡೆಯಲು ಮತ್ತು ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ನ್ಯಾಯಾಲಯವು ಶಿಕಾರಿಪುರದ ತಹಸಿಲ್ದಾರರಿಗೆ ಆದೇಶಿಸಿತು.

ಇದೇ ರೀತಿಯ ಪ್ರಕರಣವೊಂದರಲ್ಲಿ ಶಿವಮೊಗ್ಗ ಜಿಲ್ಲೆಯ ಬಿಕ್ಕನಹಳ್ಳಿಯ ಮತ್ತೊಬ್ಬ ರೈತ ಚಂದ್ರಪ್ಪ ಅವರಿಗೂ ಶಿಕ್ಷೆ ವಿಧಿಸಲಾಗಿದೆ. ಪ್ರಸ್ತುತ, ಎಲ್ಲಾ ಮೂರು ರೈತರು ಜಾಮೀನಿನ ಮೇಲೆ ಇದ್ದಾರೆ.

ಸರ್ಕಾರದ ನಡೆ ಬಸಪ್ಪ ಅವರ ಪತ್ನಿ ಸುಶೀಲಮ್ಮ ಮಾತ್ರವಲ್ಲದೇ ಈ ಊರಿನ ಹಲವರಿಗೆ ಸಿಟ್ಟು ತರಿಸಿದೆ. ರೈತರು ಕೃಷಿಗಾಗಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ಅನುದಾನಕ್ಕಾಗಿ ಅರ್ಜಿ ಸಲ್ಲಿಸಿದ ಅನೇಕ ಪ್ರಕರಣಗಳಿವೆ. ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಯ್ಯಣ್ಣ ಅವರು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇದರ ನಡುವೆಯೇ ವಿಶೇಷ ನ್ಯಾಯಾಲಯದ ಆದೇಶ ಹೊರ ಬಿದ್ದಿದೆ.

ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಎಚ್. ಆರ್. ಬಸವರಾಜಪ್ಪ ಅವರಂತೂ ಸರ್ಕಾರದ ಕ್ರಮಕ್ಕೆ ಆಕ್ರೋಶವನ್ನೇ ಹೊರ ಹಾಕುತ್ತಾರೆ. ಸರ್ಕಾರವು ಜನರಿಗೆ ಜೀವನೋಪಾಯ ಗಳಿಸಲು ಅವಕಾಶಗಳನ್ನು ಒದಗಿಸಬೇಕು. ಸಣ್ಣ ರೈತನು ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದ್ದರೆ, ಅದು ಅವನ ಉಳಿವಿಗಾಗಿ. ಅಂತಹ ಜನರ ವಿರುದ್ಧ ನ್ಯಾಯಾಲಯಕ್ಕೆ ಹೋಗುವ ಮೊದಲು ಸರ್ಕಾರವು ಅವರ ಅವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕು. ದೊಡ್ಡವರ ಒತ್ತುವರಿ ಮೊದಲು ತೆರವು ಮಾಡಬೇಕು ಎನ್ನುತ್ತಾರೆ.

ಈ ಎಲ್ಲಾ ವರ್ಷಗಳಲ್ಲಿ ನಾವು ನಮ್ಮ ಭೂಮಿಯಲ್ಲಿ ಮೆಕ್ಕೆಜೋಳ ಮತ್ತು ಭತ್ತವನ್ನು ಬೆಳೇದಿ ದ್ದೇವೆ. ಸುಮಾರು ಆರು ವರ್ಷಗಳ ಹಿಂದೆ, ನಾನು ಭೂಮಿಯಲ್ಲಿ ಅಡಿಕೆ ನೆಟ್ಟಿದ್ದೆ. ಈ ವರ್ಷ ಮೊದಲ ಇಳುವರಿಯನ್ನು ನಾನು ನಿರೀಕ್ಷಿಸುತ್ತಿದ್ದರೂ, ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ನಾನು ಚಿಂತೆಗೀಡಾಗಿದ್ದೇನೆ. ಅಧಿಕಾರಿಗಳು ಯಾವುದೇ ಸಮಯದಲ್ಲಿ ಬಂದು ಸಂಪೂರ್ಣವಾಗಿ ಬೆಳೆದ ಅಡಕೆ ಗಿಡಗಳನ್ನು ಕತ್ತರಿಸಬಹುದು ಎಂದು ಹೇಳುವಾಗ ಅಯ್ಯಣ್ಣ ಅವರ ಮುಖದಲ್ಲಿ ಆತಂಕವಿದ್ದುದು ಕಾಣುತ್ತಿತ್ತು.

Whats_app_banner