ಫಲಿತಾಂಶ ವಿಶ್ಲೇಷಣೆ: ಅಭ್ಯರ್ಥಿ ಬದಲಾಯಿಸಿದರೂ ಬಿಜೆಪಿ ಕೈಬಿಡದ ಉತ್ತರ ಕನ್ನಡ ಮತದಾರ
ಕನ್ನಡ ಸುದ್ದಿ  /  ಕರ್ನಾಟಕ  /  ಫಲಿತಾಂಶ ವಿಶ್ಲೇಷಣೆ: ಅಭ್ಯರ್ಥಿ ಬದಲಾಯಿಸಿದರೂ ಬಿಜೆಪಿ ಕೈಬಿಡದ ಉತ್ತರ ಕನ್ನಡ ಮತದಾರ

ಫಲಿತಾಂಶ ವಿಶ್ಲೇಷಣೆ: ಅಭ್ಯರ್ಥಿ ಬದಲಾಯಿಸಿದರೂ ಬಿಜೆಪಿ ಕೈಬಿಡದ ಉತ್ತರ ಕನ್ನಡ ಮತದಾರ

Uttara Kannada Lok Sabha election 2024: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಿರೀಕ್ಷಿತ ಗೆಲುವು ಸಾಧಿಸಿದ್ದಾರೆ. ಖಾನಾಪುರದ ಮಾಜಿ ಶಾಸಕಿ ಕಾಂಗ್ರೆಸ್‌ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಸೋತಿದ್ದಾರೆ. ಫಲಿತಾಂಶ ವಿಶ್ಲೇಷಣೆ ಹೀಗಿದೆ. (ಹರೀಶ ಮಾಂಬಾಡಿ, ಮಂಗಳೂರು)

ಅಭ್ಯರ್ಥಿ ಬದಲಾಯಿಸಿದರೂ ಬಿಜೆಪಿ ಕೈಬಿಡದ ಉತ್ತರ ಕನ್ನಡ ಮತದಾರ
ಅಭ್ಯರ್ಥಿ ಬದಲಾಯಿಸಿದರೂ ಬಿಜೆಪಿ ಕೈಬಿಡದ ಉತ್ತರ ಕನ್ನಡ ಮತದಾರ

ಮಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳೇ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಕಣಕ್ಕಿಳಿದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಿರಂತರ ಜಯವನ್ನು ಮುಂದುವರೆಸಿದೆ. ಸತತ ಜಯ ಸಾಧಿಸುತ್ತಾ ಬಂದು, ಉತ್ತರ ಕನ್ನಡ ಕ್ಷೇತ್ರ (ಹಿಂದಿನ ಕೆನರಾ)ವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಬಿಜೆಪಿಯ ಗೆಲುವಿನ ರೂವಾರಿ, ಹಿಂದುತ್ವದ ಫೈರ್ ಬ್ರಾಂಡ್ ಎಂದೇ ಹೇಳಲಾಗುತ್ತಿರುವ ಅನಂತ ಕುಮಾರ ಹೆಗಡೆ ಅವರಿಗೆ ಹೈಕಮಾಂಡ್ ಧೈರ್ಯವಾಗಿ ಟಿಕೆಟ್ ನಿರಾಕರಿಸಿತ್ತು. ಹೀಗಾಗಿ ವಿಧಾನಸಭೆಯಲ್ಲಿ ದಯನೀಯವಾಗಿ ಸೋಲು ಕಂಡಿದ್ದ ಕಳೆದ ಬಾರಿಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಅಂತೆಯೇ ಕಾಂಗ್ರೆಸ್ ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ನೀಡಿತ್ತು. ಕಾಗೇರಿ ಅವರು ಪಕ್ಷದೊಳಗಿನ ಪ್ರತಿಕೂಲ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಿ, ಜಯಶಾಲಿಯಾಗಿದ್ದು ಕಟ್ಟರ್ ಬಿಜೆಪಿಯ ಮತಗಳು ಎಲ್ಲೂ ಹೋಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಅರವಿಂದ ಗೌಡ, ಅವಿನಾಶ ಪಾಟೀಲ, ಗಣಪತಿ ಹೆಗಡೆ, ಚಿದಾನಂದ, ಕೃಷ್ಣಾಜಿ ಪಾಟೀಲ, ಕೃಷ್ಣ ಹನುಮಂತಪ್ಪ ಬಳೆಗಾರ, ನಾಗರಾಜ್ ಅನಂತ ಶಿರಾಳಿ, ನಿರಂಜನ್ ಸರ್ದೇಸಾಯಿ ಕಣದಲ್ಲಿದ್ದರು.

ಕಾಂಗ್ರೆಸ್ – ಬಿಜೆಪಿ ಲೆಕ್ಕಾಚಾರಗಳು ಹೇಗಿತ್ತು?

ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಬಿಜೆಪಿಯ ಒಳಬೇಗುದಿಯ ಲಾಭವನ್ನು ಪಡೆದುಕೊಳ್ಳುವುದು ಗ್ಯಾರಂಟಿ ಎಂದು ಹೇಳಲಾಗಿತ್ತು. ಬಿಜೆಪಿಯಂತೂ ಸಾಂಪ್ರದಾಯಿಕ ಮತಗಳು ಮತ್ತು ನರೇಂದ್ರ ಮೋದಿ ಅವರ ಚರಿಷ್ಮಾ ಕೆಲಸ ಮಾಡಬಹುದು ಎಂಬ ಅಭಿಪ್ರಾಯದಲ್ಲಿತ್ತು. ಅದು ವರ್ಕೌಟ್ ಆಗಿದೆ. ಕಾಗೇರಿ ಕುರಿತ ಅಭಿಪ್ರಾಯಭೇದ, ಬಿಜೆಪಿಯಿಂದ ಆಯ್ಕೆಗೊಂಡಿದ್ದ ಶಿವರಾಮ ಹೆಬ್ಬಾರ್ ಸೈಲೆಂಟ್ ಆಗಿರುವುದೂ ಬಿಜೆಪಿಗೆ ಸಮಸ್ಯೆಯೇನೂ ಆಗಿಲ್ಲ ಎಂಬುದು ಫಲಿತಾಂಶದ ಬಳಿಕ ಗೊತ್ತಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉತ್ತರ ಕನ್ನಡ ಕ್ಷೇತ್ರ ಕೈತಪ್ಪಲು ಕಾರಣವೇ ಅನಂತಕುಮಾರ ಹೆಗಡೆ ಎಂಬ ಹಿಂದುತ್ವದ ಫೈರ್ ಬ್ರಾಂಡ್. ಆದರೆ ಅವರಿಗೆ ಟಿಕೆಟ್ ನಿರಾಕರಣೆಯಾದ ಮೇಲೆ ದೊಡ್ಡ ಪ್ರಮಾಣದ ನಿರಾಸಕ್ತಿಯ ಅಲೆ ಬಿಜೆಪಿ ಕಾರ್ಯಕರ್ತರಲ್ಲೇ ಹಾಗೂ ಅನಂತ ಹೆಗಡೆ ಬೆಂಬಲಿಗರಲ್ಲಿತ್ತು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರೂ.‌ ಆದರೆ ಹಾಗೇನೂ ಆಗಿಲ್ಲ, ಮೋದಿ ಅಲೆ ಎಲ್ಲವನ್ನೂ ಮರೆಸಲಿದೆ, ಬಿಜೆಪಿ ಗೆಲುವು ಶತಃಸಿದ್ಧ ಎಂದು ಕಟ್ಟರ್ ಬಿಜೆಪಿಯವರು ಲೆಕ್ಕಾಚಾರ ಹಾಕಿದ್ದರು. ಕಾಗೇರಿ ಗೆದ್ದಿದ್ದಾರೆ. ವಿಜಯೋತ್ಸವ ಆಚರಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಕಳೆದ ಬಾರಿಯ ಫಲಿತಾಂಶ ಹೀಗಿತ್ತು

2019ರ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ 7.86 ಲಕ್ಷ ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಆನಂದ್ ಅಸ್ನೋಟಿಕರ್ 3.06 ಲಕ್ಷ ಮತಗಳನ್ನಷ್ಟೇ ಗಳಿಸಿದ್ದರು ಹೆಗಡೆ ಅವರ ಗೆಲುವಿನ ಅಂತರ 5 ಲಕ್ಷಕ್ಕೂ ಅಧಿಕವಿತ್ತು. ಶೇ 68.1ರಷ್ಟು ಮತಗಳು ಅನಂತ್ ಕುಮಾರ್ ಹೆಗಡೆ ಅವರಿಗೆ ದೊರಕಿದ್ದವು.

ಉತ್ತರ ಕನ್ನಡದಿಂದ ಈ ಹಿಂದೆ ಆರು ಬಾರಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಅನಂತಕುಮಾರ್ ಹೆಗಡೆ, ಕ್ಷೇತ್ರದಲ್ಲಿ 2004ರಿಂದ ಸತತ ನಾಲ್ಕನೇ ಅವಧಿಗೆ ಸಂಸದರಾಗಿದ್ದರು. ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಆನಂದ್‌ ಅಸ್ನೋಟಿಕರ್‌ ವಿರುದ್ಧ ಅನಂತಕುಮಾರ್‌ ಹೆಗಡೆ ದಾಖಲೆಯ 4 ಲಕ್ಷದ 79 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಇದೀಗ ಈ ಬಾರಿ ಮತ್ತೆ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಮುದುವರೆಸಿದ್ದು, ಕಾಗೇರಿ ಸಂಸತ್‌ ಪ್ರವೇಶಕ್ಕೆ ಸಜ್ಜಾಗಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ

  • ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ): 782495 ಮತಗಳು
  • ಡಾ.ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್‌): 445067 ಮತಗಳು
  • ಗೆಲುವಿನ ಅಂತರ: 337428
  • ನೋಟಾ : 10176 ಮತಗಳು

ಒಟ್ಟು 6 ಬಾರಿ ಬಿಜೆಪಿಯಿಂದ ಕಣಕ್ಕಿಳಿದು ಶಾಸಕರಾಗಿ ಆಯ್ಕೆಯಾಗುವ ಮೂಲಕ ಸುದೀರ್ಘ ಅವಧಿಗೆ ರಾಜಕೀಯದಲ್ಲಿ ಅನುಭವ ಹೊಂದಿರುವ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಶಿರಸಿ ಕ್ಷೇತ್ರದಿಂದ 2008, 2013 ಹಾಗೂ 2018ರ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಕಾಗೇರಿ, 2013ರವರೆಗೆ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ನೇತೃತ್ವದ ಸರ್ಕಾರದಲ್ಲಿಯೂ ಸಚಿವರಾಗಿ ಮುಂದುವರೆದರು.

ಲೋಕಸಭಾ ಚುನಾವಣೆ 2024ರ ಕುರಿತ ಎಲ್ಲಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner