ಸಂತೋಷಕ್ಕೆ... ಹಾಡು ಸಂತೋಷಕ್ಕೆ…; ಕೆಸರುಗದ್ದೆಯಲ್ಲಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಡಿಸಿ, ಅನಂತಾಡಿ ಮಂದಿಗೆ ಖುಷಿಯೋ ಖುಷಿ-video of dakshina kannada dc mullai muhilan dance with children at ananthady goes viral bantwal mangaluru hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಸಂತೋಷಕ್ಕೆ... ಹಾಡು ಸಂತೋಷಕ್ಕೆ…; ಕೆಸರುಗದ್ದೆಯಲ್ಲಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಡಿಸಿ, ಅನಂತಾಡಿ ಮಂದಿಗೆ ಖುಷಿಯೋ ಖುಷಿ

ಸಂತೋಷಕ್ಕೆ... ಹಾಡು ಸಂತೋಷಕ್ಕೆ…; ಕೆಸರುಗದ್ದೆಯಲ್ಲಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಡಿಸಿ, ಅನಂತಾಡಿ ಮಂದಿಗೆ ಖುಷಿಯೋ ಖುಷಿ

ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ನೆಚ್ಚಿನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಮಕ್ಕಳೊಂದಿಗೆ ಆಡಿ ನಲಿದಿದ್ದಾರೆ. ಅನಂತಾಡಿ ಎಂಬಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)

ಕೆಸರುಗದ್ದೆಯಲ್ಲಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಡಿಸಿ, ಅನಂತಾಡಿ ಮಂದಿಗೆ ಖುಷಿಯೋ ಖುಷಿ
ಕೆಸರುಗದ್ದೆಯಲ್ಲಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಡಿಸಿ, ಅನಂತಾಡಿ ಮಂದಿಗೆ ಖುಷಿಯೋ ಖುಷಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಬಂತೆಂದರೆ ಕೆಸರುಗದ್ದೆಗಳು ನಳನಳಿಸುತ್ತವೆ. ಯುವಕ ಸಂಘಟನೆಗಳು, ಶಾಲಾ ಮಕ್ಕಳು ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಮಳೆ ಬರುವ ಹೊತ್ತಿನಲ್ಲಿ ಭಾನುವಾರ ರಜಾದಿನವನ್ನು ಕೆಸರುಗದ್ದೆಯಲ್ಲೇ ಕಳೆಯುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರೂ ಇದೇ ಭಾನುವಾರ (ಸೆಪ್ಟೆಂಬರ್‌ 22) ಅನಂತಾಡಿ ಎಂಬಲ್ಲಿಗೆ ಸಂಸಾರ ಸಮೇತರಾಗಿ ಬಂದು ಅಲ್ಲಿನ ಜನರೊಂದಿಗೆ ಬೆರೆತದ್ದಷ್ಟೇ ಅಲ್ಲದೆ, ಮಕ್ಕಳೊಂದಿಗೆ ಕೆಸರುಗದ್ದೆಗೆ ಇಳಿದು ಹಾಡಿಗೆ ಹೆಜ್ಜೆ ಹಾಕಿದರು.

ಮಳೆಗಾಲದಲ್ಲಿ ಮಕ್ಕಳಿಗೆ ರಜೆ ನೀಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಶಾಲಾ ಮಕ್ಕಳಿಗೆ ಅಚ್ಚುಮೆಚ್ಚಾಗಿದ್ದ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಇದೀಗ ಹುದ್ದೆ ತ್ಯಜಿಸಿ, ರಾಜಕೀಯಕ್ಕಿಳಿದು ಸಂಸದರಾಗಿದ್ದಾರೆ. ಅವರದ್ದೇ ರಾಜ್ಯದ ಮುಲ್ಲೈ ಮುಹಿಲನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಬಂದ ಮೇಲೆ ಮಳೆಗಾಲದ ಸಂದರ್ಭ ಸರಿಸುಮಾರು ಹದಿಮೂರು ದಿನಗಳು ಭಾರಿ ಪ್ರವಾಹ ಇದ್ದ ಕಾರಣ ರಜೆ ಘೋಷಿಸಿದ್ದರು. ನಾಳೆ ರಜೆ ಉಂಟಾ ಎಂದು ಮಕ್ಕಳೇ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮೂಲಕ ಡಿಸಿಗೆ ಮೆಸೇಜ್ ಮಾಡುವಷ್ಟರ ಮಟ್ಟಿಗೆ ಜಿಲ್ಲಾಧಿಕಾರಿ, ಮಕ್ಕಳ ಬಾಂಧವ್ಯ ಗಟ್ಟಿಯಾಯಿತು. ಮಳೆಹಾನಿ ಪ್ರದೇಶಗಳ ವೀಕ್ಷಣೆ ಸಂದರ್ಭ ಮಕ್ಕಳು ಜಿಲ್ಲಾಧಿಕಾರಿಯನ್ನು ಮುತ್ತಿಕೊಂಡು ಡಿಸಿ ಸರ್ ಎಂದು ಹೇಳಿದರೆ, ನಿಮಗೆ ರಜೆ ಕೊಟ್ಟದ್ದು ಹೊರಗೆ ಆಟವಾಡಲು ಅಲ್ಲ. ಮನೆಯೊಳಗೆ ಅಪಾಯವಾಗದಂತೆ ಕುಳಿತುಕೊಳ್ಳಲು ಎಂದು ಹುಸಿಮುನಿಸಿನಿಂದ ಡಿಸಿ ಗದರಿಸಿದ್ದೂ ಆಯಿತು. ಇಂಥದ್ದೆಲ್ಲ ನಡೆದ ಬಳಿಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಕ್ಕಳ ಮಟ್ಟಿಗೆ ಫೇಮಸ್ ಆದರು. ಹೀಗಾಗಿಯೇ ಅನಂತಾಡಿ ಎಂಬಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಅವರನ್ನು ಆಹ್ವಾನಿಸಿದಾಗ ಅವರೂ ಮುಕ್ತಮನಸ್ಸಿನಿಂದ ಒಪ್ಪಿಕೊಂಡರು.

ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನವ ಭಾರತ್ ಯುವಕ ಸಂಘ (ರಿ) ಅನಂತಾಡಿ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಜರಗಿದ 6ನೇ ವರ್ಷದ "ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಭಾಗವಹಿಸಿ ಮಕ್ಕಳ ಜೊತೆ ಮಗುವಾಗಿ ಬೆರೆತು ಕೆಸರಿನಲ್ಲಿ ಸಂಭ್ರಮಿಸಿದ್ದಾರೆ.

ವಿಡಿಯೋ ನೋಡಿ

ರೈತ ದೇಶದ ಬೆನ್ನೆಲುಬು. ಅನ್ನದಾತ ಸಂತೋಷದೊಂದಿದ್ದರೆ ಇಡೀ ಜಗತ್ತೇ ಸಂತಸ ಪಡುತ್ತದೆ. ಪ್ರತಿಯೊಬ್ಬರಿಗೆ ಆಹಾರವನ್ನು ಪೂರೈಸಿ ಎಲ್ಲರ ಹಸಿವು ನೀಗಿಸುವ ರೈತ ಯಾವಾಗಲೂ ಸಂತೋಷವಾಗಿರಬೇಕು. ಜಿಲ್ಲೆಯ ಹವಾಮಾನದ ಎಡರು ತೊಡರುಗಳನ್ನು ದಾಟಿ ಆತನು ಬದುಕಬೇಕಾಗುತ್ತದೆ. ಈ ನೆಲದ ಸಂಸ್ಕೃತಿಯು ಬೆಳೆದು ಬಂದಿರುವುದು ಗದ್ದೆಗಳಿಂದ ಎಂದು ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಅವರು ಕಿವಿಮಾತು ಹೇಳಿದರು.

ಹಾಡಿಗೆ ಮನಬಿಚ್ಚಿ ಕುಣಿದ ಜಿಲ್ಲಾಧಿಕಾರಿ

ಕೆಸರುಗದ್ದೆ ಕ್ರೀಡಾಕೂಟದ ಸಂಭ್ರಮ ಮುಗಿಲು ಮುಟ್ಟಿತ್ತು. ಡಿಜೆ ಹಾಡಿನಲ್ಲಿ ಸಂತೋಷಕ್ಕೆ... ಹಾಡು ಸಂತೋಷಕ್ಕೆ.... ಕುಣಿದು ತಾಳಕ್ಕೆ ಕುಣಿದು, ನಲಿದು, ತಾಳಕ್ಕೆ ನಲಿದು ಎಂಬ ಶಂಕರನಾಗ್ ಅಭಿನಯದ ಚಿತ್ರದ ಹಾಡು ಹಾಕಿದಾಗ ಮಕ್ಕಳಷ್ಟೇ ಅಲ್ಲದೆ ದೊಡ್ಡವರು ಕೂಡಾ ಕುಣಿದರು. ಈ ವೇಳೆ ಜಿಲ್ಲಾಧಿಕಾರಿ ತಾನೇನೂ ಕಮ್ಮಿ ಇಲ್ಲ ಎಂಬಂತೆ ಕುಣಿದದ್ದು ಸೇರಿದ್ದ ಎಲ್ಲರಲ್ಲೂ ಖುಷಿಯ ವಾತಾವರಣ ಮೂಡಿಸಿತು. ಅಲ್ಲದೆ ಕರಾವಳಿ ಜನರ ಮೆಚ್ಚಿನ ಹುಲಿಕುಣಿತದ ಮ್ಯೂಸಿಕ್‌ ಹಾಕಿದಾಗ ಜಿಲ್ಲಾಧಿಕಾರಿ ಮನಬಿಚ್ಚಿ ಹೆಜ್ಜೆ ಹಾಕಿದರು.

ಅನಂತಾಡಿಯ ಜನರು ಡಿಸಿಯ ಮುಕ್ತ ಭಾಗವಹಿಸುವಿಕೆಯನ್ನು ಒಂದಷ್ಟು ದಿನಗಳಾದರೂ ಮರೆಯಲಾರರು. ಜಿಲ್ಲಾಧಿಕಾರಿ ಹೆಜ್ಜೆ ಹಾಕಿದ ದೃಶ್ಯಾವಳಿಯ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ.

mysore-dasara_Entry_Point