ಇದ್ಯಾವ ನ್ಯಾಯ: ಒಂದೇ ಪ್ರಯಾಣಕ್ಕೆ ಎರಡು ಬಾರಿ ಟಿಕೆಟ್, ಸಂಚಾರಿ ಸ್ನಾನಗೃಹವಾಗಿರುವ ಸೋರುವ ಬಸ್‌; ಶೋಭಿತ್ ಎಂಎಸ್‌ ಬರಹ-uttara kannada social media user complains against worst service of ksrtc bus for kumta depot honnavar to mangalore jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಇದ್ಯಾವ ನ್ಯಾಯ: ಒಂದೇ ಪ್ರಯಾಣಕ್ಕೆ ಎರಡು ಬಾರಿ ಟಿಕೆಟ್, ಸಂಚಾರಿ ಸ್ನಾನಗೃಹವಾಗಿರುವ ಸೋರುವ ಬಸ್‌; ಶೋಭಿತ್ ಎಂಎಸ್‌ ಬರಹ

ಇದ್ಯಾವ ನ್ಯಾಯ: ಒಂದೇ ಪ್ರಯಾಣಕ್ಕೆ ಎರಡು ಬಾರಿ ಟಿಕೆಟ್, ಸಂಚಾರಿ ಸ್ನಾನಗೃಹವಾಗಿರುವ ಸೋರುವ ಬಸ್‌; ಶೋಭಿತ್ ಎಂಎಸ್‌ ಬರಹ

ಶೋಭಿತ್ ಎಂಎಸ್‌ ಎಂಬ ಪೇಸ್‌ಬುಕ್‌ ಬಳಕೆದಾರ, ಕೆಎಸ್‌ಆರ್‌ಟಿಸಿ ಬಸ್‌ ಅವ್ಯವಸ್ಥೆ ಹಾಗೂ ಕಳಪೆ ಸರ್ವಿಸ್‌ ಕುರಿತು ದೂರಿದ್ದಾರೆ. ಫೋಟೋ ಸಮೇತ ಆರೋಪ ಮಾಡಿರುವ ಅವರು, ಬೇಜವಾಬ್ದಾರಿ ತೋರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಒಂದೇ ಪ್ರಯಾಣಕ್ಕೆ ಎರಡು ಟಿಕೆಟ್, ಸಂಚಾರಿ ಸ್ನಾನಗೃಹವಾಗಿರುವ ಸೋರುವ ಬಸ್‌; ಶೋಭಿತ್ ಎಂಎಸ್‌ ಬರಹ
ಒಂದೇ ಪ್ರಯಾಣಕ್ಕೆ ಎರಡು ಟಿಕೆಟ್, ಸಂಚಾರಿ ಸ್ನಾನಗೃಹವಾಗಿರುವ ಸೋರುವ ಬಸ್‌; ಶೋಭಿತ್ ಎಂಎಸ್‌ ಬರಹ (Facebook)

ದೇಶದಲ್ಲೇ ಕರ್ನಾಟಕ ರಾಜ್ಯದ ಸರ್ಕಾರಿ ಬಸ್ ಸೇವೆಗೆ ಉತ್ತಮ ಹೆಸರಿದೆ. ವಿವಿಧ ರಾಜ್ಯಗಳ ಬಸ್ ಸರ್ವಿಸ್‌ಗಿಂತ ಕೆಎಸ್‌ಆರ್‌ಟಿಸಿ ಸೇವೆ ಚೆನ್ನಾಗಿದೆ ಎಂಬ ಮಾತಿದೆ. ಅದಕ್ಕೆ ಪುಷ್ಠಿ ನೀಡುವಂತೆ KSRTCಗೆ ಹಲವು ರಾಷ್ಟ್ರೀಯ ಪ್ರಶಸ್ತಿಗಳೂ ಸಿಕ್ಕಿವೆ. ಆದರೆ, ಕೆಲವೊಂದು ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ತೀರಾ ಕಳಪೆ ಗುಣಮಟ್ಟದ ಅನುಭವವನ್ನು ಪ್ರಯಾಣಿಕರಿಗೆ ನೀಡುತ್ತಿವೆ. ಇದಕ್ಕೆ ಹೊಸ ಸೇರ್ಪಡೆಯೇ ಈ ಪ್ರಕರಣ. ಕುಮಟಾ ಘಟಕಕ್ಕೆ ಸೇರಿದ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ತಮಗಾದ ಅನುಭವದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ದೂರಿದ್ದಾರೆ. ಬಸ್‌ನಲ್ಲಿ ಮಳೆ ನೀರು ಸೋರಿಕೆಯಾಗುತ್ತಿದ್ದುದು ಒಂದೆಡೆಯಾದರೆ, ಮಷಿನ್ ಕೆಟ್ಟುಹೋದ ನೆಪದಲ್ಲಿ ಬಸ್‌ ಬದಲಾಯಿಸಿದ್ದಲ್ಲದೆ, ಒಂದೇ ಪ್ರಯಾಣಕ್ಕೆ ಎರಡೆರಡು ಬಾರಿ ಟಿಕೆಟ್‌ ಪಡೆದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಶೋಭಿತ್ ಎಂಎಸ್‌ ಎಂಬ ಹೆಸರಿನ ಪೇಸ್‌ಬುಕ್‌ ಬಳಕೆದಾರ, ಫೋಟೋ ಸಮೇತ ಆ ಆರೋಪಗಳನ್ನು ಮಾಡಿದ್ದಾರೆ. ಅವರ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಮಂಗಳೂರಿಗೆ ಪ್ರಯಾಣಿಸುವಾಗ ಈ ಅನುಭವವಾಗಿದೆ. ಅವರ ಆರೋಪ ಹೀಗಿದೆ.

ಹೊನ್ನಾವರದಿಂದ ಮಂಗಳೂರಿಗೆ 7 ಗಂಟೆಗೊಂದು ಎಕ್ಸ್‌ಪ್ರೆಸ್‌ ಬಸ್ ಇದೆ. ಕುಮಟಾ ಘಟಕದ ನಾನ್ ಸ್ಟಾಪ್ ಬಸ್. ನಿರ್ವಾಹಕ ರಹಿತ ಸೇವೆ. (KA 31 F 1566). ಸುಮಾರು 7:15 ಹೊತ್ತಿಗೆ ಹೊನ್ನಾವರ ಸ್ಟ್ಯಾಂಡಿಗೆ ಬಂದ ಬಸ್ಸಿನ ಒಳಗೆಲ್ಲಾ ನೀರು ಸೋರುತ್ತಿತ್ತು. ಮಳೆ ನೀರೆಲ್ಲಾ ಒಳಗೆ ಬೀಳುತ್ತಿದ್ದುದರಿಂದ ಎಷ್ಟೋ ಜನ ಸೀಟು ಇದ್ದರೂ ನಿಂತೇ ಇದ್ದರು. ನಾನೂ ಭಟ್ಕಳದ ತನಕ ನಿಂತೇ ಇದ್ದೆ. ಭಟ್ಕಳ ಬಸ್ ಸ್ಟ್ಯಾಂಡ್‌ಗೆ ಬಂದ ನಂತರ ಸೀಟು ಸಿಕ್ಕಿತು ಅಂತ ಕೂತ ತಕ್ಷಣ ಡ್ರೈವರ್ “ಮಷಿನ್ ಹಾಳಾಗಿದೆ. ಬೇರೆ ಬಸ್ ಹತ್ತಿಸಿಕೊಡುತ್ತೇನೆ. ಎಲ್ಲರೂ ಇಳಿಯಿರಿ” ಎಂದಿದ್ದಾರೆ.

ಆ ನಂತರ ಬಂದ ಒಂದೆರಡು ಬಸ್ ಉಡುಪಿ ತನಕ ಮಾತ್ರ ಹೋಗುವಂತದ್ದಾಗಿತ್ತು. ಈ ಡ್ರೈವರ್ ಕಮ್ ಕಂಡಕ್ಟರ್ ಮಹಾಶಯ “ಇಲ್ಲೇ ಇರಿ. ಭಟ್ಕಳ ಡೀಪೋಗೆ ಹೋಗಿ ಮಷಿನ್ ಸರಿ ಆಗುತ್ತಾ ನೋಡ್ಕೊಂಡ್ ಬರ್ತೇನೆ. ಬಂದು ಬೇರೆ ಬಸ್ ಹತ್ತಿಸಿಕೊಡ್ತೇನೆ” ಎಂದು ಹೇಳಿ ಭಟ್ಕಳ ಡೀಪೋಗೆ ಹೋದ. ಸ್ವಲ್ಪ ಹೊತ್ತಿಗೆ ವಾಪಾಸ್ ಬಂದು ಅದು ಸರಿ ಆಗಲ್ಲ, ನಾನು ವಾಪಾಸ್ ಕುಮಟಾ ಹೋಗ್ತೇನೆ. ನಿಮಗೆ ಬಸ್ ಹತ್ತಿಸಿಕೊಡ್ತೇನೆ ಅಂದ. ಸರಿ ಅಂದೆವು. ಮೈಸೂರು ಗ್ರಾಮಾಂತರ ಘಟಕದ ಮಂಗಳೂರು ಮೂಲಕ ಹೋಗುವ ಬಸ್ಸೊಂದು ಬಂತು. “ನೀವು ಎಲ್ಲರೂ ಈ ಬಸ್ಸಿಗೆ ಹೋಗಿ. ಇದು ಮಂಗಳೂರು ಹೋಗುತ್ತೆ” ಎಂದ.

ಒಂದೇ ಪ್ರಯಾಣಕ್ಕೆ ಎರಡು ಟಿಕೆಟ್!

ಮೊದಲು ತೆಗೆದುಕೊಂಡಿದ್ದ ಕುಮಟಾ ಘಟಕದ ಬಸ್ಸಿನ ಟಿಕೆಟ್‌ ಅನ್ನೇ ತೋರಿಸಿದಾಗ ಇನ್ನೊಂದು ಎಕ್ಸ್‌ಪ್ರೆಸ್‌ ಬಸ್ಸಿನ ಕಂಡಕ್ಟರ್, “ನಮಗೆ ಆ ಕಂಡಕ್ಟರ್ ಏನೂ ರಿಪೋರ್ಟ್ ಕೊಟ್ಟಿಲ್ಲ. ಭಟ್ಕಳ ಸ್ಟ್ಯಾಂಡ್ ಕಂಟ್ರೋಲರ್ ಕೂಡಾ ಮಾಹಿತಿ ಏನೂ ಹೇಳಿಲ್ಲ. ನಾವು ಈ ಟಿಕೆಟ್‌ ಸ್ವೀಕರಿಸಲ್ಲ. ನೀವು ಬೇರೆ ಟಿಕೆಟ್ ತೆಗಿಬೇಕು” ಎಂದರು. ಆಗ ಕುಮಟಾ ಡೀಪೋದ ಡ್ರೈವರ್‌ಗೆ ಫೋನ್ ಮಾಡಿದಾಗ ಇಲ್ಲ ನಾನು ಅವ್ರಿಗೆ ಹೇಳಿದೇನೆ. ಕಂಟ್ರೋಲರ್ ಕೂಡಾ ಹೇಳಿದ್ದಾರೆ ಅಂದ. ಅದಾಗಲೇ ನಾವು ಭಟ್ಕಳದಿಂದ ಸ್ವಲ್ಪ ದೂರ ಬಂದಿದ್ದರಿಂದ ಟಿಕೆಟ್ ತೆಗೆಯಲೇಬೇಕಾಯ್ತು.‌

ಇದು ದುಡ್ಡಿನ ವಿಷಯ ಅಲ್ಲ. ನಮ್ಮ ಸಮಯ ವ್ಯರ್ಥವೂ ಹೌದು. ಇಷ್ಟೊಂದು ಬೇಜವಾಬ್ದಾರಿಯಾಗಿ ವರ್ತಿಸುವವರ ವಿರುದ್ಧ ಕ್ರಮ ಆಗಬೇಕಿದೆ. ಇಲ್ಲಿ ಪಾಪ ಡ್ರೈವರ್ ಎಂಬ ಸೆಂಟಿಮೆಂಟುಗಳಿಗೆ ಅವಕಾಶವಿಲ್ಲ.

ಸ್ನಾನಗೃಹ ಬಸ್

ಬಸ್‌ನಲ್ಲಿ ನಿರಂತರವಾಗಿ ಮಳೆನೀರು ಸೋರಿಕೆಯಾಗುತ್ತಿದ್ದ ಬಗೆಗೂ ಶೋಭಿತ್ ಗಮನ ಸೆಳೆದಿದ್ದಾರೆ. “ಇದು ಕುಮಟಾ ಘಟಕದಿಂದ ಆರಂಭಗೊಂಡಿರುವ ನೂತನ ಕುಮಟಾ-ಮಂಗಳೂರು Non Stop ಸ್ನಾನಗೃಹ ಬಸ್. ಈ ಬಸ್‌ನಲ್ಲಿ ನಿಮಗೆ ಪ್ರಯಾಣದ ಜೊತೆ ಸ್ನಾನ ಫ್ರೀ ಫ್ರೀ‌,” ಎಂದು ಕೆಎಸ್‌ಆರ್‌ಟಿಸಿ ಅವ್ಯವಸ್ಥೆಯ ಕುರಿತು ಬರೆದುಕೊಂಡಿದ್ದಾರೆ.

ನ್ಯಾಯಾಲಯದ ಮೊರೆ ಹೋಗಿ

ಈ ಪೋಸ್ಟ್‌ಗೆ ಸೋಷಿಯಲ್‌ ಮೀಡಿಯಾ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ಟಿಕೆಟ್‌ಗೆ QR ಕೋಡ್ ಪ್ರಿಂಟಾಗಬೇಕು. ಇಂತಹ ಪ್ರಕರಣಗಳಲ್ಲಿ ಯಾರ ಅನುಮತಿಯೂ ಇಲ್ಲದಂತೆ ಅದನ್ನು ಸ್ಕ್ಯಾನ್‌ ಮಾಡಿದರೆ ಬೇರೆ ಬಸ್ಸಿನ ಕಂಡಕ್ಟರ್‌ಗೆ ಇಡೀ ಕತೆ ಗೊತ್ತಾಗಬೇಕು ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಇದೇ ವೇಳೆ ಮತ್ತೊಬ್ಬರು ಪ್ರತಿಕ್ರಿಯೆ ನೀಡಿ ಕುಮಟಾದ ಬಸ್ ಡಿಪೋ ಯಾಕೋ ಮೊದಲಿಂದನೂ ಹೀಗೆಯೇ. ಹಿಂದೊಮ್ಮೆ ಡಿಪೋದಿಂದ ಬಸ್ ಕಳುವಾದ ಘಟನೆಯೇ ನಡೆದಿತ್ತು ಎಂದು ಬರೆದಿದ್ದಾರೆ. ಮತ್ತೊಬ್ಬರು ಕಾಮೆಂಟ್‌ ಮಾಡಿ, ಕರ್ಚಾದರೂ ಪರವಾಗಿಲ್ಲ. ನ್ಯಾಯಾಲಯದ ಮೂಲಕ ನಿಗಮದ ಮೇಲಾಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಎಂದು ಸಲಹೆ ನೀಡಿದ್ದಾರೆ.

mysore-dasara_Entry_Point