ಗೂಗಲ್ ಮ್ಯಾಪ್‌ಗೆ ಸೇರಿತು ವೈರಲ್ ಆಗಿದ್ದ ಮಾನ್ಯತಾ ಪಾರ್ಕ್ ವಾಟರ್‌ಫಾಲ್ಸ್!, 5 ಸ್ಟಾರ್ ಕೂಡ ಸಿಕ್ತು ಗುರೂ.. ಪ್ರವಾಸಿ ಆಕರ್ಷಣೆಯಂತೆ!
ಜನರು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಭಟನೆಯನ್ನಷ್ಟೇ ಮಾಡುವುದಲ್ಲ, ಕೆಲವೊಮ್ಮೆ ಅವು ವಿಡಂಬನೆಯೂ ಆಗಿರಬಹುದು. ಅಥವಾ ವ್ಯಂಗ್ಯವೂ ಆಗಿರಬಹುದು. ಅದಕ್ಕೆ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ ಬಳಕೆಯಾಗುತ್ತಿವೆ. ಈಗ ನೋಡಿ, ಗೂಗಲ್ ಮ್ಯಾಪ್‌ಗೆ ಸೇರಿತು ವೈರಲ್ ಆಗಿದ್ದ ಮಾನ್ಯತಾ ಪಾರ್ಕ್ ವಾಟರ್‌ಫಾಲ್ಸ್!, 5 ಸ್ಟಾರ್ ಕೂಡ ಸಿಕ್ತು.. ಅದೂ ಪ್ರವಾಸಿ ಆಕರ್ಷಣೆಯಂತೆ
ಬೆಂಗಳೂರು: ಎಂಥಾ ಅವಸ್ಥೆ! ಮೂಲ ಸೌಕರ್ಯದ ಕೊರತೆ ಕಾರಣ ಜನರು ಹತಾಶರಾಗಿ ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರವನ್ನು ಎಚ್ಚರಿಸುವುದಕ್ಕೆ ಬಳಸಿದ ಶೀರ್ಷಿಕೆಗಳನ್ನೂ ಗೂಗಲ್ ಪ್ರವಾಸಿ ಆಕರ್ಷಣೆ ಅಂತ ಪರಿಗಣಿಸತೊಡಗಿದೆ. ಬೆಂಗಳೂರಿನ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಮನರಂಜನೆಗೆ ಕೊರತೆ ಇಲ್ಲ. ಗೂಗಲ್ ಮ್ಯಾಪ್‌ನಲ್ಲಿ ಸ್ಥಳ ಗುರುತಿಸುವ ಕೆಲಸವನ್ನು ಜನರಿಂದಲೇ ಮಾಡಿಸಿಕೊಳ್ಳಲಾಗುತ್ತಿದ್ದು, ಯಾರೋ ಒಬ್ಬರು ಮಾನ್ಯತಾ ವಾಟರ್ ಪಾರ್ಕ್ ವಾಟರ್ ಫಾಲ್ಸ್ ಎಂದು ಗೂಗಲ್‌ನಲ್ಲಿ ನಮೂದಿಸಿದ್ದಾರೆ. ಅದನ್ನು ಗೂಗಲ್‌ನ ಟೂರಿಸ್ಟ್ ಅಟ್ರಾಕ್ಷನ್ ವಿಭಾಗದಲ್ಲಿ ಜೋಡಿಸಿರುವುದು ಗಮನಸೆಳೆದಿದೆ. ಜನರೂ ಅದಕ್ಕೆ ಸ್ಪಂದಿಸಿದ್ದು, 5 ಸ್ಟಾರ್ ಕೊಟ್ಟು ಇನ್ನಷ್ಟು ಮನರಂಜನೆ ಪಡೆದುಕೊಳ್ಳುವ ಪ್ರಯತ್ನ ನಡೆಸಿರುವುದು ಕಂಡುಬಂದಿದೆ. ಇತ್ತೀಚೆಗೆ ಬೆಂಗಳೂರು ಮಳೆಗೆ ಹೊರವರ್ತುಲ ರಸ್ತೆಯಲ್ಲಿದ್ದ ಮಾನ್ಯತಾ ಟೆಕ್ ಪಾರ್ಕ್ ಪ್ರದೇಶ ಜಲಾವೃತವಾಗಿತ್ತು. ಆ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೋದಲ್ಲಿ ಜಲಪಾತದಂತಹ ದೃಶ್ಯ ಇತ್ತು. ಅದಕ್ಕೆ ಕೆಲವರು ಮಾನ್ಯತಾ ಪಾರ್ಕ್ ವಾಟರ್‌ಫಾಲ್ಸ್ ಎಂದು ಶೀರ್ಷಿಕೆ ಕೊಟ್ಟು ಶೇರ್ ಮಾಡಿದ್ದರು. ಹೂವು ತುಂಬಿದ ಮರದ ಜೊತೆಗೆ ಕೆಳಗೆ ಕಂಡ ದೃಶ್ಯ ಬಹುಬೇಗ ಎಲ್ಲರ ಗಮನಸೆಳೆದು ವೈರಲ್ ಆಗಿತ್ತು.
ಗೂಗಲ್ ಮ್ಯಾಪ್ಸ್‌ನಲ್ಲಿ ಕಾಣಸಿಕ್ಕಿದ ಮಾನ್ಯತಾ ಪಾರ್ಕ್ ವಾಟರ್‌ಫಾಲ್ಸ್
ಗೂಗಲ್ ಮ್ಯಾಪ್ಸ್‌ನಲ್ಲಿ ಮಾನ್ಯತಾ ಪಾರ್ಕ್ ವಾಟರ್ ಫಾಲ್ಸ್ ಎಂಬುದು ವೈರಲ್ ಆದ ಚಿತ್ರದೊಂದಿಗೆ ದಾಖಲಾಗಿದೆ. ಟೂರಿಸ್ಟ್ ಅಟ್ರಾಕ್ಷನ್ ವಿಭಾಗದಲ್ಲಿ ಮಾನ್ಯತಾ ಪಾರ್ಕ್ ವಾಟರ್ ಫಾಲ್ಸ್ ಹೆಸರಲ್ಲೇ ಗೋಚರಿಸಿದ್ದು, ಬಳಕೆದಾರರು ಅದಕ್ಕೆ ರಿವ್ಯೂಸ್ ಕೂಡ ಬರೆದಿದ್ದಾರೆ. ಒಬ್ಬ ಬಳಕೆದಾರರು, ಬಹಳ ಚಂದದ ಜಲಪಾತ. ಬೆಂಗಳೂರಿಗೆ ಸಡಗರ ತುಂಬುವ ಅದ್ಭುತ ನೋಟ ಎಂದು ಚುಚ್ಚುಮಾತು ಬರೆದಿದ್ದಾರೆ. ನೋಡುಗರು ಈ ತಥಾಕಥಿತ ಪ್ರವಾಸಿ ಆಕರ್ಷಣೆಗೆ 5 ಸ್ಟಾರ್ ಕೂಡ ಕೊಟ್ಟಿರುವುದು ಗಮನಸೆಳೆದಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮಾನ್ಯತಾ ಟೆಕ್ ಪಾರ್ಕ್ ನಿರ್ವಹಣೆ ಗಮನಿಸುವ ಎಂಬಸಿ ಆರ್‌ಇಐಟಿ ಸ್ಪಷ್ಟೀಕರಣ
ಮಾನ್ಯತಾ ಟೆಕ್ ಪಾರ್ಕ್‌ನದ್ದು ಎಂದು ಹೇಳಲಾದ ಜಲಪಾತದ ವೈರಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾಗ, ಅದೇ ಟೆಕ್ ಪಾರ್ಕ್‌ನ ನಿರ್ವಹಣೆಯ ಹೊಣೆ ಹೊತ್ತುಕೊಂಡಿರುವ ಎಂಬಸಿ ಆರ್‌ಇಐಟಿ ಸ್ಪಷ್ಟೀಕರಣವನ್ನು ಪ್ರಕಟಿಸಿದೆ. ವೈರಲ್ ವಿಡಿಯೋದ ಜಲಪಾತದ ದೃಶ್ಯ ಮಾನ್ಯತಾ ಟೆಕ್ ಪಾರ್ಕ್ ವ್ಯಾಪ್ತಿಯಲ್ಲಿ ಇಲ್ಲ ಎಂದು ಅದು ಹೇಳಿತ್ತು. ಆದಾಗ್ಯೂ, ಈ ವೈರಲ್ ವಿಡಿಯೋದಲ್ಲಿ ಕಂಡುಬಂದ ದಶ್ಯ 300 ಎಕರೆ ಪ್ರದೇಶದಲ್ಲಿರುವ ಟೆಕ್ ಪಾರ್ಕ್ ಪಕ್ಕದ ದೃಶ್ಯ ಎಂದು ಹೇಳಲಾಗುತ್ತಿದೆ.
ಆದಾಗ್ಯೂ, ಬೆಂಗಳೂರು ಮಹಾನಗರದ ಆಡಳಿತ ವ್ಯವಸ್ಥೆ ಇಂತಹ ಇಂಟರ್ನೆಟ್ ವ್ಯಂಗ್ಯ, ಟೀಕೆಗಳನ್ನು ಎದುರಿಸುತ್ತಿರುವುದು ಇದೇ ಮೊದಲ ಸಲವೇನೂ ಅಲ್ಲ. ಈ ಹಿಂದೆ ಕಳೆದ ವರ್ಷ ಈಜೀಪುರ ಮೇಲ್ಸೇತುವೆ ಕೂಡ ಗೂಗಲ್ ಮ್ಯಾಪ್ಸ್‌ನಲ್ಲಿ ಗೋಚರಿಸಿತ್ತು. ಅದು ಭೇಟಿ ನೀಡಲೇ ಬೇಕಾದ ಸ್ಮಾರಕದ ವಿಭಾಗದಲ್ಲಿ ಕಂಡುಬಂದಿತ್ತು. ಮೂಲಸೌಕರ್ಯ ಯೋಜನೆಗಳು ಅಪೂರ್ಣವಾಗಿ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರವನ್ನು ಎಚ್ಚರಿಸುವ ರೀತಿಯಲ್ಲಿ ಜನರಿಂದ ಇಂತಹ ವರ್ತನೆಗಳು ಕಂಡುಬಂದಿವೆ. ಇದು ಕೂಡ ವೈರಲ್ ಆಗಿತ್ತು.
ಬ್ರಿಟನ್ ಪ್ರವಾಸಿ ತಾಣ ಸ್ಟೋನ್‌ಹೆಂಜ್ ಬಹಳ ಜನಪ್ರಿಯ. ಇದನ್ನೇ ಗಮನದಲ್ಲಿಟ್ಟುಕೊಂಡು ಅಪೂರ್ಣ ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಬೆಂಗಳೂರಿನ ಸ್ಟೋನ್‌ಹೆಂಜ್ ಎಂದು ನಾಮಕರಣ ಮಾಡಲಾಗಿತ್ತು. ಇದಕ್ಕೆ ಸಾಕಷ್ಟು ಜನ ಪ್ರತಿಕ್ರಿಯಿಸಿ ಸ್ಟಾರ್‌ಗಳನ್ನೂ ಕೊಟ್ಟಿದ್ದರು. “ಈ ಸ್ಮಾರಕ ಬೆಂಗಳೂರಿನ ಅತಿ ಮುಖ್ಯ ಪ್ರವಾಸೋದ್ಯಮ ತಾಣವಾಗಿದೆ. ಇಲ್ಲಿಗೊಮ್ಮೆ ಭೇಟಿ ನೀಡಬೇಕು! ಸುಂದರ ರಚನೆಗಳ ಹಿರಿಮೆಯನ್ನು ವೀಕ್ಷಿಸಲು ಇಲ್ಲಿಗೆ ಬರುವ ಅಪಾರ ಜನಸಮೂಹವನ್ನು ಬರಮಾಡಿಕೊಳ್ಳಲು ಸಿದ್ದರಾಗಿ” ಎಂದು ಒಬ್ಬ ಬಳಕೆದಾರ ಬರೆದಿದ್ದರು. ನಂತರ ಇದು ಕೂಡ ಡಿಲೀಟ್ ಆಗಿದೆ.