ಚಾರ್‌ಧಾಮ ಯಾತ್ರೆಗೆ ಹೋಗಿ ಬಂದ್ರಾ, ಕರ್ನಾಟಕ ಸರ್ಕಾರ ಕೊಡುವ ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು ಹೀಗೆ
ಕನ್ನಡ ಸುದ್ದಿ  /  ಜೀವನಶೈಲಿ  /  ಚಾರ್‌ಧಾಮ ಯಾತ್ರೆಗೆ ಹೋಗಿ ಬಂದ್ರಾ, ಕರ್ನಾಟಕ ಸರ್ಕಾರ ಕೊಡುವ ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು ಹೀಗೆ

ಚಾರ್‌ಧಾಮ ಯಾತ್ರೆಗೆ ಹೋಗಿ ಬಂದ್ರಾ, ಕರ್ನಾಟಕ ಸರ್ಕಾರ ಕೊಡುವ ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು ಹೀಗೆ

ಕರ್ನಾಟಕ ಸರ್ಕಾರ ಚಾರ್‌ಧಾಮ್ ಯಾತ್ರಾರ್ಥಿಗಳಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಿದೆ. ಚಾರ್‌ಧಾಮ್ ಯಾತ್ರೆ ಮುಗಿಸಿ ಬಂದವರು ಇಂದಿನಿಂದ (ಅಕ್ಟೋಬರ್ 3) ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರ ಕೊಡುವ ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು ಮತ್ತು ಅದಕ್ಕೆ ಅಗತ್ಯ ದಾಖಲೆಗಳೇನು ಎಂಬಿತ್ಯಾದಿ ವಿವರ ಇಲ್ಲಿದೆ.

ಚಾರ್‌ಧಾಮ ಯಾತ್ರೆಗೆ ಹೋಗಿ ಬಂದ್ರಾ, ಕರ್ನಾಟಕ ಸರ್ಕಾರದ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಶುರುವಾಗಿದೆ.
ಚಾರ್‌ಧಾಮ ಯಾತ್ರೆಗೆ ಹೋಗಿ ಬಂದ್ರಾ, ಕರ್ನಾಟಕ ಸರ್ಕಾರದ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಶುರುವಾಗಿದೆ.

ಬೆಂಗಳೂರು: ಬಹಳಷ್ಟು ಹಿಂದೂಗಳ ತೀರ್ಥಯಾತ್ರೆ ಕನಸುಗಳ ಪೈಕಿ ಚಾರ್‌ಧಾಮ್‌ ಯಾತ್ರೆಯೂ ಒಂದು. ಅಂದ ಹಾಗೆ ಈ ವರ್ಷ ಚಾರ್‌ಧಾಮ್ ಯಾತ್ರೆ ಪೂರೈಸಿದವರಿಗೆ ಒಂದು ಶುಭ ಸುದ್ದಿ. ಕರ್ನಾಟಕ ಸರ್ಕಾರ ಚಾರ್‌ಧಾಮ್ ಯಾತ್ರಾರ್ಥಿಗಳಿಗೆ ಸಹಾಯಧನ ನೀಡುವುದಕ್ಕಾಗಿ ಅರ್ಜಿ ಆಹ್ವಾನಿಸಿದೆ. ಇಂದು ಅರ್ಜಿ ಸಲ್ಲಿಕೆ ಶುರುವಾಗಿದ್ದು, 2025ರ ಜನವರಿ 15ರ ಸಂಜೆ 4 ಗಂಟೆವರೆಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಈ ಕುರಿತು ಹೇಳಿಕೆ ನೀಡಿದ್ದು, "2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ಪ್ರಥಮ ಬಾರಿಗೆ ಚಾರ್‌ ಧಾಮ್ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ 20,000 ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಇದಕ್ಕೆ ಇಂದಿನಿಂದ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

ಚಾರ್‌ಧಾಮ್‌ ಯಾತ್ರಾ ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು ಹೀಗೆ

ಚಾರ್‌ಧಾಮ್‌ ಯಾತ್ರಾ ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ಯಾತ್ರಾರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. 45 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು. ಯಾತ್ರಾರ್ಥಿಯು ಕಡ್ಡಾಯವಾಗಿ, ಬದರೀನಾಥ್, ಕೇದಾರ್‌ನಾಥ್, ಯಮುನೋತ್ರಿ ಮತ್ತು ಗಂಗೋತ್ರಿ ಕ್ಷೇತ್ರಗಳಿಗೆ ಭೇಟಿ ನೀಡಿರಬೇಕು. ದತ್ತಿ ಇಲಾಖೆಯು ಅನುದಾನ ಲಭ್ಯತೆಗೆ ಅನುಗುಣವಾಗಿ ಸರ್ಕಾರದ ಮಾರ್ಗಸೂಚಿಯ ಅನ್ವಯ ಅನುದಾನವನ್ನು ವಿತರಿಸಲಿದೆ.

ಚಾರ್‌ಧಾಮ್‌ ಯಾತ್ರಾ ಸಹಾಯಧನ ಅಪೇಕ್ಷಿಸುವ ಯಾತ್ರಾರ್ಥಿಯು https://sevasindhuservices.karnataka.gov.in ವೆಬ್‌ಸೈಟ್‌ಗೆ ಲಾಗಿನ್ ಆಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಚಾರ್‌ಧಾಮ್‌ ಯಾತ್ರಾ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

1) ಒಂದು ಭಾವಚಿತ್ರ (ಪಾಸ್ ಪೋರ್ಟ್ ಅಳತೆ)

2) ಆಧಾರ್ ಕಾರ್ಡ್‌ನ ಎರಡೂ ಬದಿ ಚಿತ್ರಗಳನ್ನು ತಪ್ಪದೇ ಅಪ್‌ಲೋಡ್ ಮಾಡಬೇಕು.

3) ಚುನಾವಣಾ ಗುರುತಿನ ಚೀಟಿ/ರೇಷನ್ ಕಾರ್ಡ್ ಕೂಡ ಅಪ್ಲೋಡ್ ಮಾಡಬೇಕು.

4) ಯಾತ್ರಾರ್ಥಿಯು 50 ರೂಪಾಯಿ ಇ ಛಾಪಾ ಕಾಗದದಲ್ಲಿ ಈ ಹಿಂದೆ ಸಹಾಯಧನವನ್ನು ಪಡೆದಿಲ್ಲ ಎಂದು ಸ್ವಯಂ ದೃಢೀಕರಿಸಿ ನೋಟರಿ, ಮೊಹರು ಮತ್ತು ಸಹಿಯೊಂದಿಗೆ ದೃಢೀಕರಣ ಪತ್ರ ಸಿದ್ಧಮಾಡಿಟ್ಟುಕೊಂಡಿರಬೇಕು. ಇದನ್ನು ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡಬೇಕು.

5) ಯಾತ್ರೆ ಕೈಗೊಳ್ಳುವ ಮುನ್ನ ಯಾತ್ರೆಗೆ ನೋಂದಾಯಿಸಿಕೊಂಡದ್ದಕ್ಕೆ ಸಿಕ್ಕಿದ ದಾಖಲೆಯ ಪತ್ರಿಯನ್ನೂ ಅಪ್ಲೋಡ್ ಮಾಡಬೇಕು.

6) ಯಾತ್ರೆ ಮುಗಿದ ನಂತರ ಉತ್ತರಖಂಡ್ ಪ್ರವಾಸೋದ್ಯಮ ಇಲಾಖೆ ನೀಡಿದ ಪ್ರಮಾಣ ಪತ್ರ (ಕಡ್ಡಾಯವಾಗಿ 4 ಧಾಮಗಳು ನಮೂದಾಗಿರಬೇಕು)ವನ್ನೂ ಅರ್ಜಿ ಜೊತೆಗೆ ಸಲ್ಲಿಸಬೇಕು.

7) ಚಾರ್‌ಧಾಮ್‌ ಯಾತ್ರಾ ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ಯಾತ್ರಾರ್ಥಿ ಮಾನ್ಯವಾಗಿರುವ ಅಂದರೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಈ ಖಾತೆಯಲ್ಲಿ ಎನ್‌ಪಿಸಿಐ ಆಕ್ಟಿವ್ ಆಗಿರಬೇಕು.

ಕರ್ನಾಟಕ ಸರ್ಕಾರದ ಮಾರ್ಗಸೂಚಿ ಪ್ರಕಾರ ಚಾರ್‌ಧಾಮ ಯಾತ್ರೆಯ ಸಹಾಯಧನಕ್ಕೆ ಅನುದಾನ ಮೀಸಲಿಟ್ಟಿದ್ದು ಅದನ್ನು ಆಯಾ ವರ್ಷದ ಯಾತ್ರೆಗೆ ಹಂಚಿಕೆ ಮಾಡಿ ನೀಡಲಾಗುತ್ತದೆ. ಆದ್ದರಿಂದ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಟ್ಟುಕೊಂಡು, ಎನ್‌ಪಿಸಿಐ ಆಕ್ಟಿವ್ ಇಡಬೇಕಾದ ಹೊಣೆಗಾರಿಕೆ ಅರ್ಜಿ ಸಲ್ಲಿಸುವವರದ್ಧೆ ಆಗಿರುತ್ತದೆ. ನಿಶ್ಚಿತ ಅವಧಿಯ ಒಳಗೆ ಸಹಾಯಧನಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವುದು ವಿಳಂಬವಾದರೆ ಅಂತಹ ಅರ್ಜಿಗಳನ್ನು ಸಹಾಯಧನಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ದತ್ತಿ ಇಲಾಖೆ ಸ್ಪಷ್ಟಪಡಿಸಿದೆ. ಹೆಚ್ಚಿನ ಮಾಹಿತಿಗೆ, https://itms.kar.nic.in ತಾಣಕ್ಕೆ ಭೇಟಿ ನೀಡಬಹುದು ಎಂದು ಇಲಾಖೆ ತಿಳಿಸಿದೆ.

Whats_app_banner