Personal Loan: ದುಡ್‌ ಕಡಿಮೆ ಇದೆ, ಈ ಸಲ ಪರ್ಸನಲ್ ಲೋನ್ ಇಎಂಐ ಕಟ್ಟದೇ ಇದ್ರೆ ಏನಾಗುತ್ತೆ ಮಹಾ ಅಂತ ಹೇಳಬೇಡಿ, ಇಲ್ಲಿದೆ ಪರಿಣಾಮದ ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  Personal Loan: ದುಡ್‌ ಕಡಿಮೆ ಇದೆ, ಈ ಸಲ ಪರ್ಸನಲ್ ಲೋನ್ ಇಎಂಐ ಕಟ್ಟದೇ ಇದ್ರೆ ಏನಾಗುತ್ತೆ ಮಹಾ ಅಂತ ಹೇಳಬೇಡಿ, ಇಲ್ಲಿದೆ ಪರಿಣಾಮದ ವಿವರ

Personal Loan: ದುಡ್‌ ಕಡಿಮೆ ಇದೆ, ಈ ಸಲ ಪರ್ಸನಲ್ ಲೋನ್ ಇಎಂಐ ಕಟ್ಟದೇ ಇದ್ರೆ ಏನಾಗುತ್ತೆ ಮಹಾ ಅಂತ ಹೇಳಬೇಡಿ, ಇಲ್ಲಿದೆ ಪರಿಣಾಮದ ವಿವರ

ಪರ್ಸನಲ್ ಲೋನ್‌ನ ಇಎಂಐ ಮಿಸ್ ಆಗುವುದು ಸಾಮಾನ್ಯ. ಆದರೆ ಕೆಲವೊಮ್ಮೆ, ದುಡ್‌ ಕಡಿಮೆ ಇದೆ, ಈ ಸಲ ಪರ್ಸನಲ್ ಲೋನ್ ಇಎಂಐ ಕಟ್ಟದೇ ಇದ್ರೆ ಏನಾಗುತ್ತೆ ಮಹಾ ಎಂಬ ಮನೋಭಾವ ಮೂಡುತ್ತದೆ. ಇದು ಅಪಾಯಕಾರಿ. ಯಾಕೆ ಅನ್ನೋದನ್ನು ತಿಳಿಯಲು ಈ ವಿವರ ಗಮನಿಸೋಣ.

ಪರ್ಸನಲ್ ಲೋನ್ ಇಎಂಐ ಕಟ್ಟದೇ ಇದ್ರೆ ಪರಿಣಾಮ ಏನು ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಪರ್ಸನಲ್ ಲೋನ್ ಇಎಂಐ ಕಟ್ಟದೇ ಇದ್ರೆ ಪರಿಣಾಮ ಏನು ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ದುಡ್‌ ಕಡಿಮೆ ಆದಾಗ ನೆನಪಾಗೋದು ಕೈ ಸಾಲ, ಇನ್ನೂ ಸ್ವಲ್ಪ ಕಷ್ಟ ಹೆಚ್ಚಿದ್ದರೆ ಪರ್ಸನಲ್ ಲೋನ್‌. ಹೀಗೆ ಪರ್ಸನಲ್ ಲೋನ್ ತಗೊಂಡ ಬಳಿಕ ಅದನ್ನು ಮರುಪಾವತಿಸುವುದಕ್ಕೆ ನಿಯತ್ತಾಗಿ ಮತ್ತು ನಿಯತವಾಗಿ ಇಎಂಐ (ಸಮಾನ ಮಾಸಿಕ ಕಂತು) ಕಟ್ಟಿಕೊಂಡು ಹೋಗಬೇಕಾದ ಬಾಧ್ಯತೆ ಅಥವಾ ಹೊಣೆಗಾರಿಕೆ ಸಾಲಗಾರನದ್ದು. ಸಾಲದ ದುಡ್ಡು ಎಲ್ಲ ಅನಗತ್ಯವಾಗಿ ಖರ್ಚಾದರೆ ಆಗ ಮನಸ್ಸಿನಲ್ಲಿ, “ದುಡ್‌ ಕಡಿಮೆ ಇದೆ, ಈ ಸಲ ಪರ್ಸನಲ್ ಲೋನ್ ಇಎಂಐ ಕಟ್ಟದೇ ಇದ್ರೆ ಏನಾಗುತ್ತೆ ಮಹಾ” ಎಂಬ ಭಾವನೆ ಮನಸ್ಸಿನಲ್ಲಿ ಮೂಡಿದರೆ ಅದು ಬಹಳ ಕೆಟ್ಟದ್ದು. ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.

ಸುಸ್ತಿಸಾಲದ ವರ್ಗೀಕರಣ

ದೊಡ್ಡ ಸುಸ್ತಿಸಾಲ (ಮೇಜರ್ ಡೀಫಾಲ್ಟ್‌): ಸಾಲಗಾರನು 90 ದಿನಗಳವರೆಗೆ ಸಾಲ ಮರುಪಾವತಿ ಮಾಡಲು ವಿಫಲನಾದರೆ ಆಗ ಆ ಸಾಲವನ್ನು ಬ್ಯಾಂಕ್ ಅನುತ್ಪಾದಕ ಆಸ್ತಿ (NPA) ಎಂದು ವರ್ಗೀಕರಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಸಾಲಗಾರನಿಗೆ ಮತ್ತೆ ಹೆಚ್ಚಿನ ಸಾಲ ಪಡೆಯವುದು ಕಷ್ಟವಾಗುತ್ತದೆ.

ಸಣ್ಣ ಸುಸ್ತಿಸಾಲ (ಮೈನರ್ ಡೀಫಾಲ್ಟ್‌): ನಿಗದಿತ ಅವಧಿಯೊಳಗೆ ಇಎಂಐ ಪಾವತಿ ಮಾಡದರೆ, 90 ದಿನಗಳ ಒಳಗಿನ ಅವಧಿಯಲ್ಲಿ ಇಎಂಐ ಪಾವತಿ ಮಾಡಿದರೆ ಅಂತಹ ಅವಧಿಯ ಸುಸ್ತಿ ಸಾಲವನ್ನು ಸಣ್ಣ ಸುಸ್ತಿ ಸಾಲ ಅಥವಾ ಮೈನರ್ ಡೀಫಾಲ್ಟ್ ಎಂದು ಪರಿಗಣಿಸಲಾಗುತ್ತದೆ. ಇದು ಸಾಲಗಾರನ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಿದರೂ, ತಿದ್ದುಕೊಂಡು ಚೇತರಿಸಿಕೊಳ್ಳಲು ಅವಕಾಶವಿದೆ.

ಪರ್ಸನಲ್ ಲೋನ್ ಇಎಂಐ ಕಟ್ಟಲು ಮಿಸ್ ಆದಾಗ ಉಂಟಾಗುವ ಪರಿಣಾಮ

1) ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ: ಇಎಂಐ ಪಾವತಿ ಮಾಡುವುದನ್ನು ಮಿಸ್ ಮಾಡಿಕೊಂಡರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬಹುತೇಕ ಸಾಲದಾತರು ನಿಮ್ಮ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್‌ 750 ರ ಮೇಲಿದೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ಒಮ್ಮೆ ಇಎಂಐ ಪಾವತಿ ತಪ್ಪಿಸಿಕೊಂಡರೆ ಆಗ ಸಿಬಿಲ್ ಸ್ಕೋರ್ 50 ರಿಂದ 70 ರಷ್ಟು ಇಳಿಕೆಯಾಗಿಬಿಡುತ್ತದೆ.

2) ಸಾಲ ಪಡೆಯುವ ಅರ್ಹತೆ: ಕ್ರೆಡಿಟ್ ಸ್ಕೋರ್ ಇಳಿದರೆ ಆಗ ಸಹಜವಾಗಿ ಅದು ನಿಮ್ಮ ಸಾಲ ಪಡೆಯುವ ಅರ್ಹತೆಯನ್ನೂ ಕಡಿಮೆ ಮಾಡುತ್ತದೆ. ನಿಮ್ಮ ಕ್ರೆಡಿಟ್ ರಿಪೋರ್ಟ್‌ನಲ್ಲಿ ಇಎಂಐ ಮರುಪಾವತಿ, ಸಾಲ ಮರುಪಾವತಿಯ ಪ್ರತಿ ವಹಿವಾಟು ಕೂಡ ದಾಖಲಾಗುತ್ತದೆ. ಇಎಂಐ ಮರುಪಾವತಿ ಮಿಸ್ ಆದರೆ ಅದು ಕೂಡ ಅದರಲ್ಲಿ ದಾಖಲಾಗುವ ಕಾರಣ ಭವಿಷ್ಯದಲ್ಲಿ ಸಾಲ ಸಿಗುವ ಅವಕಾಶ ಕಡಿಮೆಯಾಗುತ್ತದೆ.

3) ವಿಳಂಬ ಶುಲ್ಕ, ದಂಡ: ಇಎಂಐ ಪಾವತಿ ವಿಳಂಬವಾದರೆ ಅಥವಾ ಇಎಂಐ ಮಿಸ್ ಮಾಡಿಕೊಂಡರೆ ಆ ಕಂತುಗಳಿಗೆ ಬಹುತೇಕ ಬ್ಯಾಂಕುಗಳು ವಿಳಂಬ ಶುಲ್ಕವನ್ನು ವಿಧಿಸುತ್ತವೆ. ಅದೇ ರೀತಿ ದಂಡವನ್ನೂ ವಿಧಿಸುತ್ತವೆ. ಇದು ಹಣಕಾಸಿನ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

4) ರಿಕವರಿ ಏಜೆಂಟ್‌ಗಳು: ನಿಮ್ಮ ಇಎಂಐ ಪಾವತಿ 90 ದಿನಗಳ ಗಡುವು ಮೀರಿದ್ದರೆ, ಬಾಕಿ ಮೊತ್ತ ಸಂಗ್ರಹಿಸಲು ಬ್ಯಾಂಕುಗಳ ರಿಕವರಿ ಏಜೆಂಟ್‌ಗಳು ಬೆನ್ನು ಬೀಳುತ್ತಾರೆ. ರಿಕವರಿ ಏಜೆಂಟ್‌ ಬೆನ್ನು ಬೀಳುವ ಸುಳಿವು 60 ದಿನ ಆಗುತ್ತಲೇ ಅರಿವಿಗೆ ಬರುತ್ತದೆ.

ಪರ್ಸನಲ್‌ ಲೋನ್ ಇಎಂಐ ತಪ್ಪಿ ಹೋಗದಿರಲು ಹೀಗೆ ಮಾಡಿ

ಪರ್ಸನಲ್ ಲೋನ್ ಇಎಂಐ ತಪ್ಪಿ ಹೋಗಿ ಸುಸ್ತಿಸಾಲದ ಪಟ್ಟಿ ಸೇರದಂತೆ ಮಾಡಲು ಹೀಗೆ ಮಾಡಿ-

1) ನಿಮ್ಮ ಹಣಕಾಸು ಯೋಜನೆ: ಪರಿಣಾಮಕಾರಿ ಬಜೆಟ್ ಮತ್ತು ಹಣಕಾಸು ಯೋಜನೆ ಮಾಡಿಕೊಂಡರೆ, ಇಎಂಐ ಮಿಸ್ ಆಗುವುದನ್ನು ತಪ್ಪಿಸಬಹುದು.

2) ಕಡಿಮೆ ಇಎಂಐ ಮೊತ್ತಕ್ಕೆ ವಿನಂತಿ ಮಾಡಿ: ನಿಮ್ಮ ಹಣಕಾಸಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಇಎಂಐ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಿ. ಸಾಲದ ಇಎಂಐ ಪಾವತಿ ಕಷ್ಟವಾದರೆ ಅದನ್ನು ಕಡಿಮೆ ಮಾಡಿ ಅವಧಿ ಹೆಚ್ಚಿಸಲು ವಿನಂತಿಸಿ.

3) ಕಂತುಗಳಲ್ಲಿ ಪಾವತಿ ಮಾಡಿ: ಸಾಲದ ಕಂತು ಹೊರೆಯಾದರೆ ಇಎಂಐಯನ್ನು ಎರಡು ಕಂತುಗಳಲ್ಲಿ ಅವಧಿಗೂ ಮೊದಲೇ ಪಾವತಿ ಮಾಡಿ. ಈ ಪೂರ್ವಭಾವಿ ವಿಧಾನವು ಲೋನ್ ಅವಧಿ ಉದ್ದಕ್ಕೂ ನಿಮ್ಮ ಇಎಂಐ ಪಾವತಿಯನ್ನು ಸಕಾಲಿಕವಾಗಿ ಇಟ್ಟುಕೊಳ್ಳುತ್ತದೆ.

4) ಇಎಂಐ ಮುಕ್ತ ಅವಧಿಗೆ ಮನವಿ ಸಲ್ಲಿಸಿ: ತಾತ್ಕಾಲಿಕ ಆದಾಯದ ಅಡಚಣೆ ಉಂಟಾದರೆ ಆಗ ಇಎಂಐ ಪಾವತಿಗೆ ಗ್ರೇಸ್ ಅವಧಿ ನೀಡುವಂತೆ ಸಾಲದಾತರಿಗೆ ಮನವಿ ಸಲ್ಲಿಸಿ. ಕೆಲವೊಮ್ಮೆ ಬ್ಯಾಂಕುಗಳು ಮೂರರಿಂದ ಆರು ತಿಂಗಳ ತನಕ ಕಾಲಾವಕಾಶ ನೀಡುತ್ತವೆ.

5) ಸಾಲದಾತರೊಂದಿಗೆ ಸಂಪರ್ಕ: ಸಾಲದಾತರ ಜೊತೆಗೆ ಸಂಪರ್ಕ ಮತ್ತು ಸಂವಹನ ಮುಖ್ಯ. ನಿಮ್ಮ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಸಾಲದಾತರ ಜೊತೆಗೆ ಮುಕ್ತವಾಗಿ ಮಾತಾನಾಡುವುದರಿಂದ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಕೆಲವು ಬ್ಯಾಂಕುಗಳು, ಸರಳ ಮರುಪಾವತಿಯ ಆಯ್ಕೆಯನ್ನೂ ನೀಡುತ್ತವೆ. ಇದು ಕಷ್ಟಕಾಲದಲ್ಲಿ ನೆರವಿಗೆ ಬರುತ್ತದೆ.

ಇನ್ನೂ ಆಯ್ಕೆ ಇದ್ದು, ಅದಕ್ಕೆ ಕ್ರೆಡಿಟ್‌ ಸ್ಕೋರ್ ಚೆನ್ನಾಗಿರಬೇಕು. ಕ್ರೆಡಿಟ್ ಸ್ಕೋರ್ ಬೆಸ್‌ ಇರುವವರು ನಿಮ್ಮ ಸಾಲದ ರೀಫೈನಾನ್ಸಿಂಗ್ ಆಯ್ಕೆಯನ್ನು ಪರಿಗಣಿಸಬಹುದು. ಇದು ನಿಮ್ಮ ಇಎಂಐ ಹೊರೆಯನ್ನು ಕಡಿಮೆ ಮಾಡಬಹುದು. ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಹೊಂದಿದವರ ಬೇಡಿಕೆಯನ್ನು ಬ್ಯಾಂಕುಗಳು ಸಾಮಾನ್ಯವಾಗಿ ಪರಿಗಣಿಸುತ್ತವೆ.

Whats_app_banner