ಬದಲಾವಣೆ ಬಯಸ್ತೀರಾ, ಹಾಗಾದ್ರೆ ಆದಾಯ ತೆರಿಗೆ ಕಾನೂನು ಸರಳಗೊಳಿಸಲು ನೀವೂ ಸಲಹೆ ನೀಡಿ; ಹೇಗಂತೀರಾ - ಸಿಂಪಲ್ಲಾಗಿ ಈ ಹಂತಗಳನ್ನು ಅನುಸರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬದಲಾವಣೆ ಬಯಸ್ತೀರಾ, ಹಾಗಾದ್ರೆ ಆದಾಯ ತೆರಿಗೆ ಕಾನೂನು ಸರಳಗೊಳಿಸಲು ನೀವೂ ಸಲಹೆ ನೀಡಿ; ಹೇಗಂತೀರಾ - ಸಿಂಪಲ್ಲಾಗಿ ಈ ಹಂತಗಳನ್ನು ಅನುಸರಿಸಿ

ಬದಲಾವಣೆ ಬಯಸ್ತೀರಾ, ಹಾಗಾದ್ರೆ ಆದಾಯ ತೆರಿಗೆ ಕಾನೂನು ಸರಳಗೊಳಿಸಲು ನೀವೂ ಸಲಹೆ ನೀಡಿ; ಹೇಗಂತೀರಾ - ಸಿಂಪಲ್ಲಾಗಿ ಈ ಹಂತಗಳನ್ನು ಅನುಸರಿಸಿ

ಬದಲಾವಣೆ ಬೇಕು ಎಂದು ಎಲ್ಲರೂ ಬಯಸುವುದು ಸಹಜ. ಆದರೆ ಹೇಗೆ ಬೇಕು ಎಂಬ ಸಲಹೆ ಸೂಚನೆ ಕೊಡದೇ ಇದ್ರೆ ಬದಲಾವಣೆ ಸಾಧ್ಯವೇ? ಇಲ್ಲ ಅಲ್ವ. ಹಾಗಾದ್ರೆ, ಆದಾಯ ತೆರಿಗೆ ಕಾನೂನು ಸರಳಗೊಳಿಸಲು ನೀವೂ ಸಲಹೆ ನೀಡಿ. ಹೇಗಂತೀರಾ - ಸಿಂಪಲ್ಲಾಗಿ ಈ ಹಂತಗಳನ್ನು ಅನುಸರಿಸಿ.

ಆದಾಯ ತೆರಿಗೆ ಕಾನೂನು ಸರಳಗೊಳಿಸಲು ನೀವೂ ಸಲಹೆ ನೀಡಬಹುದು.
ಆದಾಯ ತೆರಿಗೆ ಕಾನೂನು ಸರಳಗೊಳಿಸಲು ನೀವೂ ಸಲಹೆ ನೀಡಬಹುದು.

ನವದೆಹಲಿ: ಆದಾಯ ತೆರಿಗೆ ನಿಯಮವನ್ನು ಇನ್ನಷ್ಟು ಸರಳಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರ್ಷ ಬಜೆಟ್ (ಕೇಂದ್ರ ಬಜೆಟ್ 2024-25) ಮಂಡಿಸುವಾಗ ಈ ವಿಚಾರ ಉಲ್ಲೇಖಿಸಿದ್ದರು. ಇದರಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿಯು ಆಂತರಿಕ ಸಮಿತಿಯನ್ನು ರಚಿಸಿ, ಆದಾಯ ತೆರಿಗೆಯ ಸಮಗ್ರ ಪರಾಮರ್ಶೆ ಮಾಡುವಂತೆ ಸೂಚಿಸಿದೆ. ಆದಾಯ ತೆರಿಗೆ ಕಾನೂನನ್ನು ಸಂಕ್ಷಿಪ್ತ ಮತ್ತು ಸ್ಪಷ್ಟವಾಗಿ, ಸುಲಭವಾಗಿ ಅರ್ಥ ಮಾಡುವಂತೆ ಸರಳಗೊಳಿಸುವುದು ಇದರ ಉದ್ದೇಶ. ವಿವಾದ, ದಾವೆಗಳನ್ನು ಕಡಿಮೆ ಮಾಡಿ ತೆರಿಗೆದಾರರಿಗೆ ತೆರಿಗೆ ವಿಷಯದಲ್ಲಿ ಸ್ಪಷ್ಟತೆ ಇರುವಂತೆ ಮಾಡಲು ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಆದಾಯ ತೆರಿಗೆ ಕಾನೂನು ಸರಳಗೊಳಿಸಲು ನಾಲ್ಕು ವಿಭಾಗಗಳಲ್ಲಿ ಸಲಹೆ ಕೊಡಿ

ಆದಾಯ ತೆರಿಗೆ ಕಾನೂನು ಸರಳಗೊಳಿಸುವುದಕ್ಕೆ ನಾಲ್ಕು ವಿಭಾಗಗಳನ್ನು ಆದಾಯ ತೆರಿಗೆ ಇಲಾಖೆ ನಿಗದಿ ಮಾಡಿಕೊಂಡಿದ್ದು ಆಯಾ ವಿಭಾಗದಲ್ಲಿ ಸಾರ್ವಜನಿಕ ಸಲಹೆ ಸೂಚನೆಗಳನ್ನು ಆಹ್ವಾನಿಸಿದೆ. ಆ ನಾಲ್ಕು ವಿಭಾಗಗಳು ಹೀಗಿವೆ

1) ಭಾಷೆ ಸರಳಗೊಳಿಸುವುದು

2) ದಾವೆ ಕಡಿಮೆ ಮಾಡುವುದು

3) ಅನುಸರಣೆ ಮಾಡುವುದನ್ನು ಕಡಿಮೆಮಾಡುವುದು

4) ಅನಗತ್ಯ/ಬಳಕೆಯಲ್ಲಿಲ್ಲದ ನಿಬಂಧನೆಗಳನ್ನು ಗುರುತಿಸುವುದು

ಸಲಹೆ ನೀಡೋದು ಹೇಗಂತೀರಾ; ಸಿಂಪಲ್ಲಾಗಿ ಈ ಹಂತಗಳನ್ನು ಅನುಸರಿಸಿ

ಆದಾಯ ತೆರಿಗೆ ಕಾನೂನು ಸರಳಗೊಳಿಸವುದಕ್ಕೆ ಮೇಲಿನ 4 ವಿಭಾಗಗಳ ಸುಧಾರಣೆಗೆ ನೀವು ಸಲಹೆ ನೀಡಬೇಕು ಅಂತಿದ್ದೀರಾ, ಹಾಗಾದ್ರೆ ಈ ಹಂತಗಳನ್ನು ಅನುಸರಿಸಿದರೆ ಸಾಕು.

1) ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ ಹೋಗಿ ಅಥವಾ ಈ ಲಿಂಕ್ ಕ್ಲಿಕ್ ಮಾಡಿದರೆ ನೇರವಾಗಿ ಸಲಹೆ ನೀಡುವ ಪುಟಕ್ಕೆ ಕರೆದೊಯ್ಯುತ್ತದೆ.

2) ಆ ಪುಟ ತೆರೆದುಕೊಂಡ ಕೂಡಲೇ ಅಲ್ಲಿ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ. ಅದಾಗುತ್ತಲೇ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ.

3) ಆ ಒಟಿಪಿಯನ್ನು ನಮೂದಿಸಿದ ಬಳಿಕ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಆ ಪುಟ ಈ ಕೆಳಗಿನಂತೆ ಇರುತ್ತದೆ.

ಆದಾಯ ತೆರಿಗೆ ಕಾನೂನು ಸರಳಗೊಳಿಸುವುದಕ್ಕೆ ಸಲಹೆ ನೀಡೋದಕ್ಕೆ ಅನುಸರಿಸಬೇಕಾದ ಹಂತದಲ್ಲಿ ತೆರೆದುಕೊಳ್ಳುವ ಪುಟ ಇದು.
ಆದಾಯ ತೆರಿಗೆ ಕಾನೂನು ಸರಳಗೊಳಿಸುವುದಕ್ಕೆ ಸಲಹೆ ನೀಡೋದಕ್ಕೆ ಅನುಸರಿಸಬೇಕಾದ ಹಂತದಲ್ಲಿ ತೆರೆದುಕೊಳ್ಳುವ ಪುಟ ಇದು.

4) ಈ ಪುಟದಲ್ಲಿ ಮೊದಲ ಬಾಕ್ಸ್‌ನಲ್ಲಿ ನೀವು ಸೆಕ್ಷನ್ ನಂಬರ್ ನಮೂದಿಸಬೇಕು. ಸೆಕ್ಷನ್ ನಂಬರ್ ತಿಳಿದುಕೊಳ್ಳಲು ಅಲ್ಲೇ ಕೆಳಗೆ ಕೊಟ್ಟಿರುವ ಕ್ಲಿಕ್ ಹಿಯರ್ ಎನ್ನುವಲ್ಲಿ ಕ್ಲಿಕ್ ಮಾಡಿದರೆ ಸಾಕು. ಅದು ಸೆಕ್ಷನ್‌ಗಳ ವಿವರ ಇರುವ ಪುಟ್ಟಕ್ಕೆ ಕರೆದೊಯ್ಯತ್ತದೆ. ಅಲ್ಲಿ ನೋಡಿ ಬಂದು ಇಲ್ಲಿ ನಮೂದಿಸಬಹುದು.

5) ನಾಲ್ಕೂ ಸೆಕ್ಷನ್‌ಗಳ ವಿಚಾರದಲ್ಲೂ ಸಲಹೆ ನೀಡಬಹುದು. ಪ್ರತಿ ಬಾಕ್ಸ್‌ನಲ್ಲಿ ಕೂಡ 500 ಅಕ್ಷರಗಳು ಹಿಡಿಯುತ್ತವೆ. ಅದಕ್ಕಿಂತ ಹೆಚ್ಚು ಅಕ್ಷರಗಳಿಗೆ ಜಾಗ ಇಲ್ಲ. ಇಷ್ಟು ನಮೂದಿಸಿದ ಬಳಿಕ ಸಬ್‌ಮಿಟ್ ಕೊಟ್ಟರೆ ಆಯಿತು.

ಆರು ತಿಂಗಳಲ್ಲಿ ಆದಾಯ ತೆರಿಗೆ ಕಾನೂನು ಪರಾಮರ್ಶೆ ಮುಕ್ತಾಯ

ಈ ವರ್ಷದ ಬಜೆಟ್ ಮಂಡನೆ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಆರು ತಿಂಗಳ ಒಳಗಾಗಿ ಆದಾಯ ತೆರಿಗೆ ಕಾನೂನು ಪರಾಮರ್ಶೆ ಮುಗಿಯಲಿದೆ ಎಂದು ಪ್ರಕಟಿಸಿದ್ದರು. “ಇದು ವಿವಾದಗಳು ಮತ್ತು ದಾವೆಗಳನ್ನು ಕಡಿಮೆ ಮಾಡುತ್ತದೆ. ಆ ಮೂಲಕ ತೆರಿಗೆದಾರರಿಗೆ ನಿಶ್ಚಿತ ತೆರಿಗೆ ವಿವರವನ್ನು ಒದಗಿಸುತ್ತದೆ. ಇದು ದಾವೆಯಲ್ಲಿ ಸಿಲುಕಿರುವ ಬೇಡಿಕೆಯನ್ನು ಸಹ ತಗ್ಗಿಸುತ್ತದೆ. ಆರು ತಿಂಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ” ಎಂದು ಅವರು ಹೇಳಿದ್ದರು.

ಇನ್ನು, ಎರಡನೇ ಆವೃತ್ತಿಯ ನೇರ ತೆರಿಗೆ ವಿವಾದ್ ಸೇ ವಿಶ್ವಾಸ್ ಸ್ಕೀಮ್‌ 2024 ಅಕ್ಟೋಬರ್ 1 ರಿಂದ ಜಾರಿಗೆ ಬಂದಿದೆ. ಇದು ಕೂಡ ತೆರಿಗೆದಾರರ ದಾವೆಯ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿರುವಂಥದ್ದು.

Whats_app_banner