Parenting: ಹದಿವಯಸ್ಸಿನ ಮಕ್ಕಳಿಗೆ ವೈಯಕ್ತಿಕ ಸ್ವಾತಂತ್ರ್ಯ ನೀಡುವುದು ಎಷ್ಟು ಸರಿ? ಪೋಷಕರ ದುಗುಡಕ್ಕೆ ಇಲ್ಲಿದೆ ಉತ್ತರ- ಮನದ ಮಾತು
ಮಕ್ಕಳಿಗೆ ವೈಯಕ್ತಿಕ ಸ್ವಾತಂತ್ರ್ಯ ನೀಡುವುದು ಎಷ್ಟರ ಮಟ್ಟಿಗೆ ಸರಿ, ಇದರಿಂದ ಮಕ್ಕಳು ದಾರಿ ತಪ್ಪುದಿಲ್ಲವೇ, ಮಕ್ಕಳ ಮೊಬೈಲ್ ಅನ್ನು ಪೋಷಕರು ಚೆಕ್ ಮಾಡುವುದು ಸರಿಯೋ ತಪ್ಪೋ, ಹೀಗೆ ಮಕ್ಕಳ ವೈಯಕ್ತಿಕ ಸ್ವಾತಂತ್ರ್ಯ ವಿಚಾರದಲ್ಲಿ ಪೋಷಕರಿಗಿರುವ ಗೊಂದಲ, ದುಗುಡ, ತುಮುಲಗಳಿಗೆ ಇಲ್ಲಿದೆ ಆಪ್ತಸಮಾಲೋಚಕರ ಉತ್ತರ.
ಪ್ರಶ್ನೆ: ಮಕ್ಕಳ ಮೊಬೈಲ್ ಚೆಕ್ ಮಾಡಬಾರದು, ಮಕ್ಕಳ ರೂಮ್‌ಗೆ ಇದ್ದಕ್ಕಿದ್ದಂತೆ ಹೋಗಬಾರದು ಎಂದೆಲ್ಲಾ ಕೆಲವರು ಹೇಳುತ್ತಾರೆ. ಆದರೆ ಮಕ್ಕಳು ದಾರಿ ತಪ್ಪುತ್ತಿದ್ದಾರೆ ನಮಗೆ ತಿಳಿಯುವುದು ಹೇಗೆ? ನನ್ನ ಮಗಳು ಈ ವರ್ಷ 10ನೇ ತರಗತಿ ಓದುತ್ತಿದ್ದಾಳೆ. ಎಲ್ಲ ಧಾರಾವಾಹಿ, ಸಿನಿಮಾಗಳಲ್ಲಿ ಪ್ರೀತಿ-ಪ್ರೇಮದ್ದೇ ವಿಚಾರಗಳಿವೆ. ನನ್ನ ಮಗಳು ಹೀಗೇನಾದರೂ ಮಾಡಿದರೆ ಅಂತ ಭಯವಾಗುತ್ತೆ. ಅವಳನ್ನು ಹೇಗೆ ಕಾಪಾಡೋದು?
ಸುಮಾ, ಶಿವಮೊಗ್ಗ
ಉತ್ತರ: ನೀವು ಬಹಳ ಗೊಂದಲ ಹಾಗೂ ಆತಂಕದಲ್ಲಿ ಇದ್ದಂತೆ ಕಾಣುತ್ತದೆ. ಮನೆಯಲ್ಲಿ ವಯಸ್ಸಿಗೆ ಬಂದ ಮಕ್ಕಳಿದ್ದರೆ ಪೋಷಕರಿಗೆ ಹೀಗಾಗುವುದು ಸಹಜ. ಪ್ರೀತಿ ಪ್ರೇಮದ ವಿಚಾರದಲ್ಲಿ ಮಕ್ಕಳು ದಾರಿ ತಪ್ಪಿ ಏನಾದ್ರೂ ಅಪಾಯಕ್ಕೆ ಸಿಲುಕುತ್ತಾರೆ ಎಂಬ ಕಾಳಜಿ ನಿಮ್ಮನ್ನು ಭಯಕ್ಕೀಡು ಮಾಡುತ್ತದೆ. ಸದಾ ಅವರನ್ನು ಹೇಗೆ ಕಾಪಾಡುವುದು ಎಂದು ಚಿಂತೆ ಮಾಡುತ್ತಿರುತ್ತೀರಿ.
ಸಿನಿಮಾ, ಧಾರಾವಾಹಿ, ಸಾಮಾಜಿಕ ಜಾಲತಾಣಗಳು, ಸುದ್ದಿ ಮಾಧ್ಯಮಗಳಿಂದ ಇಂತಹ ಸುದ್ದಿಗಳು ಕೇಳಿದರಂತೂ ಇನ್ನೂ ದಿಗಿಲಾಗುವ ಸಾಧ್ಯತೆ ಹೆಚ್ಚು. ಪರಿಣಾಮವಾಗಿ ಮಕ್ಕಳನ್ನು ಸದಾ ಸಂಶಯಾಸ್ಪದವಾಗಿ ನೋಡುವುದು, ಅಪನಂಬಿಕೆಯಿಂದ ವರ್ತಿಸುವುದು, ಅವರಿಗೆ ಖಾಸಗಿ ಸಮಯವನ್ನು ನೀಡದೇ ಇರುವುದು ಸಾಮಾನ್ಯವಾಗಿ ಬಿಡುತ್ತದೆ. ಇಂತಹ ಸಂದರ್ಭದಲ್ಲಿ ಪೋಷಕರು ಸಂಯಮ ಹಾಗೂ ಧೈರ್ಯದಿಂದ ಇರುವುದಕ್ಕೆ ಪ್ರಯತ್ನಿಸಬೇಕು. ಇಲ್ಲದಿದ್ದರೆ ಪೋಷಕರು ಹಾಗೂ ಮಕ್ಕಳ ಸಂಬಂಧ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ.
ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವ ಪೋಷಕರು ಹೀಗೆ ಮಾಡಬೇಕು.
1. ಮಕ್ಕಳ ಮೇಲೆ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು
ಅಪನಂಬಿಕೆ ಮತ್ತು ಸಂಶಯಗಳಿಗೆ ಆಸ್ಪದ ನೀಡಿದರೆ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಹೆಚ್ಚು. ಪ್ರಾಪ್ತ ವಯಸ್ಸಿಗೆ ತಲುಪಿರುವ ಮಕ್ಕಳಿಗೆ ವಯಸ್ಸಿಗೆ ತಕ್ಕ ಪ್ರೀತಿ, ಪ್ರೇಮ, ಅನ್ಯಲಿಂಗದ ಕುರಿತು ಕೂತುಹಲ ಮತ್ತು ಆಸಕ್ತಿಯಿರುವುದು ಸ್ವಾಭಾವಿಕ. ಇದನ್ನು ಪರಿಪೂರ್ಣವಾಗಿ ತಪ್ಪೆಂದು ಭಾವಿಸಿ ಅತಿಯಾಗಿ ತಡೆಯುವುದು ಅಥವಾ ನಿಯಂತ್ರಿಸುವುದು ಸರಿಯಲ್ಲ.
ಮಕ್ಕಳು ಪ್ರೀತಿ-ಪ್ರೇಮದ ವಿಚಾರಗಳನ್ನು ಹೇಗೆ ಎಚ್ಚರಿಕೆಯಿಂದ ಎದುರಿಸಬೇಕು ಮತ್ತು ಸಂಕೋಚವಿಲ್ಲದೇ ಮುಕ್ತವಾಗಿ ಪೋಷಕರ ಬಳಿ ಹೇಳಿಕೊಳ್ಳಲು ಪ್ರೋತ್ಸಾಹಿಸಿ ಮತ್ತು ನೀವು ಅವರ ಮೇಲಿಟ್ಟಿರುವ ನಂಬಿಕೆಯನ್ನು ಪುನಃ ವ್ಯಕ್ತಪಡಿಸಿ. ಮಕ್ಕಳು ಈ ಕುರಿತು ನಿಮ್ಮ ಬಳಿ ಮಾತಾನಾಡಿದಾಗ ಕುಹಕ, ವ್ಯಂಗ್ಯ, ಅತಿಯಾದ ನಿಂದನೆ, ಹೀಯಾಳಿಸದೇ ಮತ್ತು ಯಾವುದೇ ನಿರ್ಣಯಕ್ಕೆ ಬರದೇ ಅವರ ಮಾತನ್ನು ಗಮನವಿಟ್ಟು ಆಲಿಸಿ. ನಂತರ ನಿಮ್ಮ ಅಭಿಪ್ರಾಯ ಹಂಚಿಕೊಂಡು ಸೂಕ್ತ ಪರಿಹಾರವನ್ನು ನೀಡಿ. ಈ ರೀತಿಯಲ್ಲಿ ಮಕ್ಕಳ ಬಳಿ ವಿಶ್ವಾಸದಿಂದ
ವರ್ತಿಸಿದಾಗ ಬಹುತೇಕ ಮಕ್ಕಳು ಸಹ ನಿಮ್ಮ ವಿಶ್ವಾಸದ ತಕ್ಕ ಹಾಗೆ ನಡೆದುಕೊಳ್ಳುವ ಸಾಧ್ಯತೆ ಹೆಚ್ಚು.
ಹಾಗೆಯೇ ಅವರು ಖಾಸಗಿ ಸಮಯವನ್ನು ನಿರೀಕ್ಷಿಸಿದರೆ ಪೋಷಕರು ಅದನ್ನು ಅರ್ಥ ಮಾಡಿಕೊಂಡು ಗೌರವದಿಂದ ನೀಡಿದರೆ ಮಕ್ಕಳಿಗೆ ಪೋಷಕರ ಮೇಲೆ ಗೌರವ ಹಾಗು ವಿಶ್ವಾಸ ಮೂಡುತ್ತದೆ. ಸಂಬಂಧಗಳು ಬೇರೆಯುತ್ತವೆ.
2. ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳಿ
ಧಾರವಾಹಿ, ಸಿನಿಮಾ, ಸಾಮಾಜಿಕ ಜಾಲತಾಣಗಳು, ಸುದ್ದಿ ಮಾಧ್ಯಮಗಳನ್ನು ಅಗತ್ಯಕ್ಕೆ ಮೀರಿ ಬಳಕೆ ಮಾಡಬೇಡಿ. ಇವುಗಳಲ್ಲಿರುವ ವಿಷಯಗಳು ನಿಮ್ಮ ಆತಂಕ ಮತ್ತು ದುಗುಡವನ್ನು ಹೆಚ್ಚಿಸುಬಹುದು ಅಥವಾ ನಕಾರಾತ್ಮಕವಾಗಿ ಪ್ರಚೋದಿಸಬಹುದು. ಆದ್ದರಿಂದ ಮಾಧ್ಯಮದಲ್ಲಿ ಅತಿಯಾಗಿ ತೊಡಗುವುದನ್ನು ತಡೆಯಬೇಕು. ಸ್ವಲ್ಪ ಮಟ್ಟಿನಲ್ಲಿ ತೊಡಗಿದಾಗಲೂ ನಿಮಗೆ ಆತಂಕ, ಚಿಂತೆ ಹೆಚ್ಚಾದರೆ, ನಿಮಗೆ ಸಂತೋಷ ಮತ್ತು ಸ್ಫೂರ್ತಿ ಕೊಡುವ ಬೇರೆ ವಿಷಯಗಳ ಬಗ್ಗೆ ಗಮನಹರಿಸಿ.
ಬಹುತೇಕ ಮಾಧ್ಯಮಗಳ ಎಲ್ಲಾ ವಿಷಯಗಳು ವಾಸ್ತವವನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ. ಅದರಲ್ಲಿ ತೋರಿಸುವ ಅಥವ ವರದಿ ಮಾಡಿದ ಬಹುತೇಕ ಘಟನೆಗಳು ನಿಮ್ಮ ಬದುಕಿನಲ್ಲೂ ಆಗಲೇಬೇಕೆಂದೇನಿಲ್ಲ.
3. ಮಕ್ಕಳನ್ನು ಸಬಲರನ್ನಾಗಿಸಿ
ನಿಮ್ಮ ಮಕ್ಕಳನ್ನು ಸಬಲರನ್ನಾಗಿಸಿ. ಮಕ್ಕಳಿಗೆ ಶಿಕ್ಷಣದ ಮಹತ್ವ ಮತ್ತು ಗುರಿಗಳನ್ನು ಸ್ಪಷ್ಟೀಕರಿಸಿ. ಅವರಿಗೆ ಸ್ವಲ್ಪ ಸ್ವಾತಂತ್ರ್ಯದ ಜೊತೆ ಜವಾಬ್ದಾರಿಯನ್ನು ನೀಡಿ. ಸರಿಯಾದ ರೀತಿಯಲ್ಲಿ ಅವರ ಭಾವನೆಗಳನ್ನು ಗುರುತಿಸಿ. ಭಾವನೆಗಳನ್ನು ನಿಭಾಯಿಸಲು ಮಾರ್ಗದರ್ಶನ ನೀಡಿ. ಪರಿಸ್ಥಿಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಾದ ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಸ್ವ ಅರಿವನ್ನು ಮಕ್ಕಳಿಗೆ ತಿಳಿಸಿಕೊಡುವುದು ಮುಖ್ಯ. ಸಣ್ಣಪುಟ್ಟ ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಂಡು ಅದರ ಹೊಣೆಯನ್ನು ಹೋರುವ ಸಾಮರ್ಥ್ಯವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಅಭ್ಯಾಸ ಮಾಡುವುದಕ್ಕೆ ಬೆಂಬಲಿಸಿದರೆ ಮಕ್ಕಳು ಭವಿಷ್ಯದಲ್ಲಿ ಇತರರ ಮೇಲೆ ಅತಿಯಾಗಿ ಅವಲಂಬಿಸುವುದಿಲ್ಲ ಹಾಗು ತಪ್ಪು ನಿರ್ಧಾರಗಳನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.
ತಪ್ಪು ಮಾಡಿದಾಗ ತಿದ್ದುಕೊಳ್ಳುವುದನ್ನು ಮತ್ತು ಸೋಲನ್ನು ಎದುರಾದಾಗ ಪುನಃ ಪ್ರಯತ್ನಿಸುವುದನ್ನು ಅಭ್ಯಾಸ ಮಾಡಿಸುವುದು ಮಕ್ಕಳನ್ನು ಸಬಲರನ್ನಾಗಿಸಲು ಅನುಕೂಲ ಮಾಡಿಕೊಡುತ್ತದೆ.
4. ಮುಕ್ತ ಸಂವಹನ ಅತಿ ಅವಶ್ಯ
ಪೋಷಕರು ಮತ್ತು ಮಕ್ಕಳ ನಡುವೆ ಮುಕ್ತ ಸಂವಹನದ ಅಗತ್ಯವಿದೆ. ಯಾವುದೇ ವಿಷಯವಾದರೂ ಸರಿ, ಅದರ ಕುರಿತು ಮಾತಾನಾಡುವ, ತಮ್ಮ ಭಾವನೆ ಮತ್ತು ಅನಿಸಿಕೆಗಳನ್ನು ಹಂಚಿಕೊಳ್ಳುವ ವಾತವರಣವಿರಬೇಕು. ಭಯ ಹಾಗೂ ಸಂಕೋಚದಿಂದ ವಿಷಯಗಳನ್ನು ಮುಚ್ಚಿಡದೆ ಪ್ರತಿಯೊಂದನ್ನು ಪೋಷಕರ ಬಳಿ ಹಂಚಿಕೊಳ್ಳುವುದಕ್ಕೆ ಉತ್ತೇಜನ ನೀಡಿ. ಹಾಗೆಯೇ, ಪೋಷಕರು ಸಹ ಮುಕ್ತವಾಗಿ ಮಕ್ಕಳ ಕುರಿತು ತಮ್ಮ ಪ್ರಶ್ನೆ, ಗೊಂದಲ, ಆತಂಕವನ್ನು ವ್ಯಕ್ತಪಡಿಸುವ ವಾತವರಣವನ್ನು ಕೂಡ ಬೆಳೆಸಿಕೊಳ್ಳಬೇಕು.
5. ವಾಸ್ತವವನ್ನು ಅರಿತು ಒಪ್ಪಿಕೊಳ್ಳಿ
ವಾಸ್ತವವನ್ನು ಅರಿತುಕೊಳ್ಳಿ. ನೀವು ಪೋಷಕರಾದರೂ, ಮಕ್ಕಳು ನಿಮ್ಮ ಜವಾಬ್ದಾರಿ ಆದರೂ ಸಹ ಮಕ್ಕಳು ಕಾಲಕ್ಕೆ ತಕ್ಕಂತೆ ಬೆಳೆಯುತ್ತಿರುತ್ತಾರೆ. ಅವರದೇ ಆದ ಸವಾಲುಗಳನ್ನು ಎದುರಿಸುತ್ತ ತಮ್ಮ ಆಸೆ, ಕನಸುಗಳತ್ತ ಸಾಗುತ್ತಿರುತ್ತಾರೆ. ನಿಮ್ಮ ಪಾಲನೆ, ಪೋಷಣೆ, ಪ್ರೀತಿ, ಬೆಂಬಲ ಎಲ್ಲವೂ ಬಹಳ ಅಗತ್ಯ. ಆದರೆ ಕೆಲವು ವಿಷಯಗಳಲ್ಲಿ ವಯಸ್ಸಿಗೆ ಬಂದಿರುವ ಮಕ್ಕಳಿಗೆ ಖಾಸಗಿ ಸಮಯ, ಸ್ವಾತಂತ್ರ್ಯದ ಅವಶ್ಯಕತೆಯಿರುತ್ತದೆ. ಕೆಲ ಮಕ್ಕಳು ಸಹಜವಾಗಿ ಸಿಗದಿದ್ದರೆ ಹೋರಾಡಿಯಾದರೂ ಗಿಟ್ಟಿಸಿಕೊಳ್ಳುತ್ತಾರೆ. ಇದನ್ನು ನೀವು ಅರಿತು ಗೌರವದಿಂದ ಸ್ವೀಕರಿಸಿದರೆ ಮಕ್ಕಳು ಸಹ ನಿಮ್ಮ ಮನಸ್ಥಿತಿಯನ್ನು ಗೌರವದಿಂದ ಸ್ವೀಕರಿಸುತ್ತಾರೆ.
ಆದ್ದರಿಂದ ಪ್ರಾಪ್ತ ವಯಸ್ಸಿಗೆ ಬಂದಿರುವ ಮಕ್ಕಳ ರೂಮ್‌ಗೆ ಧಿಡೀರ್ ಅಂತ ಹೋಗುವುದು ಮತ್ತು ಅವರ ಮೊಬೈಲ್ ಅನ್ನು ಚೆಕ್ ಮಾಡುವುದನ್ನು ತಡೆಯಬೇಕು. ಬದಲು ಒಟ್ಟಿಗೆ ಕುಳಿತು ಸಂಯಮದಿಂದ ಮಾತನಾಡಿ. ನಿಮ್ಮ ಅನುಮಾನಗಳ ಕುರಿತು ನೇರವಾಗಿ ಮಾತನಾಡಿ. ತಕ್ಷಣ ಹೇಳದಿದ್ದರೆ, ಸ್ವಲ್ಪ ಸಮಯ ಕೊಡಿ, ನಿರಾಶೆಯಾಗಬೇಡಿ. ಯಾವುದೇ ವಿಷಯದಲ್ಲಾದರೂ ಸರಿ, ನಿಮ್ಮ ಬೆಂಬಲ ಮತ್ತು ಮಾರ್ಗದರ್ಶನ ಅವರಿಗೆ ಸಿಗುತ್ತದೆ ಎಂದು ಆಶ್ವಾಸನೆ ನೀಡಿ. ನೀವು ಮಕ್ಕಳ ಮೇಲಿಟ್ಟಿರುವ ನಂಬಿಕೆ ವಿಶ್ವಾಸದ ಕುರಿತು ಪುನಃ ಆಶ್ವಾಸನೆ ನೀಡಿ. ಇದರಿಂದ ಮನಃಸ್ತಾಪಗಳು ಕಡಿಮೆಯಾಗುತ್ತವೆ ಮತ್ತು ಮಕ್ಕಳ ಮನಸ್ಸನ್ನು ಅರಿತು, ಅವರೊಂದಿಗೆ ನಿಲ್ಲಲ್ಲು ಸಹಾಯಮಾಡುತ್ತದೆ.
ವಿಭಾಗ