ಕನ್ನಡ ಸುದ್ದಿ  /  ಜೀವನಶೈಲಿ  /  ಮೊಬೈಲ್‌ ಬಳಸುವುದು ಚಟವಾಗಿದೆ, ಫೋನ್‌ ಇಲ್ಲದೇ ಬದುಕಿಲ್ಲ ಎಂಬ ಗೀಳಿನ ಮನೋಭಾವದಿಂದ ಹೊರಬರಲು ಏನು ಮಾಡ್ಬೇಕು - ಮನದ ಮಾತು

ಮೊಬೈಲ್‌ ಬಳಸುವುದು ಚಟವಾಗಿದೆ, ಫೋನ್‌ ಇಲ್ಲದೇ ಬದುಕಿಲ್ಲ ಎಂಬ ಗೀಳಿನ ಮನೋಭಾವದಿಂದ ಹೊರಬರಲು ಏನು ಮಾಡ್ಬೇಕು - ಮನದ ಮಾತು

ಮೊಬೈಲ್‌ ಬದುಕಿನ ಭಾಗವಾಗಿದೆ, ಮೊಬೈಲ್‌ ಇಲ್ಲದೇ ನನ್ನ ದಿನ ಆರಂಭವಾಗುವುದೇ ಇಲ್ಲ, ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮೊಬೈಲ್‌ ಬೇಕೇ ಬೇಕು, ಮೊಬೈಲ್‌ ಕೈಯಲ್ಲಿ ಇಲ್ಲ ಎಂದರೆ ಏನೋ ಕಳೆದುಕೊಂಡ ಭಾವ... ಈ ಭಾವನೆಗಳು ನಿಮ್ಮದೂ ಆಗಿದ್ದರೆ, ನಿಮಗಿರುವ ಮೊಬೈಲ್‌ ಚಟದಿಂದ ಹೊರ ಬರುವುದು ಹೇಗೆ ಎಂಬುದನ್ನು ತಿಳಿಸಿದ್ದಾರೆ ಆಪ್ತಸಮಾಲೋಚಕಿ ಭವ್ಯ ವಿಶ್ವನಾಥ್‌.

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಪ್ರಶ್ನೆ: ನಾನು ದಿನವಿಡಿ ಮೊಬೈಲ್‌ ಯೂಸ್‌ ಮಾಡ್ತೀನಿ. ಬೆಳಿಗ್ಗೆ ಎದ್ದು ಮೊದಲು ನೋಡುವುದೇ ಮೊಬೈಲು. ಅದರ ಸ್ವರ್ಶವಾಗದಿದ್ದರೆ ಮನಸ್ಸಿಗೆ ಒಂಥರಾ ಕಿರಿಕಿರಿ, ಒಂದು ರೀತಿಯ ವೇದನೆ. ರಾತ್ರಿ ಮಲಗುವಾಗಲೂ ನಿದ್ದೆ ಬರುವ ತನಕ ಮೊಬೈಲ್ ನೋಡಿಕೊಂಡೇ ಇರುತ್ತಾನೆ. ಮೊಬೈಲ್ ನೋಡುವಾಗ ಏನೋ ನೆಮ್ಮದಿ, ಕ್ಷಣಿಕ ಸುಖ. ಆದರೆ ಮೊಬೈಲ್‌ ಕೈಯಿಂದ ಕೆಳಗಿರಿಸಿದ ತಕ್ಷಣ ಏನೋ ಬೇಸರ, ಕಳವಳ, ಆಲಸ್ಯ ಮತ್ತು ಅಪರಾಧಿ ಮನೋಭಾವ ಕಾಡುತ್ತದೆ. ಬೆಳಿಗ್ಗೆ ಎದ್ದು ಕಣ್ಣು ತೆಗೆಯುವ ಮುಂಚೆಯೇ ಮೊಬೈಲ್ ಸ್ಪರ್ಶವಾಗಬೇಕು. ನನ್ನ ಈ ಮೊಬೈಲ್‌ ಚಟದಿಂದ ದೂರಾಗುವುದು ಹೇಗೆ? -ಪವಿತ್ರ, ಮಂಗಳೂರು

ಉತ್ತರ: ನೀವು ಮೊಬೈಲ್ ಬಳಕೆಯ ವ್ಯಸನಕ್ಕೆ (ಚಟ) ಈಡಾದಂತೆ ಕಾಣುತ್ತಿದೆ. ಇದರಿಂದ ನಿಮ್ಮಲ್ಲಿ ಅಸಹಾಯಕ ಮನಸ್ಥಿತಿ ಉಂಟಾಗಿದೆ. ನಿಮ್ಮ ದಿನಚರಿಯಲ್ಲಿ ಒಗ್ಗೂಡಿರುವ ಈ ಚಟ ನಿಮ್ಮನ್ನು ಉಭಯಸಂಕಟದಲ್ಲಿ ಸಿಲುಕಿಸಿದೆ. ಬಿಡಬೇಕೆಂಬ ಬಯಕೆ, ಆದರೆ ಬಿಟ್ಟು ಬದುಕಿರಲಾರದ ಸಂಕಟ. ಮೊಬೈಲ್ ಎಂಬ ಒಂದು ಚಿಕ್ಕ ಯಂತ್ರ ಮಾನವನ ಮನಸ್ಸನ್ನೇ ನಿಯಂತ್ರಿಸುತ್ತಿದೆ. ಈ ಚಟವು ಒಂದು ಅಥವಾ ಎರಡು ದಿನವಲ್ಲ, ಬಹಳ ತಿಂಗಳು / ವರ್ಷಗಳಿಂದ ಬೆಳೆದು ಬಂದಿರುವಂಥದ್ದು. ಹಾಗಾಗಿ ಇದು ನಿಮ್ಮ ಬದುಕಿನಲ್ಲಿ ಆಳವಾಗಿ ಒಗ್ಗೂಡಿರುತ್ತದೆ. ಇದರಿಂದ ಹೊರ ಬರುವುದಕ್ಕೆ ಸ್ವಲ್ಪ ಕಾಲಾವಕಾಶ ಮತ್ತು ಸಂಯಮದ ಅಗತ್ಯವಿದೆ.

ಸದಾ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಹಳ ಸಮಯದವರೆಗೆ ಹರಟೆ ಹೊಡೆಯುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುವುದು ನಿಮೆಗೇ ಗೊತ್ತಿಲ್ಲದೆ ಚಟವಾಗಿ ರೂಪುಗೊಳ್ಳುತ್ತದೆ.

ಟ್ರೆಂಡಿಂಗ್​ ಸುದ್ದಿ

ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆದರೆ ಅತಿಯಾಗಿ ಯೋಚಿಸುವುದು (Over thinking), ನಕಾರಾತ್ಮಕ ಚಿಂತನೆ (Negative thinking) ಸರ್ವೇಸಾಮಾನ್ಯ. ಮನಸ್ಸಿಗೆ ಕಿರಿಕಿರಿಯಾಗುವುದು, ವಿನಾಕಾರಣ ಕೋಪ, ಕೂತಲ್ಲೆ ಕೂತಿರುವುದು, ನಿರುತ್ಸಾಹ, ಆಲಸ್ಯ, ನಿದ್ರಾಹೀನತೆ, ಅತಿಯಾಗಿ ತಿನ್ನುವುದು ಹೀಗೆ ಹಲವಾರು ಅನಾರೋಗ್ಯಕರ ಬೆಳವಣಿಗೆಗಳಿಗೆ ಮನುಷ್ಯ ತುತ್ತಾಗುತ್ತಾನೆ. ಪರಿಣಾಮವಾಗಿ ಸಂಬಂಧ ಹಾಗೂ ಕೆಲಸ ಕಾರ್ಯಗಳ ಮೇಲೂ ಪರಿಣಾಮ ಬೀಳುತ್ತದೆ. ಹೀಗಾಗಿ ಮೊಬೈಲ್ ಕೈಲಿ ಇಲ್ಲ ಎಂದರೆ ಏನೋ ಕಳೆದುಕೊಂಡ ಭಾವ ಆವರಿಸುತ್ತದೆ. ಸ್ವಲ್ಪ ಹೊತ್ತಾದರೂ ಬಿಟ್ಟಿರೋಣವೆಂದರೆ ಅಪೂರ್ಣ ಭಾವ ಕಾಡುತ್ತದೆ. ಮನಸ್ಸಿಗೆ ಕಳವಳ ಮತ್ತು ಚಿತ್ತಭ್ರಾಂತಿಯಾಗುತ್ತದೆ. ಈ ಗುಣಲಕ್ಷಣಗಳಿದ್ದರೆ ಇದನ್ನೇ ಮೊಬೈಲ್ ವ್ಯಸನ (Mobile addiction) ವೆಂದು ಕರೆಯಲಾಗುತ್ತದೆ.

ಆದರೆ, ಇದರ ಬಗ್ಗೆ ಅರಿವಿಟ್ಟುಕೊಂಡು ಮತ್ತು ನಿಮ್ಮ ವ್ಯಸನವನ್ನು ಒಪ್ಪಿಕೊಂಡು, ಇದರಿಂದ ಹೊರಗೆ ಬರಲು ಮನಸ್ಸು ಮಾಡಿದರೆ, ನಿಸ್ಸಂಶಯವಾಗಿ ಹೊರ ಬರಬಹುದು. ಕೆಲವು ಕಟ್ಟುನಿಟ್ಟು ನಿಯಮಗಳನ್ನು ಪಾಲಿಸಿದರೆ ಖಂಡಿತವಾಗಿಯೂ ಮೊಬೈಲ್ ಗೀಳಿನಿಂದ ಹೊರಬಹುದು.

ಮೊಬೈಲ್‌ ಗೀಳಿನಿಂದ ಹೊರ ಬರಲು 5 ಟಿಪ್ಸ್‌

1) ನಿಗದಿತ ವೇಳೆ: ಮೊಬೈಲ್ ಬಳಕೆಗೆ ಸಮಯವನ್ನು ನಿಗದಿ ಮಾಡಿ. ಅಗತ್ಯ ಹಾಗೂ ತುರ್ತು ಕರೆಗಳನ್ನು ಹೊರತುಪಡಿಸಿ ಕೆಲಸದ ವೇಳೆ ವಾಟ್ಸ್‌ಆಪ್‌/ಇನ್ಸ್‌ಸ್ಟಾಗ್ರಾಂ, ಫೇಸ್‌ಬುಕ್‌ ಬಳಕೆ ಮಾಡುವುದನ್ನು ತಡೆಯಿರಿ.

2) ವಾಕಿಂಗ್, ಯೋಗ, ದೈಹಿಕ ಚಟುವಟಿಕೆ ನಡೆಸುವ ಸಮಯದಲ್ಲಿ ಆದಷ್ಟು ಮೊಬೈಲ್‌ ಉಪಯೋಗಿಸಬೇಡಿ: ಸದಾ ಮೊಬೈಲಿನಲ್ಲಿ ಮಾತನಾಡಿಕೊಂಡು ಅಥವಾ ವಿಡಿಯೊಗಳನ್ನು ನೋಡಿಕೊಂಡು ವ್ಯಾಯಾಮ ಮಾಡಿದರೆ ದೇಹ ಮತ್ತು ಮನಸ್ಸಿನ ಮೇಲಾಗುವ ಲಾಭದ ಪ್ರಭಾವ ಕಡಿಮೆಯಾಗುವ ಸಾಧ್ಯತೆ ಹೆಚ್ಚು. ವ್ಯಾಯಾಮ ಮಾಡುವ ಸಂದರ್ಭ ದೇಹದ ಮೇಲೆ ನಿಗಾ ಇಟ್ಟು, ಮನಸ್ಸನ್ನು ನಿಗ್ರಹಿಸಿ, ಗಮನವಿಟ್ಟು ಮಾಡಬೇಕು. ಇಲ್ಲದಿದ್ದರೆ, ವ್ಯಾಯಾಮದ ನಂತರ ಮನಸ್ಸಿಗೆ ದೊರಕಬೇಕಾದ ಉಲ್ಲಾಸ ಮತ್ತು ಫ್ರೆಶ್‌ನೆಸ್ ಸಿಗುವುದಿಲ್ಲ.

3) ಧ್ಯಾನ ಅಥವಾ ಪ್ರಾಣಾಯಾಮ: ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಲು ಧ್ಯಾನ ಹಾಗೂ ಪ್ರಾಣಾಯಾಮ ಬಹಳ ಉಪಯುಕ್ತ. ಚಂಚಲಗೊಳ್ಳುವ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕೆ, ಪದೇಪದೆ ಮೊಬೈಲ್ ವಿನಾಕಾರಣ ಬಳಕೆ ಮಾಡುವುದನ್ನು ಅಥವಾ ಅನಗತ್ಯ ಇತರೆ ಯಾವುದೇ ಚಟುವಟಿಕೆ ತಡೆಯುವುದಕ್ಕೆ ಧ್ಯಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

4) ಆಹಾರ ಸೇವನೆ ಮತ್ತು ನಿದ್ರಾ ಸಮಯ: ಆಹಾರ ಸೇವಿಸುವಾಗ ಮೊಬೈಲ್‌ನಿಂದ ದೂರವಿಡಿ ಮತ್ತು ನಿದ್ರೆ ಮಾಡುವ ಒಂದು ತಾಸಿನ ಹಿಂದೆಯೇ ಮೊಬೈಲ್‌ ಬದಿಗಿಡಿ. ಮೊಬೈಲ್‌ ಅನ್ನು ನೋಡದೇ, ಅದರಲ್ಲಿ ಮಾತನಾಡದೆ ಗಮನವಿಟ್ಟು ಆಹಾರವನ್ನು ಜಗಿದು ಸೇವಿಸಿ ಮತ್ತು ಅನಗತ್ಯ ಚಿಂತೆಗಳಿಲ್ಲದೇ ಚೆನ್ನಾಗಿ ನಿದ್ದೆ ಮಾಡಬಹುದು. ಬೆಳಿಗ್ಗೆ ಎದ್ದ ತಕ್ಷಣವೇ ಮೊಬೈಲನ್ನು ಹುಡುಕಬೇಡಿ. ನಿಮ್ಮ ದೈನಂದಿನ ದಿನಚರಿ ಮುಗಿಸಿ ನಂತರ ಬಳಸಿ.

5) ಫಾಮಿಲಿ ಟೈಮ್: ದಿನಕ್ಕೊಂದು ತಾಸು ಎಲ್ಲರೂ ನಿಮ್ಮ ಮೊಬೈಲ್‌ ಅನ್ನು ದೂರವಿಟ್ಟು ಒಟ್ಟಿಗೆ ಕುಳಿತು ಸಮಯ ಕಳೆಯಿರಿ. ಇದರಿಂದ ಸಂಬಂಧಗಳು ಬೆಸೆಯುತ್ತವೆ. ಮನಸ್ತಾಪಗಳು ಕಡಿಮೆಯಾಗುತ್ತವೆ.

ನಿಮ್ಮ ದಿನಚರಿಯ ಬಗ್ಗೆ ಗಮನವಿರಲಿ. ಮೊಬೈಲ್‌ ಬಳಕೆ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಬರದಂತೆ ನೋಡಿಕೊಳ್ಳಿ. ಆದರೂ ನಿಮ್ಮ ಮನಸ್ಸು ನಿಯಂತ್ರಣಕ್ಕೆ ಬರಲಿಲ್ಲವಾದರೆ ಈ ಕೆಳಕಂಡ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ:

* ನನ್ನ ದಿನಚರಿ ಹೇಗಿದೆ?

* ನಾನು ದಿನದ ಸಮಯವನ್ನು ಹೇಗೆ ಉಪಯೋಗ ಮಾಡಿಕೊಳ್ಳುತ್ತಿದ್ದೇನೆ?

* ಪ್ರತಿದಿನ ನಾನು ಮೊಬೈಲಿನಲ್ಲಿ ಎಷ್ಟು ಸಮಯವನ್ನು ಕಳೆಯುತ್ತೇನೆ?

* ಯಾವ ಯಾವ ಕಾರಣಗಳಿಗಾಗಿ ನಾನು ಮೊಬೈಲ್ ಬಳಕೆ ಮಾಡುತ್ತೇನೆ?

* ಮೊಬೈಲ್ ಬಳಕೆ ಹೆಚ್ಚಾಗಿದ್ದರಿಂದ ನನಗೆ ಅನುಕೂಲವಾಗಿದೆಯೇ ಅಥವಾ ಅನಾನುಕೂಲವಾಗಿದೆಯೇ?

* ಮೊಬೈಲ್ ಬಳಕೆಯಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದೇನೆಂದು ಪಾಪಪ್ರಜ್ಞೆ ಕಾಡುತ್ತಿದೆಯೇ?

* ನನ್ನ ಉಳಿದ ಕೆಲಸ ಕಾರ್ಯಗಳಿಗೆ ನನ್ನ ಮೊಬೈಲ್ ಬಳಕೆಯಿಂದ ಅಡಚಣೆ ಉಂಟಾಗಿದೆಯೇ?

* ನನ್ನ ಬದುಕಿನ ಗುರಿಗಳು ಮತ್ತು ನನ್ನ ದಿನಚರಿಯ ನಡುವೆ ಹೊಂದಾಣಿಕೆ ಇದೆಯೇ?

* ನಾನು ಸಾಕಷ್ಟು ಸಮಯ ನನ್ನ ಗುರಿಯ ಕಡೆಗೆ ಕೊಡುತ್ತಿದ್ದೇನೆಯೇ?

* ಪ್ರತಿ ರಾತ್ರಿ ಮಲಗುವ ಮುನ್ನ, ಇಡೀ ದಿನ ಸಮಯ ವ್ಯರ್ಥ ಮಾಡಿದೆನೆಂದು ಪಶ್ಚಾತ್ತಾಪಪಡುತ್ತೇನೆಯೇ? ನನ್ನ ಮನಸ್ಥಿತಿ ಹೇಗಿರುತ್ತದೆ?

ಈ ಪ್ರಶ್ನೆಗಳಿಗೆ ಉತ್ತರ ದೊರಕಿದಾಗ ನೀವು ಮೊಬೈಲ್‌ ಅನ್ನು ಹೆಚ್ಚು ಪ್ರಜ್ಞಾಪೂರ್ವಕವಾಗಿ ಮಿತಿಯಿಂದ ಬಳಕೆ ಮಾಡಲು ಸುಲಭವಾಗುತ್ತದೆ. ಈ ಎಲ್ಲದರ ನಂತರವೂ ನಿಮಗೆ ಮೊಬೈಲ್‌ ಚಟದಿಂದ ಹೊರಬರಲು ಸಾಧ್ಯವಾಗದಿದ್ದರೆ, ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ.

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.