Constitution Day Speech: ಕನ್ನಡದಲ್ಲಿ ಸಂವಿಧಾನ ದಿನದ ಭಾಷಣ ಹೇಗಪ್ಪಾ ಮಾಡೋದು ಅಂತ ಚಿಂತೆ ಮಾಡಬೇಡಿ, ಸಿದ್ಧ ಭಾಷಣ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Constitution Day Speech: ಕನ್ನಡದಲ್ಲಿ ಸಂವಿಧಾನ ದಿನದ ಭಾಷಣ ಹೇಗಪ್ಪಾ ಮಾಡೋದು ಅಂತ ಚಿಂತೆ ಮಾಡಬೇಡಿ, ಸಿದ್ಧ ಭಾಷಣ ಇಲ್ಲಿದೆ ನೋಡಿ

Constitution Day Speech: ಕನ್ನಡದಲ್ಲಿ ಸಂವಿಧಾನ ದಿನದ ಭಾಷಣ ಹೇಗಪ್ಪಾ ಮಾಡೋದು ಅಂತ ಚಿಂತೆ ಮಾಡಬೇಡಿ, ಸಿದ್ಧ ಭಾಷಣ ಇಲ್ಲಿದೆ ನೋಡಿ

Constitution Day Speech in Kannada: ಇಂದು ಸಂವಿಧಾನ ದಿನ. ಸಾರ್ವಜನಿಕ ವೇದಿಕೆಗಳಲ್ಲಿ ನಿಂತು ಕನ್ನಡದಲ್ಲಿ ಸಂವಿಧಾನ ದಿನದ ಭಾಷಣ ಹೇಗಪ್ಪಾ ಮಾಡೋದು ಅಂತ ಚಿಂತೆ ಮಾಡಬೇಡಿ, ಸಿದ್ಧ ಭಾಷಣ ಇಲ್ಲಿದೆ ನೋಡಿ. ಇದನ್ನೇ ಬಳಸಬಹುದು ಅಥವಾ ಇಲ್ಲಿರುವ ಅಂಶಗಳನ್ನು ಬಳಸಿಕೊಂಡು ನಿಮ್ಮದೇ ಶೈಲಿಯಲ್ಲಿ ಭಾಷಣ ಮಾಡಿ.

ಇಂದು ಸಂವಿಧಾನ ದಿನ: ಕನ್ನಡದಲ್ಲಿ ಸಂವಿಧಾನ ದಿನದ ಭಾಷಣ ಹೇಗಪ್ಪಾ ಮಾಡೋದು ಅಂತ ಚಿಂತೆ ಮಾಡಬೇಡಿ, ಸಿದ್ಧ ಭಾಷಣ ಇಲ್ಲಿದೆ. ಸಂವಿಧಾನ ದಿನ ಪ್ರಯುಕ್ತ ಸಂವಿಧಾನದ ಬೃಹತ್ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದ ಜನರ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.
ಇಂದು ಸಂವಿಧಾನ ದಿನ: ಕನ್ನಡದಲ್ಲಿ ಸಂವಿಧಾನ ದಿನದ ಭಾಷಣ ಹೇಗಪ್ಪಾ ಮಾಡೋದು ಅಂತ ಚಿಂತೆ ಮಾಡಬೇಡಿ, ಸಿದ್ಧ ಭಾಷಣ ಇಲ್ಲಿದೆ. ಸಂವಿಧಾನ ದಿನ ಪ್ರಯುಕ್ತ ಸಂವಿಧಾನದ ಬೃಹತ್ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದ ಜನರ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.

Constitution Day Speech in Kannada: ನಮ್ಮ ದೇಶ ಭಾರತದ ಸಂವಿಧಾನವನ್ನು 1949ರ ನವೆಂಬರ್‌ 26ರಂದು ಅಂಗೀಕರಿಸಲಾಗಿದ್ದು, ಆ ದಿನವನ್ನು ಸಂವಿಧಾನ ದಿನ ಎಂದು ಆಚರಿಸಲಾಗುತ್ತಿದೆ. ಇದು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಒತ್ತಿಹೇಳುತ್ತದೆ. ಡಾ. ಬಿ. ಆರ್‌. ಅಂಬೇಡ್ಕರ್ ಅವರ ಕೊಡುಗೆಗಳನ್ನು ಗುರುತಿಸುವುದಲ್ಲದೆ, ಪ್ರಜಾಸತ್ತಾತ್ಮಕ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸುವಲ್ಲಿ ನಾಗರಿಕರ ತೊಡಗಿಸಿಕೊಳ್ಳುವಿಕೆಯನ್ನು ಪ್ರತಿಪಾದಿಸುವ ಆಚರಣೆಯಾಗಿದೆ. ಆದ್ದರಿಂದ ಸಂವಿಧಾನ ದಿನವನ್ನು ನಮ್ಮ ದೇಶದ ಉದ್ದಗಲಕ್ಕೂ ಆಚರಿಸಲಾಗುತ್ತದೆ. ವಿಶೇಷವಾಗಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಂವಿಧಾನ ಮತ್ತು ಅದರ ಆಶಯಗಳ ಕುರಿತಾಗಿ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತದೆ. ಅಂತಹ ಕಾರ್ಯಕ್ರಮಗಳಲ್ಲಿ “ಸಂವಿಧಾನ ದಿನದ ಕುರಿತಾದ ಭಾಷಣ” ಕೂಡ ಒಂದು. ಸಂವಿಧಾನ ದಿನ ಕನ್ನಡ ಭಾಷಣಕ್ಕೆ ವಿಷಯ ಎಲ್ಲಿ ಹುಡುಕುವುದು ಎಂದು ಚಿಂತಿಸಬೇಡಿ. ಇಲ್ಲಿದೆ ಒಂದು ಉದಾಹರಣೆ. ಇದನ್ನು ಯಥಾವತ್‌ ಕಂಠಪಾಠ ಮಾಡಬಹುದು ಅಥವಾ ಇಲ್ಲಿರುವ ವಿಷಯವನ್ನು ನಿಮ್ಮ ಪ್ರಸ್ತುತಿಗೆ ಬೇಕಾದಂತೆ ಒಗ್ಗಿಸಿಕೊಂಡು ಭಾಷಣ ಮಾಡಬಹುದು.

ಕನ್ನಡದಲ್ಲಿ ಸಂವಿಧಾನ ದಿನದ ಭಾಷಣ

ಮಾನ್ಯ ಸಭಾಧ್ಯಕ್ಷರೇ, ವೇದಿಕೆ ಮೇಲೆ ಕುಳಿತಿರುವ ಮಹನಿಯರೇ, ವೇದಿಕೆಯ ಮುಂದಿರುವ ಸಭಿಕರೇ, ಸಹಪಾಠಿಗಳೇ ಎಲ್ಲರಿಗೂ ನಮಸ್ಕಾರ. ಎಲ್ಲರಿಗೂ ನಮ್ಮ ದೇಶದ ಸಂವಿಧಾನ ದಿನದ ಶುಭಾಶಯಗಳು.

ಇಂದು ಭಾರತದ ಸಂವಿಧಾನ ದಿನ. ನವೆಂಬರ್ 26 ನಾವೆಲ್ಲರೂ ಹೆಮ್ಮೆಯಿಂದ ಸ್ಮರಿಸಬೇಕಾದ ದಿನ. ನಮ್ಮ ದೇಶ ಭಾರತದ ಸಂವಿಧಾನವನ್ನು 1949ರ ನವೆಂಬರ್‌ 26ರಂದು ಅಂಗೀಕರಿಸಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಹಾಗಂತ ಈ ದಿನಾಚರಣೆಯನ್ನು ಮಾರನೇ ವರ್ಷದಿಂದ ಆಚರಿಸುತ್ತ ಬರಲಿಲ್ಲ. ಈ ದಿನಾಚರಣೆಯ ಇತಿಹಾಸ ಗಮನಿಸಿದರೆ, ಈ ಐತಿಹಾಸಿಕ ಘಟನೆಯ ಮಹತ್ವವನ್ನು ಭಾರತ ಸರ್ಕಾರ ಗಮನಿಸಿದ್ದು 2015ರಲ್ಲಿ. ಆ ವರ್ಷ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನವೆಂಬರ್ 26 ಇನ್ನು ಸಂವಿಧಾನ ದಿನ ಎಂದು ಅಧಿಕೃತವಾಗಿ ಘೋಷಿಸಿತು. ಅಲ್ಲಿಂದೀಚೆಗೆ ಪ್ರತಿ ವರ್ಷ ನಾವು ಸಂವಿಧಾನ ದಿನ ಆಚರಿಸುತ್ತ ಬರುತ್ತಿದ್ದೇವೆ. ಇನ್ನೊಂದು ಮುಖ್ಯ ವಿಚಾರ ಹೇಳಲೇ ಬೇಕು. ನಮ್ಮ ಸಂವಿಧಾನವನ್ನು ಬೆರಳಚ್ಚು ಮಾಡಿಸಿಟ್ಟಿಲ್ಲ. ಮೂಲಪ್ರತಿ ಕೈಬರಹದಲ್ಲೇ ಇದೆ. ಅದು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿದೆ. ಸದ್ಯ ಮೂಲ ಪ್ರತಿಯನ್ನು ಹೀಲಿಯಂ ಕವಚದಲ್ಲಿ ಸಂರಕ್ಷಿಸಲಾಗಿದ್ದು, ಅದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿ ಇರಿಸಲಾಗಿದೆ.

ಗೆಳೆಯರೇ, ನಮ್ಮ ಸಂವಿಧಾನ ಬಹಳ ವಿಶೇಷವಾದುದು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ನಮ್ಮ ಸಂವಿಧಾನ ಒತ್ತಿ ಹೇಳುತ್ತದೆ. ಕಾಲಕಾಲಕ್ಕೆ ಬದುಕಿನ ಗುಣಮಟ್ಟ ಸುಧಾರಣೆಯಾಗುವಂತೆ, ಹೊಸ ಹೊಸ ವಿಷಯಗಳಿಗೆ ಅನುಗುಣವಾಗಿ ನಮ್ಮ ಸಂವಿಧಾನವೂ ನವೀಕರಿಸಲ್ಪಡುತ್ತ ಸಾಗುತ್ತಿದೆ. ಹಾಗಾಗಿಯೆ, ಅದು ಸದಾ ಜೀವಂತ. ಭಾರತೀಯರಾದ ನಮ್ಮೆಲ್ಲರ ಬದುಕಿನ ಚೌಕಟ್ಟು ಕೂಡ ಹೌದು.

ಅಂದ ಹಾಗೆ, ಸಂವಿಧಾನ ದಿನ ಎಂದ ಕೂಡಲೇ ನೆನಪಿಗೆ ಬರುವುದು ಡಾ. ಬಿ ಆರ್ ಅಂಬೇಡ್ಕರ್ ಅವರು. ನಮ್ಮ ದೇಶ ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಯಿತಾದರೂ ಆ ಆಡಳಿತ ವ್ಯವಸ್ಥೆಯಿಂದ ಹೊರಬರುವ ನಮ್ಮದೇ ಆದ ಆಡಳಿತ ವ್ಯವಸ್ಥೆಯನ್ನು ಅಳವಡಿಸುವ ಪ್ರಯತ್ನ ಇನ್ನೂ ಸಾಗಿದೆ. ಇದಕ್ಕೆ ಮುನ್ನುಡಿಯಾಗಿ ಅಥವಾ ಬುನಾದಿಯಾಗಿರುವಂಥದ್ದೇ ನಮ್ಮ ಸಂವಿಧಾನ. 1946 ರಲ್ಲಿ ಕ್ಯಾಬಿನೆಟ್‌ ಮಿಷನ್‌ ಭಾರತಕ್ಕೆ ಬಂದಾಗ ಸಂವಿಧಾನ ಸಭೆಯನ್ನು ರಚಿಸಲು ಒಪ್ಪಿಗೆ ದೊರೆಯಿತು. ಅದರಂತೆ ಪ್ರಾದೇಶಿಕ ವಿಧಾನಸಭೆಗಳಿಗೆ ಚುನಾವಣೆ ನಡೆದು 389 ಸದಸ್ಯರು ಚುನಾಯಿತರಾದರು. ಇದರಲ್ಲಿ ರಾಜ-ಮಹಾರಾಜರ ಆಳ್ವಿಕೆಯ 93 ಸದಸ್ಯರೂ ಇದ್ದರು. ಇದರ ಮೊದಲ ಸಭೆ 1946 ರ ಡಿ. 9 ರಂದು ಹೊಸದಿಲ್ಲಿಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದವರು ಡಾ. ಬಿಆರ್‌ ಅಂಬೇಡ್ಕರ್‌ ಇದ್ದರು. ಇನ್ನು ಸಂವಿಧಾನ ಸಭೆಗೆ ರಾಜೇಂದ್ರ ಪ್ರಸಾದರು ಅಧ್ಯಕ್ಷರಾಗಿದ್ದರು.

ಸ್ನೇಹಿತರೇ, ಇವಿಷ್ಟು ಸಂವಿಧಾನ ಮತ್ತು ಅದರ ರಚನೆಗೆ ಸಂಬಂಧಿಸಿದ ಕಿರು ಹಿನ್ನೆಲೆ. ಇನ್ನು ಸಂವಿಧಾನದ ಮೂಲ ಆಶಯಗಳನ್ನು ತಿಳಿಯುವ ಪ್ರಯತ್ನ ಮಾಡೋಣ. ನಮ್ಮ ದೇಶ ಭಾರತ ಜಗತ್ತಿನ ಇತರ ದೇಶಗಳಂತೆ ಅಲ್ಲ. ನಮ್ಮದು ಸಾರ್ವಭೌಮ ಗಣರಾಜ್ಯ. ಇಲ್ಲಿ ಕಾನೂನು ವ್ಯಾಪ್ತಿಯಲ್ಲಿ ಎಲ್ಲರೂ ಸಮಾನರು. ಇದರಂತೆ ಯಾರು ಕೂಡ ಯಾವುದೇ ಧರ್ಮ, ಜನಾಂಗ, ಸಮುದಾಯ, ಲಿಂಗ, ಜನ್ಮಸ್ಥಳ ಮುಂತಾದ ವಿಷಯಗಳ ಆಧಾರದಲ್ಲಿ ಉದ್ಯೋಗ ಸಮಾನತೆಯ ಅವಕಾಶ ವಂಚಿತರನ್ನಾಗಿಸುವುದಕ್ಕೆ ಅವಕಾಶ ಇಲ್ಲ. ಮಾತನಾಡುವ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸೇರಿ ಕೆಲವು ಮೂಲಭೂತ ಹಕ್ಕುಗಳನ್ನು ಸಂವಿಧಾನ ಕೊಟ್ಟಿದೆ. ಹಕ್ಕುಗಳ ಜೊತೆಗೆ ಕರ್ತವ್ಯಗಳೂ ಇವೆ. ಅವುಗಳ ಪಾಲನೆಯೂ ಅಗತ್ಯ.

ಈ ಮೊದಲೇ ಹೇಳಿದಂತೆ ನಮ್ಮ ದೇಶದ ಸಂವಿಧಾನವು ಜೀವಂತಿಕೆಯಿಂದ ಕೂಡಿರುವಂಥದ್ದು. ಹಲವು ದೇಶಗಳ ಸಂವಿಧಾನಗಳ ಉತ್ತಮ ಅಂಶಗಳು ನಮ್ಮ ಸಂವಿಧಾನದಲ್ಲಿ ಅಡಕವಾಗಿದೆ. ಉದಾಹರಣೆಗೆ ಹೇಳಬೇಕು ಎಂದರೆ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಪರಿಕಲ್ಪನೆಗಳನ್ನು ಫ್ರಾನ್ಸ್‌ ಸಂವಿಧಾನದಿಂದ ಪಡೆಯಲಾಗಿದೆ. ಪಂಚ ವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್‌ ಒಕ್ಕೂಟದಿಂದ , ರಾಜ್ಯ ನಿರ್ದೇಶನ ತತ್ತ್ವಗಳನ್ನು ಐರ್ಲೆಂಡ್‌ ಸಂವಿಧಾನದಿಂದ, ಸುಪ್ರೀಂಕೋರ್ಟ್‌ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್‌ನ ಸಂವಿಧಾನವನ್ನು ಗಮನಿಸಿ ಅವುಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ.

ಇನ್ನು ಗಮನಿಸಬೇಕಾದ ಅಂಶ ಎಂದರೆ, ಭಾರತೀಯ ಸಂವಿಧಾನವು ಕಟ್ಟುನಿಟ್ಟಿನ ಮತ್ತು ನಮ್ಯತೆಯ ವಿಶಿಷ್ಟ ಮಿಶ್ರಣವಾಗಿದ್ದು, ವಿವಿಧ ಜಾಗತಿಕ ಸಂವಿಧಾನಗಳಿಂದ ಸ್ಫೂರ್ತಿ ಪಡೆಯುತ್ತದೆ. ಇದು ಪ್ರಗತಿಪರ, ಅಂತರ್ಗತ ಭಾರತದ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ, ಅದರ ನಾಗರಿಕರ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಅವರ ಕರ್ತವ್ಯಗಳನ್ನು ಒತ್ತಿಹೇಳುತ್ತದೆ. ಹಾಗಾಗಿ ಈ ಎಲ್ಲ ಅಂಶಗಳನ್ನು ಬದುಕಿನಲ್ಲಿ ಪಾಲಿಸುತ್ತ, ದೇಶ ಹಿತವೇ ಮೊದಲು ಎಂಬ ಒಂದಂಶದ ಕಾರ್ಯಸೂಚಿಯೊಂದಿಗೆ ಉತ್ತಮ ಸಮಾಜ ಕಟ್ಟುವುದಕ್ಕಾಗಿ ಉತ್ತಮ ಪ್ರಜೆಗಳಾಗಿ ಬಾಳೋಣ. ಜೈ ಹಿಂದ್. ಭಾರತ ಮಾತೆಗೆ ಜಯವಾಗಲಿ.

Whats_app_banner