Deepavali: ‘ಹಟ್ಟೆವ್ವನ ಮರೆತು ಹೆಂಗ ದೀಪಾವಳಿ ಆಚರಿಸಲಿ’; ಪಾಂಡವರೊಂದಿಗೆ ನಂಟಿರುವ, ಸಗಣಿ ಮಹತ್ವ ಸಾರುವ ಹಟ್ಟಿ ಹಬ್ಬದ ವೈಶಿಷ್ಟ್ಯ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Deepavali: ‘ಹಟ್ಟೆವ್ವನ ಮರೆತು ಹೆಂಗ ದೀಪಾವಳಿ ಆಚರಿಸಲಿ’; ಪಾಂಡವರೊಂದಿಗೆ ನಂಟಿರುವ, ಸಗಣಿ ಮಹತ್ವ ಸಾರುವ ಹಟ್ಟಿ ಹಬ್ಬದ ವೈಶಿಷ್ಟ್ಯ ಹೀಗಿದೆ

Deepavali: ‘ಹಟ್ಟೆವ್ವನ ಮರೆತು ಹೆಂಗ ದೀಪಾವಳಿ ಆಚರಿಸಲಿ’; ಪಾಂಡವರೊಂದಿಗೆ ನಂಟಿರುವ, ಸಗಣಿ ಮಹತ್ವ ಸಾರುವ ಹಟ್ಟಿ ಹಬ್ಬದ ವೈಶಿಷ್ಟ್ಯ ಹೀಗಿದೆ

Hatti Habba: ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಅಮಾವಾಸ್ಯೆಯ ಮರುದಿನ ಪಾಡ್ಯದಂದು ‘ಹಟ್ಟೆವ್ವನ ಪೂಜೆ’ ಎಂಬ ವಿಶಿಷ್ಟ ಆಚರಣೆ ನಡೆಯುತ್ತದೆ. ಹಟ್ಟಿ ಹಬ್ಬಕ್ಕೂ ಮಹಾಭಾರತದಲ್ಲಿ ನಡೆದ ಘಟನೆಗೂ ಹೋಲಿಕೆಯಿದೆ. ಈ ಬಗ್ಗೆ ಪ್ರಹ್ಲಾದಗೌಡ ಅವರ ವಿಶೇಷ ವರದಿ ಇಲ್ಲಿದೆ.

ಪಾಂಡವರೊಂದಿಗೆ ನಂಟಿರುವ, ಸಗಣಿ ಮಹತ್ವ ಸಾರುವ ಹಟ್ಟಿ ಹಬ್ಬ
ಪಾಂಡವರೊಂದಿಗೆ ನಂಟಿರುವ, ಸಗಣಿ ಮಹತ್ವ ಸಾರುವ ಹಟ್ಟಿ ಹಬ್ಬ

ಧಾರವಾಡ: ಉತ್ತರ ಕರ್ನಾಟಕದಲ್ಲಿ ಹಬ್ಬ-ಹರಿದಿನಗಳ ಆಚರಣೆ ಬಹು ವಿಭಿನ್ನ. ಪೂರ್ವಜರ ಸಂಪ್ರದಾಯಗಳು ಇಂದಿಗೂ ಮುಂದುವರಿದಿವೆ. ಇಲ್ಲಿ ಆಚರಿಸಲ್ಪಡುವ ಪ್ರತಿ ಹಬ್ಬಗಳು ಹಲವು ವಿಶೇಷತೆಗಳಿಗೆ ಸಾಕ್ಷಿ ಆಗಿವೆ. ಇಲ್ಲಿನ ಹಬ್ಬಗಳು ಕೃಷಿಗೆ ಸಂಬಂಧಿಸಿದವುಗಳೇ ಹೆಚ್ಚು. ಅದರಲ್ಲೂ ದನಕರುಗಳ ಸಗಣಿಯ ಮಹತ್ವ ಸಾರುವ ಮತ್ತು ಸಗಣಿಯ ಗೊಬ್ಬರದ ಶ್ರೇಷ್ಠತೆ ಗೌರವಿಸುವ ಹಟ್ಟಿ ಹಬ್ಬದ ಸಂಭ್ರಮ ನೋಡುವುದೇ ಬಲೂ ಚಂದ.

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ಆಚರಣೆಗಳಲ್ಲಿ ಅಲ್ಲಲ್ಲಿ ಅಲ್ಪಸ್ವಲ್ಪ ಬದಲಾವಣೆ ಬಿಟ್ಟರೆ ಬಹುತೇಕ ಎಲ್ಲವೂ ಒಂದೇ ಸಂಪ್ರದಾಯದಿಂದ ಕೂಡಿರುತ್ತದೆ. ಹಟ್ಟಿ ಹಬ್ಬವನ್ನು ಗ್ರಾಮೀಣ ರೈತರ ಮನೆಗಳಲ್ಲಿ ಅದ್ಧೂರಿಯಾಗಿ, ವೈವಿಧ್ಯ ಪೂರ್ಣವಾಗಿ ಆಚರಿಸಲಾಗುತ್ತದೆ. ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಅಮಾವಾಸ್ಯೆಯ ಮರುದಿನ ಪಾಡ್ಯದಂದು ‘ಹಟ್ಟೆವ್ವನ ಪೂಜೆ’ ಎಂಬ ವಿಶಿಷ್ಟ ಆಚರಣೆ ನಡೆಯುತ್ತದೆ.

ಹಟ್ಟಿಹಬ್ಬದ ಹಿನ್ನೆಲೆ:

ಹಟ್ಟಿ ಹಬ್ಬಕ್ಕೂ ಮಹಾಭಾರತದಲ್ಲಿ ನಡೆದ ಘಟನೆಗೂ ಹೋಲಿಕೆಯಿದೆ. ವಿರಾಟರಾಜನ ಆಸ್ಥಾನದಲ್ಲಿ ಅಜ್ಞಾತವಾಸ ಕಳೆಯುತ್ತಿದ್ದ ಪಾಂಡವರು ವಿರಾಟನ ಗೋವುಗಳನ್ನು ಕೌರವರಿಂದ ಬಿಡಿಸಿಕೊಂಡು ಬಂದಿರುವ ನೆನಪಿನಲ್ಲಿ, ಪಾಂಡವರು ಇದೇ ದಿನ ತಮ್ಮ ಅಜ್ಞಾತವಾಸ ಮುಗಿಸಿ ತಮ್ಮ ಗೋವುಗಳೊಂದಿಗೆ ಪುರಪ್ರವೇಶ ಮಾಡಿದರೆಂಬ ನಂಬಿಕೆಯಿಂದಾಗಿ ಈ ದಿನ ಹಟ್ಟೆವ್ವ ಇಡುವ ಸಂಪ್ರದಾಯ ಬಂದಿದೆ ಎಂಬುದು ಜನಪದರ ನಂಬಿಕೆ.

ಕೃಷಿಕರನ್ನು ಕಾಪಾಡುವ ದೇವತೆ:

‘ಹಟ್ಟೆವ್ವನ ಮರೆತು ಹೆಂಗ ದೀಪಾವಳಿ ಆಚರಿಸಲಿ’ ಎಂದು ಗ್ರಾಮೀಣ ಜನಪದರಲ್ಲಿ ಒಂದು ಮಾತಿದೆ. ಅದರಂತೆ ಸಗಣಿಯಲ್ಲಿ ಪಾಂಡವರನ್ನು ರಚಿಸಿ, ಚೆಂಡು ಹೂವಿನ ಐದು ಗಿಡಗಳ ನಡುವೆ ಪ್ರತಿಷ್ಠಾಪಿಸುತ್ತಾರೆ. ಇದರ ನಡುವೆ ಸೆಗಣಿಯಲ್ಲಿಯೇ ಲಕ್ಷ್ಮೀಯನ್ನೂ ತಯಾರಿಸಲಾಗುತ್ತದೆ. ಈ ಲಕ್ಷ್ಮೀಯೇ ‘ಹಟ್ಟಿ ಲಕ್ಕವ್ವ’. ಹಟ್ಟಿ ಲಕ್ಕವ್ವಗೆ ಚಿನ್ನಾಭರಣ, ವಸ್ತ್ರ, ಉತ್ರಾಣಿ ಕಡ್ಡಿ, ಹೂ, ಹಾರಗಳಿಂದ ಸಿಂಗರಿಸಿ, ಹೋಳಿಗೆ, ಕಡಬು ಇನ್ನಿತರ ಸಿಹಿ ಖಾದ್ಯಗಳ ನೈವೇದ್ಯ ಮಾಡಿ ಪೂಜಿಸಲಾಗುತ್ತೆ. ಹಟ್ಟಿ ಎಂದರೆ ದನಕರುಗಳನ್ನು ಕಟ್ಟುವ ಸ್ಥಳ ಅಥವಾ ಕೊಟ್ಟಿಗೆ. ಹಾಗಾಗಿ ಕೃಷಿಕರನ್ನು ಕಾಪಾಡುವ ದೇವತೆಯೇ ಹಟ್ಟೆವ್ವ ಎಂಬುದು ಜನಪದರ ನಂಬಿಕೆ.

ಪಾಂಡವರನ್ನು ಇಟ್ಟು ಪೂಜೆ:

ಮನೆ, ಕೊಟ್ಟಿಗೆ, ವ್ಯಾಪಾರ, ಉದ್ಯೋಗಕ್ಕೆ ಹೀಗೆ ನಿತ್ಯ ಉಪಯೋಗಿ ಕಸಬರಿಗೆಯಿಂದ ಹಿಡಿದು ಎಲ್ಲ ವಸ್ತುಗಳನ್ನೂ ತೊಳೆದು ಸುಣ್ಣ- ಬಣ್ಣ ಬಳಿದು ಅವುಗಳ ಸಮೀಪವೂ ಅರಿಶಿಣ-ಕುಂಕುಮ, ಉತ್ರಾಣಿ ಕಡ್ಡಿ, ಹೂಗಳಿಂದ ಸಿಂಗರಿಸಿದ ಸೆಗಣಿಯ ಪಾಂಡವರನ್ನು ಇಟ್ಟು ಪೂಜಿಸಲಾಗುತ್ತದೆ. ಈ ಮೂಲಕ ‘ಪಾಂಡವರು ಪಟ್ಟ ಕಷ್ಟ ಯಾರಿಗೂ ಬಾರದಿರಲಿ’ ಎಂಬ ಪ್ರಾರ್ಥನೆ ಮಾಡುತ್ತಾರೆ. ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಹಟ್ಟಿ ಲಕ್ಕವ್ವಳನ್ನು ಪ್ರತಿಷ್ಠಾಪಿಸಿದ ಸ್ಥಳದಿಂದ ಹೊರ ಅಂಗಳದವರೆಗೆ ಕೆಮ್ಮಣ್ಣು ಹಾಗೂ ಸುಣ್ಣದಿಂದ ಆಕಳ ಹೆಜ್ಜೆಗಳನ್ನು ಬಿಡಿಸಿ, ಹೆಜ್ಜೆಗಳ ಮೇಲೆಯೇ ಆಕಳನ್ನು ಮನೆಯೊಳಗೆ ತಂದು ಮತ್ತೂಮ್ಮೆ ಪೂಜಿಸುವ ಮೂಲಕ ಹಟ್ಟಿ ಹಬ್ಬ ಸಂಪನ್ನಗೊಳ್ಳುತ್ತದೆ.

ಜಾನುವಾರು ಹಬ್ಬ:

ರೈತರ ದೃಷ್ಟಿಯಿಂದ ಹಟ್ಟಿ ಹಬ್ಬವೇ ದೊಡ್ಡ ಹಬ್ಬ. ಹೆಚ್ಚು ಸಂಭ್ರಮ, ಸಂತಸ ಕೊಡುವ ಹಬ್ಬ. ಹಟ್ಟಿ ಹಬ್ಬದ ದಿನದಂದು ಜಾನುವಾರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಕೃಷಿಕರು ದನ-ಕರುಗಳ ಮೈ ತೊಳೆದು ಬಣ್ಣ ಹಚ್ಚಿ, ಹೊಸದಾಗಿ ಮಾರುಕಟ್ಟೆಯಿಂದ ತಂದ ಹಗ್ಗ, ರಿಬ್ಬನ್‌, ಬಲೂನ್‌, ಗೆಜ್ಜೆಗಳನ್ನು ಕಟ್ಟಿ ಸಿಂಗರಿಸುತ್ತಾರೆ. ಶೃಂಗಾರಗೊಂಡ ಜಾನುವಾರುಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಎತ್ತುಗಳ ಕೊರಳಿಗೆ ಕೊಬ್ಬರಿ ಸರವನ್ನೂ ಕಟ್ಟಿ ಪೂಜೆಯ ಬಳಿಕ ಮೆರವಣಿಗೆ ನಡೆಸುತ್ತಾರೆ.

ಲಕ್ಷ್ಮೀ ಪೂಜೆ:

ಉತ್ತರ ಕರ್ನಾಟಕದ ರೈತರ ಮನೆಗಳಲ್ಲಿ ದೀಪಾವಳಿ ಅಮವಾಸ್ಯೆಯ ದಿನ ರಾತ್ರಿ ಲಕ್ಷ್ಮೀಗೆ ವಿಶೇಷ ಪೂಜೆ ನೆರವೇರುತ್ತದೆ. ಅಂದು ಮನೆಯ ಲಕ್ಷ್ಮೀಗೆ ಪೂಜೆಗಾಗಿ ಹೊಸ ಸೀರೆಯನ್ನು ಕರಿ ಮೇಲೆ ಬರುವಂತೆ ಘಳಗಿ ಮಾಡಿ, ಬಂಗಾರದ ದಾಗೀನು, ನತ್ತುಗಳಿಂದ ಶೃಂಗರಿಸುವರು. ವಿಭೂತಿ, ಕುಂಕುಮಾರ್ಚನೆ ಮಾಡಿ ಸಜ್ಜಕದ ಹೋಳಿಗೆಯ ನೈವೇದ್ಯ ಹಿಡಿಯುವರು. ಕರ್ಪೂರದ ಆರತಿ ಎತ್ತಿ ಕಾಯಿ ಒಡೆದು ಭಕ್ತಿ ಪೂರ್ವಕವಾಗಿ ನಮಿಸುವರು.

ವರದಿ - ಪ್ರಹ್ಲಾದಗೌಡ ಬಿ.ಜಿ.

Whats_app_banner