ಅಮೆರಿಕದಲ್ಲಿ ಓದಲು ವಿದ್ಯಾರ್ಥಿಗಳ ಆಯ್ಕೆಯ 5 ನಗರಗಳಿವು; ಜೀವನ ವೆಚ್ಚ, ಬೋಧನಾ ಶುಲ್ಕ ತುಸು ಕಡಿಮೆ-education news 5 affordable cities in usa america top universities cost of living career guidance jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಮೆರಿಕದಲ್ಲಿ ಓದಲು ವಿದ್ಯಾರ್ಥಿಗಳ ಆಯ್ಕೆಯ 5 ನಗರಗಳಿವು; ಜೀವನ ವೆಚ್ಚ, ಬೋಧನಾ ಶುಲ್ಕ ತುಸು ಕಡಿಮೆ

ಅಮೆರಿಕದಲ್ಲಿ ಓದಲು ವಿದ್ಯಾರ್ಥಿಗಳ ಆಯ್ಕೆಯ 5 ನಗರಗಳಿವು; ಜೀವನ ವೆಚ್ಚ, ಬೋಧನಾ ಶುಲ್ಕ ತುಸು ಕಡಿಮೆ

ಅಮೆರಿಕದಲ್ಲಿ ದೊಡ್ಡ ದೊಡ್ಡ ನಗರಗಳಿವೆ. ಶಿಕ್ಷಣ ಹಾಗೂ ಉದ್ಯೋಗಕ್ಕೆ ಜಾಗತಿಕ ಮನ್ನಣೆ ಗಳಿಸಿರುವ ನಗರಗಳಲ್ಲಿ ಜೀವನ ವೆಚ್ಚವೂ ದುಬಾರಿ. ಕೆಲವೊಂದು ನಗರಗಳು ಹೆಚ್ಚು ಜನಪ್ರಿಯವಲ್ಲ. ಅಲ್ಲಿ ಜೀವನವೆಚ್ಚ ತುಸು ಕಡಿಮೆ. ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಅಂತಹ ನಗರಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಅಮೆರಿಕದಲ್ಲಿ ಓದಲು ವಿದ್ಯಾರ್ಥಿಗಳ ಆಯ್ಕೆಯ 5 ನಗರಗಳಿವು; ಜೀವನ ವೆಚ್ಚ, ಬೋಧನಾ ಶುಲ್ಕ ಕಡಿಮೆ
ಅಮೆರಿಕದಲ್ಲಿ ಓದಲು ವಿದ್ಯಾರ್ಥಿಗಳ ಆಯ್ಕೆಯ 5 ನಗರಗಳಿವು; ಜೀವನ ವೆಚ್ಚ, ಬೋಧನಾ ಶುಲ್ಕ ಕಡಿಮೆ (Pixabay)

ವಿದೇಶದಲ್ಲಿ ಅಧ್ಯಯನ ಮಾಡುವ ಬಯಕೆಯುಳ್ಳ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಆದ್ಯತೆಯ ರಾಷ್ಟ್ರ. ಯುಎಸ್‌ನಲ್ಲಿ ಲಕ್ಷಾಂತರ ಭಾರತೀಯರು ಶಿಕ್ಷಣ ಪಡೆಯುತ್ತಾರೆ. ಅಮೆರಿಕದ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ದಾಖಲಾತಿ ಪಡೆಯುವುದು ಭಾರತೀಯರಿಗೆ ಒಂದು ಸವಾಲು. ಅಲ್ಲಿನ ದುಬಾರಿ ಶುಲ್ಕ, ದುಬಾರಿ ಜೀವನಮಟ್ಟಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಯುಎಸ್‌ನ ಪ್ರಮುಖ ನಗರಗಳಾದ ನ್ಯೂಯಾರ್ಕ್‌, ಚಿಕಾಗೊ ಮೊದಲಾದ ಕಡೆ ವಿದ್ಯಾಭ್ಯಾಸ ಮಾಡಲು ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ಅಗತ್ಯ ಬೀಳುತ್ತದೆ. ಆದರೆ, ಕೆಲವೊಂದು ರಾಜ್ಯ ಅಥವಾ ನಗರದಲ್ಲಿ ಆ ಪ್ರಮಾಣ ತುಸು ಕಡಿಮೆ ಇರುತ್ತದೆ.

ಜಗತ್ತಿನದಾದ್ಯಂತ ಪ್ರಖ್ಯಾತಿ ಗಳಿಸಿರುವ ಹಲವು ವಿಶ್ವವಿದ್ಯಾನಿಲಯಗಳು ಅಮೆರಿಕದಲ್ಲಿವೆ. ಅಲ್ಲದೆ ವೈವಿಧ್ಯಮಯ ಶೈಕ್ಷಣಿಕ ವಿಭಾಗಗಳು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. ವೃತ್ತಿಜೀವನಕ್ಕೆ ಅವಕಾಶಗಳು ಹೆಚ್ಚಿರುವುದರಿಂದ ಭಾರತ ಮಾತ್ರವಲ್ಲದೆ ವಿಶ್ವದ ವಿವಿಧ ದೇಶಗಳ ವಿದ್ಯಾರ್ಥಿಗಳು ಯುಎಸ್‌ ಆಯ್ಕೆ ಮಾಡಿಕೊಳ್ಳುತ್ತಾರೆ. ಇದಲ್ಲದೆ ವೀಸಾ ಕಾರ್ಯವಿಧಾನದಲ್ಲಿ ಸರಳತೆ ಹಾಗೂ ಬಹುಸಂಸ್ಕೃತಿಯ ವಾತಾವರಣವು ಆ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಹೆಚ್ಚಿನ ವಿದ್ಯಾರ್ಥಿಗಳು ಅಮೆರಿಕದಲ್ಲಿ ಓದುವ ಕನಸಿದ್ದರೂ, ಹಣಕಾಸಿನ ವೆಚ್ಚ ಹೆಚ್ಚಾಗುವ ಭೀತಿಯಿಂದ ಈ ಆಯ್ಕೆಯಿಂದ ದೂರವೇ ಉಳಿಯುತ್ತಾರೆ. ಅಮೆರಿಕದ ಕೆಲವೊಂದು ರಾಜ್ಯಗಳು ಅಷ್ಟೊಂದು ಜನಮನ್ನಣೆ ಗಳಿಸಿಲ್ಲ. ಆದರೆ, ಅಲ್ಲೂ ಉತ್ತಮ ಶಿಕ್ಷಣ ಸಿಗುತ್ತದೆ. ಯುಎಸ್‌ನಲ್ಲಿ ಕಡಿಮೆ ವೆಚ್ಚದಲ್ಲಿ ವಿದ್ಯಾಭ್ಯಾಸ‌ ಪೂರೈಸಬಹುದಾದ ಟಾಪ್‌ 5 ರಾಜ್ಯಗಳು, ಅಲ್ಲಿನ ಪ್ರಮುಖ ಕಾಲೇಜುಗಳು ಹಾಗೂ ಸರಾಸರಿ ಜೀವನ ವೆಚ್ಚದ ವಿವರ ಹೀಗಿದೆ.

ಸ್ಯಾನ್ ಡಿಯಾಗೋ

ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ನಗರದಲ್ಲಿ ಜೀವನ ವೆಚ್ಚ ತುಲನಾತ್ಮಕವಾಗಿ ಕಡಿಮೆ. ಅಲ್ಲದೆ ಕಡಿಮೆ ಬೋಧನಾ ಶುಲ್ಕದಿಂದಾಗ ವಿದ್ಯಾರ್ಥಿಗಳಿಗೆ ಅತ್ಯಂತ ಬಜೆಟ್ ಸ್ನೇಹಿ ನಗರಗಳಲ್ಲಿ ಒಂದಾಗಿದೆ. ಇಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ಯಾನ್ ಡಿಯಾಗೋ, ಸ್ಯಾನ್ ಡಿಯಾಗೋ ಸ್ಟೇಟ್ ಯೂನಿವರ್ಸಿಟಿ ಮತ್ತು ಆಶ್‌ಫೋರ್ಡ್ ವಿಶ್ವವಿದ್ಯಾಲಯಗಳು ತುಂಬಾ ಖ್ಯಾತಿ ಪಡೆದಿವೆ. ಸ್ಯಾನ್ ಡಿಯಾಗೋದಲ್ಲಿ ಸರಾಸರಿ ಬೋಧನಾ ಶುಲ್ಕ 12 ಲಕ್ಷ ರೂಪಾಯಿ. ಇಲ್ಲಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 1.2 ಲಕ್ಷದಿಂದ 2 ಲಕ್ಷದವರೆಗೆ ಖರ್ಚಾಗಬಹುದು. ವಿದ್ಯಾರ್ಥಿಗಳ ಜೀವನಶೈಲಿ ಮೇಲೆ ಈ ವೆಚ್ಚ ಹೆಚ್ಚಾಗಬಹುದು.

ಹೂಸ್ಟನ್

ಜನಸಂಖ್ಯೆಯಲ್ಲಿ ಯುಎಸ್‌ನ ನಾಲ್ಕನೇ ದೊಡ್ಡ ನಗರವಾದ ಹೂಸ್ಟನ್‌ನಲ್ಲಿ ನಾರ್ತ್ ಅಮೆರಿಕನ್ ವಿಶ್ವವಿದ್ಯಾಲಯ ಮತ್ತು ಹೂಸ್ಟನ್ ಡೌನ್‌ಟೌನ್ ವಿಶ್ವವಿದ್ಯಾಲಯದಂತಹ ಸಂಸ್ಥೆಗಳಿವೆ. ಇಲ್ಲಿ ಸರಾಸರಿ ಬೋಧನಾ ಶುಲ್ಕ ಸುಮಾರು 24 ಲಕ್ಷ ರೂಪಾಯಿ. ಜೀವನ ವೆಚ್ಚವು ಸಾಮಾನ್ಯವಾಗಿ ತಿಂಗಳಿಗೆ 80 ಸಾವಿರದಿಂದ 1.5 ಲಕ್ಷದವರೆಗೆ ಇರುತ್ತದೆ.

ಬಾಲ್ಟಿಮೋರ್

ರಮಣೀಯ ತಾಣಗಳಿಗೆ ಹೆಸರುವಾಸಿಯಾಗಿರುವ ಮೇರಿಲ್ಯಾಂಡ್‌ನ ಈ ನಗರ ವಿದ್ಯಾರ್ಥಿಗಳ ಆಯ್ಕೆಯ ತಾಣ. ಇಲ್ಲಿ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ, ಮೇರಿಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ಬಾಲ್ಟಿಮೋರ್ ವಿಶ್ವವಿದ್ಯಾಲಯದಂಥ ಪ್ರತಿಷ್ಠಿತ ವಿವಿಗಳಿವೆ. ಬಾಲ್ಟಿಮೋರ್‌ನಲ್ಲಿ ಸರಾಸರಿ ಬೋಧನಾ ಶುಲ್ಕ ಸುಮಾರು 17 ಲಕ್ಷ ರೂಪಾಯಿ. ಇಲ್ಲಿ ವಿದ್ಯಾರ್ಥಿಗಳು ತಿಂಗಳಿಗೆ 85,000ದಿಂದ 1.5 ಲಕ್ಷ ರೂಪಾಯಿಯವರೆಗೆ ಜೀವನ ವೆಚ್ಚಕ್ಕೆ ದುಡ್ಡು ಇಟ್ಟುಕೊಳ್ಳಬೇಕಾಗಬಹುದು.

ಫಿಲಡೆಲ್ಫಿಯಾ

ಫಿಲಡೆಲ್ಫಿಯಾವನ್ನು ವಿಶ್ವವಿದ್ಯಾನಿಲಯ ನಗರವೆಂದು ಕರೆಯಲಾಗುತ್ತದೆ. ಇಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಮತ್ತು ಟೆಂಪಲ್ ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿನ ಸರಾಸರಿ ಬೋಧನಾ ಶುಲ್ಕ ಸುಮಾರು 23 ಲಕ್ಷ ರೂಪಾಯಿ. ಇಲ್ಲಿ ವಿದ್ಯಾರ್ಥಿಗಳು ತಿಂಗಳಿಗೆ 60,000ದಿಂದ 1 ಲಕ್ಷ ರೂಪಾಯಿವರೆಗೆ ಖರ್ಚು ನಿರೀಕ್ಷಿಸಬಹುದು.

ಅಟ್ಲಾಂಟಾ

ವಿದ್ಯಾರ್ಥಿಗಳ ಆಯ್ಕೆಯ ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಅಟ್ಲಾಂಟಾ 57ನೇ ಸ್ಥಾನದಲ್ಲಿದೆ. ಇಲ್ಲಿ ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿ ಮತ್ತು ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಂತಹ ಉನ್ನತ ದರ್ಜೆಯ ವಿಶ್ವವಿದ್ಯಾಲಯಗಳಿವೆ. ಇಲ್ಲಿ ಸರಾಸರಿ ಬೋಧನಾ ಶುಲ್ಕ 21 ಲಕ್ಷ ರೂಪಾಯಿ. ಜೀವನ ನಿರ್ವಹಣೆಗೆ ಮಾಸಿಕ ಅಂದಾಜು 1 ಲಕ್ಷದಿಂದ 1.7 ಲಕ್ಷ ರೂಪಾಯಿಯವರೆಗೆ ಖರ್ಚಾಗಬಹುದು.

ಈ ಮಾಹಿತಿಯು ಸರಾಸರಿ ಲೆಕ್ಕಾಚಾರದಿಂದ ನೀಡಲಾಗಿದೆ. ವೈಯಕ್ತಿಕ ಜೀವನಶೈಲಿಯ ಆಧಾರದ ಮೇಲೆ ಜೀವನವೆಚ್ಚ ಹೆಚ್ಚು-ಕಡಿಮೆ ಆಗಬಹುದು.

mysore-dasara_Entry_Point