Career Guide: ವೃತ್ತಿಜೀವನ ಸಂಗೀತಮಯವಾಗಿರಬೇಕೆ, ಸಂಗೀತ ಪ್ರಿಯರು ಈ 10 ಉದ್ಯೋಗಗಳನ್ನು ಪಡೆಯಲು ಪ್ರಯತ್ನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Career Guide: ವೃತ್ತಿಜೀವನ ಸಂಗೀತಮಯವಾಗಿರಬೇಕೆ, ಸಂಗೀತ ಪ್ರಿಯರು ಈ 10 ಉದ್ಯೋಗಗಳನ್ನು ಪಡೆಯಲು ಪ್ರಯತ್ನಿಸಿ

Career Guide: ವೃತ್ತಿಜೀವನ ಸಂಗೀತಮಯವಾಗಿರಬೇಕೆ, ಸಂಗೀತ ಪ್ರಿಯರು ಈ 10 ಉದ್ಯೋಗಗಳನ್ನು ಪಡೆಯಲು ಪ್ರಯತ್ನಿಸಿ

Career in Music: ಕೆಲವರಿಗೆ ಸಂಗೀತ ಕ್ಷೇತ್ರವೆಂದರೆ ಅಚ್ಚುಮೆಚ್ಚು. ಮ್ಯೂಸಿಕ್‌ ಫೀಲ್ಡ್‌ನಲ್ಲಿಯೇ ಉದ್ಯೋಗ ಪಡೆದರೆ ಸ್ವರ್ಗಸುಖ. ಇಂತಹ ಸಂಗೀತಾಸಕ್ತರಿಗಾಗಿ ಮ್ಯೂಸಿಕ್‌ ಕ್ಷೇತ್ರದ ಪ್ರಮುಖ ಹುದ್ದೆಗಳ ಮಾಹಿತಿ ನೀಡಲಾಗಿದೆ. ನಿಮ್ಮ ವೃತ್ತಿಜೀವನ ಸಂಗೀತಮಯವಾಗಿರಲಿ.

ಸಂಗೀತಾಸಕ್ತರಿಗೆ ಸೂಕ್ತವಾದ 10 ಉದ್ಯೋಗಗಳು
ಸಂಗೀತಾಸಕ್ತರಿಗೆ ಸೂಕ್ತವಾದ 10 ಉದ್ಯೋಗಗಳು

ಸಂಗೀತ ಇಷ್ಟಪಡದೆ ಇರುವವರು ಇರಲಿಕ್ಕಿಲ್ಲ. ಕೆಲವರಿಗೆ ಶಾಸ್ತ್ರೀಯ ಹಾಡುಗಳು ಇಷ್ಟ. ಇನ್ನು ಕೆಲವರಿಗೆ ರಾಕ್‌ ಗೀತೆಗಳು ಇಷ್ಟ. ಸಂಗೀತ ಕೇಳುವ ಸಹವಾಸ ಬೇಡ ಎಂದುಕೊಳ್ಳುವವರು ಹೊರಗೆ ಬಂದು ಹಕ್ಕಿಯ ನಿನಾದವನ್ನೇ ಸಂಗೀತವಾಗಿ ಆಸ್ವಾದಿಸದೆ ಇರಲಾರರು. ಇದೇ ಕಾರಣಕ್ಕೆ ಎಲ್ಲೆಲ್ಲೂ ಸಂಗೀತವೇ ಎಂಬ ಹಾಡು ಫೇಮಸ್‌ ಆಗಿರಬಹುದು. ಸಂಗೀತ ಎನ್ನುವುದು ಈಗ ವೃತ್ತಿಯೂ ಹೌದು. ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶವಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯೋಣ.

ಮ್ಯೂಸಿಕ್‌ ಲೈಬ್ರೇರಿಯನ್‌ ಉದ್ಯೋಗ

ಮ್ಯೂಸಿಕ್‌ ಲೈಬ್ರೇರಿಯನ್‌ ಅಥವಾ ಸಂಗೀತ ಗ್ರಂಥಪಾಲಕ ಹುದ್ದೆಯನ್ನು ಪಡೆಯಲು ಅದಕ್ಕೆ ಸಂಬಂಧಪಟ್ಟ ಕೋರ್ಸ್‌ ಮಾಡಿರಬೇಕು. ರೇಡಿಯೋ, ಟೆಲಿವಿಷನ್‌ ಹಾಗೂ ಸಿನಿಮಾ ಉದ್ಯಮಗಳಲ್ಲಿ ಅವಕಾಶ ದೊರಕುತ್ತದೆ.

ಸಂಗೀತ ಶಿಕ್ಷಕರು

ಸಂಗೀತ ಕಲಿತ ಬಹುತೇಕರು ಮ್ಯೂಸಿಕ್‌ ಟೀಚರ್‌ ಆಗಲು ಇಷ್ಟಪಡುತ್ತಾರೆ. ನಿಮ್ಮ ಮನೆಯ ಸುತ್ತಮುತ್ತಲಿನ ಆಸಕ್ತರಿಗೆ ಸಂಗೀತ ಕಲಿಸಬಹುದು. ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಸಂಗೀತ ಟೀಚರ್‌ ಆಗಿ ಉದ್ಯೋಗ ಪಡೆಯಬಹುದು. ಪ್ರಯಾಗ್‌ ಸಂಗೀತ್‌ ಸಮಿತಿ ಸೇರಿದಂತೆ ಸರಕಾರದಿಂದ ಮನ್ನಣೆ ಪಡೆದ ಸಂಸ್ಥೆಗಳಲ್ಲಿ, ಸಂಗೀತ ಶಾಲೆ- ಕಾಲೇಜುಗಳಲ್ಲಿ ಕೂಡ ಶಿಕ್ಷಕರಾಗಬಹುದು. ಸಂಗೀತಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಇವರ ಪ್ರಾಥಮಿಕ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳಿಗೆ ಕಲಿಸುತ್ತ ಸಂಗೀತದ ಜತೆ ಜೀವಿಸುವ ಸುಂದರ ಉದ್ಯೋಗ ಇದಾಗಿದೆ.

ಸೌಂಡ್‌ ಎಂಜಿನಿಯರಿಂಗ್‌

ಸಂಗೀತದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ ಈ ಉದ್ಯೋಗ ಸೂಕ್ತವಾಗಬಹುದು. ಇದು ಸಂಗೀತದ ಅಧ್ಯಯನಕ್ಕೆ ಸಂಬಂಧಿಸಿದ, ಎಂಜಿನಿಯರಿಂಗ್‌ನ ಒಂದು ಶಾಖೆ. ಸೃಜನಾತ್ಮಕ ಕ್ಷೇತ್ರದಲ್ಲಿ, ಪ್ರಸಾರ ಉಪಕರಣಗಳ ( ಬ್ರಾಡ್‌ಕಾಸ್ಟ್‌ ಎಕ್ವಿಪ್‌ಮೆಂಟ್‌) ನಿರ್ವಹಣೆಯನ್ನು ಒಳಗೊಂಡ ತಾಂತ್ರಿಕ ಅಗತ್ಯಗಳ ಜೊತೆಯಲ್ಲಿ ಧ್ವನಿಗಳ ಮಿಶ್ರಣದ (ಮಿಕ್ಸಿಂಗ್‌ ಸೌಂಡ್ಸ್‌) ಬಗ್ಗೆ ಅರಿವು ಇರುವವರು ಈ ಉದ್ಯೋಗ ತಮ್ಮದಾಗಿಸಿಕೊಳ್ಳಬಹುದಾಗಿದೆ.

ಜಾಕಿ ಜಾಕಿ ಜಾಕಿ

ವಿಡಿಯೋ ಜಾಕಿ, ಡಿಸ್ಕ್‌ ಜಾಕಿ ಇತ್ಯಾದಿ ಹಲವು ಉದ್ಯೋಗಗಳು ಇವೆ. ಮ್ಯೂಸಿಕ್‌ ವಿಡಿಯೋ ಹೊರತರುವುದರ ಜೊತೆಗೆ ಸಂಗೀತ ಕಲಾವಿದರು ಮತ್ತು ಆ ಕ್ಷೇತ್ರದಲ್ಲಿರುವವರ ಸಂದರ್ಶನ ಮಾಡುವುದು ವಿಡಿಯೋ ಜಾಕಿ , ಡಿಸ್ಕ್‌ ಜಾಕಿಗಳ ಕೆಲಸ. ಕಂಪನಿ ಮತ್ತು ಖಾಸಗಿ ಸಮಾರಂಭಗಳನ್ನು ನಿರ್ವಹಿಸುವ ಮೂಲಕ ವೈಯಕ್ತಿಕವಾಗಿಯೂ ಈ ವೃತ್ತಿಗಳನ್ನು ಕೈಗೊಳ್ಳಬಹುದು.

ಮ್ಯೂಸಿಕ್‌ ಥೆರಪಿಸ್ಟ್‌ ಉದ್ಯೋಗ

ಸಂಗೀತ ಕೌನ್ಸೆಲರ್‌ ಎಂದೂ ಇವರನ್ನು ಕರೆಯಲಾಗುತ್ತದೆ. ಸಂಗೀತಕ್ಕೆ ಕಾಯಿಲೆ ಗುಣಪಡಿಸುವ ಗುಣವೂ ಇದೆ. ಇದೇ ಕಾರಣಕ್ಕೆ ಮಾನಸಿಕ ಸಾಮರ್ಥ್ಯ‌ವನ್ನು ಸುಧಾರಿಸುವುದಕ್ಕಾಗಿ/ ಚಿಕಿತ್ಸೆ ನೀಡುವುದಕ್ಕಾಗಿ ಲಯ ಹಾಗೂ ಮಾಧುರ್ಯವನ್ನು ಸೃಷ್ಟಿಸುವ ಸಾಮರ್ಥ್ಯ ಇವರಿಗಿದೆ. ಮಾನಸಿಕ ಆರೋಗ್ಯ ಸಂಸ್ಥೆಗಳಲ್ಲಿ, ಸೆಲೆಬ್ರೆಟಿಗಳ ಬಳಿ, ಗಣ್ಯ ವ್ಯಕ್ತಿಗಳ ಬಳಿ ಮ್ಯೂಸಿಕ್‌ ಥೆರಪಿಸ್ಟ್‌ ಆಗಿ ಉದ್ಯೋಗ ಮಾಡಬಹುದು.

ಆರ್ಟಿಸ್ಟ್‌ ಮ್ಯಾನೇಜರ್‌

ಸಂಗೀತ ಕಲಾವಿದರ ಜತೆಗೆ ಸಂಗೀತ ಬಲ್ಲವರಿಗೂ ಉದ್ಯೋಗ ದೊರಕುತ್ತದೆ. ಆರ್ಟಿಸ್ಟ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಬಹುದು.

ಗೀತರಚನೆಕಾರರು

ಅತ್ಯುತ್ತಮ ಪ್ರತಿಭಾನ್ವಿತರು ಈ ಕ್ಷೇತ್ರದಲ್ಲಿ ಯಶಸ್ಸು ಪಡೆಯುತ್ತಾರೆ. ಕನ್ನಡದಲ್ಲಿ ಚಿ. ಉದಯಶಂಕರ್‌, ಆರ್‌.ಎನ್‌. ಜಯಗೋಪಾಲ್‌, ಹಂಸಲೇಖ, ಕವಿರಾಜ್‌ ಮುಂತಾದವರು ತಮ್ಮ ಪ್ರತಿಭೆಯ ಮೂಲಕ ಜನರ ಮನಸ್ಸಿನಲ್ಲಿ ಸದಾ ಗುಣುಗುಣುಗಿಸುವಂತಹ ಹಾಡುಗಳನ್ನು ನೀಡಿದ್ದಾರೆ. ಥೀಮ್‌ ಹಾಗೂ ಸನ್ನಿವೇಶಗಳನ್ನು ಅರಿತು ಗೀತೆಗಳನ್ನು ಬರೆಯಬೇಕಾಗುತ್ತದೆ. ಜಾಹೀರಾತು ಉತ್ಪನ್ನಗಳಿಗೆ ಅಥವಾ ಕಂಪನಿಗಳಿಗೆ ಅಗತ್ಯವಾದ ಸಂಗೀತವನ್ನೂ ಸಂಯೋಜಿಸಬಹುದು.

ಗಾಯಕರು

ಹಾಡುವುದೂ ಒಂದು ವೃತ್ತಿ. ಪ್ರತಿಭಾನ್ವಿತ ಗಾಯಕರಿಗೆ ಬೇಡಿಕೆ ಹೆಚ್ಚಿದೆ. ಇವರು ವಿವಿಧ ಕಾರ್ಯಕ್ರಮಗಳನ್ನು ನೀಡುತ್ತ ಹಣ ಸಂಪಾದನೆ ಮಾಡಬಹುದು. ಪ್ರತಿಷ್ಠಿತ ಹೋಟೆಲ್‌ಗಳಲ್ಲಿಯೂ ಕಾರ್ಯನಿರ್ವಹಿಸಬಹುದು. ಅವರವರ ಪ್ರತಿಭೆಗೆ ತಕ್ಕಂತೆ ವಿವಿಧ ಕಡೆಗಳಲ್ಲಿ ಅವಕಾಶ ಪಡೆಯಬಹುದು. ಭಾವಗೀತೆ, ಜಾನಪದ ಗೀತೆ, ದಾಸರ ಹಾಡುಗಳು ಹೀಗೆ ನಾನಾ ಪ್ರಕಾರಗಳಲ್ಲಿ ಗಾಯಕರಾಗಬಹುದು. ಇನ್ನು ವಾದ್ಯಗೋಷ್ಠಿಗಳಲ್ಲಿಯೂ ಹಾಡಬಹುದು. ಈಗ ಹಾಡು ಬಲ್ಲವರು ವಿವಿಧ ರೀತಿಯಲ್ಲಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಆರ್ಕೆಸ್ಟ್ರ ನಡೆಸುವವರನ್ನು ನೀವು ನೋಡಿರಬಹುದು. ಇವರು ಸಾಕಷ್ಟು ಫಾಲೋವರ್ಸ್‌ಗಳನ್ನು ಹೊಂದಿದ್ದು, ಪ್ರತಿನಿತ್ಯ ಫೇಸ್‌ಬುಕ್‌ನಲ್ಲಿ ಹಾಡುತ್ತಾರೆ, ಅವರಿಗೆ ಹಲವು ಸಾವಿರ, ಲಕ್ಷ ಕೇಳುಗರು ಇರುತ್ತಾರೆ. ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿಯೂ ಹಾಡುವ ಮೂಲಕ ವೃತ್ತಿಪರವಾಗಿ ಸಾಕಷ್ಟು ಜನರು ಕಾರ್ಯ ನಿರ್ವಹಿಸುತ್ತಾರೆ.

ಸಿನಿಮಾದಲ್ಲಿ ಅವಕಾಶ

ಅದೃಷ್ಟ ಮತ್ತು ಅವಕಾಶ ದೊರಕಿದರೆ ಸಿನಿಮಾ ಕ್ಷೇತ್ರದಲ್ಲಿ ಹಾಡುಗಾರರಾಗಿ, ಹಿನ್ನೆಲೆ ಗಾಯಕರಾಗಿ ಕರಿಯರ್‌ ರೂಪಿಸಿಕೊಳ್ಳಬಹುದು. ಪ್ರತಿಭಾನ್ವಿತರಿಗೆ ಸಿನಿಮಾ ಕ್ಷೇತ್ರದಲ್ಲಿ ಸಂಗೀತ ಸಂಯೋಜಕರಾಗಿ, ನಿರ್ದೇಶಕರಾಗಿ ಅವಕಾಶಗಳು ದೊರಕುತ್ತವೆ. ಜನರ ನಾಡಿಮಿಡಿತವನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ರಚಿಸಬೇಕಾಗುತ್ತದೆ.

ಯೂಟ್ಯೂಬ್‌ ಚಾನೆಲ್‌

ಸಂಗೀತ ಕ್ಷೇತ್ರದ ಪ್ರತಿಭಾನ್ವಿತರು ನಿರುದ್ಯೋಗಿಯಾಗಬೇಕಾಗಿಲ್ಲ. ಒಂದು ಯೂಟ್ಯೂಬ್‌ ಚಾನೆಲ್‌ ತೆರೆದು ಪ್ರತಿನಿತ್ಯ ಹಾಡುತ್ತ, ಹಾಡಿನ ವಿಡಿಯೋ ಹಾಕುತ್ತ ಸಾಕಷ್ಟು ಕೇಳುಗರನ್ನು ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳಬಹುದು. ತಮ್ಮ ಸಬ್‌ಸ್ಕ್ರೈಬರ್ಸ್‌ ಹೆಚ್ಚಿಸುತ್ತ ಹೋಗಿ ಆದಾಯವನ್ನೂ ಪಡೆಯಬಹುದು.

Whats_app_banner