ಬಿಎಸ್‌ಸಿಯಲ್ಲಿ ಜನಪ್ರಿಯ ಕಾಂಬಿನೇಷನ್‌ಗಳು ಯಾವುವು; ಯಾರೆಲ್ಲಾ ಸೈನ್ಸ್ ಓದಬಹುದು, ಭವಿಷ್ಯದ ದೃಷ್ಟಿಯಿಂದ ಯಾವುದು ಒಳ್ಳೆಯದು?
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಎಸ್‌ಸಿಯಲ್ಲಿ ಜನಪ್ರಿಯ ಕಾಂಬಿನೇಷನ್‌ಗಳು ಯಾವುವು; ಯಾರೆಲ್ಲಾ ಸೈನ್ಸ್ ಓದಬಹುದು, ಭವಿಷ್ಯದ ದೃಷ್ಟಿಯಿಂದ ಯಾವುದು ಒಳ್ಳೆಯದು?

ಬಿಎಸ್‌ಸಿಯಲ್ಲಿ ಜನಪ್ರಿಯ ಕಾಂಬಿನೇಷನ್‌ಗಳು ಯಾವುವು; ಯಾರೆಲ್ಲಾ ಸೈನ್ಸ್ ಓದಬಹುದು, ಭವಿಷ್ಯದ ದೃಷ್ಟಿಯಿಂದ ಯಾವುದು ಒಳ್ಳೆಯದು?

Bachelor of Science: ಹೆಚ್ಚು ಸ್ಕೋಪ್‌ ಇರುವ ಕೋರ್ಸ್‌ ಬಿಎಸ್‌ಸಿ. ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಇರುವ ವಿದ್ಯಾರ್ಥಿಗಳು ಈ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು. ವಿಜ್ಞಾನ ವಿಭಾಗದ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಬಿಎಸ್‌ಸಿಯಲ್ಲಿ ಜನಪ್ರಿಯ ಕಾಂಬಿನೇಷನ್‌ಗಳು ಯಾವುವು; ಯಾರೆಲ್ಲಾ ಸೈನ್ಸ್ ಓದಬಹುದು?
ಬಿಎಸ್‌ಸಿಯಲ್ಲಿ ಜನಪ್ರಿಯ ಕಾಂಬಿನೇಷನ್‌ಗಳು ಯಾವುವು; ಯಾರೆಲ್ಲಾ ಸೈನ್ಸ್ ಓದಬಹುದು?

ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಪಿಯುಸಿ ನಂತರ ಬಿಎಸ್‌ಸಿ (BSc) ಆಯ್ಕೆ ಮಾಡಿಕೊಳ್ಳುತ್ತಾರೆ. ಪಿಯು ವ್ಯಾಸಂಗದ ನಂತರ ವಿಜ್ಞಾನ ವಿಭಾಗಕ್ಕೆ ಭಾರಿ ವ್ಯಾಪ್ತಿ ಇದೆ. ಬಿಎಸ್‌ಸಿ ಎಂದರೆ ಬ್ಯಾಚುಲರ್ ಆಫ್ ಸೈನ್ಸ್. ಅಂದರೆ, ವಿಜ್ಞಾನ ವಿಭಾಗದಲ್ಲಿ 3 ವರ್ಷಗಳ ಪದವಿ (Degree) ಕೋರ್ಸ್ ಆಗಿದೆ. ಪಿಯುಸಿ ಅಥವಾ 12ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಬಿಎಸ್‌ಸಿ ಕೋರ್ಸ್‌ ಮಾಡಲು ಅರ್ಹರಾಗಿರುತ್ತಾರೆ. ಈ ಕೋರ್ಸ್‌ ವಿಶೇಷಗಳೇನು, ಬಿಎಸ್ಸಿಯಲ್ಲಿ ಯಾವೆಲ್ಲಾ ಕಾಂಬಿನೇಷನ್‌ಗಳು ಇರುತ್ತವೆ, ಸೈನ್ಸ್‌ ಯಾಕೆ ಓದಬೇಕು, ಈ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಹೆಚ್ಚಿನ ಕಾಲೇಜುಗಳಲ್ಲಿ ಬಿಎಸ್‌ಸಿ ಪ್ರವೇಶಕ್ಕೆ NPAT, CUET, CUCET, SET, ಇತ್ಯಾದಿ ಪ್ರವೇಶ ಪರೀಕ್ಷೆ ಬರೆಯಬೇಕು. ಸಾಮಾನ್ಯವಾಗಿ ಬಿಎಸ್‌ಸಿ ಕೋರ್ಸ್‌ಗಳಿಗೆ 25000ದಿಂದ 50000 ರೂಪಾಯಿವರೆಗೂ ಶುಲ್ಕ (ಫೀಸ್‌) ಇರುತ್ತದೆ. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಇಷ್ಟು ಶುಲ್ಕ ಇರುವುದಿಲ್ಲ. ಬಿಎಸ್‌ಸಿಯಲ್ಲಿ ಪಠ್ಯಕ್ರಮವು ಆಯಾ ಕೋರ್ಸ್ ವಿಶೇಷತೆಗೆ ಅನುಗುಣವಾಗಿ ಬದಲಾಗುತ್ತದೆ. ಬಿಎಸ್‌ಸಿ ಪದವಿ ಪಡೆದರೆ ವೃತ್ತಿಜೀವನದಲ್ಲಿ ವಿಪುಲ ಅವಕಾಶಗಳಿವೆ. ಪದವೀಧರರ ಸರಾಸರಿ ವೇತನವು ವಾರ್ಷಿಕವಾಗಿ 3 ಲಕ್ಷದಿಂದ 7 ಲಕ್ಷದವರೆಗೂ ಇರುತ್ತದೆ.‌

ಬಿಎಸ್‌ಸಿಯ ವಿವಿಧ ಪ್ರಕಾರಗಳು ಯಾವುವು?

ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಬಿಎಸ್ಸಿ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಭಾರತದ ಹಲವು ವಿವಿ ಹಾಗೂ ಶೀಕ್ಷಣ ಸಂಸ್ಥೆಗಳಲ್ಲಿ ಈ ಕೋರ್ಸ್‌ ಇವೆ. ಖಾಸಗಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿಯೂ ವಿದ್ಯಾಭ್ಯಾಸ ಪೂರ್ಣಗೊಳಿಸಬಹುದು. ವಿದ್ಯಾರ್ಥಿಗಳ ಅಗತ್ಯ ಹಾಗೂ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ಕೋರ್ಸ್‌ಗಳನ್ನು ಮಾಡಬಹುದು. ಪೂರ್ಣ ಸಮಯದ ಕೋರ್ಸ್‌ಗಳು, ಅರೆಕಾಲಿಕ ಕೋರ್ಸ್‌ಗಳು ಮತ್ತು ದೂರಶಿಕ್ಷಣ ಕೋರ್ಸ್‌ಗಳು ಕೂಡಾ ಇವೆ.

  • ಪೂರ್ಣ ಸಮಯದ ಬಿಎಸ್‌ಸಿ ಕೋರ್ಸ್: ಕಾಲೇಜಿಗೆ ಹೋಗಿ ಮೂರು ವರ್ಷಗಳ ಪದವಿ ಕೋರ್ಸ್ ಪೂರ್ಣಗೊಳಿಸುವುದು. ನಿರ್ದಿಷ್ಟ ಸ್ಟ್ರೀಮ್ ಅಥವಾ ವಿಷಯದ ಬಗ್ಗೆ ಕಲಿಕೆ ಸಾಧ್ಯ. ಹೆಚ್ಚಿನ ವಿದ್ಯಾರ್ಥಿಗಳು ಪೂರ್ಣಕಾಲಿಕ ಕೋರ್ಸ್‌ ಆಯ್ಕೆ ಮಾಡುತ್ತಾರೆ.
  • ಅರೆಕಾಲಿಕ ಬಿಎಸ್‌ಸಿ ಕೋರ್ಸ್: ಹೆಚ್ಚಿನ ಕಾಲೇಜುಗಳು ಪೂರ್ಣ ಸಮಯದ ಪದವಿಗಳೊಂದಿಗೆ ಅರೆಕಾಲಿಕ ಬಿಎಸ್‌ಸಿ ಪದವಿಗಳನ್ನು ಒದಗಿಸುತ್ತವೆ. ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಂತಹ ಕಾಲೇಜುಗಳು ವಿದ್ಯಾರ್ಥಿಗಳಿಗೆ ಅರೆಕಾಲಿಕ ಪದವಿಗಳನ್ನು ನೀಡುತ್ತವೆ. ಅಂದರೆ ಎಲ್ಲಾ ದಿನ ಕಾಲೇಜಿಗೆ ಹೋಗಬೇಕು ಎಂದೇನಿಲ್ಲ.
  • ದೂರಶಿಕ್ಷಣ (ಡಿಸ್ಟೆನ್ಸ್‌ ಎಜುಕೇಶನ್)‌ ಬಿಎಸ್‌ಸಿ ಕೋರ್ಸ್: ಬಿಎಸ್‌ಸಿ ದೂರ ಶಿಕ್ಷಣ ಕಾಲೇಜುಗಳು ಉದ್ಯೋಗದ ಜೊತೆಗೆ ಈ ಪದವಿಯನ್ನು ಪೂರ್ಣಗೊಳಿಸುವ ಆಯ್ಕೆಯನ್ನು ಒದಗಿಸುತ್ತವೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಅಣ್ಣಾಮಲೈ ವಿಶ್ವವಿದ್ಯಾಲಯ, ಉಸ್ಮಾನಿಯಾ ವಿಶ್ವವಿದ್ಯಾಲಯ ಮತ್ತು ಮುಂಬೈ ವಿಶ್ವವಿದ್ಯಾಲಯದಂತಹ ಕಾಲೇಜುಗಳು ಭಾರತದಲ್ಲಿ ದೂರಶಿಕ್ಷಣ ಬಿಎಸ್ಸಿ ಕೋರ್ಸ್‌ ಒಳಗೊಂಡಿವೆ.

ಬಿಎಸ್‌ಸಿಯಲ್ಲಿ ಇರುವ ವಿಭಿನ್ನ ಸಬ್ಜೆಕ್ಟ್ ಅಥವಾ ವಿಷಯಗಳು ಯಾವುವು?

ಬಿಎಸ್‌ಸಿಯಲ್ಲಿ ವಿಷಯಗಳು ಆ ಕೋರ್ಸ್‌ನ ವಿಶೇಷತೆಯೊಂದಿಗೆ ಬದಲಾಗುತ್ತವೆ. ಉದಾಹರಣೆಗೆ, ಬಿಎಸ್‌ಸಿ ರಸಾಯನಶಾಸ್ತ್ರದಲ್ಲಿ ಸಾವಯವ ರಸಾಯನಶಾಸ್ತ್ರ, ರಸಾಯನಶಾಸ್ತ್ರ, ಪಾಲಿಮರ್ ರಸಾಯನಶಾಸ್ತ್ರ ಹೀಗೆ ಹಲವು ವಿಷಯಗಳು ಇರುತ್ತವೆ. ಗಣಿತ ಅಥವಾ ಮೆತ್‌ಮೆಟಿಕ್ಸ್‌ ಕಲನಶಾಸ್ತ್ರ (Calculus), ಪ್ರೊಬಾಬಿಲಿಟಿ ಮತ್ತು ಸ್ಟಾಟಿಸ್ಟಿಕ್ಸ್,ಜಾಮೆಟ್ರಿ, ಡಿಫರೆನ್ಷಿಯಲ್ ಇಕ್ವೇಶನ್ಸ್ ಹೀಗೆ ಭಿನ್ನ ವಿಷಯಗಳಿರುತ್ತವೆ.

  • ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್
  • ಬಿಎಸ್‌ಸಿ ಫೋರೆನ್ಸಿಕ್ ಸೈನ್ಸ್
  • ಬಿಎಸ್ಸಿ ರಸಾಯನಶಾಸ್ತ್ರ
  • ಬಿಎಸ್ಸಿ ಗಣಿತ
  • ಬಿಎಸ್ಸಿ ಜೀವಶಾಸ್ತ್ರ
  • ಬಿಎಸ್ಸಿ ಸಸ್ಯಶಾಸ್ತ್ರ

ಹೆಚ್ಚಿನ ಕಾಲೇಜುಗಳಲ್ಲಿ ಒಂದು ವಿಷಯವನ್ನು ಮೇಜರ್‌ ಸಬ್ಜೆಕ್ಟ್‌ ಎಂದು ಪರಿಗಣಿಸುವ ಮೂಲಕ ಬಿಎಸ್‌ಸಿ ಆಯ್ಕೆ ಮಾಡಬಹುದು. ಅದರ ವಿವರ ಹೀಗಿದೆ.

ಗಣಿತ ಸ್ಟ್ರೀಮ್

  • ಭೌತಶಾಸ್ತ್ರ - ರಸಾಯನಶಾಸ್ತ್ರ - ಗಣಿತ (PCM)
  • ಭೌತಶಾಸ್ತ್ರ – ಸ್ಟಾಟಿಸ್ಟಿಕ್ಸ್ – ಗಣಿತ (PSM)
  • ಭೌತಶಾಸ್ತ್ರ – ಎಲೆಕ್ಟ್ರಾನಿಕ್ಸ್ – ಗಣಿತ (PEM)
  • ಭೌತಶಾಸ್ತ್ರ – ಕಂಪ್ಯೂಟರ್ ಅಪ್ಲಿಕೇಶನ್ – ಗಣಿತ (PCAM)
  • ಭೌತಶಾಸ್ತ್ರ – ಬಯೋಫಿಸಿಕ್ಸ್ – ಗಣಿತ (PBPM)‌

ಜೀವಶಾಸ್ತ್ರ ಸ್ಟ್ರೀಮ್

  • ಸಸ್ಯಶಾಸ್ತ್ರ(Botany) - ಪ್ರಾಣಿಶಾಸ್ತ್ರ (Zoology)- ರಸಾಯನಶಾಸ್ತ್ರ (BZC)
  • ಸಸ್ಯಶಾಸ್ತ್ರ - ಜೈವಿಕ ತಂತ್ರಜ್ಞಾನ (Biotechnology ) - ರಸಾಯನಶಾಸ್ತ್ರ (BBTC)
  • ಸಸ್ಯಶಾಸ್ತ್ರ - ಸೂಕ್ಷ್ಮ ಜೀವವಿಜ್ಞಾನ(Microbiology) - ಪ್ರಾಣಿಶಾಸ್ತ್ರ (BMBZ)

ವಾಯುಯಾನ ಶಿಕ್ಷಣದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಬಿಎಸ್‌ಸಿ CAPT (ನಾಗರಿಕ ವಿಮಾನಯಾನ ಪೈಲಟ್ ತರಬೇತಿ) ಅಥವಾ ಬಿಎಸ್‌ಸಿ CAFD (ಸಿವಿಲ್ ಏವಿಯೇಷನ್ ​​ಫ್ಲೈಟ್ ಡಿಸ್ಪ್ಯಾಚರ್) ಮಾಡಬಹುದು. ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯವು ಈ ಕೋರ್ಸ್‌ಗಳನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಪರಿಚಯಿಸಿದೆ. ವಾಯುಯಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಕೌಶಲ್ಯ ಮತ್ತು ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ.

  • Bsc (Hons) in CAPT: ನಾಗರಿಕ ವಿಮಾನಯಾನ ಪೈಲಟ್ ತರಬೇತಿ
  • BSc (Hons) in (CAFD): ಸಿವಿಲ್ ಏವಿಯೇಷನ್ ​​ಫ್ಲೈಟ್ ಡಿಸ್ಪ್ಯಾಚರ್

ಬಿಎಸ್‌ಸಿ ಕೋರ್ಸ್‌ಗೆ ಪ್ರವೇಶ ಪ್ರಕ್ರಿಯೆ ಹೇಗಿರುತ್ತದೆ?

ಮೆರಿಟ್ ಆಧಾರಿತ ಪ್ರವೇಶ: ಮುಂಬೈ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾನಿಲಯ, ಮದ್ರಾಸ್ ಕ್ರಿಶ್ಚಿಯನ್ ಕಾಲೇಜು ಮುಂತಾದ ಉನ್ನತ ಕಾಲೇಜುಗಳಲ್ಲಿ 12ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಪ್ರವೇಶ ಪಡೆಯಬಹುದು.

ಪ್ರವೇಶ ಪರೀಕ್ಷೆ ಆಧಾರಿತ ಪ್ರವೇಶ: ದೆಹಲಿ ವಿಶ್ವವಿದ್ಯಾಲಯ, ಐಐಟಿ ಮದ್ರಾಸ್ ಸೇರಿದಂತೆ ಕೆಲವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಬಿಎಸ್‌ಸಿ ಕೋರ್ಸ್‌ ಪ್ರವೇಶಾತಿಗಾಗಿ ತಮ್ಮದೇ ಆದ ಎಂಟ್ರೆನ್ಸ್‌ ಎಕ್ಸಾಮ್‌ ನಡೆಸುತ್ತವೆ. ಇದರಲ್ಲಿ CUET ಜನಪ್ರಿಯ ಪ್ರವೇಶ ಪರೀಕ್ಷೆಗಳಲ್ಲಿ ಒಂದು.

ಯಾರೆಲ್ಲಾ BSc ಮಾಡಬಹುದು?

  • ಬಿಎಸ್‌ಸಿ ಮಾಡಬಯಸುವ ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 50 ಶೇಕಡ ಅಂಕಗಳೊಂದಿಗೆ ಪಾಸ್‌ ಆಗಿರಬೇಕು. ಕೆಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ 60 ಪ್ರತಿಶತ ಅಂಕಗಳು ಅಗತ್ಯ.
  • ಭಾರತದಲ್ಲಿ 18 ವರ್ಷ ವಯಸ್ಸು ದಾಟಿದರೆ ಬಿಎಸ್‌ಸಿ ಮಾಡಬಹುದು.
  • ವಿದ್ಯಾರ್ಥಿಗಳು ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದಂತಹ ಮೂಲಭೂತ ವಿಷಯಗಳಲ್ಲಿ ಹೈಯರ್ ಸೆಕೆಂಡರಿ ಕೋರ್ಸ್‌ವರ್ಕ್ ಪೂರ್ಣಗೊಳಿಸಿರಬೇಕು. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಇದು ಅನ್ವಯ ಆಗುವುದಿಲ್ಲ. ಆದರೆ, ವಿಜ್ಞಾನ ಸಂಬಂಧಿತ ವಿಷಯಗಳಲ್ಲಿ ಆಸಕ್ತಿ ಇದ್ದರೆ ಒಳ್ಳೆಯದು.

ಬಿಎಸ್‌ಸಿ ಏಕೆ ಓದಬೇಕು?

ವಿಜ್ಞಾನ ಕುರಿತ ಆಳವಾದ ಅಧ್ಯಯನ: ಬಿಎಸ್‌ಸಿ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ವಿಜ್ಞಾನ ಕುರಿತಾಗಿ ಆಳವಾದ ಅಡಿಪಾಯವನ್ನು ಹಾಕಿಕೊಡುತ್ತವೆ. ವಿವಿಧ ಕ್ಷೇತ್ರಗಳಲ್ಲಿ ವೃತ್ತಿಜೀವನ ನಡೆಸಲು ಅವಕಾಶ ಮಾಡಿಕೊಡುತ್ತವೆ.

ಉದ್ಯೋಗ ಭದ್ರತೆ: ಆರೋಗ್ಯ, ತಂತ್ರಜ್ಞಾನ, ಐಟಿ, ಉತ್ಪಾದನೆ ಸೇರಿದಂತೆ ವಿವಿಧ ವಿಜ್ಞಾನ ಸಂಬಂಧಿತ ಉದ್ಯೋಗಗಳು ಹೆಚ್ಚು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ.

ಹೆಚ್ಚಿನ ಗಳಿಕೆಯ ಸಾಮರ್ಥ್ಯ: ಬಿಎಸ್‌ಸಿ ಕೋರ್ಸ್‌ನಲ್ಲಿ ಹೆಚ್ಚಿನ ಗಳಿಕೆ ಸಾಧ್ಯ. ಉದ್ಯೋಗಾವಕಾಶಗಳು ಹೆಚ್ಚಿರುವುದರಿಂದ ಆಯಾ ಕೋರ್ಸ್‌ಗೆ ಅನುಗುಣವಾಗಿ ಉತ್ತಮ ಸಂಬಳದ ಉದ್ಯೋಗ ಪಡೆಯಬಹುದು.

ಉನ್ನತ ಅಧ್ಯಯನ: ಬಿಎಸ್‌ಸಿ ವಿದ್ಯಾರ್ಥಿಗಳು ಉನ್ನತ ಅಧ್ಯಯನದ ಮೂಲಕ ಬಾಹ್ಯಾಕಾಶ, ತಂತ್ರಜ್ಞಾನ, ವಿಜ್ಞಾನಿಗಳಾಗಿ ಬೆಳೆಯಬಹುದು. ತಮ್ಮ ಅಧ್ಯಯನವನ್ನು ಒಂದು ಕ್ಷೇತ್ರ ಅಥವಾ ವಿಷಯದ ಮೇಲೆ ಕೇಂದ್ರೀಕರಿಸಲು ಉನ್ನತ ಅಧ್ಯಯನ ಮತ್ತು ಸಂಶೋಧನೆ ನಡೆಸಬಹುದು.

Whats_app_banner