Bakrid: ಮಟನ್ ಮಂಡಿ ಬಿರಿಯಾನಿ ತಿಂದು ಫಿದಾ ಆಗಿದ್ದೀರಾ; ಬಕ್ರೀದ್‌ಗೆ ನೀವೂ ಮನೆಯಲ್ಲಿ ತಯಾರಿಸಿ ಈ ಸ್ಪೆಷಲ್ ಬಿರಿಯಾನಿ; ಇಲ್ಲಿದೆ ರೆಸಿಪಿ
Eid Al Adha: ಜೂನ್ 29 ರಂದು ಭಾರತದಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ವಿಶೇಷ ಖಾದ್ಯಗಳನ್ನು ತಯಾರಿಸಿ ಸಂಭ್ರಮಿಸುವುದು ವಾಡಿಕೆ. ಈ ಬಕ್ರೀದ್‌ಗೆ ನೀವು ಮಟನ್ ಮಂಡಿ ಬಿರಿಯಾನಿ ತಯಾರಿಸಬಹುದು. ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಇದರ ರೆಸಿಪಿ ಇಲ್ಲಿದೆ ನೋಡಿ.
ಪ್ರವಾದಿ ಇಬ್ರಾಹಿಂ ಅವರ ತ್ಯಾಗ ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ʼಈದ್ ಉಲ್ ಅದ್ಹಾʼ. ಭಾರತದಲ್ಲಿ ಈ ಹಬ್ಬವನ್ನು ʼಬಕ್ರೀದ್ʼ ಎಂದು ಆಚರಿಸಲಾಗುತ್ತದೆ. ಜೂನ್ 29ರಂದು ದೇಶದಾದ್ಯಂತ ಮುಸ್ಲಿಮರು ಈ ಹಬ್ಬವನ್ನು ಆಚರಿಸುತ್ತಾರೆ.
ಬಕ್ರೀದ್ ಹಬ್ಬದಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸುವುದು ವಾಡಿಕೆ. ಈ ವರ್ಷದ ಬಕ್ರೀದ್ ಹಬ್ಬಕ್ಕೆ ನೀವು ಮಟನ್ ಮಂಡಿ ಬಿರಿಯಾನಿ ತಯಾರಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು.
ಮಂಡಿ ಬಿರಿಯಾನಿ ಅರೆಬಿಕ್ ಖಾದ್ಯವಾಗಿದ್ದು, ಚಿಕನ್ ಹಾಗೂ ಮಟನ್‌ನಲ್ಲಿ ಮಂಡಿ ಬಿರಿಯಾನಿಯನ್ನು ತಯಾರಿಸಲಾಗುತ್ತದೆ. ಭಾರತದಲ್ಲಿ ಹೈದರಾಬಾದ್ ಚಿಕನ್/ ಮಟನ್ ಮಂಡಿ ಬಿರಿಯಾನಿ ಫೇಮಸ್. ಬಕ್ರೀದ್ ಸಮಯದಲ್ಲಿ ಇದನ್ನು ಹೆಚ್ಚಾಗಿ ತಯಾರಿಸುತ್ತಾರೆ. ಇದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನದ ಕುರಿತು ವಿವರ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು: ಮಟನ್- 750 ಗ್ರಾಂ, ಬಾಸುಮತಿ ಅಕ್ಕಿ - 4 ಕಪ್, ಹೆಚ್ಚಿದ ಈರುಳ್ಳಿ - 1 ಕಪ್, ಟೊಮೆಟೊ ಪ್ಯೂರಿ - 1 ಕಪ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 2 ಚಮಚ, ಬೆಣ್ಣೆ - 4 ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು - ಸ್ವಲ್ಪ, ಮಟನ್ ಸ್ಟಾಕ್ ಕ್ಯೂಬ್ - ಸ್ವಲ್ಪ, ನಿಂಬೆರಸ - 4 ಚಮಚ, ಗೊಡಂಬಿ - ಸ್ವಲ್ಪ, ಹಸಿಮೆಣಸಿನಕಾಯಿ ಪೇಸ್ಟ್ - 2 ಚಮಚ, ಅರಿಸಿನ - 1 ಚಮಚ, ಖಾರದ ಪುಡಿ - 1 ಚಮಚ, ಉಪ್ಪು - ರುಚಿಗೆ, ಎಣ್ಣೆ- ಸ್ವಲ್ಪ, ಮಸಾಲೆ ಪದಾರ್ಥಗಳು, ಕೊತ್ತಂಬರಿ - 1 ಚಮಚ, ಜೀರಿಗೆ - 1 ಚಮಚ, ನಕ್ಷತ್ರಮೊಗ್ಗು- 2, ಒಣಮೆಣಸು - 4 ರಿಂದ 5, ದಾಲ್ಚಿನ್ನಿ ಎಲೆ - 2, ಲವಂಗ- 8 ರಿಂದ 10, ಏಲಕ್ಕಿ - 8 ರಿಂದ 10, ಚಕ್ಕೆ - 2 ಕಡ್ಡಿ.
ತಯಾರಿಸುವ ವಿಧಾನ: ಮಿಕ್ಸಿ ಜಾರಿಗೆ ದಾಲ್ಚಿನ್ನಿ ಹಾಗೂ ಎರಡೆರಡು ಏಲಕ್ಕಿ ಹಾಗೂ ಲವಂಗ ಬಿಟ್ಟು ಉಳಿದ ಮಸಾಲೆ ಪದಾರ್ಥಗಳನ್ನು ನುಣ್ಣಗೆ ಪುಡಿ ಮಾಡಿ. ಈಗ ಮಂಡಿ ಮಸಾಲೆ ನಿಮ್ಮ ಮುಂದೆ ಸಿದ್ಧ. ಬೌಲ್‌ವೊಂದರಲ್ಲಿ ಸ್ವಚ್ಛವಾಗಿ ತೊಳೆದು ಹಿಂಡಿದ ಮಟನ್ ತುಂಡುಗಳನ್ನು ಹಾಕಿ. ಅದಕ್ಕೆ ಮಂಡಿ ಮಸಾಲ, ಉಪ್ಪು ಹಾಗೂ ಹಸಿಮೆಣಸಿನ ಪೇಸ್ಟ್ ತಯಾರಿಸಿ. ಇದನ್ನು 3 ರಿಂದ 4 ಗಂಟೆಗಳ ಕಾಲ ನೆನೆಯಲು ಬಿಡಿ. ಕುಕ್ಕರ್‌ಗೆ ಎಣ್ಣೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಟೊಮೆಟೊ ಪ್ಯೂರಿ ಒಂದರ ನಂತರ ಒಂದರಂತೆ ಸೇರಿಸಿ ಎಣ್ಣೆಯಲ್ಲಿ ಕರಿಯಿರಿ. ಇದಕ್ಕೆ ಅರಿಸಿನ ಪುಡಿ, ಖಾರದಪುಡಿ, ಸ್ವಲ್ಪ ಉಪ್ಪು ಹಾಗೂ ಕೊನೆಯಲ್ಲಿ ಮಟನ್ ತುಂಡುಗಳನ್ನು ಹಾಕಿ. ಮಟನ್ ತುಂಡುಗಳನ್ನು ಗ್ರೇವಿಯಲ್ಲಿ 5 ರಿಂದ 10 ನಿಮಿಷ ಬೇಯಿಸಿ. ಇದಕ್ಕೆ ಒಂದು ಕಪ್ ನೀರು ಸೇರಿಸಿ, ಕುಕ್ಕರ್ ಮುಚ್ಚಳ ಮುಚ್ಚಿ 2 ವಿಶಲ್ ಕೂಗಿಸಿ ಅಥವಾ ಹಾಗೆಯೇ ಶೇ 70ರಷ್ಟು ಬೇಯಿಸಬೇಕು. ಬೌಲ್‌ನಲ್ಲಿ ಅಕ್ಕಿಯನ್ನು ತೊಳೆದು ಅರ್ಧಗಂಟೆ ನೆನೆಸಿಡಿ. ನಂತರ ಕುಕ್ಕರ್‌ನಿಂದ ಬೆಂದ ಮಟನ್ ಹೋಳುಗಳನ್ನು ಹೆಕ್ಕಿಡಿ. ಇನ್ನೊಂದು ಪಾತ್ರೆಯಲ್ಲಿ ಮಟನ್ ಸ್ಟಾಕ್ ಹಾಗೂ ಅಕ್ಕಿಯನ್ನು ಬೇಯಲು ಇಡಿ.
ಇನ್ನೊಂದು ಪಾನ್‌ನಲ್ಲಿ ಬೆಣ್ಣೆ ಬಿಸಿ ಮಾಡಿ ಇದರಲ್ಲಿ ಗೋಡಂಬಿಯನ್ನು ಹುರಿದುಕೊಳ್ಳಿ. ಅದನ್ನು ತೆಗೆದಿರಿಸಿ ಬೆಣ್ಣೆಯಲ್ಲಿ ಮಟನ್ ತುಂಡುಗಳನ್ನು 5 ರಿಂದ 10 ನಿಮಿಷ ಹುರಿದುಕೊಳ್ಳಿ. ಪಾನ್‌ಗೆ ಅನ್ನ ಸೇರಿಸಿ, ಅದರ ಮೇಲೆ ಹುರಿದುಕೊಂಡ ಮಟನ್ ತುಂಡು, ಹಾಕಿ ಅದರ ಮೇಲೆ ಗೋಡಂಬಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ. ಈಗ ನಿಮ್ಮ ಮುಂದೆ ಮಟನ್ ಮಂಡಿ ಬಿರಿಯಾನಿ ಸವಿಯಲು ಸಿದ್ಧ.
ವಿಭಾಗ