ತೂಕ ಇಳಿಸಿದ ಸ್ವಲ್ಪ ದಿನದಲ್ಲೇ ಮತ್ತೆ ತೂಕ ಹೆಚ್ಚಾಗಿದ್ಯಾ? 23 ಕೆಜಿ ತೂಕ ಇಳಿಸಿದ ಈ ಯುವತಿ ಪಾಲಿಸಿದ 6 ಟಿಪ್ಸ್ ನೀವೊಮ್ಮೆ ಫಾಲೋ ಮಾಡಿ
ತೂಕ ಇಳಿಕೆಗಿಂತ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದೇ ಒಂದು ದೊಡ್ಡ ಸಾಹಸ. ಇದಕ್ಕೆ ಸಂಬಂಧಿಸಿ ಫಿಟ್‌ನೆಸ್ ತರಬೇತುದಾರರೊಬ್ಬರು ಇತ್ತೀಚೆಗೆ ತಾವು ತೂಕ ಹೆಚ್ಚಾಗುವುದನ್ನು ತಪ್ಪಿಸಲು ಏನು ಮಾಡಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. ಅವರು ಪಾಲಿಸಿದ 6 ವಿಷಯಗಳು ಈ ರೀತಿಯಾಗಿವೆ.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಹೆಚ್ಚಾಗಿ ಯೋಚಿಸುತ್ತಿರುವ ವಿಷಯವೆಂದರೆ ತೂಕ ಇಳಿಕೆ ಮಾಡಿಕೊಳ್ಳುವುದು. ತೂಕ ಇಳಿಕೆಯ ಪ್ರಯಾಣದಲ್ಲಿ ಎಲ್ಲರೂ ಹರಸಾಹಸ ಪಡುವವರೇ ಆಗಿದ್ದಾರೆ. ಆದರೆ ಕ್ಯಾಲೋರಿಗಳನ್ನು ಕಳೆದುಕೊಳ್ಳಲು ಉತ್ತಮ ಆಹಾರ, ಸೂಕ್ತ ವ್ಯಾಯಾಮ, ಶಿಸ್ತು ಮತ್ತು ಚೇತರಿಕೆಗೆ ಸಮಯ ನೀಡುವುದರ ಜೊತೆಗೂ ತೂಕ ಇಳಿಸಿಕೊಂಡು ಗುರಿ ಸಾಧಿಸಬಹುದು. ಕೇವಲ ತೂಕ ಇಳಿಸಿಕೊಂಡರಷ್ಟೇ ಸಾಕಾಗುವುದಿಲ್ಲ. ಮತ್ತೆ ಅದು ಏರಿಕೆಯಾಗದಂತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಇದಕ್ಕೆ ಫ್ಯಾಟ್‌ಲಾಸ್ ತರಬೇತುದಾರರೊಬ್ಬರು ತಾವು 23 ಕೆಜಿ ತೂಕ ಕಳೆದುಕೊಂಡಿದ್ದು ಮತ್ತು ಮತ್ತೆ ತೂಕ ಹೆಚ್ಚಾಗದಂತೆ ಕಾಪಾಡಿಕೊಂಡ ರೀತಿಯನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ. ಫ್ಯಾಟ್‌ಲಾಸ್ ತರಬೇತುದಾರರಾದ ಥೆರೆಸ್ ಅವರು ಎಚ್ಚರಿಕೆ ವಹಿಸಿದ 6 ವಿಷಯಗಳು ಹೀಗಿವೆ. ನೀವೂ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಇದನ್ನೊಮ್ಮೆ ಓದಿ.
1) ಆಹಾರಕ್ಕೆ ಕಡಿವಾಣ ಬೇಡ: ಆಹಾರ ಸೇವನೆಗೆ ಕಡಿವಾಣ ಹಾಕುವುದು ತೂಕ ಇಳಿಸುವ ಪ್ರಯಾಣದಲ್ಲಿರುವ ಅನೇಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಆದರೆ ಥೆರೆಸ್ ಇದಕ್ಕೆ ಯಾವುದೇ ನಿರ್ಭಂದ ವಿಧಿಸಿಲ್ಲ. ಅವರು ಹೇಳುವ ಪ್ರಕಾರ ನೀವು ಯಾವ ಆಹಾರ ಸೇವನೆಗೆ ಹೆಚ್ಚು ಕಡಿವಾಣ ಹಾಕಲು ಬಯಸುತ್ತೀರೋ ಅದನ್ನೇ ಹೆಚ್ಚೆಚ್ಚು ಸೇವಿಸಬೇಕೆಂದು ಬಯಸುತ್ತೀರಿ ಎನ್ನುತ್ತಾರೆ. ಹಾಗಾಗಿ ಎಲ್ಲಾ ರೀತಿಯ ಆಹಾರವನ್ನು ಸೇವಿಸಿ, ಆದರೆ ಮಿತವಾಗಿ ತಿನ್ನಬೇಕು ಎಂಬ ಕಲ್ಪನೆಯನ್ನು ಇರಿಸಿಕೊಳ್ಳಿ. ಆಹಾರ ಸೇವನೆಗೆ 80/20 ನಿಯಮವನ್ನು ಹಾಕಿಕೊಳ್ಳುವುದರಿಂದ ಪ್ರಗತಿ ಸಾಧಿಸಬಹುದು. ನಿಮ್ಮಿಷ್ಟದ ಆಹಾರವನ್ನು ಸೇವಿಸಬಹುದು ಎಂದು ಥೆರೆಸ್ ಅವರು ಬಹಳ ಸಮಯದಿಂದ ತಾವು ಆಹಾರದೊಂದಿಗೆ ಹೇಗೆ ಹೋರಾಟ ಮಾಡುತ್ತಿದ್ದೇನೆ ಎಂದು ಹಂಚಿಕೊಂಡಿದ್ದಾರೆ.
2) ಹೆಚ್ಚು ಕ್ಯಾಲೋರಿ ಸೇವಿಸಿದಾಗ ಭಯಪಡುವುದಿಲ್ಲ: ಫಿಟ್‌ನೆಸ್ ತರಬೇತುದಾರರಾದ ಥೆರೆಸ್ ಅವರು ಅಗತ್ಯ ಕ್ಯಾಲೋರಿಗಿಂತ ಹೆಚ್ಚು ಸೇವಿಸಿದಾಗ ಅಥವಾ ಡಯಟ್‌ನ್ನು ಅನುಸರಿದಿದ್ದಾಗ ತಾವು ಅದರ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳುತ್ತಾರೆ. ಯಾವುದೋ ಒಂದು ದಿನ ಅಥವಾ ವಾರದಲ್ಲಿ ಒಂದು ದಿನ ಡಯಟ್ ಪಾಲನೆ ತಪ್ಪಿಸಿದರೆ ಅದು ನನ್ನ ಎಲ್ಲಾ ತೂಕ ಇಳಿಕೆಯ ಪ್ರಗತಿಯನ್ನು ಹಾಳುಮಾಡುವುದಿಲ್ಲ ಎಂಬುದನ್ನು ನಾನು ಗುರುತಿಸಿದ್ದೇನೆ. ಜೀವನದ ಕೆಲವು ದಿನಗಳನ್ನು ಆನಂದಿಸಲು ಅನುಮತಿ ನೀಡುತ್ತೇನೆ ಮತ್ತು ತಕ್ಷಣ ದಿನಚರಿಗೆ ಮರಳಿ ಅದನ್ನು ಪಾಲಿಸಲು ಸಿದ್ಧವಾಗಿದ್ದೇನೆ ಎಂದು ನನಗೆ ತಿಳಿದಿದೆ ಎಂದು ವಿವರಿಸುತ್ತಾರೆ. ಇದು ಹೆಚ್ಚಾಗಿ ಒಂದು ದಿನ ಅಥವಾ ಹೆಚ್ಚುವರಿ ಕ್ಯಾಲೋರಿ ಸೇವನೆ ಬಗ್ಗೆ ಅಲ್ಲ, ಆ ದಿನಗಳನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದಾಗಿದೆ ಎಂದು ಅವರು ಹೇಳುತ್ತಾರೆ.
3) ಪ್ರತಿದಿನ ದೇಹದಂಡಿಸಬೇಕೆಂದೇನಿಲ್ಲ: ವ್ಯಾಯಾಮದ ನಂತರ ಚೇತರಿಕೆಯೂ ಅಗತ್ಯವಾಗಿದೆ, ಎಂಬುದು 23 ಕೆಜಿ ತೂಕ ಇಳಿಸಿಕೊಂಡ ನಂತರ ಥೆರೆಸ್ ಅವರಿಗೆ ಬಂದ ನಂಬಿಕೆಯಾಗಿದೆ. ಕೆಲವು ದಿನಗಳಲ್ಲಿ ಹೆಚ್ಚಿನ ಸಮಯ ಕುಳಿತು ಕೆಲಸ ಮಾಡಿ, ವ್ಯಾಯಾಮ ಮಾಡದಿದ್ದರೆ ತೂಕ ಇಳಿಕೆಯ ಪ್ರಯಾಣದಲ್ಲಿ ಹಿಂದೆ ಬೀಳುವುದಿಲ್ಲ ಎಂದು ನಾನು ಗುರುತಿಸಿದ್ದೇನೆ, ನಾನು ಮನುಷ್ಯ, ಇತರ ಆದ್ಯತೆಗಳೂ ಮುಖ್ಯ. ಪ್ರತಿದಿನ ದೇಹದಂಡಿಸಿ ಗುರಿ ತಲುಪದಿದ್ದರೂ ಸರಿ ಎಂದು ಅವರು ವಿವರಿಸುತ್ತಾರೆ.
4) ಯಾವಾಗಲೂ ಪೌಷ್ಟಿಕಾಂಶಭರಿತ ಆಹಾರವನ್ನೇ ಸೇವಿಸಬೇಕಿಲ್ಲ: ಥೆರೆಸ್ ಅವರು ಹೇಳುವ ಪ್ರಕಾರ ‘ನಾನು ಯಾವಾಗಲೂ ಪೌಷ್ಟಿಕ ಮತ್ತು ಸಂಪೂರ್ಣ ಆಹಾರಗಳನ್ನೇ ಸೇವಿಸುವುದಿಲ್ಲ. ನಾನು ಇನ್ನೂ ಡೋನಟ್ಸ್, ಪಿಜ್ಜಾ, ಬರ್ಗರ್, ಕೇಕ್, ಚಾಕೊಲೇಟ್ ಇತ್ಯಾದಿಗಳನ್ನು ತಿನ್ನುತ್ತೇನೆ. ಅದು ರುಚಿಯಾಗಿದ್ದರೆ ಇನ್ನೊಮ್ಮೆ ಕೂಡಾ ಪ್ರಯತ್ನಿಸುತ್ತೇನೆ. ಜೀವನ ಇರುವುದೇ ಜೀವಿಸಲಿಕ್ಕಾಗಿ. ಆಹಾರದಲ್ಲಿ ನನಗೆ ಕೇವಲ ಕ್ಯಾಲೋರಿ ಅಷ್ಟೇ ಕಾಣಿಸುವುದಿಲ್ಲ, ಇದು ಪ್ರೀತಿಪಾತ್ರರೊಂದಿಗೆ ಕಳೆಯುವ ಸಮಯ, ಸಂತೋಷ ಮತ್ತು ನೆನಪೂ ಆಗಿದೆ. ನಾನು ದಪ್ಪವಾಗಿರುವುದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ ಆದರೆ ನಿಯಮಿತವಾಗಿ ಸ್ವಲ್ಪವಾದರೂ ಉತ್ತಮ ಆಹಾರವನ್ನೇ ಸೇವಿಸುತ್ತೇನೆ’ ಎಂದು ಫಿಟ್‌ನೆಸ್ ಕೋಚ್ ಬರೆದುಕೊಂಡಿದ್ದಾರೆ.
5) ಎಲ್ಲರೂ ಅರ್ಥಮಾಡಿಕೊಳ್ಳಬೇಕೆಂದು ನಿರೀಕ್ಷಿಸಬೇಡಿ: ನಿಮ್ಮ ತೂಕ ಇಳಿಕೆಯ ಪ್ರಯಾಣದಲ್ಲಿ ಎಲ್ಲರೂ ಬದಲಾವಣೆಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಿರೀಕ್ಷಿಸಬೇಡಿ. ನಿಮ್ಮ ಅಭ್ಯಾಸಗಳನ್ನು ಬದಲಾಯಿಸಿದಾಗ ಮತ್ತು ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡಾಗ, ನೀವು ಹೊಸ ವ್ಯಕ್ತಿಯಾಗುತ್ತೀರಿ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ನಿಮ್ಮ ಕಲ್ಪನೆಯನ್ನು ಗೌರವಿಸುತ್ತಾರೆ ಎಂದು ನಿರೀಕ್ಷಿಸಬೇಡಿ ಎಂದು ಥೆರೆಸ್ ಹೇಳುತ್ತಾರೆ.
6) ಹೋಲಿಕೆ ಮಾಡಿಕೊಳ್ಳಬೇಡಿ: ಥೆರೆಸ್ ಅವರು ಕೊನೆಯದಾಗಿ ಹೀಗೆ ಹೇಳುತ್ತಾರೆ, ‘ನಾನು ನನ್ನ ತೂಕ ಇಳಿಕೆಯ ಪ್ರಯಾಣವನ್ನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳುವುದಿಲ್ಲ ಏಕೆಂದರೆ ಇದು ನನ್ನ ತೂಕ ಇಳಿಕೆಯ ಪ್ರಯಾಣ. ಪ್ರತಿಯೊಬ್ಬರು ವಿಭಿನ್ನ ರೀತಿಯಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ. ನಾನು ನನ್ನದೇ ಆದ ಮಾರ್ಗದಲ್ಲಿದ್ದೇನೆ. ಕೆಲವರಿಗೆ 3 ತಿಂಗಳು ತೆಗೆದುಕೊಳ್ಳಬಹುದು, ನನಗೆ 6 ತಿಂಗಳು ತೆಗೆದುಕೊಳ್ಳಬಹುದು ಮತ್ತು ಇದರಿಂದ ನನಗೇನೂ ತೊಂದರೆಯಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.