ಈ ದೀಪಾವಳಿಗೆ ವಿಶೇಷ ಸಿಹಿತಿನಿಸು ಮಾಡಬೇಕು ಎಂದುಕೊಂಡಿದ್ದರೆ ಖರ್ಜೂರ ಪಾಯಸ ಮಾಡಿ; ಸಿಂಪಲ್ ರೆಸಿಪಿ ಇದು
ದೀಪಾವಳಿ ಹಬ್ಬದಲ್ಲಿ ಲಕ್ಷ್ಮೀಪೂಜೆಗೆ ವಿಶೇಷ ಮಹತ್ವವಿದೆ. ಲಕ್ಷ್ಮೀಪೂಜೆಯ ಸಂದರ್ಭ ದೇವಿಗೆ ನೈವೇದ್ಯ ಮಾಡಲು ಸಿಹಿ ತಿನಿಸುಗಳನ್ನು ಮಾಡಲಾಗುತ್ತದೆ. ಈ ವರ್ಷ ದೀಪಾವಳಿಗೆ ನೀವು ವಿಶೇಷ ತಿನಿಸು ಮಾಡಬೇಕು ಅಂತಿದ್ದರೆ ಕರ್ಜೂರ ಪಾಯಸ ಟ್ರೈ ಮಾಡಿ. ತುಂಬಾ ಸುಲಭವಾಗಿ ಮಾಡಬಹುದಾದ ಈ ರೆಸಿಪಿ ರುಚಿಯೂ ಅದ್ಭುತ.
ದೀಪಾವಳಿ ಹಬ್ಬದಲ್ಲಿ ಪಟಾಕಿ, ದೀಪಗಳು ಮಾತ್ರವಲ್ಲ ಬಗೆ ಬಗೆಯ ಖಾದ್ಯಗಳನ್ನೂ ಕೂಡ ತಯಾರಿಸಿ ಹಬ್ಬದ ಖುಷಿಯನ್ನು ಹೆಚ್ಚಿಸಲಾಗುತ್ತದೆ. ಈ ಹಬ್ಬದಲ್ಲಿ ಲಕ್ಷ್ಮೀದೇವಿಗೆ ನೈವೇದ್ಯ ಮಾಡಲು ತಿನಿಸು ತಯಾರಿಸುವುದು ವಿಶೇಷ. ಪ್ರತಿ ಬಾರಿ ಹಬ್ಬದಲ್ಲೂ ನೀವು ಪಾಯಸ ಮಾಡಿರಬಹುದು. ಆದರೆ ಈ ಬಾರಿಯೂ ಪಾಯಸ ಮಾಡಿ, ಆದರೆ ಸಾಮಾನ್ಯ ಪಾಯಸವಲ್ಲ, ಖರ್ಜೂರದ ಪಾಯಸ.
ಖರ್ಜೂರದ ಪಾಯಸ ತುಂಬಾ ಸುಲಭವಾಗಿ ತಯಾರಿಸಬಹುದಾದ ರೆಸಿಪಿಯಾಗಿದ್ದು, ಕಡಿಮೆ ಸಮಯದಲ್ಲಿ ಮಾಡಬಹುದು. ಇದರ ರುಚಿಯೂ ಅದ್ಭುತವಾಗಿರುತ್ತದೆ. ಈ ದೀಪಾವಳಿಗೆ ನಿಮ್ಮ ಮನೆಗೆ ನೆಂಟರು ಬಂದರೆ ಅವರಿಗೂ ಈ ಪಾಯಸ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಕರ್ಜೂರ ಪಾಯಸ ಮಾಡುವುದು ಹೇಗೆ ನೋಡಿ.
ಖರ್ಜೂರ ಪಾಯಸ ರೆಸಿಪಿ
ಬೇಕಾಗುವ ಪದಾರ್ಥಗಳು: ಖರ್ಜೂರ – 15, ಬಾದಾಮಿ – ಒಂದು ಮುಷ್ಟಿ, ಹಾಲು – ಮೂರು ಕಪ್, ಸಕ್ಕರೆ – 2ಚಮಚ, ಏಲಕ್ಕಿ ಪುಡಿ – ಅರ್ಧ ಚಮಚ, ಪಿಸ್ತಾ – 1 ಮುಷ್ಟಿ
ಖರ್ಜೂರ ಪಾಯಸ ಮಾಡುವ ವಿಧಾನ
ಖರ್ಜೂರದಿಂದ ಬೀಜಗಳನ್ನು ಬೇರ್ಪಡಿಸಿ, ಚಿಕ್ಕದಾಗಿ ಹೆಚ್ಚಿಕೊಂಡು ಪಕ್ಕಕ್ಕೆ ಇರಿಸಿ. ಜೊತೆಗೆ ಪಿಸ್ತಾ ಮತ್ತು ಬಾದಾಮಿಯನ್ನು ಸೇರಿಸಿ ಮತ್ತು ಅವುಗಳನ್ನು ಚಿಕ್ಕದಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ. ಈಗ ಒಂದು ಪಾತ್ರೆಯಲ್ಲಿ ಹಾಲು ಹಾಕಿ ಬಿಸಿ ಮಾಡಿ. ಬಿಸಿ ಹಾಲಿನಲ್ಲಿ ತೆಳುವಾಗಿ ಕತ್ತರಿಸಿದ ಖರ್ಜೂರ, ಪಿಸ್ತಾ ಮತ್ತು ಬಾದಾಮಿ ಹಾಕಿ ಇದನ್ನು ನೆನೆಯಲು ಬಿಡಿ. ಬಿಸಿ ಹಾಲಿನಲ್ಲಿ ಈ ಒಣ ಹಣ್ಣುಗಳು ಚೆನ್ನಾಗಿ ನೆನೆಯುತ್ತವೆ. ಅಷ್ಟರಲ್ಲಿ ಒಲೆಯ ಮೇಲೆ ಪಾತ್ರೆ ಇಟ್ಟು ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಪಿಸ್ತಾ, ಬಾದಾಮಿ ಹಾಕಿ ತುಪ್ಪದಲ್ಲಿ ಹುರಿಯಿರಿ. ಅದೇ ಪಾತ್ರೆಗೆ ಮೂರು ಕಪ್ ಹಾಲು ಹಾಕಿ ಕುದಿಸಿ. ಹಾಲು ದಪ್ಪವಾಗುವವರೆಗೆ ಕುದಿಸಿ. ನಂತರ ಹಾಲಿನ ಜೊತೆ ನೆನೆಸಿದ್ದ ಒಣ ಹಣ್ಣುಗಳನ್ನು ಸೇರಿಸಿ. ಇದನ್ನು ನಿಧಾನಕ್ಕೆ ಕುದಿಸಿ. ಹಾಲಿಗೆ ಸಕ್ಕರೆ ಹಾಕಿ ಮಿಶ್ರಣ ಮಾಡಿ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಪಾಯಸ ರುಚಿ ನೋಡಿ ಉಪ್ಪು, ಸಕ್ಕರೆ ಬೇಕಿದ್ದರೆ ಸೇರಿಸಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ, ಪಿಸ್ತಾ ಸೇರಿಸಿ ಸ್ಟೌ ಆಫ್ ಮಾಡಿ. ಈಗ ನಿಮ್ಮ ಮುಂದೆ ರುಚಿಯಾದ ಖರ್ಜೂರ ಪಾಯಸ ತಿನ್ನಲು ಸಿದ್ಧ.
ಖರ್ಜೂರದ ಆರೋಗ್ಯ ಪ್ರಯೋಜನಗಳು
ಪ್ರತಿದಿನ ಖರ್ಜೂರ ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ನಿರ್ದಿಷ್ಟವಾಗಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ಕೆಲವು ರೋಗಗಳನ್ನು ತಡೆಯುತ್ತದೆ. ಖರ್ಜೂರದಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಪ್ರೊಟೀನ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಖರ್ಜೂರವನ್ನು ತಿನ್ನುವುದರಿಂದ ದೇಹದಲ್ಲಿನ ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ. ಇದು ರಕ್ತದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಖರ್ಜೂರದಲ್ಲಿ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನಕ್ಕೆ ಎರಡು ಖರ್ಜೂರ ತಿನ್ನುವವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಇದು ಕಾಲೋಚಿತ ರೋಗಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಮೂಳೆಗಳನ್ನು ಬಲಪಡಿಸಲು ಖರ್ಜೂರವು ತುಂಬಾ ಉಪಯುಕ್ತವಾಗಿದೆ. ಇದರಲ್ಲಿರುವ ಕೆರಾಟಿನಾಯ್ಡ್‌ಗಳು ಮತ್ತು ಫ್ಲೇವನಾಯ್ಡ್‌ಗಳು ನಮ್ಮ ದೇಹಕ್ಕೆ ಫ್ರಿ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ.